







ಉಪ್ಪಿನಂಗಡಿ: ಒಂದೆಡೆ ಹೆದ್ದಾರಿ ಕಾಮಗಾರಿ, ಇನ್ನೊಂದೆಡೆ ಸಂಚಾರ ನಿಯಂತ್ರಿಸಬೇಕಾದ ಪೊಲೀಸರ ಕಣ್ಮರೆಯಿಂದಾಗಿ ಉಪ್ಪಿನಂಗಡಿಗೆ ಪ್ರವೇಶ ಮತ್ತು ನಿರ್ಗಮನ ತ್ರಾಸದಾಯಕವಾಗಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.


ಹೆದ್ದಾರಿಯಿಂದ ಉಪ್ಪಿನಂಗಡಿ ಪೇಟೆಗೆ ಸಂಪರ್ಕ ಸಾಧಿಸುವ ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸುವ ಸಲುವಾಗಿ ಒಂದು ಪಾರ್ಶ್ವ ಅಗೆಯಲಾಗಿದ್ದು, ಕಳೆದ ಕೆಲ ದಿನಗಳಿಂದ ಸತತ ಮಳೆಯಾಗುತ್ತಿರುವ ಕಾರಣ ಇಲ್ಲಿ ಕಾಂಕ್ರೀಟೀಕರಣ ಕಾಮಗಾರಿ ತೀರಾ ಮಂದಗತಿಯಿಂದ ನಡೆಯುತ್ತಿದೆ. ಅಗೆಯಲಾಗಿರುವ ಭಾಗದಲ್ಲಿ ಮಳೆ ನೀರು ನಿಂತು ಈಜು ಕೊಳದಂತಾಗಿದ್ದು, ನಡೆದಾಡಲೂ ಬಳಕೆಯಾಗದ ಸ್ಥಿತಿಯಲ್ಲಿದೆ. ಲಭ್ಯ ಇರುವ ಒಂದು ಪಾರ್ಶ್ವದಲ್ಲಿ ಉಭಯ ದಿಕ್ಕಿನ ವಾಹನ ಸಂಚಾರ ಸಾಗಬೇಕಾಗಿದ್ದು, ಘನ ವಾಹನಗಳ ಸಂಚಾರದ ವೇಳೆ ಸರಾಗ ಸಂಚಾರ ಕಷ್ಟಕರವಾಗಿ ವಾಹನ ದಟ್ಟನೆಯುಂಟಾಗುತ್ತಿದೆ. ಇದರಿಂದಾಗಿ ಬಹಳಷ್ಟು ಸಮಯ ವಾಹನಗಳು ರಸ್ತೆಯಲ್ಲೇ ನಿಲ್ಲುವ ಸ್ಥಿತಿ ನಿರ್ಮಾಣವಾಗಿ ಪ್ರಯಾಣಿಕರು ಸಂಕಷ್ಟಕ್ಕೀಡಾಗುತ್ತಿದ್ದಾರೆ.




ಕಳೆದ ಕೆಲ ದಿನಗಳಿಂದ ಈ ಸಮಸ್ಯೆ ಇಲ್ಲಿ ತಲೆದೋರಿದರೂ ವಾಹನ ಸಂಚಾರವನ್ನು ಸುಲಲಿತಗೊಳಿಸುವ ನಿಟ್ಟಿನಲ್ಲಿ ಯಾವೊಬ್ಬ ಪೊಲೀಸ್ ಸಿಬ್ಬಂದಿಯೂ ಸ್ಥಳದಲ್ಲಿ ಕರ್ತವ್ಯದಲ್ಲಿರದೇ ಸಮಸ್ಯೆಗೂ ನಮಗೂ ಸಂಬಂಧವಿಲ್ಲ ಎಂಬಂತಿರುವುದು ಈ ಸಮಸ್ಯೆಯ ನಿರಂತರತೆಗೆ ಕಾರಣವಾಗಿದೆ.
ಟ್ರಾಫಿಕ್ ನಿಯಂತ್ರಣ ಮರೆತರೂ, ದಂಡ ಹಾಕೋದು ಮರೆತಿಲ್ಲ!:
ಈ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಜನರು ಸಮಸ್ಯೆಗೆ ಸಿಲುಕಿದಾಗ ವಾಹನ ಸಂಚಾರವನ್ನು ನಿಯಂತ್ರಿಸಲು ಸಂಚಾರಿ ಪೊಲೀಸರಾಗಲಿ , ಸ್ಥಳೀಯ ಪೊಲೀಸರಾಗಲಿ ಮುಂದಾಗುತ್ತಿಲ್ಲ. ಆದರೆ ಅದೇ ಸಮಯದಲ್ಲಿ ಅದೇ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿ ದಾಖಲೆಗಳನ್ನು ಪರಿಶೀಲಿಸಿ ದಂಡ ಶುಲ್ಕ ವಿಧಿಸುವ ಕಾರ್ಯವನ್ನು ಮಂಗಳವಾರದಂದು ಟ್ರಾಫಿಕ್ ಪೊಲೀಸರು ನಡೆಸಿದ್ದು, ಸ್ಥಳೀಯರನ್ನು ಕೆರಳಿಸಿದೆ. ಸಮಸ್ಯೆಯನ್ನು ನಿವಾರಿಸಿ ಜನರಿಗೆ ಅನುಕೂಲತೆಯನ್ನು ಕಲ್ಪಿಸಬೇಕಾದ ಕರ್ತವ್ಯವನ್ನು ಮರೆತು ಸಂಕಷ್ಟಕ್ಕೆ ಸಿಲುಕಿದ ಜನರನ್ನು ಮತ್ತೆ ಸಂಕಷ್ಟಕ್ಕೆ ತಳ್ಳುವ ಟ್ರಾಫಿಕ್ ಪೊಲೀಸರ ನಡೆ ಆಕ್ಷೇಪ ವ್ಯಕ್ತವಾಗಿದೆ.
ಬಸ್ಸು ನಿರ್ವಾಹಕನ ಶ್ಲಾಘನೀಯ ಕಾರ್ಯ:
ಮಂಗಳವಾರ ಸಾಯಂಕಾಲ ಉಂಟಾದ ವಾಹನ ದಟ್ಟನೆಯ ಸಮಯದಲ್ಲಿ ಬಸ್ಸಿನ ಕಂಡೆಕ್ಟರೊಬ್ಬರು ಬಸ್ಸಿನಿಂದ ಇಳಿದು ವಾಹನಗಳ ಸುಗಮ ಸಂಚಾರಕ್ಕೆ ಶ್ರಮಿಸುತ್ತಿದ್ದ ದೃಶ್ಯ ಕಂಡು ಬಂದಿತ್ತು. ಇದು ಶ್ಲಾಘನೀಯವೆನಿಸಿದ್ದು, ಇದನ್ನು ಕಂಡ ಸ್ಥಳೀಯರು ಪೊಲೀಸರಿಲ್ಲದ ಊರಿನಲ್ಲಿ ಬಸ್ ಕಂಡೆಕ್ಟರ್ ನೇ ಪೊಲೀಸರಾಗಬೇಕಾಗಿದೆ ಎಂದು ಉದ್ಘರಿಸಿದ್ದು ವ್ಯವಸ್ಥೆಯ ಲೋಪಕ್ಕೆ ಸಾಕ್ಷಿ ಎನಿಸಿದೆ.
ಹೆದ್ದಾರಿ ಕಾಮಗಾರಿ ಜನಸ್ನೇಹಿಯಾಗಿ ನಡೆಯಲಿ:
ಪ್ರಸಕ್ತ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯು ಜನ ಸಂಚಾರ ಹಾಗೂ ವಾಹನ ಸಂಚಾರಕ್ಕೆ ಸಂಬಂಧಿಸಿ ಪ್ರಮುಖ ಸ್ಥಳದಲ್ಲಿ ನಡೆಯುತ್ತಿದ್ದು, ಇದರಿಂದಾಗಿ ಜನಜೀವನವೇ ಅಸ್ತವ್ಯಸ್ತಗೊಳ್ಳುವಂತಾಗಿದೆ. ಈ ಸೂಕ್ಷ್ಮ ಸ್ಥಳದಲ್ಲಿ ಕಾಮಗಾರಿ ಗುತ್ತಿಗೆದಾರ ಸಂಸ್ಥೆಯು ಆದ್ಯತೆಯ ನೆಲೆಯಲ್ಲಿ ರಾತ್ರಿ ವೇಳೆ ಕಾಮಗಾರಿ ನಡೆಸುವ ಬಗ್ಗೆ ಗಮನ ಹರಿಸಿದರೆ ದಿನದ ವಹಿವಾಟು ನಡೆಯುವ ಸಮಯದಲ್ಲಿ ಉಂಟಾಗುವ ಅನಗತ್ಯ ತೊಂದರೆಗಳನ್ನು ತಪ್ಪಿಸಬಹುದಾಗಿದೆ. ಜನರ, ವ್ಯಾಪಾರಿಗಳ ಸಮಸ್ಯೆಗಳನ್ನು ಅರ್ಥೈಸಿಕೊಂಡು ಸೂಕ್ಷ್ಮ ಸ್ಥಳದ ಕಾಮಗಾರಿಗಳನ್ನು ರಾತ್ರಿ ವೇಳೆ ನಡೆಸಲು ಗುತ್ತಿಗೆದಾರ ಸಂಸ್ಥೆಯ ಅಧಿಕಾರಿಗಳು ಮುಂದಾಗಬೇಕೆಂದು ಹಿರಿಯ ವರ್ತಕ ಯು. ರಾಮ ಅಗ್ರಹಿಸಿದ್ದಾರೆ.
ಪೊಲೀಸ್ ಇಲಾಖೆ ಸಮಸ್ಯೆಯ ಬಗ್ಗೆ ನಿಗಾವಿರಿಸಲಿ:
ಹೆದ್ದಾರಿ ಕಾಮಗಾರಿ ಕಾರಣದಿಂದಾಗಿ ಸಂಚಾರ ದಟ್ಟನೆಯ ಸಮಯದಲ್ಲಿ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಗಳು ಕರ್ತವ್ಯದಲ್ಲಿರುವಂತೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮಾಡಿ ಸಮಸ್ಯೆ ಉಲ್ಬಣಗೊಳ್ಳದಂತೆ ಗಮನ ಹರಿಸಬೇಕಾಗಿದೆ. ಸಂಕಷ್ಟದ ಸಮಯದಲ್ಲಿ ಕರ್ತವ್ಯ ಪ್ರಜ್ಞೆ ತೋರದೆ ವಾಹನಗಳ ದಾಖಲೆ ಪರಿಶೀಲನೆ ನಡೆಸಿ ದಂಡ ವಿಧಿಸುವುದು ಪೊಲೀಸ್ ಇಲಾಖೆಯ ಬಗ್ಗೆ ಸಮಾಜಕ್ಕೆ ಋಣಾತ್ಮಕ ಭಾವನೆ ಮೂಡುವ ಅಪಾಯವಿದೆ. ಈ ನಿಟ್ಟಿನಲ್ಲಿ ಸಂವೇದನಾಶೀಲ ಕರ್ತವ್ಯಬದ್ಧತೆಯನ್ನು ಸಮಾಜ ನಿರೀಕ್ಷಿಸುತ್ತಿದೆ ಎಂದು ವರ್ತಕ ಸಂಘದ ಮುಂದಾಳು ಝಕಾರಿಯ ಕೊಡಿಪ್ಪಾಡಿ ಅಭಿಪ್ರಾಯಿಸಿದ್ದಾರೆ.










