







ರಾಮಕುಂಜ: ಫಿಡ್ಜ್ ಏಕಾಏಕಿ ಸ್ಪೋಟಗೊಂಡು ಅಡುಗೆ ಕೋಣೆಯಲ್ಲಿದ್ದ ಸೊತ್ತುಗಳು ಸುಟ್ಟುಹೋದ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಆತೂರು ಎಂಬಲ್ಲಿ ಆ.11ರಂದು ಮಧ್ಯಾಹ್ನ 3 ಗಂಟೆ ವೇಳೆಗೆ ನಡೆದಿದೆ. ಘಟನೆ ವೇಳೆ ಮನೆಯಲ್ಲಿದ್ದ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ.



ಆತೂರು ನಿವಾಸಿ, ವಿದೇಶದಲ್ಲಿ ಉದ್ಯೋಗದಲ್ಲಿರುವ ಸಿದ್ದೀಕ್ ಎಂಬವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಸಿದ್ದೀಕ್ ಅವರ ಪತ್ನಿ ಆರೀಫಾ ಅವರು ಅಡುಗೆ ಕೋಣೆಯಲ್ಲಿ ಚಾಲೂ ಸ್ಥಿತಿಯಲ್ಲಿದ್ದ ಗ್ರೈಂಡರ್ ಆಫ್ ಮಾಡಿ ಮನೆಯೊಳಗೆ ಅಡುಗೆ ಕೋಣೆಗೆ ಹೊಂದಿಕೊಂಡಿರುವ ವಾಷ್‌ರೂಂಗೆ ಹೋಗಿದ್ದರು. ಈ ವೇಳೆ ಅವರಿಗೆ ಸ್ಫೋಟದ ಶಬ್ದ ಕೇಳಿಬಂದಿದ್ದು ಹೊರಗೆ ಬಂದು ನೋಡುತ್ತಿದ್ದಂತೆ ಅಡುಗೆ ಕೋಣೆಯಲ್ಲಿ ಫ್ರಿಡ್ಜ್ ಸ್ಫೋಟಗೊಂಡು ಬೆಂಕಿ, ಹೊಗೆ ಆವರಿಸಿತ್ತು. ಇದನ್ನು ಗಮನಿಸಿದ ಆರೀಫಾ ಅವರು ಹಿಂಬದಿ ಬಾಗಿಲ ಮೂಲಕ ಮನೆಯಿಂದ ಹೊರಬಂದು ಅಪಾಯದಿಂದ ಪಾರಾಗಿದ್ದಾರೆ. ಫ್ರಿಡ್ಜ್ ಆನ್‌ನಲ್ಲಿದ್ದು ಸ್ಫೋಟದಿಂದಾಗಿ ಫ್ರಿಡ್ಜ್ ಛಿದ್ರಗೊಂಡು ಅದರೊಳಗಿದ್ದ ಸಾಮಾಗ್ರಿಗಳು ಕರಟಿಹೋಗಿವೆ. ಬೆಂಕಿ ಹೊತ್ತಿಕೊಂಡ ಪರಿಣಾಮ ಅಡುಗೆ ಕೋಣೆಯಲ್ಲಿದ್ದ ಗ್ರೈಂಡರ್, ಮಿಕ್ಸಿ ಸೇರಿದಂತೆ ಇತರೇ ಇಲೆಕ್ಟ್ರಾನಿಕ್ಸ್ ಉಪಕರಣಗಳು, ಪಾತ್ರೆ ಮತ್ತಿತರರ ಸಾಮಾಗ್ರಿಗಳು ಬೆಂಕಿಗಾಹುತಿಯಾಗಿದೆ. ಅಡುಗೆ ಕೊಣೆಯಲ್ಲಿದ್ದ ಇಂಟಿರೀಯರ್ ಡೆಕೋರೇಶನ್‌ಗಳೂ ಸುಟ್ಟುಹೋಗಿವೆ. ಮನೆಯೊಳಗೆ ಬೆಂಕಿ ಹಾಗೂ ಹೊಗೆ ಆವರಿಸಿದ ಪರಿಣಾಮ ಮನೆಯ ಗೋಡೆಗಳೂ ಕಪ್ಪಾಗಿವೆ. ಘಟನೆಯಿಂದಾಗಿ ಲಕ್ಷಾಂತರ ರೂ.ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆ ವೇಳೆ ಆರೀಫಾ ಅವರ ಮೂವರು ಮಕ್ಕಳು ಶಾಲೆಗೆ ಹೋಗಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.




ಬೆಂಕಿ ನಂದಿಸಿದ ಸ್ಥಳೀಯರು;
ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಯುವಕರಾದ ಅಝೀಝ್ ಹಲ್ಯಾರ, ಅಝೀಝ್ ಪಾಲ್ತಾಡಿ, ಸಿಹಾಬ್ ಗೋಳಿತ್ತಡಿ, ಲತೀಫ್ ನೆಲ್ಯೊಟ್ಟು, ಅನ್ಸಾರ್ ಕೂಟೇಲ್ ನೀರಾಜೆ, ಜನಾರ್ದನ ರಾಮಕುಂಜ, ಅಶ್ರಫ್ ಪಟ್ಟೆ, ಖಾದರ್ ಬಿಜತ್ತಲಿ, ಫಾರೂಕ್ ಎಲ್ಯಂಗ, ಶಂಶಿರ್ ಗೋಳಿತ್ತಡಿ, ಫಾರೂಕ್ ಅಮೈ, ನಿಝಾರ್ ಮೊಟ್ಟೆತಡ್ಕ, ರಝಾಕ್ ಭೂಮಿಕ ಮತ್ತಿತರರು ಅಡುಗೆ ಕೋಣೆಯ ಕಿಟಕಿ ಮೂಲಕ ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಆತೂರು ಬದ್ರಿಯಾ ಮಸೀದಿ ಅಧ್ಯಕ್ಷ ಅಹಮದ್ ಕುಂಞಿ, ಮದ್ರಸ ಮೇನೇಜ್‌ಮೆಂಟ್ ಕಾರ್ಯದರ್ಶಿ ಮಹಮ್ಮದ್ ರಫೀಕ್ ಗಂಡಿಬಾಗಿಲು, ರಾಮಕುಂಜ ಗ್ರಾ.ಪಂ.ಸಿಬ್ಬಂದಿಗಳ ಸಹಿತ ಹಲವು ಮಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.










