







ಪುತ್ತೂರು: ಪವಿತ್ರ ಕುರ್ಅನ್ ಕಂಠಪಾಠದೊಂದಿಗೆ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣವನ್ನು ಸಮನ್ವಯಗೊಳಿಸಿ, ವಿದ್ಯಾರ್ಥಿಗಳನ್ನು ಸಮರ್ಥ ಹಾಗೂ ಪ್ರತಿಭಾವಂತ ವಿದ್ವಾಂಸರನ್ನಾಗಿ ರೂಪಿಸುವ ಉದ್ದೇಶದಿಂದ 7 ವರ್ಷಗಳ ಹಿಂದೆ ಆರಂಭಗೊಂಡ ದಾರುಲ್ ಹಸನಿಯಾ ಅಕಾಡೆಮಿ ಎಜು-ಪಾರ್ಕ್, ಪುತ್ತೂರು ಇದರ ಜಿಡೆಕಲ್ಲು ಸಮೀಪ ನಿರ್ಮಾಣಗೊಂಡ ನೂತನ ಕಾಲೇಜು ಕಟ್ಟಡದ ಉದ್ಘಾಟನಾ ಸಮಾರಂಭವು ಆ.19ರಂದು ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಫಾರೂಕ್ ಹಾಜಿ ಪೋರ್ಟ್ವೆ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ಪುತ್ತೂರಿನ ಪ್ರಮುಖ ಸಮನ್ವಯ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿರುವ ದಾರುಲ್ ಹಸನಿಯಾ ಅಕಾಡೆಮಿ, 2019ರಲ್ಲಿ ಕೇವಲ 18 ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡಿತ್ತು. ಪ್ರಸ್ತುತ ಸಂಸ್ಥೆಯಲ್ಲಿ ಹಿಫುಲ್ ಕುರ್ನ್ ಜೊತೆಗೆ ‘ಸಮಸ್ತ’ದ ಪ್ರತಿಷ್ಠಿತ “ಸಮಸ್ತ ನ್ಯಾಷನಲ್ ಎಜುಕೇಶನ್ ಕೌನ್ಸಿಲ್ (ಎಸ್.ಎನ್.ಇ.ಸಿ.) ಪಠ್ಯಕ್ರಮದಡಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಸಮನ್ವಯ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಈಗಾಗಲೇ 30 ವಿದ್ಯಾರ್ಥಿಗಳು ಪವಿತ್ರ ಕುರ್ಆನ್ ಸಂಪೂರ್ಣವಾಗಿ ಕಂಠಪಾಠ ಮಾಡಿ ಹಾಫಿಳ್ಗಳಾಗಿ ಹೊರಹೊಮ್ಮಿದ್ದಾರೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಇದೀಗ ನಾಲ್ಕು ಅಂತಸ್ತಿನ ಹಾಸ್ಟೆಲ್ ಸೌಲಭ್ಯ ಸೇರಿದಂತೆ ಸುಸಜ್ಜಿತ ನೂತನ ಕಾಲೇಜು ಕಟ್ಟಡ ನಿರ್ಮಿಸಲಾಗಿದೆ ಎಂದವರು ಹೇಳಿದರು.



ಸಯ್ಯದುಲ್ ಉಲಮಾ ಅವರಿಂದ ಉದ್ಘಾಟನೆ
ನೂತನ ಕಾಲೇಜು ಕಟ್ಟಡದ ಉದ್ಘಾಟನಾ ಸಮಾರಂಭವು ಆ.19ರಂದು ಬೆಳಿಗ್ಗೆ 10 ಗಂಟೆಗೆ ಆರಂಭಗೊಳ್ಳಲಿದೆ. ‘ಸಮಸ್ತ’ ಅಧ್ಯಕ್ಷ ಸಯ್ಯದುಲ್ ಉಲಮಾ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ನೂತನ ಕಾಲೇಜು ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಕುಂಬೋಳ್ ಸಯ್ಯದ್ ಅಲಿ ತಂಙಳ್ ದುವಾ ಆಶೀರ್ವಚನ ನೀಡಲಿದ್ದಾರೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ‘ಸಮಸ್ತ” ಕೇಂದ್ರೀಯ ನಾಯಕರಾದ ಶೈಖುನಾ ಎಂ.ಟಿ. ಉಸ್ತಾದ್, ಶೈಖುನಾ ಕೊಯ್ಯೋಡ್ ಉಸ್ತಾದ್, ಅಬ್ದುಲ್ ಸಲಾಂ ಬಾಖವಿ ಸೇರಿದಂತೆ ‘ಸಮಸ್ತ’ ಕೇಂದ್ರ ಮುಶಾವರದ ಎಲ್ಲಾ ಸದಸ್ಯರು ಭಾಗವಹಿಸಲಿದ್ದಾರೆ. ಅದೇ ರೀತಿ ಎಸ್.ಕೆ.ಎಸ್.ಎಸ್.ಎಫ್. ಕೇಂದ್ರೀಯ ನಾಯಕರಾದ ಪಾಣಕ್ಕಾಡ್ ಸಯ್ಯದ್ ಹಮೀದಲಿ ಶಿಹಾಬ್ ತಂಙಳ್, ಸತ್ತಾರ್ ಪಂದಲ್ಲೂರು ಮೊದಲಾದ ಗಣ್ಯರು ಉಪಸ್ಥಿತರಿರುವರು.
ಸಚಿವರಾದ ಯು.ಟಿ. ಖಾದರ್, ಝಮೀರ್ ಅಹ್ಮದ್, ರಿಝಾನ್ ಅರ್ಶದ್, ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ, ರಹ್ಮಾನ್ ಖಾನ್, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಕಾಸರಗೋಡು ಶಾಸಕ ಮಾಹಿನ್ ಹಾಜಿ ಕಲ್ಲಟ್ರ, ಮಾಜಿ ಶಾಸಕರಾದ ರಮಾನಾಥ ರೈ, ಸಂಜೀವ ಮಠಂದೂರು ಸೇರಿದಂತೆ ಹಲವು ಗಣ್ಯರು ಸಹಿತ ಸಾಮಾಜಿಕ ಮುಖಂಡರಾದ ಝಕರಿಯಾ ಹಾಜಿ ಜೋಕಟ್ಟೆ, ಶರೀಫ್ ಹಾಜಿ ವೈಟ್ ಸ್ಪೋನ್, ಇನಾಯತ್ ಆಲಿ ಮುಲ್ಕಿ, ಯು.ಟಿ. ಇಫ್ತಿಕಾರ್, ಮುಸ್ತಾಫಾ ಭಾರತ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಫಾರೂಕ್ ಹಾಜಿ ಪೋರ್ಟ್ವೆ ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ದಾರುಲ್ ಹಸನಿಯಾ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಝಾರ್, ಪೋಷಕರಾದ ಆಸಿಪ್ ಹಾಜಿ ದರ್ಬೆ, ಆಡಳಿತ ಸಮಿತಿ ಸದಸ್ಯರಾದ ರಿಯಾಝ್ ಇಂಜಿನಿಯರ್, ಉಮ್ಮರ್ ಹಾಜಿ ಸಂಪ್ಯ, ಅನ್ವರ್ ಮುಸ್ಲಿಯಾರ್ ಉಪಸ್ಥಿತರಿದ್ದರು.










