







ಅಡಿಕೆ ಕೃಷಿ, ಮಾರುಕಟ್ಟೆ, ಬೆಳೆಹಾನಿ, ಮುಂದಿನ ಯೋಜನೆಗಳ ಕುರಿತು ʼಸುದ್ದಿʼ ಯೊಂದಿಗೆ ಕ್ಯಾಂಪ್ಕೊ ಅಧ್ಯಕ್ಷರ ಮಾತು


ಪುತ್ತೂರು: ಕರ್ನಾಟಕ ಸರಕಾರದ ಗುಟ್ಕಾ, ಪಾನ್ಮಸಾಲ ಸಹಿತ ತಂಬಾಕು, ನಿಕೋಟಿನ್ಯುಕ್ತ ಉತ್ಪನ್ನಗಳ ಮಾರಾಟ ನಿಷೇಧ ಆದೇಶದಿಂದ ಅಡಿಕೆ ಮಾರುಕಟ್ಟೆಯ ಮೇಲೆ ಯಾವುದೇ ಪರಿಣಾಮಗಳು ಉಂಟಾಗದು ಎನ್ನುವುದು ನಮ್ಮ ವಿಶ್ವಾಸ ಎಂದು ಕ್ಯಾಂಪ್ಕೋ ಲಿ. ಸಂಸ್ಥೆಯ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹೇಳಿದ್ದಾರೆ.



ಸುದ್ದಿ ಚಾನೆಲ್ನಲ್ಲಿ ಆ.12ರಂದು ನಡೆದ ‘ಮಾತುಕತೆ-ಕ್ಯಾಂಪ್ಕೋ ಅಧ್ಯಕ್ಷರ ಜೊತೆ’ ನೇರಪ್ರಸಾರ ಕಾರ್ಯಕ್ರಮದಲ್ಲಿ ಗುಟ್ಕಾ-ಪಾನ್ ಮಸಾಲ ನಿಷೇಧ ಆದೇಶದಿಂದ ಅಡಿಕೆ ಮಾರುಕಟ್ಟೆಯ ಮೇಲೆ ಏನು ಪರಿಣಾಮ ಉಂಟಾಗಬಹುದು ಎನ್ನುವ ಪ್ರಶ್ನೆಗೆ ಉತ್ತರಿಸಿದ ಎಸ್.ಆರ್. ಸತೀಶ್ಚಂದ್ರ ಅವರು, ಈ ಆದೇಶ ಅಡಿಕೆ ಮಾರುಕಟ್ಟೆಯ ಮೇಲೆ ಪರಿಣಾಮ ಬೀರದು ಯಾಕೆಂದರೆ ಅಡಿಕೆಯನ್ನು ಬ್ಯಾನ್ ಮಾಡಿಲ್ಲ. ಜೊತೆಗೆ ಕಳೆದ ಅಧಿವೇಶನದಲ್ಲಿ ಕೃಷಿ ಸಚಿವರೇ ಅಡಿಕೆ ಹಾನಿಕಾರಕ ಅಲ್ಲ ಎಂದು ಸರಕಾರದಿಂಧ ಘೋಷಣೆ ಮಾಡಿದ್ದಾರೆ. ನಿಷೇಧ ಹೇರಿರುವುದು ತಂಬಾಕುಯುಕ್ತ ಉತ್ಪನ್ನಗಳಿಗೆ. ಜೊತೆಗೆ ಅಡಿಕೆಗೆ ದೊಡ್ಡ ಮಾರುಕಟ್ಟೆ ಇರುವುದು ಗುಜರಾತ್ನಲ್ಲಿ. ಅಲ್ಲಿ ಇಂತಹ ಯಾವುದೇ ಸಮಸ್ಯೆಗಳಿಲ್ಲ, ಇಂದಿಗೂ ಉತ್ತಮ ಬೇಡಿಕೆ ಇದೆ ಎಂದು ಹೇಳಿದರು.
ನೇರಪ್ರಸಾರ ಕಾರ್ಯಕ್ರಮದಲ್ಲಿ ಎಸ್.ಆರ್. ಸತೀಶ್ಚಂದ್ರ ಅವರ ಸಹಕಾರ ಕ್ಷೇತ್ರದ ಪಯಣ, ಕ್ಯಾಂಪ್ಕೋ ಅಧ್ಯಕ್ಷರಾಗಿ ಮೊದಲ ಅವಧಿಯ ಸಂದರ್ಭದಲ್ಲಿ ಎದುರಾದ ಸವಾಲುಗಳು, ಮಾಡಿದ ಕೆಲಸಗಳು, ಸಹಕಾರ ಭಾರತಿಯಲ್ಲಿ ನಿಭಾಯಿಸಿದ ಜವಾಬ್ದಾರಿಗಳು, ಅಲಂಕರಿಸಿದ ಹುದ್ದೆಗಳು, ಸಹಕಾರ ಕಾಯ್ದೆಯಡಿ ನೋಂದಣಿಯಾದ ಜಿಲ್ಲೆಯ ಮೊದಲ ಸೌಹಾರ್ದ ಸಹಕಾರಿ ಸಂಘ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ಸ್ಥಾಪನೆ ಇತ್ಯಾದಿ ವಿಚಾರಗಳ ಕುರಿತು ವಿಸತವಾಗಿ ಮಾತನಾಡಿದರು.
ಕ್ಯಾಂಪ್ಕೋ ಮೂಲಕ ಅಡಿಕೆ ದರ ಸ್ಥಿರತೆ :
ಕ್ಯಾಂಪ್ಕೋ ಮೂಲಕ ಕಳೆದ ಮಾರ್ಚ್ಗೆ 3,700 ಕೋಟಿ ರೂ.ಗಳಿಗೂ ಅಽಕ ವ್ಯವಹಾರವನ್ನು ಮಾಡಲಾಗಿದೆ. 50 ಸಾವಿರ ಮೆಟ್ರಿಕ್ ಟನ್ಗೂ ಅಧಿಕ ಬಿಳಿ ಮತ್ತು ಕೆಂಪು ಅಡಿಕೆ ಖರೀದಿ ಮಾಡಲಾಗಿದೆ. ಮಾರುಕಟ್ಟೆಯ ದರಕ್ಕೆ ಸ್ಥಿರತೆಯನ್ನು ಒದಗಿಸಲಾಗಿದೆ. ಜೊತೆಗೆ ದೊಡ್ಡ ಪ್ರಮಾಣದಲ್ಲಿ ಕೊಕ್ಕೋ, ಕಾಳುಮೆಣಸು, ರಬ್ಬರ್ ಖರೀದಿ ಮಾಡುತ್ತಿದ್ದೇವೆ. ಕೊಬ್ಬರಿಯನ್ನು ಖರೀದಿ ಮಾಡಿ ನಮ್ಮದೇ ‘ಕಲ್ಪ’ ಎನ್ನುವ ಬ್ರ್ಯಾಂಡ್ನಲ್ಲಿ ತೆಂಗಿನ ಎಣ್ಣೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ ಎಂದು ಎಸ್.ಆರ್. ಸತೀಶ್ಚಂದ್ರ ಹೇಳಿದರು.
ಅಡಿಕೆ ಮಾರುಕಟ್ಟೆ ದರ ಸ್ಥಿರತೆ, ಅಡಿಕೆ ಅಕ್ರಮ ಆಮದು ವಿಚಾರಗಳ ಕುರಿತಂತೆ ಕ್ಯಾಂಪ್ಕೋ ಮೂಲಕ ಕೈಗೊಂಡಿರುವ ಕ್ರಮಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಕ್ಯಾಂಪ್ಕೋ ಅಧ್ಯಕ್ಷರು, ಹೊಸ ಅಡಿಕೆಗೆ 400-475 ರೂ.ಗಳವರೆಗೆ ದರವಿದೆ, ಹಳೆ ಅಡಿಕೆಗೆ 550 ರೂ.ಗಳವರೆಗೆ ಬೆಲೆ ಇದೆ. ಇದರ ಪರಿಣಾಮವಾಗಿ ದೊಡ್ಡ ಪ್ರಮಾಣದಲ್ಲಿ ಕಳಪೆ ಗುಣಮಟ್ಟದ ಅಡಿಕೆ ಭಾರತಕ್ಕೆ ಅಕ್ರಮವಾಗಿ ಆಮದಾಗುತ್ತಿದೆ. ಇದು ಬೆಲೆಯ ಸ್ಥಿರತೆಯ ಮೇಲೆ ಪರಿಣಾಮ ಬೀರಲಿದೆ. ಜೊತೆಗೆ ಕಳೆದ ನಾಲ್ಕೈದು ವರ್ಷಗಳಿಂದ ದೇಶದಲ್ಲಿ ವನ್ ನೇಷನ್ ವನ್ ಮಾರ್ಕೆಟ್, ವನ್ ನೇಷನ್ ವನ್ ಸಾಫ್ಟ್ ವೇರ್, ವನ್ ನೇಷನ್ ವನ್ ಟ್ಯಾಕ್ಸ್ ಎನ್ನುವ ವಿಚಾರಗಳು ಬಂದಿವೆ. ನಾವು ಕರ್ನಾಟಕದಲ್ಲಿ ಜಿಎಸ್ಟಿ ಕಟ್ಟಿದರೂ ಉತ್ತರ ಪ್ರದೇಶದಲ್ಲಿ ಎಪಿಎಂಸಿ, ಮಂಡಿ ಸೆಸ್ ಕಟ್ಟಬೇಕಿದೆ. ಹೀಗಾಗಿ ವನ್ ನೇಷನ್ ವನ್ ಮಾರ್ಕೆಟ್, ವನ್ ನೇಷನ್ ವನ್ ಟ್ಯಾಕ್ಸ್ ಜಾರಿಗೆ ಬರಬೇಕೆಂಬುದು ಕ್ಯಾಂಪ್ಕೋ ಆಗ್ರಹ. ಈ ಹಿನ್ನೆಲೆಯಲ್ಲಿ ಕೇಂದ್ರದ ಗೃಹ ಮತ್ತು ಸಹಕಾರ ಇಲಾಖೆ ಸಚಿವರಾದ ಅಮಿತ್ ಶಾ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದೇವೆ. ಈ ವೇಳೆ ಇಬ್ಬರೂ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡಿದ್ದಾರೆ. ಜೊತೆಗೆ ಮಹಾರಾಷ್ಟ್ರದಲ್ಲಿ ಎದುರಾಗಿದ್ದ ಅಡಿಕೆ ಸಾಗಾಟ ಲಾರಿಗಳಿಗೆ ತಡೆಯೊಡ್ಡುವ ವಿಚಾರದ ಬಗ್ಗೆಯೂ ಕೇಂದ್ರದ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಸಮಸ್ಯೆ ಪರಿಹರಿಸುವಲ್ಲಿ ಯಶಸ್ವಿಯಾಗಿದ್ದೇವೆ. 2023ರಲ್ಲಿ ಅಮಿತ್ ಶಾ ಅವರು ಪುತ್ತೂರಿಗೆ ಬಂದಾಗ ಇಟ್ಟ ಬೇಡಿಕೆಯಂತೆ ಅಡಿಕೆಯ ಕನಿಷ್ಟ ಆಮದು ಬೆಲೆಯನ್ನು 251 ರೂ.ಗಳಿಂದ 351 ರೂ.ಗಳಿಗೆ ಏರಿಸಿದ್ದಾರೆ. ಈಗ ಕಾಪರ್ ಸಲೇಟ್ ದರ, ಕೃಷಿ ಕೂಲಿ ದರ ಏರಿಕೆಯಾಗಿದೆ. ಹೀಗಾಗಿ ಕನಿಷ್ಠ ಆಮದು ದರವನ್ನು ಉತ್ಪಾದನಾ ವೆಚ್ಚದ ಆಧಾರದಲ್ಲಿ ನಿರ್ಣಯಿಸಬೇಕೆಂದು ಕೇಂದ್ರ ಸರಕಾರದ ಕೃಷಿ ಮಂತ್ರಿಗಳು ಮತ್ತು ಹಣಕಾಸು ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಈ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆಗೆ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.
100 ಕೋಟಿ ರೂ. ಬಂಡವಾಳ ಉತ್ಪಾದನೆ ಹೆಚ್ಚಳ :
ಕ್ಯಾಂಪ್ಕೋ ಚಾಕೊಲೇಟ್ ಪ್ಯಾಕ್ಟರಿಗೆ ಸಂಬಂಧಿಸಿದಂತೆ ಕ್ಯಾಂಪ್ಕೋ ಸಂಸ್ಥಾಪಕ ದಿ.ವಾರಣಾಶಿ ಸುಬ್ರಾಯ ಭಟ್ ಅವರ ಜನ್ಮಶತಾಬ್ದಿಯ ಹಿನ್ನೆಲೆಯಲ್ಲಿ ಫ್ಯಾಕ್ಟರಿಯನ್ನು ಇನ್ನಷ್ಟು ಆಧುನೀಕರಣಗೊಳಿಸುವ ಯೋಜನೆಗಳಿವೆ. ಮುಂದಿನ 5 ವರ್ಷಗಳ ಅವಽಗೆ ಸುಮಾರು 100 ಕೋಟಿ ರೂ.ಗಳ ಬಂಡವಾಳ ಹೂಡಲಿದ್ದೇವೆ. ಮುಂದಕ್ಕೆ ಉತ್ಪಾದನೆ ಹೆಚ್ಚಿಸಲಿದ್ದೇವೆ. ಈಗಾಗಲೇ ಪ್ರೀಮಿಯಂ ಚಾಕೊಲೇಟ್ನ್ನು ಕೂಡ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಉತ್ತಮ ಬೇಡಿಕೆಯಿದೆ ಎಂದು ಹೇಳಿದರು.
ಕ್ಯಾಪ್ಕೋ ಸಾವಯ ಗೊಬ್ಬರಕ್ಕೆ ಉತ್ತಮ ಬೇಡಿಕೆ:
ಅಡಿಕೆಗೆ ಬಾಧಿಸುತ್ತಿರುವ ಸಮಸ್ಯೆಗಳ ಕುರಿತು ಪ್ರಶ್ನೆಗೆ ಉತ್ತರಿಸಿದ ಎಸ್.ಆರ್.ಸತೀಶ್ಚಂದ್ರ ಅವರು, ಅಡಿಕೆ ಹಳದಿ ಎಲೆ ರೋಗದ ನಿಯಂತ್ರಣದ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ. ಎಲ್ಲಾ ಅಡಿಕೆ ಮಾರಾಟ ಸಂಘಗಳು ಜೊತೆಯಾಗಿ ಒಂದು ಸಂಸ್ಥೆಯ ಜೊತೆಗೆ ಒಪ್ಪಂದ ಮಾಡಿಕೊಂಡು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. ಜೊತೆಗೆ ಕೃಷಿ ಪದ್ಧತಿಗಳಲ್ಲಿ ಒಂದಷ್ಟು ಬದಲಾವಣೆಗಳು ಆಗಬೇಕಿದೆ. ಅದಕ್ಕಾಗಿ ಸಾವಯವ ಕೃಷಿಗೆ ಉತ್ತೇಜನ ನೀಡುವಲ್ಲಿ ಕ್ಯಾಂಪ್ಕೋ ಸಾವಯವ ಗೊಬ್ಬರ ಬಿಡುಗಡೆ ಮಾಡಿದೆ. ಇದಕ್ಕೆ ಉತ್ತಮ ಬೇಡಿಕೆಯಿದೆ. ಕೇಂದ್ರ ಸರಕಾರ ಕೂಡ ಉತ್ತಮ ಉತ್ತೇಜನ ನೀಡುತ್ತಿದೆ. ಕೃಷಿಕರಿಗಾಗಿ ವಿಶೇಷ ಮಾಹಿತಿ ಕಾರ್ಯಾಗಾರಗಳನ್ನು ಆಯೋಜಿಸುತ್ತಿದ್ದೇವೆ. ಸಾವಯವ ಕೃಷಿ ಮತ್ತು ತರಕಾರಿಗಳಿಗೆ ಉತ್ತಮ ಉತ್ತೇಜನ ನೀಡುತ್ತಿದ್ದೇವೆ ಎಂದು ಹೇಳಿದರು.
ಅಡಿಕೆಯ ಮೌಲ್ಯ ವರ್ಧನೆಗೆ ಅಂತರ್ರಾಷ್ಟ್ರೀಯ ಸೆಮಿನಾರ್ :
‘ಅಡಿಕೆ ಹಾನಿಕಾರಕ’ ಎನ್ನುವ ವರದಿಯ ಕುರಿತಂತೆ ಇರುವ ಆತಂಕ ನಿವಾರಣೆಗೆ ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜು ತಜ್ಞರ ತಂಡ ಅಧ್ಯಯನ ಮಾಡಿ ಹಾನಿಕಾರಕ ಅಲ್ಲ ಎನ್ನುವ ವರದಿ ನೀಡಿದ್ದಾರೆ. ಇದರ ಜೊತೆಗೆ ಅಡಿಕೆಯ ಮೌಲ್ಯವನ್ನು ತಿಳಿಸುವ ನಿಟ್ಟಿನಲ್ಲಿ ಅಂತರ್ರಾಷ್ಟ್ರೀಯ ಸೆಮಿನಾರ್ ಮಾಡಬೇಕೆನ್ನುವ ಯೋಜನೆಯೂ ಇದೆ. ಭಾರತದ ಯುವಕರಿಗೆ ಜಗತ್ತಿನಲ್ಲೇ ಭವಿಷ್ಯ ಇದೆ, ಕೃಷಿಗೂ ಭವಿಷ್ಯ ಇದೆ. ಇಂದು ಕೃಷಿಗೆ ವ್ಯಾಪಕ ಬೆಂಬಲ ಇದೆ. ದಕ್ಷಿಣ ಕನ್ನಡ ಜಿಲ್ಲೆಯು ದೇಶದ 10ನೇ ಶ್ರೀಮಂತ ಜಿಲ್ಲೆ. ಇದರ ಹಿಂದೆ ಅಡಿಕೆ ಇದೆ. ಇದಕ್ಕೆ ಪೂರಕ ವ್ಯವಸ್ಥೆಗಳನ್ನು ನೀಡಲು ಸಹಕಾರ ಸಂಸ್ಥೆಗಳು ಸಿದ್ಧವಿದೆ. ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಲು ಕ್ಯಾಂಪ್ಕೋ ಇದೆ. ಹೀಗಾಗಿ ಯುವಜನತೆ ಕೃಷಿಯತ್ತ ಬಂದರೆ ನೆಮ್ಮದಿಯ ಜೀವನ ನಡೆಸಲು ವಿ-ಲ ಅವಕಾಶ ಇದೆ ಎಂದು ಎಸ್.ಆರ್. ಸತೀಶ್ಚಂದ್ರ ಹೇಳಿದರು.
5 ವರ್ಷದಲ್ಲಿ ವ್ಯವಹಾರ 5 ಸಾವಿರ ಕೋಟಿ ರೂ. ದಾಟಬೇಕೆಂಬ ಗುರಿಯಿದೆ :
ಆಡಳಿತ ಅವಧಿಯ ಮುಂದಿನ ಯೋಜನೆಗಳ ಕುರಿತು ಮಾತನಾಡಿದ ಅವರು, ಮುಂದಿನ 5 ವರ್ಷದಲ್ಲಿ ಕ್ಯಾಂಪ್ಕೋ 5,೦೦೦ ಕೋಟಿ ರೂ.ಗಳ ವ್ಯವಹಾರವನ್ನು ದಾಟಬೇಕೆಂಬ ಗುರಿಯಿದೆ. ಅದಕ್ಕೆ ಪೂರಕ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದ್ದೇವೆ. ಮುಂದಿನ ೨೫ ವರ್ಷಗಳ ದೃಷ್ಟಿಕೋನದಲ್ಲಿ ಚಾಕೊಲೇಟ್ ಫ್ಯಾಕ್ಟರಿಯನ್ನು ಮೇಲ್ದರ್ಜೆಗೆ ಏರಿಸುವ ಪ್ರಯತ್ನ ಆರಂಭಗೊಂಡಿದೆ. ರೈತರಿಗೆ ಹತ್ತಿರವಾಗಲು ‘ಕ್ಯಾಂಪ್ಕೋ ಆಪ್’ ಬಿಡುಗಡೆ ಮಾಡಿದ್ದೇವೆ. ಭವಿಷ್ಯದ ಎಐ ಟೆಕ್ನಾಲಜಿಯನ್ನು ಅಳವಡಿಸಿಕೊಳ್ಳಲು ಚಿಂತನೆ ಇದೆ. ರೈತರ ಮನೆಬಾಗಿಲಿಗೆ ಹೋಗಿ ಅವರ ಫೀಡ್ಬ್ಯಾಕ್ ಪಡೆದು, ಯುವಕರನ್ನು ರೈತರನ್ನಾಗಿ ಮಾಡುವ ಕೆಲಸ ನಡೆಯುತ್ತಿದೆ, ಹೆಚ್ಚಿನ ಒತ್ತು ನೀಡಿ ಮುಂದುವರೆಸುತ್ತೇವೆ ಎಂದು ವಿವರಿಸಿದರು.
ಕರ್ನಾಟಕ, ಕೇರಳ ರಾಜ್ಯದ ನಾನಾ ಭಾಗಗಳಿಂದ ವೀಕ್ಷಕರು ಕರೆಮಾಡಿ ಅಡಿಕೆ ಮಾರುಕಟ್ಟೆ ಧಾರಣೆ ಸ್ಥಿರತೆ, ಅಡಿಕೆ ಮಾರಾಟ ವೇಳೆ ಗೋಣಿ ಚೀಲದ ತೂಕ ಸಮಸ್ಯೆ, ಹಳದಿ ಎಲೆ ರೋಗ ಸಮಸ್ಯೆ, ಕೊಕ್ಕೋ ಖರೀದಿ ಸಮಸ್ಯೆಗಳು, ಹೊಸ ಅಡಿಕೆಯ ಬೆಲೆ, ಪರ್ಯಾಯ ಬೆಳೆಗಳ ಬಗ್ಗೆ, ಕ್ಯಾಂಪ್ಕೋ ಮೂಲಕ ದೊರೆಯುವ ಸೌಲಭ್ಯಗಳು, ವಿಮಾ ಯೋಜನೆಗಳ ಕುರಿತು ಮಾತನಾಡಿದರು. ಜೊತೆಗೆ ಆರ್ಥಿಕ ತಜ್ಞ ಡಾ| ವಿಘ್ನೇಶ್ವರ ವರ್ಮುಡಿ, ಮನೋಹರ ಶೆಟ್ಟಿ ಪೆರುವಾಯಿ ಮೊದಲಾದವರು ವಾಟ್ಸ್ಆಪ್ ಮೂಲಕ ಪ್ರಶ್ನೆಗಳನ್ನು ಕಳಿಸಿದ್ದರು. ಎಲ್ಲರ ಪ್ರಶ್ನೆಗಳಿಗೆ ಕ್ಯಾಂಪ್ಕೋ ಅಧ್ಯಕ್ಷರು ಉತ್ತರಿಸಿದರು. ಸುದ್ದಿ ಪುತ್ತೂರು ಚಾನೆಲ್ ಮುಖ್ಯಸ್ಥ ಗೌತಮ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಹೊರದೇಶಗಳಿಂದ ಅಕ್ರಮವಾಗಿ ಕಳಪೆ ಗುಣಮಟ್ಟದ ಅಡಿಕೆ ನಮ್ಮ ಹಳ್ಳಿಹಳ್ಳಿಗೆ ಬಂದು ರೈತರ ಮುಖಾಂತರ ಕ್ಯಾಂಪ್ಕೋ ಮತ್ತಿತರ ಸಂಸ್ಥೆಗಳಿಗೆ ಹೋಗುತ್ತಿದೆ. ರೈತರು ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದಿರಬೇಕು. ಒಂದೆರಡು ದಿನದ ಆಸೆಗೆ ಬಲಿಯಾದರೆ ಇಡೀ ಮಾರುಕಟ್ಟೆಯೇ ಹಾಳಾಗಬಹುದು. ನಮ್ಮ ಮೇಲೆಯೇ ಬರೆ ಎಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ಹೀಗಾಗಿ ಯಾರು ಎಷ್ಟೇ ಆಮಿಷಗಳನ್ನು ತೋರಿಸಿದರೂ ಬಲಿಯಾಗಬಾರದು. ನಮ್ಮ ಊರಿನ ಸಂಸ್ಥೆಗಳನ್ನು ಬೆಳೆಸಲು ನಾವೇ ಜವಾಬ್ದಾರಿಯಾಗಿರಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷರು ಹೇಳಿದರು.
ಸಹಕಾರ ಸಂಸ್ಥೆಗಳು ಬಲವಾಗಿ ಬೆಳೆದ ಪರಿಣಾಮವೇ ಇಂದು ಸದಸ್ಯರ ರಕ್ಷಣೆ ಮಾಡಲು ಶಕ್ತಿ ಬಂದಿದೆ. ಗುಣಮಟ್ಟದ ಅಡಿಕೆಯನ್ನು ನಾವು ಬೆಳೆಸಬೇಕು. ಮಾರಾಟದ ಸಂದರ್ಭದಲ್ಲಿ ಯಾರು 100% ಜಿಎಸ್ಟಿ ಕಟ್ಟಿ ನಮಗೆ ರಶೀದಿ ನೀಡುತ್ತಾರೋ ಅವರೊಂದಿಗೆ ನಾವು ವ್ಯವಹಾರ ಮಾಡಬೇಕು. ಇದು ದೇಶಕ್ಕೆ ನಾವು ಮಾಡುವ ದೊಡ್ಡ ಸಹಕಾರ. ಹೀಗಾಗಿ ದೇಶ ಬೆಳೆಯುತ್ತದೆ, ನಾವೂ ಬೆಳೆಯುತ್ತೇವೆ.
ಎಸ್.ಆರ್.ಸತೀಶ್ಚಂದ್ರ, ಅಧ್ಯಕ್ಷರು, ಕ್ಯಾಂಪ್ಕೋ ಲಿ.










