







ಇಲ್ಲಿ ತಡೆಗೋಡೆ ನಿರ್ಮಾಣ ಮಾಡಿದ್ದು, ನನಗೆ ಹೊಸ ಮನೆ ಕಟ್ಟಿದಷ್ಟು ಸಂತೋಷವಾಗಿದೆ: ಶಾಸಕ ಅಶೋಕ್ ರೈ


ಪುತ್ತೂರು: ಆರ್ಯಾಪು ಗ್ರಾಮದ ಕೊಲ್ಯದಲ್ಲಿ ಧರೆ ಕುಸಿದು ಮನೆಯೊಂದಕ್ಕೆ ಹಾನಿಯಾಗಿದೆ, ಇಲ್ಲಿ ತಡೆಗೋಡೆ ನಿರ್ಮಾಣವಾಗದೇ ಇರುತ್ತಿದ್ದರೆ ಅನೇಕ ಮನೆಗಳು ಕುಸಿಯುತ್ತಿದ್ದವು, ಬಡವರ ಮನೆಗಳೇ ಇರುವ ಇಲ್ಲಿಗೆ ತಡೆಗೋಡೆ ನಿರ್ಮಾಣ ಮಾಡಿದ್ದು ನನಗೆ ಹೊಸ ಮನೆ ಕಟ್ಟಿದಷ್ಟು ಸಂತೋಷವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.



ಅವರು ಆರ್ಯಾಪು ಗ್ರಾಮದ ಕೊಲ್ಯ ಕಾಲನಿಗೆ ಭೇಟಿ ನೀಡಿ ಧರೆ ಕುಸಿತವಾಗಿರುವ ಸ್ಥಳವನ್ನು ವೀಕ್ಷಣೆ ಮಾಡಿ ಕುಟುಂಬಗಳಿಗೆ ಸಾಂತ್ವನ ಹೇಳಿದರು.

ವೋಟಿಗೋಸ್ಕರ ಬಡವರ ಜೀವದ ಜೊತೆ ಚೆಲ್ಲಾಟ ಬೇಡ
ಕೊಲ್ಯದಲ್ಲಿ ತಡೆಗೋಡೆ ನಿರ್ಮಾಣ ಮಾಡುವುದಾಗಿ ಸುಳ್ಳು ಹೇಳಿ ಬಡವರಿಗೆ ಮೋಸ ಮಾಡಿ ವೋಟುಗಿಟ್ಟಿಸಿಕೊಂಡವರು ಇಲ್ಲಿನ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕಿತ್ತು. ಬಡವರಿಗೆ ಮೋಸ ಮಾಡುವ ಪೃವೃತ್ತಿಯನ್ನು ಜನಪ್ರತಿನಿಧಿಗಳು ನಿಲ್ಲಿಸಬೇಕು. 35 ವರ್ಷಗಳಿಂದ ಇಲ್ಲಿನ ನಿವಾಸಿಗಳು ಪ್ರತೀ ಮಳೆಗಾಲದಲ್ಲಿ ಭಯದಲ್ಲೇ ಕಾಲ ಕಳೆಯುತ್ತಿದ್ದರು. ಇದನ್ನು ಕಂಡೂ ಕಾಣದಂತೆ ಪ್ರತೀ ಬಾರಿ ಚುನಾವಣೆ ಸಮಯದಲ್ಲಿ ಧರ್ಮ ರಾಜಕಾರಣ ಮಾಡಿ ಜನರಿಗೆ ವಂಚನೆ ಮಾಡಿದ್ದು ದೇವರು ಮೆಚ್ಚುವ ಕೆಲಸವಲ್ಲ ಎಂದರು.
ಧರೆ ಕುಸಿದಾಗ ಕೆಲವರು ಸಂತೋಷಪಟ್ಟಿದ್ದರು-ಕಾವು ಹೇಮನಾಥ ಶೆಟ್ಟಿ
ಕೊಲ್ಯದಲ್ಲಿ ಧರೆ ಕುಸಿತವಾದಾಗ ಸಾಮಾಜಿಕತಾಣದಲ್ಲಿ ಕೆಲವರು ವಿಕೃತ ಸಂತೋಷ ವ್ಯಕ್ತಪಡಿಸಿದ್ದರು. ಅಶೋಕ್ ರೈ ಕಟ್ಟಿದ ತಡೆಗೋಡೆ ಬಿದ್ದಿದೆ ಎಂದು ಪೋಸ್ಟರ್ ಹಾಕಿದ್ರು, ಕಮೆಂಟ್ ಹಾಕಿದ್ರು ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಹೇಳಿದರು. ಕೊಲ್ಯದಲ್ಲಿ ಅಶೋಕ್ ರೈ ಕಟ್ಟಿಸಿದ ತಡೆಗೋಡೆ ಬಿದ್ದಿಲ್ಲ, ಧರೆ ಕುಸಿದಾಗ ತಡೆಗೋಡೆ ಅದನ್ನು ತಡೆದು ಮನೆ, ಜೀವ ಹಾನಿಯಾಗದಂತೆ ತಡೆದಿದೆ ಎಂದು ಹೇಳಿದರು. ಘಟನೆ ನಡೆದಾಗ ನಾನು ಇಲ್ಲಿಗೆ ಭೇಟಿ ನೀಡಿದ್ದೆ ಆ ಸಂದರ್ಭದಲ್ಲಿ ಇಲ್ಲಿನ ನಿವಾಸಿಗಳು ಈ ವಿಚಾರವನ್ನು ನನ್ನಲ್ಲಿ ತಿಳಿಸಿದ್ದರು. ಇಲ್ಲಿನ ಜನರ ಸಂಕಷ್ಟವನ್ನು ಅರಿತು ಶಾಸಕರು ಎರಡು ಕೋಟಿ ಅನುದಾನ ಮಂಜೂರು ಮಾಡಿದ್ದರು ಎಂಬುದನ್ನು ವಿಘ್ನ ಸಂತೋಷಿಗಳು ಅರ್ಥ ಮಾಡಿಕೊಳ್ಳಬೇಕು. ಶಾಸಕ ಅಶೋಕ್ ರೈ ಕಾರ್ಯವೈಖರಿ, ಅಭಿವೃದ್ದಿ ಕೆಲಸವನ್ನು ಕಂಡು ಸಹಿಸಲು ಸಾಧ್ಯವಾಗದ ಕೆಲವರು ಅವರನ್ನು ಅಭಿವೃದ್ದಿ ಕೆಲಸಕ್ಕೆ ಅಡ್ಡಿಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಪುತ್ತೂರು ಕ್ಷೇತ್ರವು ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ದಿಯಾಗುತ್ತಿರುವುದು ವಿರೋಧ ಪಕ್ಷದವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಈ ಮತ್ಸರದಿಂದ ಅಪಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿರೋಧ ಪಕ್ಷದವರ ಅಪಪ್ರಚಾರವನ್ನು ಜನರು ಗಮನಿಸುತ್ತಿದ್ದು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು. ಪುತ್ತೂರು ನಿರಂತರ ಅಭಿವೃದ್ದಿಯಾಗುತ್ತಿದೆ. ಶಾಸಕರ ಮೂಲಕ ಅನುದಾನ ಹರಿದು ಬರುತ್ತಿದೆ, ಕಾಂಗ್ರೆಸ್ನ ಪಂಚ ಗ್ಯಾರಂಟಿಯನ್ನು ಜನಸ್ವೀಕಾರ ಮಾಡಿದ್ದಾರೆ. ಇನ್ನು ನಮಗೆ ಉಳಿಗಾಲವಿಲ್ಲ ಎಂದು ಅರಿತು ರಸ್ತೆಯಲ್ಲಿ ಗುಂಡಿ ಹುಡುಕುವ ಕೆಲಸವನ್ನು ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಪ್ರಚಲಿತದಲ್ಲಿರಬೇಕು ಎಂಬ ಉದ್ದೇಶದಿಂದ ಗುಂಡಿ ಹುಡುಕುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಕಾವು ಹೇಮನಾಥ ಶೆಟ್ಟಿ ಆರೋಪಿಸಿದರು.
ಶಾಸಕರ ಕಾಲು ತೊಳೆದು ನೀರು ಕುಡಿಯುತ್ತೇವೆ: ರತ್ನಾವತಿ
ಕೊಲ್ಯ ನಿವಾಸಿ ರತ್ನಾವತಿಯವರು ಮಾತನಾಡಿ ಇಲ್ಲಿನ ನಿವಾಸಿಗಳು ಶಾಸಕ ಅಶೋಕ್ ರೈ ಅವ ಕಾಲು ತೊಳೆದು ನೀರು ಕುಡಿಯಲು ಸಿದ್ದರಿದ್ದೇವೆ. ಇಲ್ಲಿ ತಡೆಗೋಡೆ ನಿರ್ಮಾಣವಾಗದೇ ಇರುತ್ತಿದ್ದರೆ ನಾನು ನನ್ನ ಮಕ್ಕಳು ಸೇರಿದಂತೆ ಅನೇಕ ಕುಟುಂಬಗಳು ನಾಶವಾಗುತ್ತಿದ್ದವು. ಆದರೆ ಆ ದೇವರೇ ಶಾಸಕರಿಗೆ ಅನುದಾನ ನೀಡುವಂತೆ ಪ್ರೇರೇಪಣೆ ಮಾಡಿದ್ದಾರೆ. ಇವರಂತ ಶಾಸಕರನ್ನು ನಾವು ಕಂಡಿಲ್ಲ. 30 ವರ್ಷಗಳಿಂದ ಮಳೆಗಾಲದಲ್ಲಿ ನಿದ್ದೆಯಿಲ್ಲದೆ ಕಳೆದಿದ್ದೇವೆ, ಈಗ ನೆಮ್ಮದಿಯಾಗಿದೆ. ನಮ್ಮ ಕಾಲನಿಗೆ ಮುಂದೆ ಅಶೋಕ ನಗರ ಎಂದು ನಾಮಕರಣ ಮಾಡುತ್ತೇವೆ. ನಮ್ಮ ಮುಂದಿನ ಪೀಳಿಗೆಗೆ ಯಾಕೆ ಅಶೋಕ ನಗರ ಎಂದು ಹೆಸರಿಟ್ಟಿದ್ದೇವೆ ಎಂಬುದು ಗೊತ್ತಾಗಬೇಕು ಎಂದು ರತ್ನಾವತಿಯವರು ಹೇಳಿದರು.
ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ರೈ, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ಕಾಂಗ್ರೆಸ್ ಮುಖಂಡ ಹನೀಫ್ ಬಗ್ಗುಮೂಲೆ, ಸಂತೋಷ್ ಭಂಡಾಇ ಚಿಲ್ಮೆತ್ತಾರು, ಬೂತ್ ಅಧ್ಯಕ್ಷ ಅಣ್ಣಿ ಸಹಿತ ಹಲವರು ಉಪಸ್ಥಿತರಿದ್ದರು.










