ಇನ್ನರ್‌ವೀಲ್ ಕ್ಲಬ್ ಪುತ್ತೂರು ವತಿಯಿಂದ ಸಂಭ್ರಮ – 35ಕ್ಕೂ ಅಧಿಕ ಬಗೆಯ ವಿಶೇಷ ತಿನಿಸುಗಳ ಸವಿಯೊಂದಿಗೆ ಸಂಪ್ರದಾಯದ ಅನಾವರಣ

0

ಪುತ್ತೂರು: ತುಳುನಾಡಿನ ಸಂಪ್ರದಾಯ, ಆಹಾರ ವೈವಿಧ್ಯ ಮತ್ತು ಆಟಿ ತಿಂಗಳ ವಿಶೇಷತೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಇನ್ನರ್‌ವೀಲ್ ಕ್ಲಬ್ ಪುತ್ತೂರು ವತಿಯಿಂದ ಸಂಪ್ರದಾಯಬದ್ಧ ಆಟಿಕೂಟ ಕಾರ್ಯಕ್ರಮ ಆ.11ರಂದು ಪುತ್ತೂರು ಮುಳಿಯ ಜೆಸಿಐ ಟ್ರೈನಿಂಗ್ ಹಾಲ್‌ನಲ್ಲಿ ನಡೆಯಿತು.


ಕ್ಲಬ್ ಅಧ್ಯಕ್ಷೆ ಮನೋರಮಾ ಸೂರ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಟಿ ತಿಂಗಳ ಆಚರಣೆ, ಅದರ ಹಿನ್ನೆಲೆ ಹಾಗೂ ಈ ಕಾಲಘಟ್ಟದ ಆಹಾರ ಪದ್ಧತಿಯ ವಿಶೇಷತೆಗಳನ್ನು ಸ್ಮರಿಸಲಾಯಿತು. ಆಟಿ ತಿಂಗಳ ಸಾಂಪ್ರದಾಯಿಕ ಬದುಕು ಮತ್ತು ಆಹಾರ ಸಂಸ್ಕೃತಿಯ ಕುರಿತು ಸದಸ್ಯರಿಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದ ಅಂಗವಾಗಿ ಸದಸ್ಯರಿಗೆ ವಿವಿಧ ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಕ್ಲಬ್‌ನ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ಕ್ಲಬ್ ಕಾರ್ಯದರ್ಶಿ ಶ್ರುತಿ ಬಂಗೇರ ಕ್ಲಬ್‌ನ ವಿವಿಧ ಚಟುವಟಿಕೆಗಳ ವರದಿ ಮಂಡಿಸಿದರು. ಬುಲೆಟಿನ್ ಸಂಪಾದಕಿ ಜ್ಯೋತಿ ಎಸ್., ಖಜಾಂಜಿ ಕವಿತಾ ಕೊಳತ್ತಾಯ ಹಾಗೂ ಐಎಸ್‌ಒ ಅರುಣಾ ರೈ ಅವರು ತಮ್ಮ ತಮ್ಮ ವಿಭಾಗಗಳ ವರದಿ ಮಂಡಿಸಿದರು. ಉಪಾಧ್ಯಕ್ಷೆ ಕೃಷ್ಣವೇಣಿ ಮುಳಿಯ ವಂದಿಸಿದರು.


ಮನೆಯ ಅಡುಗೆಗೆ ವಿಶೇಷ ಮೆರುಗು
ಆಟಿಕೂಟದ ಪ್ರಮುಖ ಆಕರ್ಷಣೆಯಾಗಿದ್ದು ಸದಸ್ಯರು ತಮ್ಮ ಮನೆಗಳಲ್ಲೇ ತಯಾರಿಸಿ ತಂದಿದ್ದ 35ಕ್ಕೂ ಅಧಿಕ ಬಗೆಯ ಸಾಂಪ್ರದಾಯಿಕ ಹಾಗೂ ವಿಶೇಷ ತಿನಿಸುಗಳು. ಆಟಿ ತಿಂಗಳ ಸಾಂಪ್ರದಾಯಿಕ ಆಹಾರ ಪದ್ಧತಿಯ ವೈವಿಧ್ಯವನ್ನು ಪರಿಚಯಿಸುವ ರೀತಿಯಲ್ಲಿ ಸಿದ್ಧಪಡಿಸಲಾಗಿದ್ದ ವಿವಿಧ ತಿನಿಸುಗಳನ್ನು ಸದಸ್ಯರು ಪರಸ್ಪರ ಹಂಚಿಕೊಂಡು ಸವಿದರು. ಆಧುನಿಕ ಜೀವನಶೈಲಿಯ ನಡುವೆಯೂ ಸ್ಥಳೀಯ ಆಹಾರ ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂಬ ಸಂದೇಶವೂ ಆಟಿಕೂಟದ ಮೂಲಕ ಮೂಡಿಬಂತು. ಸದಸ್ಯರ ಸಕ್ರಿಯ ಭಾಗವಹಿಸುವಿಕೆ, ಸಾಂಪ್ರದಾಯಿಕ ವಾತಾವರಣ ಹಾಗೂ ವೈವಿಧ್ಯಮಯ ತಿನಿಸುಗಳ ಸವಿಯೊಂದಿಗೆ ಕಾರ್ಯಕ್ರಮ ಗಮನ ಸೆಳೆಯಿತು.

LEAVE A REPLY

Please enter your comment!
Please enter your name here