‘ನಾನು ಮತ್ತು ಕಿಶೋರ್ ಅಣ್ಣ ಬಾಲ್ಯದಿಂದಲೂ ಒಟ್ಟಿಗೆ ಕೆಲಸ ಮಾಡಿದವರು’ – ದಯಾನಂದ ಶೆಟ್ಟಿ ಉಜಿರೆಮಾರು

0

ಪುತ್ತೂರು: ಪುತ್ತೂರಿನಲ್ಲಿ ಅಭೂತಪೂರ್ವ ತಿರಂಗಾ ಯಾತ್ರೆಯ ಯಶಸ್ಸನ್ನು ಸಹಿಸದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಾಗೂ ಊಹಾಪೋಹಗಳನ್ನು ಹರಡುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರು ಕಿವಿಗೊಡದೆ ರಾಷ್ಟ್ರಭಕ್ತಿ ಮತ್ತು ರಾಷ್ಟ್ರೀಯ ಏಕತೆಯ ಸಂದೇಶವನ್ನೇ ಮುಂದಿಟ್ಟುಕೊಳ್ಳಬೇಕು ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮತ್ತು ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪುತ್ತೂರು ಬಿಜೆಪಿಯಲ್ಲಿ ಹೊಯ್ ಕೈ ‘ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮತ್ತು ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಅವರ ನಡುವೆ ನಿನ್ನೆ ರಾತ್ರಿ ಪುತ್ತೂರು ವೆಂಕಟ್ರಮಣ ದೇವಸ್ಥಾನದ ಬಳಿ’ ಎಂಬ ಪೋಸ್ಟರ್ ಹರಿದಾಡುತ್ತಿರುವ ವಿಚಾರವಾಗಿ ಅವರು ತಿರಂಗಾ ಯಾತ್ರೆಯ ಸಿದ್ಧತೆಯ ಸ್ಥಳದಲ್ಲಿ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ.

ದಯಾನಂದ ಶೆಟ್ಟಿ ಉಜಿರೆಮಾರು ಅವರು ಮಾತನಾಡಿ “ಇದು ಯಾವುದೇ ವ್ಯಕ್ತಿ ಅಥವಾ ಸಂಘಟನೆಯ ಕಾರ್ಯಕ್ರಮವಲ್ಲ. ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವ ರಾಷ್ಟ್ರಭಕ್ತಿಯ ಕಾರ್ಯಕ್ರಮ. ಇಂತಹ ಕಾರ್ಯಕ್ರಮವನ್ನು ಬೇರೆ ದೃಷ್ಟಿಯಿಂದ ನೋಡುವ ಅಗತ್ಯವೇ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಇಲ್ಲದ ವಿಚಾರಗಳನ್ನು ಸೃಷ್ಟಿಸಿ ಹಬ್ಬಿಸುತ್ತಿರಬಹುದು. ಆದರೆ ಸಾರ್ವಜನಿಕರು ಸತ್ಯಾಸತ್ಯತೆಯನ್ನು ಅರಿತುಕೊಳ್ಳುವಷ್ಟು ಪ್ರಬುದ್ಧರಾಗಿದ್ದಾರೆ” ಎಂದು ಹೇಳಿದರು. ಇದಲ್ಲದೆ “ನಾನು ಮತ್ತು ಕಿಶೋರ್ ಅಣ್ಣ ಬಾಲ್ಯದಿಂದಲೂ ಒಟ್ಟಿಗೆ ಕೆಲಸ ಮಾಡಿದವರು. ನಮ್ಮ ನಡುವೆ ಅನೇಕ ಬಾರಿ ಚರ್ಚೆಗಳು, ಭಿನ್ನಾಭಿಪ್ರಾಯಗಳು ನಡೆದಿರಬಹುದು. ಆದರೆ ಅದನ್ನು ಇಂದಿನ ಕಾರ್ಯಕ್ರಮಕ್ಕೆ ಅಥವಾ ಬೇರೆ ಯಾವುದೇ ವಿಚಾರಕ್ಕೆ ಸಂಬಂಧಿಸಿ ತಪ್ಪಾಗಿ ಬಿಂಬಿಸುವುದು ಸರಿಯಲ್ಲ. ನಡೆದೇ ಇಲ್ಲದ ಘಟನೆಗಳನ್ನು ನಡೆದಂತೆ ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ. ಇದನ್ನು ಜನರು ನಂಬಬಾರದು” ಎಂದು ಸ್ಪಷ್ಟಪಡಿಸಿದರು. “ಪುತ್ತೂರಿನ ಜನರು ಸತ್ಯವೇನು, ಸುಳ್ಳೇನು ಎಂಬುದನ್ನು ಗುರುತಿಸುವಷ್ಟು ಪ್ರಜ್ಞಾವಂತರಿದ್ದಾರೆ. ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಿಗೆ ಮಹತ್ವ ನೀಡದೆ, ರಾಷ್ಟ್ರಭಕ್ತಿ ಮತ್ತು ರಾಷ್ಟ್ರೀಯ ಏಕತೆಯ ಸಂದೇಶವನ್ನೇ ಮುಂದಿಟ್ಟುಕೊಳ್ಳಬೇಕು” ಎಂದರು.

LEAVE A REPLY

Please enter your comment!
Please enter your name here