ರಾಷ್ಟ್ರೀಯ ಕೈಮಗ್ಗ ದಿನ – ಭಾರತೀಯ ಪರಂಪರೆ, ಉಪಯುಕ್ತತೆ ಮತ್ತು ದೇಶಪ್ರೇಮದ ಸಾಂಕೇತಿಕ ಎಳೆಗಳು

0

ಭಾರತೀಯ ಸಂಸ್ಕೃತಿ ಮತ್ತು ಇತಿಹಾಸದಲ್ಲಿ ‘ಕೈಮಗ್ಗ’ ಎನ್ನುವುದು ಬರಿ ಬಟ್ಟೆ ನೇಯುವ ಸಾಧನವಲ್ಲ. ಅದು ಈ ದೇಶದ ಆತ್ಮ, ಕಲೆ ಮತ್ತು ಸ್ವಾವಲಂಬನೆಯ ಸಂಕೇತ. ನೂಲುಗಳ ಪ್ರತಿಯೊಂದು ಎಳೆಯಲ್ಲೂ ನಮ್ಮ ಗ್ರಾಮೀಣ ಭಾರತದ ಕೌಶಲ್ಯ, ಪರಿಶ್ರಮ ಮತ್ತು ಸಂಸ್ಕೃತಿಯ ಸ್ಪಂದನವಿದೆ. ಇಂತಹ ಅಪೂರ್ವ ಕಲೆ ಹಾಗೂ ಅದನ್ನು ಜೀವಂತವಾಗಿಟ್ಟಿರುವ ನೇಕಾರರನ್ನು ಸ್ಮರಿಸುವ ಉದ್ದೇಶದಿಂದ ಪ್ರತಿ ವರ್ಷ ಆ.7 ರಂದು ‘ರಾಷ್ಟ್ರೀಯ ಕೈಮಗ್ಗ ದಿನ’ ವನ್ನಾಗಿ ಆಚರಿಸಲಾಗುತ್ತದೆ.

ಸ್ವದೇಶಿ ಚಳವಳಿಯ ಐತಿಹಾಸಿಕ ನೆನಪು
ರಾಷ್ಟ್ರೀಯ ಕೈಮಗ್ಗ ದಿನಾಚರಣೆಗೆ ಆಳವಾದ ಐತಿಹಾಸಿಕ ಹಿನ್ನೆಲೆಯಿದೆ. 1905 ರ ಆ.7ರಂದು ಕೊಲ್ಕತ್ತಾದ ಟೌನ್ ಹಾಲ್‌ನಲ್ಲಿ ನಡೆದ ಬೃಹತ್ ಸಭೆಯಲ್ಲಿ ‘ಸ್ವದೇಶಿ ಚಳವಳಿ’ ಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ವಿದೇಶಿ ಬಟ್ಟೆಗಳನ್ನು ಬಹಿಷ್ಕರಿಸಿ, ನಮ್ಮ ದೇಶದ ಕೈಮಗ್ಗ ಉಡುಪುಗಳನ್ನು ಬಳಸುವ ಮೂಲಕ ಭಾರತೀಯ ಉತ್ಪಾದನೆಗೆ ಉತ್ತೇಜನ ನೀಡುವುದು ಈ ಚಳವಳಿಯ ಮುಖ್ಯ ಉದ್ದೇಶವಾಗಿತ್ತು. ಈ ಐತಿಹಾಸಿಕ ಹೋರಾಟದ ಸ್ಮರಣಾರ್ಥವಾಗಿ ಮತ್ತು ದೇಶದ ಆರ್ಥಿಕತೆಯಲ್ಲಿ ಕೈಮಗ್ಗ ಕ್ಷೇತ್ರದ ಕೊಡುಗೆಯನ್ನು ಗೌರವಿಸಲು, ಭಾರತ ಸರ್ಕಾರವು 2015 ರಲ್ಲಿ ಆ.7ರಂದು ಪ್ರಥಮ ಬಾರಿಗೆ ‘ರಾಷ್ಟ್ರೀಯ ಕೈಮಗ್ಗ ದಿನ’ವೆಂದು ಘೋಷಿಸಿತು.


ಕೈಮಗ್ಗದ ಉಪಯುಕ್ತತೆ ಮತ್ತು ಬಳಕೆಯ ವೈಶಿಷ್ಟ್ಯ
ಆಧುನಿಕ ಯಂತ್ರೋಪಕರಣಗಳ ಯುಗದಲ್ಲೂ ಕೈಮಗ್ಗದ ಉಡುಪುಗಳಿಗೆ ಇರುವ ಬೇಡಿಕೆ ಮತ್ತು ಮೌಲ್ಯ ಕಡಿಮೆಯಾಗಿಲ್ಲ.

ಪರಿಸರ ಸ್ನೇಹಿ ಮತ್ತು ಆರೋಗ್ಯಕರ
ಕೈಮಗ್ಗ ಬಟ್ಟೆಗಳ ತಯಾರಿಕೆಯಲ್ಲಿ ಕನಿಷ್ಠ ವಿದ್ಯುತ್ ಬಳಕೆಯಾಗುತ್ತದೆ. ನೈಸರ್ಗಿಕ ನೂಲು ಮತ್ತು ಬಣ್ಣಗಳ ಬಳಕೆಯಿಂದಾಗಿ ಇವು ಚರ್ಮದ ಆರೋಗ್ಯಕ್ಕೆ ಅತ್ಯುತ್ತಮ.

ಹವಾಮಾನಕ್ಕೆ ಸೂಕ್ತ
ಭಾರತೀಯ ವಾಯುಗುಣಕ್ಕೆ ಕೈಮಗ್ಗದ ಹತ್ತಿ ಬಟ್ಟೆಗಳು ಬೇಸಿಗೆಯಲ್ಲಿ ತಂಪಾಗಿಯೂ, ಚಳಿಗಾಲದಲ್ಲಿ ಹಿತಕರವಾಗಿಯೂ ಇರುತ್ತವೆ.

ಅನನ್ಯ ವಿನ್ಯಾಸ ಮತ್ತು ಕೌಶಲ್ಯ
ಯಂತ್ರಗಳಿಂದ ತಯಾರಾಗುವ ಬಟ್ಟೆಗಳಲ್ಲಿ ಏಕತಾನತೆ ಇರುತ್ತದೆ. ಆದರೆ ಕೈಮಗ್ಗದ ಪ್ರತಿಯೊಂದು ಸೀರೆ ಅಥವಾ ಉಡುಪಿನಲ್ಲೂ ನೇಕಾರನ ಸ್ವಂತ ಕಲ್ಪನೆ ಮತ್ತು ಅಪರೂಪದ ಕಲಾತ್ಮಕತೆ ಎದ್ದು ಕಾಣುತ್ತದೆ.

ಗ್ರಾಮೀಣ ಉದ್ಯೋಗಾವಕಾಶ
ಕೃಷಿಯ ನಂತರ ದೇಶದಲ್ಲಿ ಅತಿ ಹೆಚ್ಚು ಗ್ರಾಮೀಣ ಜನರಿಗೆ, ವಿಶೇಷವಾಗಿ ಮಹಿಳೆಯರಿಗೆ ಜೀವನೋಪಾಯ ಒದಗಿಸುತ್ತಿರುವ ಕ್ಷೇತ್ರವೆಂದರೆ ಅದು ಕೈಮಗ್ಗ.

ರಾಷ್ಟ್ರಧ್ವಜ ಮತ್ತು ಕೈಮಗ್ಗದ ಪವಿತ್ರ ಬಂಧ
ಭಾರತದ ಆತ್ಮಾಭಿಮಾನದ ಸಂಕೇತವಾದ ‘ತ್ರಿವರ್ಣ ಧ್ವಜ’ಕ್ಕೂ ಕೈಮಗ್ಗಕ್ಕೂ ಅತ್ಯಂತ ಪವಿತ್ರವಾದ ನಂಟಿದೆ. ನಮ್ಮ ರಾಷ್ಟ್ರಧ್ವಜವನ್ನು ಕೈಯಿಂದ ನೇಯ್ದ, ಕೈಯಿಂದಲೇ ನೂಲಲ್ಪಟ್ಟ ಖಾದಿ ಅಥವಾ ಕೈಮಗ್ಗದ ಹತ್ತಿ/ರೇಷ್ಮೆಯಿಂದ ಮಾತ್ರ ತಯಾರಿಸಬೇಕು ಎಂಬ ನಿಯಮವಿದೆ.

ಕರ್ನಾಟಕದ ಹಿರಿಮೆ
ದೇಶದಲ್ಲೇ ಅಧಿಕೃತವಾಗಿ ರಾಷ್ಟ್ರಧ್ವಜವನ್ನು ಪೂರೈಸುವ ಏಕೈಕ ಮಾನ್ಯತೆ ಪಡೆದ ಸಂಸ್ಥೆ ನಮ್ಮ ಕರ್ನಾಟಕದ ಧಾರವಾಡ ಜಿಲ್ಲೆಯ ಗರಗ ಮತ್ತು ಬಾಗಲಕೋಟೆಯ ತುಲಸಿಗೇರಿ ಹಾಗೂ ಹುಬ್ಬಳ್ಳಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ. ನೇಕಾರರು ಪ್ರತಿಯೊಂದು ದಾರವನ್ನೂ ಅತ್ಯಂತ ಶ್ರದ್ಧೆ, ಶುದ್ಧತೆ ಮತ್ತು ಶಿಸ್ತಿನಿಂದ ನೇಯ್ದು ತಯಾರಿಸುವ ಆ ರಾಷ್ಟ್ರಧ್ವಜವೇ ಬಾನಿನಲ್ಲಿ ಹೆಮ್ಮೆಯಿಂದ ಹಾರಾಡುತ್ತದೆ. ರಾಷ್ಟ್ರಧ್ವಜದ ಈ ಪರಂಪರೆಯು ಕೈಮಗ್ಗ ಕ್ಷೇತ್ರಕ್ಕೆ ಭಾರತ ನೀಡಿದ ಅತ್ಯುನ್ನತ ಗೌರವವಾಗಿದೆ.

ನಮ್ಮ ಹೊಣೆಗಾರಿಕೆ
ಆಧುನಿಕ ಫ್ಯಾಷನ್ ಜಗತ್ತಿನ ಸ್ಪರ್ಧೆಯಲ್ಲಿ ನೇಕಾರರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೆ ಈ ಕಲೆ ಕೊಂಚ ಹಿನ್ನಡೆ ಅನುಭವಿಸುತ್ತಿರುವುದು ಕಹಿ ಸತ್ಯ. ಯಂತ್ರದ ಬಟ್ಟೆಗಳ ವೈಭವಕ್ಕೆ ಮಾರುಹೋಗದೆ, ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕೈಮಗ್ಗ ಉಡುಪುಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.
ನಾವು ಧರಿಸುವ ಒಂದು ಕೈಮಗ್ಗದ ಬಟ್ಟೆ, ಎಲ್ಲೋ ಒಂದು ಹಳ್ಳಿಯಲ್ಲಿರುವ ನೇಕಾರನ ಕುಟುಂಬದ ಮೊಗದಲ್ಲಿ ಮುಗುಳ್ನಗು ಮೂಡಿಸುತ್ತದೆ. ಈ ‘ರಾಷ್ಟ್ರೀಯ ಕೈಮಗ್ಗ ದಿನ’ದಂದು ನಮ್ಮ ದೇಶೀಯ ಕಲೆಯನ್ನು ಪ್ರೀತಿಸೋಣ, ನೇಕಾರರ ಶ್ರಮವನ್ನು ಗೌರವಿಸೋಣ ಮತ್ತು ‘ಸ್ವದೇಶಿ’ ಜಾಗೃತಿಯನ್ನು ಮುಂದುವರಿಸೋಣ.

ಪುತ್ತೂರಿನ ಬೊಳುವಾರಿನಲ್ಲಿರುವ ಜೆ ಕೆ ಕಾಂಪ್ಲೆಕ್ಸ್‌ ನಲ್ಲಿ ಕಾರ್ಯಾಚರಿಸುತ್ತಿರುವ ನಗರದ ಏಕೈಕ ಪಾರಂಪರಿಕ ಖಾದಿ ಮತ್ತು ಕೈಮಗ್ಗದ ಉತ್ಪನ್ನಗಳ ಶ್ರೀ ಉಮಾ ಖಾದಿ ಭಂಡಾರ ಮಳಿಗೆಯಲ್ಲಿ ಎಲ್ಲಾ ಬಗೆಯ ರೆಡಿಮೆಡ್‌ ಖಾದಿ ಕುರ್ತಾ, ಪೈಜಾಮ, ಶರ್ಟ್‌, ಧೋತಿ, ಹ್ಯಾಂಡ್‌ ಲೂಂ ಸೀರೆಗಳು, ಕಾಟನ್‌ ಬಯೋಡಿಗ್ರೆಡೇಬಲ್ ಸ್ಯಾನಿಟರಿ ನ್ಯಾಪ್ಕಿನ್ಸ್‌‌, ಖಾದಿ ಟವೆಲ್ ಇನ್ನಿತರ ಸಾಮಾಗ್ರಿಗಳು ಲಭ್ಯವಿದೆ. ಖಾದಿ ಪ್ರಿಯರು ಇಲ್ಲಿಗೆ ಭೇಟಿ ನೀಡಿ ನಿಮ್ಮ ಇಚ್ಚೆಯ ವಸ್ತುಗಳನ್ನು ಖರೀದಿಸಬಹುದು.
ಆಸಕ್ತರು ಸಂಪರ್ಕಿಸಿ :ರೇಖಾ ರವಿಪ್ರಸಾದ್ @8073683787, 8073743842

LEAVE A REPLY

Please enter your comment!
Please enter your name here