







ಆಟಿ ಸಂಪ್ರದಾಯ, ಆಹಾರ ಪದ್ಧತಿ ಹೊಸ ತಲೆಮಾರಿಗೆ ತಲುಪಬೇಕು-ಶಶಿಧರ್ ಕಿನ್ನಿಮಜಲು


ಪುತ್ತೂರು: ಆಟಿಯ ದಿನಗಳು ಕೇವಲ ಒಂದು ಆಚರಣೆಯಲ್ಲ, ನಮ್ಮ ಹಿರಿಯರು ಅನುಭವಿಸಿದ ಕಷ್ಟದ ಬದುಕು, ಅವರ ಜೀವನಶೈಲಿ ಹಾಗೂ ಪೌಷ್ಟಿಕ ಆಹಾರದ ಮಹತ್ವವನ್ನು ನೆನಪಿಸುವ ಸಂಸ್ಕೃತಿಯ ಪ್ರತೀಕವಾಗಿದೆ. ಇಂತಹ ಸಂಪ್ರದಾಯಗಳು ಹೊಸ ತಲೆಮಾರಿಗೆ ತಲುಪುವುದು ಅತ್ಯಗತ್ಯ ಎಂದು ರೋಟರಿ ವಲಯ 5ರ ವಲಯ ಸೇನಾನಿ ಶಶಿಧರ್ ಕಿನ್ನಿಮಜಲುರವರು ಹೇಳಿದರು.



ಆ. 5ರಂದು ಪುತ್ತೂರಿನ ಸುದಾನ ಎಡ್ವರ್ಡ್ ಹಾಲ್ನಲ್ಲಿ ರೋಟರಿ ಕ್ಲಬ್ ಪುತ್ತೂರು ಎಲೈಟ್ ಆಶ್ರಯದಲ್ಲಿ ಆಯೋಜಿಸಲಾದ ‘ಆಟಿದ ನೆಂಪು’ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ರೋಟರಿ ವಲಯ-5ರ ಅಸಿಸ್ಟೆಂಟ್ ಗವರ್ನರ್ ಅಬ್ದುಲ್ ರಜಾಕ್ ಕಬಕಕಾರ್ಸ್ ರವರು ಕ್ಲಬ್ ಬುಲೆಟಿನ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿ, ರೋಟರಿ ಪುತ್ತೂರು ಎಲೈಟ್ ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ತನ್ನದೇ ಆದ ವಿಶಿಷ್ಟ ಗುರುತನ್ನು ಮೂಡಿಸಿಕೊಂಡಿದ್ದು, ಈ ಕ್ಲಬ್ನ ಸದಸ್ಯನಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಕ್ಲಬ್ನಿಂದ ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಅರ್ಥಪೂರ್ಣ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಪುತ್ತೂರು ಎಲೈಟ್ ಅಧ್ಯಕ್ಷ ಮೊಹಮ್ಮದ್ ಶಾಕೀರ್ ಮಾತನಾಡಿ, ರೋಟರಿ ಎಂದರೆ ಸಹಬಾಳ್ವೆ, ಒಗ್ಗಟ್ಟು, ಹಾಗೂ ಸಮಾಜ ಸೇವೆ. ಇದೇ ಧ್ಯೇಯದೊಂದಿಗೆ ನಮ್ಮ ಕ್ಲಬ್ ನಿರಂತರವಾಗಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ. ಆಟಿದ ನೆಂಪು ಕಾರ್ಯಕ್ರಮದ ಮೂಲಕ ಸದಸ್ಯರು ಹಾಗೂ ಅವರ ಕುಟುಂಬದವರು ಒಂದಾಗಿ ಆಟಿಯ ಸಂಪ್ರದಾಯವನ್ನು ನೆನಪಿಸಿಕೊಂಡು ಸಾಮೂಹಿಕ ಭೋಜನದಲ್ಲಿ ಪಾಲ್ಗೊಂಡಿರುವುದು ಸಂತಸದ ವಿಚಾರ ಎಂದರು.
ಆಟಿದ ನೆಂಪು ಕಾರ್ಯಕ್ರಮದ ಗುರಿಕಾರರಾದ ರಾಮ ಕೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸದಸ್ಯರೆಲ್ಲರೂ ತಮ್ಮ ಮನೆಗಳಲ್ಲಿಯೇ ತಯಾರಿಸಿಕೊಂಡು ಬಂದ ಸುಮಾರು 40ಕ್ಕೂ ಹೆಚ್ಚು ಆಟಿಯ ವಿಶೇಷ ಖಾದ್ಯಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು, ಇದು ಸದಸ್ಯರ ಬಾಂಧವ್ಯ, ಸಹಕಾರ ಮತ್ತು ಸೇವಾ ಮನೋಭಾವದ ಸಂಕೇತವಾಗಿದೆ ಎಂದು ತಿಳಿಸಿದರು.
ಪ್ರಭಾವತಿ ಕೆ ಪ್ರಾರ್ಥಿಸಿದರು. ರೋಟರಿ ಪುತ್ತೂರು ಎಲೈಟ್ ಕಾರ್ಯದರ್ಶಿ ಸುಶಾಂತ್ ಹಾರ್ವಿನ್ ವಾರದ ವರದಿ ಮಂಡಿಸಿದರು. ಮೆಂಬರ್ ಶಿಪ್ ಚೇರ್ಮನ್ ಸುಧೀರ್ ಬಿ.ಆಚಾರ್ಯ ಮೆಂಬರ್ ಶಿಪ್ ಸೆಮಿನಾರ್ ಕುರಿತು ಮಾಹಿತಿ ನೀಡಿದರು. ಕ್ಲಬ್ ಕೋಶಾಧಿಕಾರಿ ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಾದ ಆಸ್ಕರ್ ಆನಂದ್, ಬಾಲು ನಾಯ್ಕ್ ಸಹಕಾರ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ರೋಟರಿ ಕ್ಲಬ್ ಗಳ ಪ್ರಮುಖರು, ರೋಟರಿ ಪುತ್ತೂರು ಎಲೈಟ್ ಸದಸ್ಯರು ಮತ್ತು ಅವರ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
40ಕ್ಕೂ ಮಿಕ್ಕಿ ಖಾದ್ಯಗಳು…
ಕಾರ್ಯಕ್ರಮದ ಬಳಿಕ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು. ಅನಂತರ ರೋಟರಿ ಸದಸ್ಯರು ತಮ್ಮ ಮನೆಗಳಲ್ಲಿ ತಯಾರಿಸಿಕೊಂಡು ಬಂದ 40ಕ್ಕೂ ಅಧಿಕ ವಿವಿಧ ಆಟಿಯ ಸಾಂಪ್ರದಾಯಿಕ ಖಾದ್ಯಗಳನ್ನು ಎಲ್ಲರೂ ಒಟ್ಟಾಗಿ ಸವಿಯುವ ಮೂಲಕ ಆಟಿದ ನೆಂಪು ಕಾರ್ಯಕ್ರಮಕ್ಕೆ ಮತ್ತಷ್ಟು ಅರ್ಥಪೂರ್ಣತೆ ನೀಡಿದರು.
ಗೌರವ..
ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್ ಹಾಗೂ ನಿಕಟಪೂರ್ವ ವಲಯ ಸೇನಾನಿ ಸುರೇಶ್ ಪುತ್ತೂರುರವರನ್ನು ಗೌರವಿಸಲಾಯಿತು.










