






ವಿವಿಧ ಸ್ಪರ್ಧೆಗಳು, ಪ್ರತಿಭಾ ಪುರಸ್ಕಾರ, ಆಟಿಯ ತಿನಿಸುಗಳೊಂದಿಗೆ ನಡೆದ ಭೋಜನ


ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘ ಪಡ್ನೂರು, ಯುವ ಒಕ್ಕಲಿಗ ಗೌಡ ಸೇವಾ ಸಂಘ, ಒಕ್ಕಲಿಗ ಮಹಿಳಾ ಸಂಘ ಹಾಗೂ ಒಕ್ಕಲಿಗ ಸ್ವ-ಸಹಾಯ ಸಂಘ ಪಡ್ನೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ವಿವಿಧ ಸ್ಪರ್ಧೆಗಳೊಂದಿಗೆ ಆ.೯ರಂದು ಮುರ ಗೌಡ ಸಮುದಾಯ ಭವನದಲ್ಲಿ ನಡೆದ ಆಟಿದ ಕೂಟ-2026 ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಸಮಾಜ ಬಾಂಧವರಲ್ಲಿ ಸಂಭ್ರಮ ಮನೆ ಮಾಡಿತು.




ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಚಿದಾನಂದ ಬನಾರಿ ಅವರು ತೆಂಗಿನಗರಿ ಅರಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಒಕ್ಕಲಿಗ ಸ್ವ ಸಹಾಯ ಸಂಘ ಪಡ್ನೂರು ಒಕ್ಕೂಟದ ಅಧ್ಯಕ್ಷ ದಿನೇಶ್ ಗೌಡ ಮೂವಪ್ಪ ಅಧ್ಯಕ್ಷತೆ ವಹಿಸಿದ್ದರು. ಒಕ್ಕಲಿಗ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಒಕ್ಕಲಿಗ ಗೌಡ ಸೇವಾ ಸಂಘದ ಕೋಶಾಧಿಕಾರಿ ಶ್ರೀಧರ ಗೌಡ ಕಣಜಾಲು, ಪಡ್ನೂರು ಒಕ್ಕಲಿಗ ಮಹಿಳಾ ಸಂಘದ ಅಧ್ಯಕ್ಷೆ ನೇತ್ರಾವತಿ ವಸಂತ ಗೌಡ, ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ರತನ್ ಕುಂಜಾರು ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಕ್ಕಳಿಗಾಗಿ ಕಾಳು ಹೆಕ್ಕುವುದು, ಕಪ್ಪೆಜಿಗಿತ, ಲಕ್ಕಿಗೇಮ್, ಬಾಲ್ ಪಾಸ್, ಬಾಟ್ಲಿಗೆ ನೀರು ತುಂಬಿಸುವುದು, ಲಿಂಬೆ ಚಮಚ ಓಟ, ಯುವತಿಯರಿಗೆ ರಂಗೋಲಿ, ಮದುರಂಗಿ ಸ್ಪಧೆ, ಮಹಿಳೆಯರಿಗೆ ಸೋಬಾನೆ ಹಾಡು ಚೆನ್ನೆಮಣೆ, ಪುರುಷರಿಗೆ ತೆಂಗಿನ ಕಾಯಿ ಉರುಳಿಸುವುದು ಹಾಗೂ ಸೂಜಿಗೆ ದಾರ ಹಾಕುವ ಸ್ಪರ್ಧೆಗಳು ನಡೆಯಿತು. ಸಮಾಜ ಬಾಂಧವರು ಉತ್ಸಾಹದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಸಮಾರೋಪ ಸಮಾರಂಭ:
ಮಧ್ಯಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ನೆಹರುನಗರ ವಿವೇಕಾನಂದ ತಾಂತ್ರಿಕ ವಿದ್ಯಾಲಯದ ಉಪನ್ಯಾಸಕಿ ಪ್ರಭಾ ದೀಪಕ್, ಪುರಾತನ ಕಾಲದಲ್ಲಿ ಪರಸ್ಪರ ಪ್ರೀತಿ, ಸಹಬಾಳ್ವೆಯ ಜೀವನಕ್ಕಾಗಿ ಹಿರಿಯರು ಆಟಿಯ ಆಚರಣೆಯು ಕಂಡುಕೊಂಡ ಜೀವನ ವಿಧಾನ. ಈಗ ಕಾಲ ಬದಲಾಗಿದೆ ಕಷ್ಟದ ದಿನಗಳು ಕಡಿಮೆಯಾಗಿದೆ. ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಬದಲಾದ ದಿನಗಳಲ್ಲಿ ಈಗಿನ ತಲೆಮಾರಿನ ಜನತೆಗೆ ಕಷ್ಟದ ಅರಿವಿಲ್ಲ. ಸಂಪ್ರದಾಯಗಳು ತಲೆ ಮಾರಿನಿಂದ ತೆಮಾರಿಗೆ ಮಾಯವಾಗುತ್ತಿದೆ. ಆಧುನಿಕ ದಿನಗಳಲ್ಲಿ ಬದಲಾದ ಆಹಾರ ಪದ್ದತಿಯು ಆರೋಗ್ಯ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಆಟಿಯ ಆಚರಣೆಯು ಬಹಳ ಮಹತ್ವದ್ದಾಗಿದೆ. ಆದುನಿಕತೆಯ ಜೀವನದ ಭರಾಟೆಯಲ್ಲಿ ಪುರಾತನ ಸಂಪ್ರದಾಯ ಉಳಿಸಿ ಬೆಳೆಸುವ ಹೊಣೆ ನಮ್ಮದಾಗಬೇಕು ಎಂದು ಹೇಳಿದರು.
ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಕಾರ್ಯದರ್ಶಿ ಶ್ರೀಧರ ಗೌಡ ಪಾಣತ್ತಿಲ ಮಾತನಾಡಿ, ಗೌಡ ಸಮುದಾಯದವರ ಬೆಳವಣಿಗೆಗೆ ಪೂರಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಸಂಘದ ಮೂಲಕ ತಾಲೂಕಿನ ಗೌಡ ಸಮುದಾಯದವರ ಎಲ್ಲಾ ಮನೆ ಸಮೀಕ್ಷೆ ನಡೆಸಲಾಗುತ್ತಿದೆ. ಎಲ್ಲಾ ಮಾಹಿತಿಗಳು ಸಂಗ್ರಹವಾದ ಬಳಿಕ ಆಪ್‌ನಲ್ಲಿ ದಾಖಲಿಸಲಾಗುತ್ತಿದ್ದು ಸಮೀಕ್ಷೆಯಲ್ಲಿ ಸಮಾಜ ಬಾಂಧವರು ಸಹಕರಿಸಬೇಕು. ಜೊತೆಗೆ ಸಮಾಜ ಬಾಂಧವರು ಸಂಘದಲ್ಲಿ ಸದಸ್ಯತ್ವವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಒಕ್ಕಲಿಗ ಗೌಡ ಮಹಿಳಾ ಸಂಘದ ಅಧ್ಯಕ್ಷೆ ಸಂಧ್ಯಾ ಶಶಿಧರ್ ಮಾತನಾಡಿ, ಮಹಿಳಾ ಸಂಘದ ಮುಖಾಂತರ ಆ.೨೮ರಂದು ವರಮಹಾಲಕ್ಷ್ಮೀ ಪೂಜೆ ನಡೆಯಲಿದ್ದು ಪ್ರತಿಯೊಬ್ಬರೂ ಭಾಗವಹಿಸುವಂತೆ ಮನವಿ ಮಾಡಿದರು. ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಅಧ್ಯಕ್ಷ ವಿಶ್ವನಾಥ ಗೌಡ ಬನ್ನೂರು ಮಾತನಾಡಿ, ಸಮಾಜ ಬಾಂಧವರ ಏಳಿಗೆಗಾಗಿ ಒಕ್ಕಲಿಗ ಟ್ರಸ್ಟ್‌ನ ಸ್ವ ಸಹಾಯ ಸಂಘದ ಮೂಲಕ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿಕೊಳ್ಳಲಾಗುತ್ತಿದ್ದು ಇವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿನಂತಿಸಿದರು.
ಪುತ್ತೂರು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ ಮಾತನಾಡಿ, ಸಂಘದ ಮೂಲಕ ಸಮಾಜ ಬಾಂಧವರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಯುವ ಜನತೆ ಅಧಿಕವಾಗಿ ಭಾಗವಹಿಸಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಒಕ್ಕಲಿಗ ಗೌಡ ಸೇವಾ ಸಂಘ ಪಡ್ನೂರು ಗ್ರಾಮದ ಸಮಿತಿ ಅಧ್ಯಕ್ಷ ಗಂಗಾಧರ ಗೌಡ ಕಡ್ತಿಮಾರ್ ಮಾತನಾಡಿ, ಪಡ್ನೂರು ಗ್ರಾಮ ಸಮಿತಿಯು ಕಳೆದ ೩೮ ವರ್ಷಗಳಿಂದ ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಿಗಿಸಿಕೊಳ್ಳುತ್ತಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ತುರ್ತು ಸಂದರ್ಭದಲ್ಲಿ ಧನ ಸಹಾಯ ನೀಡುತ್ತಿದೆ. ಸಮುದಾಯವನ್ನು ಮತ್ತಷ್ಟು ಬಲಪಡಿಸುವ, ಪರಸ್ಪರ ಸಂವಹನ ಆಗುವ ನಿಟ್ಟಿನಲ್ಲಿ ಆಟಿದ ಕೂಟ ಆಯೋಜಿಸಲಾಗಿದೆ ಎಂದು ಹೇಳಿದರು.
ಸನ್ಮಾನ, ಪ್ರತಿಭಾ ಪುರಸ್ಕಾರ:
ಶೈಕ್ಷಣಿಕ ಮತ್ತು ಕಲಾಕ್ಷೇತ್ರದ ಸಾದಕಿ ಮಣಿ ಮುಂಡಾಜೆ ಇವರನ್ನು ಸನ್ಮಾನಿಸಲಾಯತು. ೨೦೨೫-೨೬ನೇ ಸಾಲಿನ ಎಸ್‌ಎಸ್‌ಎಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಅನನ್ಯ ಬೇರಿಕೆ, ಲಿತನ್ ಪಿ.ಜೆ., ಜಸ್ಮಿತ್ ಸೇಡಿಯಾಪು, ತುಷಾನ್ ಎ., ದೀಕ್ಷಾಪಿ. ಎನ್., ಲಾಸ್ಯ ಎಸ್.ಎನ್., ಚರಿತ್, ತೃತಿ, ರಂಜಿತ್, ವಸುದಾ ಪಿ.ಜೆ., ಪಿಯುಸಿಯಲ್ಲಿ ಆಶಾ, ಸಿಂಚನಾ ಪಿ.ಜಿ., ರವಿ ಸೇಡಿಯಾಪು, ಚಿರಾಗ್ ಪಿ.ಗೌಡ, ಚೇತನ್‌ಕೆ.ವಿ., ತೃಷಾ ಎಸ್.ಇವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ಪಡ್ನೂರು ಒಕ್ಕೂಟದ ಶ್ರೀಲಕ್ಷ್ಮೀ ಸಂಘಕ್ಕೆ ಅತ್ಯುತ್ತಮ ಸಂಘ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆಟಿದ ಕೂಟದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಗ್ರಾಮ ಸಮಿತಿ ಮಾಜಿ ಅಧ್ಯಕ್ಷ ಯಶವಂತ ಗೌಡ ಮತಾವು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ದಿನೇಶ್ ಪಡ್ಡಾಯೂರು ಕಾರ್ಯಕ್ರಮ ನಿರೂಪಿಸಿ, ಮಾಜಿ ಕಾರ್ಯದರ್ಶಿ ಪೂವಪ್ಪ ಗೌಡ ದೇಂತಡ್ಕ ವಂದಿಸಿದರು. ಒಕ್ಕಲಿಗ ಗೌಡ ಸಂಘ ಪಡ್ನೂರು ಗ್ರಾಮ ಸಮಿತಿ ಕಾರ್ಯದರ್ಶಿ ವಿನೋದ್ ಗೌಡ ಪಟ್ಟೆ, ಯುವ ಒಕ್ಕಲಿಗ ಸಂಘದ ಕಾರ್ಯದರ್ಶಿ ನವೀನ್ ಸೇಡಿಯಾಪು, ಮಹಿಳಾ ಸಂಘದ ಕಾರ್ಯದರ್ಶಿ ಶ್ವೇತಾ ಬೇರಿಕೆ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ಪ್ರೇರಕಿ ಸಮಿತಾ ಎ, ರಮ್ಯ ವಿನೋದ್ ಪಟ್ಟೆ, ರಾಜೇಶ್ ಆಟಿಕ್ಕು ಶ್ವೇತಾ ಪಡ್ಡಾಯೂರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಆಟಿಯ ತಿನಿಸುಗಳೊಂದಿಗೆ ವಿಶೇಷ ಭೋಜನ ನೆರವೇರಿತು. ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು, ಮಹಿಳಾ ಘಟಕದ ಮಾಜಿ ಅಧ್ಯಕ್ಷರು ಗ್ರಾಮ ಸಮಿತಿಯ ಪದಾಧಿಕಾರಿಗಳು ಸಹಿತ ನೂರಾರು ಮಂದಿ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಭ್ರಮಿಸಿದರು.










