







ಪುತ್ತೂರು:ಗ್ರಾಮೀಣ ಕ್ರೀಡಾ ಸಂಭ್ರಮಕ್ಕೆ ಹೊಸ ಮೆರುಗು ನೀಡುವ ‘ಕೆಸರ್‌ಡ್ ಕುಸಲ್ದ ಲೇಸ್-2026’ ಸೀಸನ್-2 ಕಾರ್ಯಕ್ರಮ ಈ ಬಾರಿ ಆ.9ರಂದು ಅಳಕೆ ಮಜಲಿನ ಪೆಲತ್ತಿಂಜ ಗದ್ದೆಯಲ್ಲಿ ನಡೆಯಿತು.


ಎಸ್.ಆರ್.ಕೆ.ಲ್ಯಾಡರ‍್ಸ್,ಸುದ್ದಿ ಬಿಡುಗಡೆ,ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕ ಹಾಗೂ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಇಂಜಿನಿಯರ‍್ಸ್ ಇಂಡಿಯಾ ಪುತ್ತೂರು ಸೆಂಟರ್ ಮತ್ತು ಆರ್ವಿ ಇಂಟರ್‌ಗ್ರಾಫಿಕ್ಸ್ ಸಂಸ್ಥೆಯ ಸಹಯೋಗದಲ್ಲಿ ನಡೆದ ‘ಕೆಸರ್‌ಡ್ ಕುಸಲ್ದ ಲೇಸ್ ಸೀಸನ್ -2’ ಕಾರ್ಯಕ್ರಮದಲ್ಲಿ ಬೆಳಗ್ಗಿನಿಂದ ಸಂಜೆಯ ತನಕ ವಿವಿಧ ಮನರಂಜನಾ ಹಾಗೂ ಕ್ರೀಡಾ ಸ್ಪರ್ಧೆಗಳು ನಡೆದವು.ಗ್ರಾಮೀಣ ಕ್ರೀಡೆಗಳ ಸೊಗಡನ್ನು ಪರಿಚಯಿಸುವುದರ ಜೊತೆಗೆ ವೃತ್ತಿಯ ನಡುವೆ ಕ್ರೀಡಾಸಕ್ತಿಯ ಮೂಲಕ ಮನಸ್ಸಿನ ಉಲ್ಲಾಸಕ್ಕಾಗಿ ಎಲ್ಲಾ ಸಂಸ್ಥೆಯವರು ಸೌಹಾರ್ದತೆಯ ಕ್ರೀಡೆಯನ್ನು ಸಂಭ್ರಮಿಸಿದರು.5 ಸಂಸ್ಥೆಗಳ ನಡುವೆ ನಡೆದ ಪಂದ್ಯಾಟದಲ್ಲಿ ರೋಲಿಂಗ್ ಟ್ರೋಫಿಯನ್ನು ಎಸ್‌ಆರ್‌ಕೆ ತನ್ನ ಮುಡಿಗೇರಿಸಿಕೊಂಡಿತ್ತು.5 ಸಂಸ್ಥೆಗಳ ಸದಸ್ಯರು ಅನೇಕ ವೈಯಕ್ತಿಕ ಬಹುಮಾನ ಪಡೆದುಕೊಂಡರು.ಕ್ರೀಡಾಕೂಟದಲ್ಲಿ ವಿಶೇಷ ಆಕರ್ಷಣೆಯಾಗಿದ್ದ ಕೇಶವ ಅಮೈ ಅವರ ಸಹೋದರಿಯ ಶ್ವಾನ ‘ಜಾಕಿ’ಗೆ ಪದಕ ನೀಡಿ ಗೌರವಿಸಲಾಯಿತು.




ಕಾರ್ಯಕ್ರಮದ ಆರಂಭದಲ್ಲಿ, ಶ್ರೀ ರಾಮಕುಂಜೇಶ್ವರ ಪ್ರೌಢ ಶಾಲೆಯ ನಿವೃತ್ತ ಮುಖ್ಯಗುರು,ರಾಜ್ಯ ಪುರಸ್ಕೃತ ಸತೀಶ್ ಭಟ್ ಅವರು ಧ್ವಜಾರೋಹಣ ನೆರವೇರಿಸಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ಇಡ್ಕಿದು ಗ್ರಾ.ಪಂ ಸದಸ್ಯ ಚಿದಾನಂದ ಪೆಲತ್ತಿಂಜ ಅವರು ನೆರವೇರಿಸಿದರು.ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ ಕಾರ್ಯದರ್ಶಿ ಚಂದ್ರಕಾಂತ ಅವರು ತೆಂಗಿನ ಸಿರಿಯನ್ನು ಅರಳಿಸಿದರು.ದಕ್ಷಿಣ ಕನ್ನಡ ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ರೆಫ್ರಿ ಬೋರ್ಡ್ ಅಧ್ಯಕ್ಷ ಶಿವರಾಮ್ ಏನೆಕಲ್ ಅವರು ಸಂಪ್ರದಾಯದಂತೆ ತೆಂಗಿನ ಕಾಯಿ ಒಡೆದರು.ಆರ್ವಿ ಇಂಟರ್‌ಗ್ರಾಫಿಕ್ಸ್‌ನ ಆಡಳಿತ ಪಾಲುದಾರ ಜ್ಞಾನೇಶ್ ವಿಶ್ವಕರ್ಮ ಸೆಲಿ ಪಾಯಿಂಟ್ ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರು ಗದ್ದೆಗೆ ಹಾಲೆರೆದು ಕ್ರೀಡಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹಿಂದಿನ ಸಂಸ್ಕೃತಿಯನ್ನು ನೆನಪಿಸುವ ಕಾರ್ಯಕ್ರಮ:
ಗದ್ದೆಗೆ ಹಾಲೆರೆದು ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಡಾ.ಯು.ಪಿ.ಶಿವಾನಂದ ಅವರು, ಮಾತನಾಡಿ ಹಿಂದಿನ ಕಾಲದಲ್ಲಿ ಜನರಿಗೆ ಕಷ್ಟದ ದಿನ ಆಟಿ.ಆಗ ಮೂಲ ಸೌಕರ್ಯ, ಉದ್ಯೋಗ ಮತ್ತು ಆದಾಯದ ಕೊರತೆಯಿಂದ ಜನರು ಪ್ರಕೃತಿಯ ಸವಾಲುಗಳನ್ನು ಎದುರಿಸಿ ಬದುಕು ಕಟ್ಟಿಕೊಳ್ಳುತ್ತಿದ್ದರು.ಇವತ್ತು ಆಟಿ ತಿಂಗಳ ಹಿಂದಿನ ಸಂಸ್ಕೃತಿಯನ್ನು ನೆನಪಿಸುವಲ್ಲಿ ಇಂತಹ ಸೌಹಾರ್ದತೆಯ ಕ್ರೀಡೆ ಉತ್ತಮ ಎಂದರು.
ಮನೋರಂಜನೆಯ ಕ್ರೀಡೆ ಉತ್ತಮ:
ರಾಜ್ಯಪ್ರಶಸ್ತಿ ಪುರಸ್ಕೃತರಾಗಿರುವ, ಶ್ರೀ ರಾಮಕುಂಜೇಶ್ವರ ಪ್ರೌಢ ಶಾಲೆಯ ನಿವೃತ್ತ ಮುಖ್ಯಗುರು ಸತೀಶ್ ಭಟ್ ಅವರು ಮಾತನಾಡಿ ಮನೋರಂಜನೆಯ ಕ್ರೀಡೆ ಎಲ್ಲರಿಗೂ ಉತ್ತಮ.ಕೇಶವ ಅಮೈ ಅವರ ಚಿಂತನೆಯಂತೆ ಒಳ್ಳೆಯ ಜೋಡಣೆಯೊಂದಿಗೆ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಕೆಸರು ಗದ್ದೆಯ ಕ್ರೀಡಾಕೂಟ ಕೇವಲ ಕ್ರೀಡೆಯಲ್ಲ, ನಮ್ಮ ಸಂಸ್ಕೃತಿಯ ಅನಾವರಣ:
ಮಧ್ಯಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ವಕೀಲ ಮಹೇಶ್ ಕಜೆ ಅವರು ಮಾತನಾಡಿ, ಕೆಸರು ಗದ್ದೆಯಲ್ಲಿ ನಡೆಯುವ ಕ್ರೀಡಾಕೂಟ ಕೇವಲ ಮನರಂಜನೆ ಅಥವಾ ಕ್ರೀಡಾ ಚಟುವಟಿಕೆಗೆ ಸೀಮಿತವಾಗದೆ, ನಮ್ಮ ಮಣ್ಣಿನ ಸಂಸ್ಕೃತಿ, ಕೃಷಿ ಪರಂಪರೆ ಹಾಗೂ ರೈತನ ಬದುಕನ್ನು ಪರಿಚಯಿಸುವ ಮಹತ್ವದ ವೇದಿಕೆಯಾಗಿದೆ.ಇದೇ ಕ್ರೀಡಾಕೂಟವನ್ನು ಯಾವುದಾದರೂ ಸಾಮಾನ್ಯ ಮೈದಾನದಲ್ಲಿ ಆಯೋಜಿಸಿದ್ದರೆ ಅದು ಕೇವಲ ಒಂದು ಕ್ರೀಡಾಕೂಟವಾಗಿ ಉಳಿಯುತ್ತಿತ್ತು.ಆದರೆ ಇಂದು ಕೆಸರು ಗದ್ದೆಯಲ್ಲಿ ಕ್ರೀಡಾಕೂಟ ಆಯೋಜಿಸಿರುವುದರಿಂದ ನಮ್ಮ ನೆಲದ ಸಂಸ್ಕೃತಿಯೇ ನಮ್ಮ ಮುಂದೆ ಅನಾವರಣಗೊಂಡಂತಾಗಿದೆ ಎಂದರು.

ಗದ್ದೆಯ ಮಣ್ಣು ಆರೋಗ್ಯದಾಯಕ:
ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಪುತ್ತೂರು ಇದರ ಪ್ರೊ|ಡಾ|ಅಜಿತ್ ಹೆಬ್ಬಾರ್ ಅವರು ಮಾತನಾಡಿ ಗದ್ದೆಯಲ್ಲಿ ಇರುವವರಿಗೆ ಚರ್ಮದ ರೋಗ ಬರುವುದು ಕಡಿಮೆ.ಇದೊಂದು ವೈಜ್ಞಾನಿಕವಾಗಿ ಆರೋಗ್ಯದಾಯಕ ಎಂದರಲ್ಲದೆ, ಸಿವಿಲ್ ಇಂಜಿನಿಯರ‍್ಸ್‌ಗೆ ಮಣ್ಣು ಬಹಳ ಹತ್ತಿರ ಎಂದರು.
ಸಂಸ್ಕೃತಿ, ಕೃಷಿ ಪರಂಪರೆಯ ಉಳಿವು:
ಎಸ್.ಆರ್.ಕೆ.ಲ್ಯಾಡರ‍್ಸ್‌ನ ಮಾಲಕ ಕೇಶವ ಅಮೈ ಅವರು ಮಾತನಾಡಿ ಗ್ರಾಮೀಣ ಬದುಕಿನ ಸೊಗಡನ್ನು ಉಳಿಸುವುದರ ಜೊತೆಗೆ, ಕೃಷಿ ಮತ್ತು ರೈತನ ಬಗ್ಗೆ ಗೌರವ ಮೂಡಿಸುವ ಕೆಲಸ ಆಗಬೇಕು.ಅದಕ್ಕಾಗಿ ಕೆಸರು ಗದ್ದೆ ಕ್ರೀಡಾಕೂಟವು ಕ್ರೀಡೆಯೊಂದಿಗೆ ಸಂಸ್ಕೃತಿ ಮತ್ತು ಕೃಷಿ ಪರಂಪರೆಯನ್ನೂ ಸಂಭ್ರಮಿಸುವ ಉತ್ಸವವಾಗಿ ರೂಪುಗೊಳ್ಳುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕ್ರೀಡೆ ದೈನಂದಿನ ಒತ್ತಡವನ್ನು ದೂರ ಮಾಡುತ್ತದೆ:
ಎಸಿಸಿಇ(ಐ) ಪುತ್ತೂರು ಸೆಂಟರ್ ಇದರ ಅಧ್ಯಕ್ಷ ಶಿವರಾಮ ಮತಾವು ಅವರು ಮಾತನಾಡಿ ಕ್ರೀಡೆ ನಮ್ಮ ದೈನಂದಿನ ಜೀವನದ ಒತ್ತಡವನ್ನು ದೂರ ಮಾಡುತ್ತದೆ.ಕೆಸರು ಗದ್ದೆಯ ಕ್ರೀಡೆ ಉತ್ತಮ, ವ್ಯವಸ್ಥಿತವಾಗಿ ನಡೆದಿರುವುದು ಸಂತೋಷವಾಗಿದೆ ಎಂದರು.
ಎಸ್.ಆರ್.ಕೆ.ಲ್ಯಾಡರ‍್ಸ್‌ನ ಮಾಲಕ ಕೇಶವ ಅಮೈ ಅವರ ಪತ್ನಿ ಮಾಲತಿ ಕೇಶವ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರ ಪತ್ನಿ ಶೋಭಾ ಶಿವಾನಂದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೃಜನ್ ಊರುಬೈಲು, ಆರ್ವಿ ಇಂಟರ್‌ಗ್ರಾಫಿಕ್ಸ್ ಪುತ್ತೂರು ಇದರ ಆಡಳಿತ ಪಾಲುದಾರ ಗಿರೀಶ್‌ರಾಜ್ ಎಂ.ವಿ.,ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಶರತ್ ಪಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಜೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.ಎಸ್.ಆರ್.ಕೆ.ಲ್ಯಾಡರ‍್ಸ್‌ನ ದಿನೇಶ್ ಅವರು ವಿಜೇತರ ಪಟ್ಟಿಯನ್ನು ನಿರ್ವಹಿಸಿದರು.ಶ್ಯಾಮ್‌ಕಿರಣ್ ಪ್ರಾರ್ಥಿಸಿದರು.ಎಸ್.ಆರ್.ಕೆ.ಲ್ಯಾಡರ‍್ಸ್‌ನ ಮಾಲಕ ಕೇಶವ ಅಮೈ ಸ್ವಾಗತಿಸಿ,ಕರ್ನಾಟಕ ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಉಮೇಶ್ ಮಿತ್ತಡ್ಕ ವಂದಿಸಿದರು.ನೆಲ್ಯಾಡಿ ಸೈಂಟ್ ಜೋಸೆಫ್ ಕಾಲೇಜಿನ ಉಪನ್ಯಾಸಕ ಚೇತನ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದಲ್ಲಿ, ಆಟಿ ತಿಂಗಳಿಗೆ ಸಂಬಂಧಿಸಿದ ಖಾದ್ಯಗಳನ್ನೇ ಮಾಡಲಾಗಿತ್ತು. ಕ್ರೀಡಾಕೂಟದ ನಡುವೆ ಹರ್ಷಿತ್ ಮರ್ಕಂಜ ಮತ್ತು ಬಳಗದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
ಶ್ವಾನದ ವಿಶೇಷ ಪ್ರದರ್ಶನ
ಕೇಶವ ಅಮೈ ಅವರ ಅಕ್ಕ ಬಳ್ಪದ ಹೇಮಾವತಿ ಅವರು ತಮ್ಮ ಮನೆಯ ಶ್ವಾನ ‘ಜಾಕಿ’ಯನ್ನೂ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದಿದ್ದರು.ಅದು ಬೆಳಗ್ಗಿನಿಂದ ಸಂಜೆಯ ತನಕ ಗದ್ದೆಯ ಕೆಸರಿನಲ್ಲಿ ಮಿಂದೆದ್ದು ಆಟವಾಡುತ್ತಿದ್ದುದು ಎಲ್ಲರ ಗಮನ ಸೆಳೆಯಿತು.ಸಂಜೆ ಬಹುಮಾನ ವಿತರಣೆ ವೇಳೆ ಜಾಕಿಗೂ ಪದಕ ನೀಡಿ ಗೌರವಿಸಲಾಯಿತು.

ಲಂಚ-ಭ್ರಷ್ಟಾಚಾರದ ವಿರೋಧಿ ಫಲಕ ಹಸ್ತಾಂತರ:
ಲಂಚ-ಭ್ರಷ್ಟಾಚಾರದ ವಿರುದ್ಧ ಸುದ್ದಿಯಿಂದ ನಡೆಯುತ್ತಿರುವ ಜನಾಂದೋಲನದ ಜಾಗೃತಿ ಫಲಕವನ್ನು ಎಸ್.ಆರ್.ಕೆ.ಲ್ಯಾಡರ‍್ಸ್ ಸಂಸ್ಥೆಯ ಮಾಲಕ ಕೇಶವ ಅಮೈ ಅವರಿಗೆ ನೀಡಲಾಯಿತು.










