ಅರುಣ್ ಕುಮಾರ್ ಪುತ್ತಿಲರಿಗೆ ‘ಪಾತಾಳ ಸ್ಮೃತಿ ಗೌರವ’ ಪ್ರದಾನ

0

ಉಪ್ಪಿನಂಗಡಿ: ಯಕ್ಷಗಾನ ಕ್ಷೇತ್ರದ ಕಲಾ ದಿಗ್ಗಜ ದಿ. ಪಾತಾಳ ವೆಂಕಟರಮಣ ಭಟ್ ಸಂಸ್ಥಾಪಿತ ಪಾತಾಳ ಯಕ್ಷ ಪ್ರತಿಷ್ಠಾನ ಉಪ್ಪಿನಂಗಡಿ ಇದರ ವತಿಯಿಂದ ಕೊಡ ಮಾಡುವ ಪಾತಾಳ ಸ್ಮೃತಿ ಗೌರವವನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಮೂಲಕ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿ ಕೊಡುಗೆಗಳನ್ನು ನೀಡುತ್ತಿರುವ ಅರುಣ್ ಕುಮಾರ್ ಪುತ್ತಿಲರಿಗೆ ಪ್ರದಾನ ಮಾಡಲಾಯಿತು.


ಕನ್ನಡ ಸಾಹಿತ್ಯ ಪರಿಷತ್ ಇದರ ಪೂರ್ವ ರಾಜ್ಯಾಧ್ಯಕ್ಶರಾಗಿದ್ದ ಹರಿಕೃಷ್ಣ ಪುನರೂರು ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಅಭಿನಂದನಾ ಮಾತುಗಳನ್ನಾಡಿದ ಸಾಹಿತಿ ಮುಳಿಯ ಶಂಕರ್ ಭಟ್‌ರವರು, ಯಾವ ಅಧಿಕಾರ, ಸ್ಥಾನ ಮಾನವೂ ಇಲ್ಲದೆ ಸಮಾಜದ ಸೇವೆ ಮಾಡಬಹುದೆನ್ನುವುದನ್ನು ಪುತ್ತಿಲರವರು ಕಾರ್ಯರೂಪದಲ್ಲಿ ತೋರಿಸಿಕೊಟ್ಟಿದ್ದಾರೆ. ಕಲಾವಿದನಿಗೆ ಸಲ್ಲುವ ಗೌರವವನ್ನು ಕಲಾರಾಧಕ- ಕಲಾಸೇವಕ-ಸಮಾಜಹಿತ ಚಿಂತಕನಿಗೆ ನೀಡುವ ಮೂಲಕ ಕಲಾ ಕ್ಷೇತ್ರ ಮತ್ತು ಸಾಮಾಜಿಕ ಕ್ಷೇತ್ರದ ಸ್ಪಂದನದ ಸಂಕೇತವಾಗಿ ಪಾತಾಳ ಸ್ಮೃತಿ ಗೌರವ ಪ್ರಶಸ್ತಿಯು ಅರುಣ್ ಕುಮಾರ್ ಪುತ್ತಿಲರವರನ್ನು ಅರಸಿ ಬಂದಿದೆ ಎಂದರು.


ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, ಯಕ್ಷಗಾನ ಕ್ಷೇತ್ರದ ಮೇರು ವ್ಯಕ್ತಿತ್ವದ ಪಾತಾಳ ವೆಂಕಟರಮಣ ಭಟ್ ರವರ ‘ಪಾತಾಳ ಸ್ಮೃತಿ ಗೌರವ’ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿದಾಗ ದಿಗಿಲುಗೊಂಡೆ. ನನಗ್ಯಾಕೆ ಈ ಪ್ರಶಸ್ತಿ ಎಂದು ಚಿಂತಿತನಾದೆ. ನನ್ನ ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಪರಿಗಣಿಸಿ ನೀಡಲಾಗಿದೆ ಎಂದು ಇಲ್ಲಿ ತಿಳಿಸಲಾಗಿದೆ. ಅಗಣಿತ ಸಂಖ್ಯೆಯಲ್ಲಿ ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಮಾಡಲು ಪ್ರೇರಣೆ – ಸಹಕಾರ ನೀಡಿದ ಅಸಂಖ್ಯಾ ಪರಿವಾರದ ಬಂಧುಗಳಿಗೆ ಈ ಪ್ರಶಸ್ತಿಯನ್ನು ಸಮರ್ಪಿಸುತ್ತೇನೆ ಎಂದರು.


ಕಾರ್ಯಕ್ರಮದಲ್ಲಿ ಪಾತಾಳರ ನೆನಪು ಕೃತಿ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ್ ಕಲ್ಕೂರ ಮಾತನಾಡಿ, ಪಾತಾಳರವರ ಜೀವನ ಶೈಲಿ , ಅವರು ಸನಾತನ ಸಂಸ್ಕೃತಿ ಮತ್ತು ಆಚರಣೆಗೆ ನೀಡುತ್ತಿದ್ದ ಒತ್ತು ಅನುಕರಣೀಯವಾಗಿದೆ. ಅಯೋಧ್ಯಾ ಶ್ರೀ ರಾಮ ದೇವಳದಲ್ಲಿ ಕಳ್ಳರು ಹಣವನ್ನು ಕದ್ದರೆಂದು ನಂಬಿಕೆಯನ್ನು ದುರ್ಬಲಗೊಳಿಸುವ ಯತ್ನ ನಡೆಯುತ್ತಿದೆ. ಕಳ್ಳರು ಅನಾದಿಕಾಲದಿಂದಲೂ ಕದಿಯುತ್ತಿದ್ದಾರೆ. ಶಿಕ್ಷೆಗೆ ಒಳಗಾಗುತ್ತಿದ್ದಾರೆ. ಕಳ್ಳರ ಕಾರಣಕ್ಕೆ ನಂಬಿಕೆ ದುರ್ಬಲವಾಗದಂತೆ ಪ್ರತಿ ಮನೆಯೂ ಜಾಗೃತಗೊಳ್ಳಬೇಕಾಗಿದೆ ಎಂದರು.


ವಿದ್ವಾನ್ ಮೇಲುಕೋಟೆ ಉಮಾಕಾಂತ್ ಭಟ್ ಮಾತನಾಡಿ, ಸ್ವಹಿತ, ಸ್ವಕುಟುಂಬ ಹಿತ, ಸಮಾಜ ಹಿತ ಇದಕ್ಕಾಗಿ ನಿತ್ಯಾನುಷ್ಠಾನ ಪೂಜಾ ಕಾರ್ಯಗಳನ್ನು ತಪ್ಪದೆ ನಡೆಸಿಕೊಂಡು ಬರುತ್ತಿದ್ದ ಪಾತಾಳರವರಿಗೆ ಅವರ ಆಧ್ಯಾತ್ಮದ ಗುರುಗಳು ದಿವ್ಯ ಪ್ರಜಾ ಎಂಬ ಹೆಸರನ್ನು ನೀಡಿದ್ದರು. ನಾವಿಂದು ಪಾತಾಳರ ಸ್ಮರಣೆ ಮಾಡುವುದೆಂದರೆ ಅವರಂತೆ ದಿವ್ಯ ಪ್ರಜೆಗಳಾಗುವ ಸಂಕಲ್ಪ ತೊಡಬೇಕೆಂದರು.


ಕಾರ್ಯಕ್ರಮದಲ್ಲಿ ನಿವೃತ್ತ ಸೇನಾಧಿಕಾರಿ ಚಂದಪ್ಪ ಮೂಲ್ಯ, ಗಣ್ಯರಾದ ಡಾ. ವಸಂತ ಕುಮಾರ ತಾಳ್ತಜೆ, ವೇದವ್ಯಾಸ ರಾಮಕುಂಜ, ಕೇಶವ ಭಟ್ ಪಲ್ಲದಕೋಡಿ, ಸುಜೀರ್ ಗಣಪತಿ ನಾಯಕ್, ನರಸಿಂಹ ಭಟ್ ಮೂಡಾಜೆ, ಕಂಗ್ವೆ ವಿಶ್ವನಾಥ ಶೆಟ್ಟಿ, ಡಾ.ಎಂ.ಎನ್. ಭಟ್, ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ಜಯಪ್ರಕಾಶ್ ಶೆಟ್ಟಿ ಶ್ರೀನಿಧಿ, ರಾಧಾಕೃಷ್ಣ ಭಟ್ ಬೊಳ್ಳಾವು, ಲಕ್ಷ್ಮಣ ಗೌಡ ನೆಡ್ಚಿಲ್, ನವೀನ್ ಕಲ್ಯಾಟೆ, ಧರ್ನಪ್ಪ ನಾಯ್ಕ ಬೊಳ್ಳಾವು, ಪ್ರಶಾಂತ್ ನೆಕ್ಕಿಲಾಡಿ, ಕೈಲಾರ್ ರಾಜಗೋಪಾಲ ಭಟ್, ಲೋಕೇಶ್ ಬೆತ್ತೋಡಿ, ಕೇಶವ ರಂಗಾಜೆ, ರಮೇಶ್ ಬಂಡಾರಿ ಮೊದಲಾದವರು ಭಾಗವಹಿಸಿದ್ದರು.


ಪಾತಾಳರ ನೆನಪಿಗಾಗಿ ವಿವಿಧ ಸಂಘ ಸಂಸ್ಥೆಗಳಿಗೆ ಧನ ಸಹಾಯ ವಿತರಿಸಲಾಯಿತು. ‘ಶ್ರೀ ಕೃಷ್ಣ ಪರಂಧಾಮ’ ಎಂಬ ಯಕ್ಷಗಾನ ತಾಳಮದ್ದಳೆಯು ನಡೆಯಿತು. ಯಕ್ಷಗಾನ ಕಲಾವಿದ ಅಂಬಾ ಪ್ರಸಾದ ಪಾತಾಳ ಸ್ವಾಗತಿಸಿದರು. ಶ್ರೀರಾಮ ಭಟ್ ಪಾತಾಳ ವಂದಿಸಿದರು. ಮಹಾಲಿಂಗೇಶ್ವರ ಭಟ್ ಬಿಲ್ಲಂಪದವು ಕಾರ್ಯಕ್ರಮ ನಿರೂಪಿಸಿದರು.

ಸೇವಕ ವರ್ಗಕ್ಕೆ ಸನ್ಮಾನದ ಗೌರವ: ಸಭೆಯಲ್ಲಿ ಕರತಾಡನದ ಸಂಭ್ರಮ
ಕಿಕ್ಕಿರಿದು ತುಂಬಿದ ಯಕ್ಷ ಪ್ರೇಮಿಗಳ ಮಧ್ಯೆ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ವೇದಿಕೆಯ ಮುಂಭಾಗದಲ್ಲಿ ಪಾತಾಳ ವೆಂಕಟರಮಣ ಭಟ್ ರವರೊಂದಿಗೆ ಅವರ ಮನೆಯ , ತೋಟದ ಕೆಲಸದಾಳುಗಳಾಗಿ ಸೇವೆ ಸಲ್ಲಿಸಿ ಪಾತಾಳದ ಮಣ್ಣನ್ನು ಹೊನ್ನಾಗಿ ಪರಿವರ್ತಿಸಲು ಸಹಕರಿಸಿದ 7 ಮಂದಿ ಕೆಲಸದವರನ್ನು ಪಾತಾಳ ವೆಂಕಟರಮಣ ಭಟ್ ರವರ ಮಕ್ಕಳು ಗೌರವಪೂರ್ವಕ ಸನ್ಮಾನ ಮಾಡಿದರು. ಆಗ ಇಡೀ ಸಭಾಂಗಣ ತುಂಬು ಮನದ ಕರತಾಂಡನದ ಸಂಭ್ರಮವನ್ನು ವ್ಯಕ್ತಪಡಿಸಿತು. ತನ್ನ ಸಾಧನೆಯ ಹಿಂದೆ , ಈ ಮಂದಿ ತನ್ನ ಮನೆಯಲ್ಲಿ ಸಲ್ಲಿಸಿದ ಸಮರ್ಪಣಾ ಮನೋಭಾವದ ಸೇವೆಯೇ ಕಾರಣವೆಂದು ಪಾತಾಳರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಅದರಂತೆ ಅವರ ಮಕ್ಕಳೂ ತನ್ನ ತಂದೆಯ ಆದರ್ಶವನ್ನು ಪಾಲಿಸಿ ಸೇವಕ ವರ್ಗವನ್ನು ಸನ್ಮಾನಿಸಿದ್ದು ಸಭಾ ಸದರ ಮೆಚ್ಚುಗೆಗೆ ಪಾತ್ರವಾಯಿತು.

LEAVE A REPLY

Please enter your comment!
Please enter your name here