







ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿಯಲ್ಲಿ ಸಂತಜಾರ್ಜ್ ಮತ್ತು ಬೆಥನಿ ವಿದ್ಯಾಸಂಸ್ಥೆ ಮಧ್ಯೆ ಯು-ಟರ್ನ್ ನೀಡುವಂತೆ ನೆಲ್ಯಾಡಿಯ ಗ್ರಾಮಸ್ಥರ ನಿಯೋಗ ಆ.5ರಂದು ಮಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ.,ಹಾಗೂ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರನ್ನು ಭೇಟಿ ಮಾಡಿ ಮನವಿ ಮಾಡಿದೆ.


ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ, ಬೆಥನಿ ವಿದ್ಯಾಸಂಸ್ಥೆ, ಎಸ್‌ಟಿಜಿ ನರ್ಸಿಂಗ್ ಕಾಲೇಜು, ಶ್ರೀರಾಮ ವಿದ್ಯಾಕೇಂದ್ರ, ಯುನಿವರ್ಸಿಟಿ ಕಾಲೇಜಿನಲ್ಲಿ ಸುಮಾರು 5 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ರಸ್ತೆಯ ಎರಡೂ ಬದಿಗಳಲ್ಲಿ ಧಾರ್ಮಿಕ ಕೇಂದ್ರಗಳಿವೆ. ಅಲ್ಲದೇ ಇಲ್ಲಿ ಹಾದು ಹೋಗುವ ಪೈಚಾರ್‌ನಿಂದ ಧರ್ಮಸ್ಥಳ ರಾಜ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯೂ ಇರುವುದಿಲ್ಲ. ಮೊರಂಕಳ, ಪಡ್ಡಡ್ಕ, ಮಾದೇರಿ, ಕೊಲ್ಯೊಟ್ಟು, ಪಡ್ಪಗುಡ್ಡೆ ಭಾಗಗಳಿಗೆ ಇರುವ ಗ್ರಾಮ ಪಂಚಾಯತ್ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯೂ ಇರುವುದಿಲ್ಲ. ಸಾರ್ವಜನಿಕ ಸ್ಥಳವಾದ ಗಾಂಧಿ ಮೈದಾನವೂ ಇದ್ದು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಗವಹಿಸುವವರಿಗೆ ಅನಾನುಕೂಲವಾಗಿದೆ.



ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸಂದರ್ಭ ಡಿವೈಡರ್ ಅಳವಡಿಸಿರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅಲ್ಲದೇ ವಾರದ ಸಂತೆಗೆ ಬರುವವರಿಗೆ ಅನಾನುಕೂಲವಾಗಿದೆ. ಆದ್ದರಿಂದ ಸಂತಜಾರ್ಜ್ ಮತ್ತು ಬೆಥನಿ ವಿದ್ಯಾಸಂಸ್ಥೆ ಮಧ್ಯೆ ಯು ಟರ್ನ್ ನೀಡಿದಲ್ಲಿ ಸಮಯದ ಉಳಿತಾಯವಾಗುವುದು ಅಲ್ಲದೆ ಅಂದಾಜು 4 ಕಿ.ಮೀ.ಸಾಗಿ ಯು-ಟರ್ನ್ ತೆಗೆದುಕೊಳ್ಳಲು ಬಳಸುವ ಅಪಾರ ಪ್ರಮಾಣದ ಇಂಧನವೂ ಉಳಿತಾಯವಾಗಲಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಅತೀ ಶೀಘ್ರ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ದ.ಕ.ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಹಾಗೂ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರಿಗೆ ಮಾಡಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ. ಮನವಿ ಸಲ್ಲಿಕೆ ನಿಯೋಗದಲ್ಲಿ ನೆಲ್ಯಾಡಿಯ ವಿದ್ಯಾಸಂಸ್ಥೆಗಳ ಮುಖ್ಯಸ್ಥರು, ವರ್ತಕರು, ಜನಪ್ರತಿನಿಧಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.










