






ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಾಡಿ ಹೊರಠಾಣೆಯನ್ನು ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದ್ದು ಈ ಸಂಬಂಧ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶವಾಗಿದೆ. ಈ ಆದೇಶದಂತೆ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ಉಪ್ಪಿನಂಗಡಿ ವೃತ್ತ ಪೊಲೀಸ್ ವೃತ್ತ ನಿರೀಕ್ಷಕರಿಗೆ ಹಾಗೂ ಬೆಳ್ತಂಗಡಿ ವೃತ್ತ ಪೊಲೀಸ್ ವೃತ್ತ ನಿರೀಕ್ಷಕರಿಗೆ ಬೆಳ್ತಂಗಡಿ ಉಪವಿಭಾಗದ ಪೊಲೀಸ್ ಉಪವಿಭಾಗಾಧಿಕಾರಿಗಳ ಕಚೇರಿಯಿಂದ ಸೂಚನೆ ನೀಡಲಾಗಿದೆ.


ನೆಲ್ಯಾಡಿಯಲ್ಲಿರುವ ಶಿರಾಡಿ ಹೊರ ಠಾಣೆ ಮೇಲ್ದರ್ಜೆಗೇರಿದಲ್ಲಿ ಉಪ್ಪಿನಂಗಡಿ, ಕಡಬ ಹಾಗೂ ಧರ್ಮಸ್ಥಳ ಠಾಣೆ ವ್ಯಾಪ್ತಿಯ ಗ್ರಾಮಗಳು ಸೇರ್ಪಡೆಗೊಳ್ಳಲಿವೆ. ಪ್ರಸ್ತುತ ಉಪ್ಪಿನಂಗಡಿ ಠಾಣೆ ವ್ಯಾಪ್ತಿಗೆ 22, ಕಡಬ ಠಾಣೆ ವ್ಯಾಪ್ತಿಗೆ 19 ಹಾಗೂ ಧರ್ಮಸ್ಥಳ ಠಾಣೆ ವ್ಯಾಪ್ತಿಗೆ 18 ಗ್ರಾಮಗಳು ಸೇರಿವೆ. ಇದರ ಪೈಕಿ ಉಪ್ಪಿನಂಗಡಿ ಠಾಣೆ ವ್ಯಾಪ್ತಿಯ 7, ಕಡಬ ಠಾಣೆ ವ್ಯಾಪ್ತಿಯ 3 ಗ್ರಾಮ ಹಾಗೂ ಧರ್ಮಸ್ಥಳ ಠಾಣೆ ವ್ಯಾಪ್ತಿಯ 5 ಗ್ರಾಮಗಳು ಮೇಲ್ದರ್ಜೆಗೇರುವ ಠಾಣೆ ವ್ಯಾಪ್ತಿಗೆ ಸೇರಲಿವೆ. ಶಿರಾಡಿ ಹೊರಠಾಣೆ ಮೇಲ್ದರ್ಜೆಗೇರಿಸಲು ಸೇರಿಸಬೇಕಾದ ಗ್ರಾಮಗಳ ಪಟ್ಟಿ ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಅಲ್ಲದೇ ಉಪ್ಪಿನಂಗಡಿ, ಕಡಬ, ಧರ್ಮಸ್ಥಳ ಪೊಲೀಸ್ ಠಾಣೆ ಮತ್ತು ನೆಲ್ಯಾಡಿಯಲ್ಲಿರುವ ಶಿರಾಡಿ ಹೊರ ಠಾಣೆ ವ್ಯಾಪ್ತಿಯ ಗ್ರಾಮಗಳಲ್ಲಿ ದಾಖಲಾದ ಪ್ರಕರಣಗಳ ಮಾಹಿತಿಯನ್ನೂ ನೀಡುವಂತೆ ವೃತ್ತ ನಿರೀಕ್ಷಕರಿಗೆ ಸೂಚಿಸಲಾಗಿದೆ.



15 ಗ್ರಾಮ ವ್ಯಾಪ್ತಿ;
ಶಿರಾಡಿ ಹೊರಠಾಣೆ ಮೇಲ್ದರ್ಜೆಗೇರಿದಲ್ಲಿ 15 ಗ್ರಾಮಗಳ ವ್ಯಾಪ್ತಿಗೊಳಪಡಲಿದೆ. ಉಪ್ಪಿನಂಗಡಿ ಠಾಣೆ ವ್ಯಾಪ್ತಿಯ ನೆಲ್ಯಾಡಿ, ಕೌಕ್ರಾಡಿ, ಇಚ್ಲಂಪಾಡಿ, ಶಿರಾಡಿ, ಸಿರಿಬಾಗಿಲು, ಕೊಣಾಜೆ, ಕೊಣಾಲು, ಕಡಬ ಠಾಣೆ ವ್ಯಾಪ್ತಿಯ ನೂಜಿಬಾಳ್ತಿಲ, ಬಲ್ಯ, ಹಳೆನೇರೆಂಕಿ ಹಾಗೂ ಧರ್ಮಸ್ಥಳ ಠಾಣೆ ವ್ಯಾಪ್ತಿಯ ರೆಖ್ಯ, ಹತ್ಯಡ್ಕ, ಶಿಶಿಲ, ಶಿಬಾಜೆ, ಕೊಕ್ಕಡ ಗ್ರಾಮಗಳು ನೂತನ ಠಾಣೆಗೆ ಸೇರ್ಪಡೆಗೊಳ್ಳಲಿವೆ. ಈ ಹಿನ್ನೆಲೆಯಲ್ಲಿ ಈ ಗ್ರಾಮಗಳಲ್ಲಿ 2023ರಿಂದ ಈ ತನಕ ನಡೆದಿರುವ ಕ್ರೈಂ ಪ್ರಕರಣಗಳ ವಿವರಣೆ ನೀಡುವಂತೆಯೂ ಕೋರಲಾಗಿದೆ.
ಗೃಹ ಸಚಿವರಿಗೆ ಮನವಿ ಮಾಡಲಾಗಿತ್ತು;
ನೆಲ್ಯಾಡಿಯಲ್ಲಿರುವ ಶಿರಾಡಿ ಹೊರಠಾಣೆಯನ್ನು ಪೂರ್ಣಪ್ರಮಾಣದ ಹೊಸ ಠಾಣೆಯನ್ನಾಗಿ ಪರಿವರ್ತಿಸುವಂತೆ 2025ರ ಜುಲೈ ತಿಂಗಳಿನಲ್ಲಿ ಕಡಬ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯೆ ಉಷಾ ಅಂಚನ್ ಅವರು ಆಗಿನ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ್ದ ವೇಳೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಗೃಹ ಸಚಿವರು ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸೂಚನೆ ನೀಡಿದ್ದರು. ಅದರಂತೆ ಉಪ್ಪಿನಂಗಡಿ ಪೊಲೀಸರು ಕೌಕ್ರಾಡಿ ಗ್ರಾ.ಪಂ.ಸಭಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಸಿ ಸಾರ್ವಜನಿಕರ ಅಭಿಪ್ರಾಯ ಪಡೆದುಕೊಂಡು ಸರಕಾರಕ್ಕೆ ವರದಿ ಸಲ್ಲಿಸಿದ್ದರು. ಬಳಿಕ ಈ ವಿಚಾರವನ್ನು ಕೈ ಬಿಡಲಾಗಿತ್ತಾದರೂ ಇದೀಗ ಮತ್ತೆ ಶಿರಾಡಿ ಹೊರಠಾಣೆಯನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ ಎಂದು ವರದಿಯಾಗಿದೆ.










