ಆನೆಗಳ ಹಾವಳಿಯಿಂದ ತತ್ತರಿಸಿದ ಕೃಷಿಕ : ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ರಾಜ್ಯಸರಕಾರಕ್ಕೆ ವೆಂಕಟ್ ವಳಲಂಬೆ ಆಗ್ರಹ

0

ಪುತ್ತೂರು: ಸುಳ್ಯ ತಾಲೂಕಿನ ದುಗ್ಗಲಡ್ಕ, ಕಂದಡ್ಕ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಆನೆಗಳ ಹಿಂಡಿನಿಂದ ಕೃಷಿ ಮತ್ತು ಜನಜೀವನ ಅಸ್ತವ್ಯಸ್ತಗೊಂಡಿದೆ.ಕಳೆದ ಒಂದು ವಾರದಿಂದ ದುಲ್ಯನಗರ ಪ್ರದೇಶವಾದ ಕುಂಬೆಟ್ಟಿಬನ, ದುಗ್ಗಲಡ್ಕ, ವೀರಬಿದಿರೆ, ಕಂದಡ್ಕ ಭಾಗದಲ್ಲಿ ಸುಮಾರು 6ರಿಂದ 7 ಆನೆಗಳ ಹಿಂಡು ವಾಸ್ತವ್ಯ ಹೊಂದಿದೆ. ಹಗಲು ಕಾಡಿಗೆ ಹೋಗಿ ರಾತ್ರಿ ಹೊತ್ತು ಊರಿನ ವಿವಿಧ ಭಾಗದ ಕೃಷಿಕರ ತೋಟಗಳಿಗೆ ನುಗ್ಗಿ ಧಾಂದಲೆ ನಡೆಸುತ್ತಿವೆ. ಆನೆಗಳ ಉಪಟಳದಿಂದ ಅಪಾರ ಪ್ರಮಾಣದ ಕೃಷಿ ನಾಶವಾಗಿದೆ. ಕೃಷಿ ನಷ್ಟದ ಜೊತೆಗೆ ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ನಡೆದಾಡಲು ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಆತಂಕದಲ್ಲಿ ದಿನ ಕಳೆಯುವಂತಾಗಿದೆ ಎಂದು ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ತಕ್ಷಣ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯ ಮುಖ್ಯಸ್ಥರು ಮತ್ತು ಕರ್ನಾಟಕ ಸರಕಾರ ವಿಶೇಷ ಗಮನಕೊಟ್ಟು ಆನೆಗಳನ್ನು ಹಿಡಿದು ಬೇರೆ ಯೋಗ್ಯ ಸ್ಥಳಕ್ಕೆ ಸ್ಥಳಾಂತರಿಸಬೇಕು” “ಮುಂದೆ ಶಾಲಾ ಮಕ್ಕಳು ಅಥವಾ ಸಾರ್ವಜನಿಕರ ಜೀವಕ್ಕೂ ತೊಂದರೆಯಾಗುವ ಮೊದಲು ಸೂಕ್ತ ಕ್ರಮ ಕೈಗೊಳ್ಳಬೇಕು. ಜೀವ ಹಾನಿ, ಕೃಷಿ ಹಾನಿಯಾಗುವ ಮೊದಲು ಇದನ್ನು ಗಂಭೀರ ಸಮಸ್ಯೆಯೆಂದು ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಘಟನೆ ಆದ ಬಳಿಕ ಪರಿಹಾರ ಘೋಷಣೆ ಮಾಡುವುದು ಮುಖ್ಯವಲ್ಲ. ನಾಗರಿಕರು ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಬಾರದು” ಎಂದು ಅವರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here