






ಖಾಸಗಿ ಶಾಲೆಗಳ ಮೇಲೆ ಶಿಕ್ಷಣ ಇಲಾಖೆಯ ಹಿಡಿತವಿಲ್ಲ ; ಹೆಚ್ಚುವರಿ ಶುಲ್ಕ ಪಡೆದರೂ ಕೇಳುವವರಿಲ್ಲ


ಉಪ್ಪಿನಂಗಡಿ: ಖಾಸಗಿ ಶಾಲೆಗಳು ಶಿಕ್ಷಣ ಇಲಾಖೆಯ ಹಿಡಿತದಲ್ಲಿಲ್ಲ. ಅಲ್ಲಿನ ಅವ್ಯವಸ್ಥೆಯ ಬಗ್ಗೆ, ನಿಯಮ ಬಾಹಿರವಾಗಿ ನಡೆಯುತ್ತಿರುವ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆರ್‌ಟಿಇಯಡಿ ಉಚಿತ ದಾಖಲಾತಿ ಪಡೆದ ವಿದ್ಯಾರ್ಥಿಗಳಿಂದ ಕೆಲವು ಶಾಲೆಗಳು 5 ಸಾವಿರಷ್ಟು ಶುಲ್ಕ ಪಡೆಯುತ್ತಿವೆ ಎಂಬ ಆರೋಪಗಳು 34 ನೆಕ್ಕಿಲಾಡಿ ಗ್ರಾ.ಪಂ.ನ ಗ್ರಾಮ ಸಭೆಯಲ್ಲಿ ಕೇಳಿಬಂತು.




ಗ್ರಾ.ಪಂ. ಪಿಡಿಒ ರವಿಚಂದ್ರ ಯು. ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ರೂಪೇಶ್ ರೈ ಅಲಿಮಾರ್ ಅವರು, ಕೆಲವು ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಸರಿಯಾದ ಶೌಚಾಲಯ ಸೌಲಭ್ಯಗಳಿಲ್ಲ. ಶಿಕ್ಷಣ ಇಲಾಖೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಅಳವಡಿಸುತ್ತಿಲ್ಲ. ಖಾಸಗಿ ಶಾಲೆಗಳಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೇಟಿ ಕೊಡುವುದಿಲ್ಲ. ಅಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲಿಸುತ್ತಿಲ್ಲ. ಇತ್ತೀಚೆಗೆ ಬಸ್ಸಿನ ಮೇಲೆ ಮರ ಬಿದ್ದು ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಆ ಬಸ್‌ಗೆ ಸರಿಯಾದ ದಾಖಲೆಗಳೇ ಇರಲಿಲ್ಲ. ಕೆಲವು ಶಾಲೆಗಳಲ್ಲಿ ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತಿದೆ. ಇದಕ್ಕೊಂದು ಮಾನದಂಡವಿಲ್ಲವೇ? ಇದಕ್ಕೆಲ್ಲಾ ಯಾರು ಹೊಣೆ ? ಪೋಷಕರು ಈ ಬಗ್ಗೆ ಪ್ರಶ್ನಿಸಿದರೆ ಶಾಲೆಯವರು ಅವರ ಮಕ್ಕಳನ್ನು ಟಾರ್ಗೆಟ್ ಮಾಡುತ್ತಾರೆ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಕೋಡಿಂಬಾಡಿ ಗ್ರಾಮದ ಸಿಆರ್‌ಪಿ ದೇವಕಿ, ನನ್ನ ವ್ಯಾಪ್ತಿಯ ಖಾಸಗಿ ಶಾಲೆಗಳಿಗೆ ನಾನು ಭೇಟಿ ಕೊಡುತ್ತೇನೆ. ಅಲ್ಲಿಯ ಸಮಸ್ಯೆಗಳನ್ನು ಪರಿಶೀಲಿಸುತ್ತೇನೆ ಎಂದರು.
ಕಲಂದರ್ ಶಾಫಿ ಮಾತನಾಡಿ, ಖಾಸಗಿ ಶಾಲೆಯಲ್ಲಿ ಶುಲ್ಕವನ್ನು ನಾಮಫಲಕದ ಮೂಲಕ ಅನಾವರಣಗೊಳಿಸಬೇಕೆಂದು ಇದೆ. ಆದರೆ ಹೆಚ್ಚಿನ ಖಾಸಗಿ ಶಾಲೆಗಳಲ್ಲಿ ಇದನ್ನು ಮಾಡುತ್ತಿಲ್ಲ. ಇನ್ನು ಕೆಲವು ಶಾಲೆಗಳಲ್ಲಿ ಆರ್‌ಟಿಇಯಡಿ ಉಚಿತ ದಾಖಲಾತಿ ಪಡೆದ ವಿದ್ಯಾರ್ಥಿಗಳಿಂದಲೂ ಕೂಡಾ ಖಾಸಗಿ ಶಾಲೆಯವರು ಶುಲ್ಕವನ್ನು ಪಡೆಯುತ್ತಾರೆ ಎಂದು ಆರೋಪಿಸಿದರು. ಈ ವಿಷಯಗಳ ಬಗ್ಗೆ ಚರ್ಚೆಯಾಗಿ ಖಾಸಗಿ ಶಾಲೆಗಳಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮಕ್ಕಳ ಕಲ್ಯಾಣ ಇಲಾಖೆಯವರು ಭೇಟಿ ನೀಡಬೇಕು ಹಾಗೂ ಅಲ್ಲಿ ಕಾನೂನು ಉಲ್ಲಂಘನೆ ಮಾಡಿದರೆ ಅಂತಹ ಶಾಲೆಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆಗಳಿಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ಕಲಂದರ್ ಶಾಫಿ ಮಾತನಾಡಿ, ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮೊದಲು ಶಾಲಾ ಸಮವಸ್ತ್ರವನ್ನು ಹೊಲಿದು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು. ಆದರೆ ಈಗ ಕೇವಲ ಬಟ್ಟೆ ಮಾತ್ರ ಕೊಡಲಾಗುತ್ತದೆ. ನಾವು ಹೊರಗಿನಿಂದ ಶಾಲಾ ಸಮವಸ್ತ್ರವನ್ನು ಖರೀದಿ ಮಾಡಿದರೆ ೮೦೦ ರೂಪಾಯಿಗೆ ಉತ್ತಮ ಗುಣಮಟ್ಟದ ಹೊಲಿದಿರುವ ಸಮವಸ್ತ್ರ ಸಿಗುತ್ತದೆ. ಆದರೆ ಶಾಲೆಯಿಂದ ನೀಡುವ ಬಟ್ಟೆಯನ್ನು ಹೊಲಿಸಲು ನಾವು ಅಷ್ಟೇ ಹಣ ವ್ಯಯ ಮಾಡಬೇಕಾಗುತ್ತದೆ. ಇದರಿಂದ ಪೋಷಕರಿಗೆ ಆಗುವ ಲಾಭವೇನು ಎಂದು ಪ್ರಶ್ನಿಸಿದರು. ಆಗ ಸಿಆರ್‌ಪಿ ದೇವಕಿ, ಹೊಲಿದು ಕೊಟ್ಟಾಗ ಅಳತೆಯಲ್ಲಿ ವ್ಯತ್ಯಾಸ ಬರುತ್ತದೆಯಂತ ಹೀಗೆ ಮಾಡಿದ್ದು ಎಂದರು. ಅದಕ್ಕೆ ಕಲಂದರ್ ಶಾಫಿ, ಇನ್ನು ಮುಂದೆ ಸರಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರವನ್ನು ಹೊಲಿದು ನೀಡಬೇಕೆಂದು ಸರಕಾರವನ್ನು ಕೋರಿ ಪತ್ರ ಬರೆಯಲು ನಿರ್ಣಯಿಸಲು ತಿಳಿಸಿದರು.
ಉಪ್ಪಿನಂಗಡಿಯ ಸರಕಾರಿ ಶಾಲೆಯೊಂದರಲ್ಲಿ ೪೮ ಮಕ್ಕಳಿಗೆ ಪಠ್ಯಪುಸ್ತಕ ಬಂದಿಲ್ಲ. 4ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣ ಪುಸ್ತಕ ಬಂದಿಲ್ಲ. ಹಣಕೊಟ್ಟರೆ ಸರಕಾರಿ ಶಾಲೆಗೆ ಪುಸ್ತಕಗಳು ಸಿಗುತ್ತದೆ. ಆದರೆ ಹಣ ಕೊಟ್ಟರೂ ಸರಕಾರಿ ಶಾಲೆಯ ಮಕ್ಕಳಿಗೆ ಖರೀದಿಗೆ ಪುಸ್ತಕಗಳು ಸಿಗುತ್ತಿಲ್ಲ. ಹೀಗಾದರೆ ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ಹೇಗೆ ನೀಡಲು ಸಾಧ್ಯ ಎಂದರು. ೪೮ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳು ಬಾರದಿರುವ ಬಗ್ಗೆ ಉತ್ತರಿಸಿದ ಸಿಆರ್‌ಪಿ ದೇವಕಿಯವರು, ನನ್ನ ಪ್ರಕಾರ ಆ ೪೮ ಮಕ್ಕಳು ಹಿಂದೆ ಬೇರೆ ಶಾಲೆಗಳಲ್ಲಿ ಕಲಿತು ಈಗ ಇಲ್ಲಿಗೆ ಬಂದಿರಬಹುದು. ಸರಕಾರಿ ಶಾಲೆಯವರು ಹಿಂದಿನ ಶೈಕ್ಷಣಿಕ ಸಾಲಿನ ಮಕ್ಕಳ ಪಟ್ಟಿಯನ್ನು ಇಟ್ಟುಕೊಂಡು ಇಲಾಖೆಗೆ ಇಂಡೆಕ್ಸ್ ಹಾಕುತ್ತಾರೆ. ಆದ್ದರಿಂದ ಈ ಮಕ್ಕಳಿಗೆ ಪಠ್ಯ ಪುಸ್ತಕದ ಕೊರತೆಯಾಗಿರುವುದು. ಈಗಾಗಲೇ ಎರಡನೇ ಇಂಡೆಂಟ್ ಹಾಕಿದ್ದು, ಶೀಘ್ರದಲ್ಲಿ ಪುಸ್ತಕಗಳು ಸರಬರಾಜಾಗಲಿವೆ ಎಂದರು. ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು, ಶಿಕ್ಷಕರ ನೇಮಕಾತಿ ಮಾಡಲು ಈ ಸಂದರ್ಭ ನಿರ್ಣಯ ಕೈಗೊಳ್ಳಲಾಯಿತು.
ಕೊರತೆಗಳ ಆರೋಗ್ಯ ಕೇಂದ್ರ:
ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಾಲ್ಕು ತಾಲೂಕುಗಳ ವ್ಯಾಪ್ತಿ ಬರುತ್ತದೆ. ರಾಷ್ಟ್ರೀಯ ಹೆದ್ದಾರಿಯು ಇದರ ವ್ಯಾಪ್ತಿಗೆ ಬರುತ್ತದೆ. ಆದರೆ ಇಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿಗಳ ಕೊರತೆ, ಶುಶ್ರೂಶಕರು, ತಾಂತ್ರಿಕ ಸಿಬ್ಬಂದಿಯ ಕೊರತೆ ಇದೆ. ಇದರೊಂದಿಗೆ ಔಷಧಿ ದಾಸ್ತಾನು ಕೂಡ ಇಲ್ಲಿ ಇಲ್ಲ. ರೋಗಿಗಳಿಗೆ ಹೊರಗಡೆಯಿಂದ ಔಷಧಿ ಪಡೆಯಲು ಚೀಟಿ ನೀಡಲಾಗುತ್ತಿದೆ. ಔಷಧಿ ಕೊರತೆಯ ಬಗ್ಗೆ ಕೇಳಿದಾಗ ಟೆಂಡರ್ ಆಗಿಲ್ಲ ಎಂಬ ಉತ್ತರ ಬರುತ್ತದೆ ಎಂದರು. ಈ ಬಗ್ಗೆ ಚರ್ಚೆಯಾಗಿ ಇಲ್ಲಿಗೆ ವೈದ್ಯರು, ಸಿಬ್ಬಂದಿಯನ್ನು ಶೀಘ್ರ ಭರ್ತಿಗೊಳಿಸಲು ಸರಕಾರಕ್ಕೆ ಪತ್ರ ಬರೆಯಲು ನಿರ್ಣಯಿಸಲಾಯಿತು. ಔಷಧಿ ಕೊರತೆಯನ್ನು ನೀಗಿಸಲು ಕೋರಿ ಸರಕಾರಕ್ಕೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ಜಾನುವಾರುಗಳನ್ನು ಬೀದಿಗೆ ಬಿಡಬಹುದೇ?:
ನೆಕ್ಕಿಲಾಡಿ ಗ್ರಾಮದಲ್ಲಿ ಜಾನುವಾರುಗಳಿಗೆ ಕುಡಿಯಲು ರಸ್ತೆ ಬದಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ವಾರ್ಡ್ ಸಭೆಯೊಂದರ ಬೇಡಿಕೆಯ ಬಗ್ಗೆ ಪ್ರಸ್ತಾಪಿಸಿದ ಗೋಪಾಲ ಅವರು ಜಾನುವಾರುಗಳನ್ನು ಬೀದಿಗೆ ಬಿಡಬಹುದೇ ಎಂದು ಪ್ರಶ್ನಿಸಿದರು. ಆಗ ಪಿಡಿಒ ರವಿಚಂದ್ರ ಅವರು ಜಾನುವಾರು ಸೇರಿದಂತೆ ಸಾಕು ಪ್ರಾಣಿಗಳನ್ನು ಬೀದಿಗೆ ಬಿಡಬಾರದು ಎಂದು ಕಾನೂನು ಇದೆ ಎಂದರು. ಆಗ ಕಲಂದರ್ ಶಾಫಿ, ಹಾಗಾದರೆ ನಾವು ಜಾನುವಾರುಗಳನ್ನು ಹೇಗೆ ಸಾಕುವುದು. ಬೀದಿ ಬಿಡುವುದು ಬೇಡದಿದ್ದರೆ ನೆಕ್ಕಿಲಾಡಿಯಲ್ಲಿ ಗೋಮಾಳ ಜಾಗವನ್ನು ಹುಡುಕಿಕೊಡಿ ಎಂದರು.
3-4ನೇ ಮಗುವಿಗೂ ಭಾಗ್ಯಲಕ್ಷ್ಮೀ ಯೋಜನೆ ನೀಡಿ:
ಕಲಂದರ್ ಶಾಫಿ ಮಾತನಾಡಿ ಒಂದು ಮತ್ತು ಎರಡನೇ ಹೆಣ್ಣು ಮಗುವಿಗೆ ಭಾಗ್ಯಲಕ್ಷ್ಮೀ ಯೋಜನೆ ಇದೆ. ಇದನ್ನು ಮೂರು ಮತ್ತು ನಾಲ್ಕನೇ ಹೆಣ್ಣು ಮಗುವಿಗೂ ವಿಸ್ತರಿಸಬೇಕೆಂದು ಆಗ್ರಹಿಸಿದರಲ್ಲದೆ, ಈ ಬಗ್ಗೆ ನಿರ್ಣಯ ಅಂಗೀಕರಿಸಲು ಕೋರಿದರು. ಈ ಸಂದರ್ಭ ಪಿಡಿಒ ರವಿಚಂದ್ರ ಅವರು, ಈ ಬಗ್ಗೆ ನಿರ್ಣಯ ದಾಖಲಿಸಲು ಸಭೆಯ ಒಪ್ಪಿಗೆ ಇದೆಯಾ ಎಂದು ಪ್ರಶ್ನಿಸಿದರು. ಆಗ ಅಬ್ದುರ್ರಹ್ಮಾನ್ ಯುನಿಕ್ ಇದೆ ಎಂದರು. ನೆಕ್ಕಿಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಪುತ್ತೂರು- ಉಪ್ಪಿನಂಗಡಿ ಹೆದ್ದಾರಿಗೆ ಹಂಪ್ಸ್ ನಿರ್ಮಿಸಲು ಅಬ್ದುರ್ರಹ್ಮಾನ್ ಯುನಿಕ್ ಆಗ್ರಹಿಸಿದರು.
ಸಭೆಯಲ್ಲಿ ಗ್ರಾಮಸ್ಥರಾದ ಅನಿ ಮಿನೇಜಸ್, ಶಬೀರ್ ನೆಕ್ಕಿಲಾಡಿ, ಝಕಾರಿಯಾ ಕೊಡಿಪ್ಪಾಡಿ, ಗಣೇಶ ದರ್ಬೆ, ಇಸಾಕ್, ಅಬ್ದುಲ್ ಖಾದರ್, ಸ್ವಪ್ನ, ಚಂದ್ರಾವತಿ, ಗೀತಾ, ಪಾವನಾ, ಅಮಿತಾ ಹರೀಶ್, ಗುರುಪ್ರಸಾದ್ ಮತ್ತಿತರರು ಉಪಸ್ಥಿತರಿದ್ದು, ಚರ್ಚೆಯಲ್ಲಿ ಭಾಗವಹಿಸಿದರು. ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಕವಿತಾ ಮಾರ್ಗದರ್ಶಿ ಅಧಿಕಾರಿಯಾಗಿ ಸಭೆಯನ್ನು ಮುನ್ನಡೆಸಿದರು. ಪಿಡಿಒ ರವಿಚಂದ್ರ ಯೋಜನೆಗಳ ಮಾಹಿತಿ ನೀಡಿದರು. ಲೆಕ್ಕ ಸಹಾಯಕ ದೇವಪ್ಪ ನಾಯ್ಕ ವಂದಿಸಿದರು.










