






4.35 ಕೋಟಿ ರೂ . ವ್ಯವಹಾರ : 5.42 ಲಕ್ಷ ರೂ. ಲಾಭ
ಶೇ.15 ಡಿವಿಡೆಂಡ್, ಪ್ರತಿ ಲೀ. ಹಾಲಿಗೆ 90 ಪೈಸೆ ಬೋನಸ್ ಘೋಷಣೆ


ಪುತ್ತೂರು: ಕುರಿಯ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಆ.14ರಂದು ಸಂಘದ ವಠಾರದಲ್ಲಿ ಜರಗಿತು.



ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಿನೋದ್ ಕುಮಾರ್ ರೈ ಕುರಿಯ ಏಳ್ನಾಡುಗುತ್ತುರವರು ಮಾತನಾಡಿ, ಸಂಘವು 2025-26ನೇ ಸಾಲಿನಲ್ಲಿ 5 ಕೋಟಿ 35 ಲಕ್ಷ 11 ಸಾವಿರ ರೂ ವ್ಯವಹಾರ ನಡೆಸಿ, 5 ಲಕ್ಷ 42 ಸಾವಿರ ರೂ ಲಾಭಗಳಿಸಿದ್ದು, ಸದಸ್ಯರಿಗೆ 15 ಶೇಕಡಾ ಡಿವಿಡೆಂಡ್ ಮತ್ತು ಪ್ರತಿ ಲೀಟರ್ ಹಾಲಿಗೆ 90 ಪೈಸೆ ಬೋನಸ್ ನೀಡಲಾಗುವುದು ಎಂದು ಹೇಳಿದರು.

ಸಂಘದ ಸಾಧನೆ ಒಳ್ಳೆಯ ಪ್ರಗತಿಯಲ್ಲಿ ಇದೆ- ಎಸ್.ಬಿ. ಜಯರಾಮ್ ರೈ :
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎಸ್.ಬಿ. ಜಯರಾಮ್ ರೈಯವರು ಮಾತನಾಡಿ ಕುರಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಧನೆ ಒಳ್ಳೆಯ ಪ್ರಗತಿಯಲ್ಲಿ ಇದೆ. ಸಂಘ ಅಧ್ಯಕ್ಷ ವಿನೋದ್ ಕುಮಾರ್ ರೈ ಕುರಿಯ ಏಳ್ನಾಡುಗುತ್ತು ನೇತೃತ್ರದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಲಿ ಎಂದು ಹೇಳಿದ ಅವರು ಕುರಿಯ ಹಾಲು ಸೊಸೈಟಿಯಲ್ಲಿ ಬಿಎಂಸಿ ಆಗಬೇಕೆಂಬ ಬೇಡಿಕೆ ಇದೆ, ಇಲ್ಲಿ ಹೆಚ್ಚು ಹಾಲು ಸಂಗ್ರಹ ಆದರೆ ನಿಮ್ಮ ಬೇಡಿಕೆಯನ್ನು ಪೂರೈಸುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಪುತ್ತೂರಿನಲ್ಲಿ ಈಗಾಗಲೇ ಹಾಲು ಒಕ್ಕೂಟಕ್ಕೆ ನಿವೇಶನ ಮಂಜೂರಾಗಿದೆ. ಇಲ್ಲಿ ಮುಂದೆ ವಿವಿಧ ಯೋಜನೆಗಳನ್ನು ರೂಪಿಸುವ ಕೆಲಸ ನಡೆಯಲಿದೆ ಎಂದು ಹೇಳಿದರು.
ಚಂದ್ರಶೇಖರ್ ನಿಧಿಮುಂಡ ಅವರಿಂದ ಶುಭಹಾರೈಕೆ
ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಚಂದ್ರಶೇಖರ್ ರಾವ್ ನಿಧಿಮುಂಡರವರು ಆಗಮಿಸಿ, ಸಂಘದ ಪ್ರಗತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭಹಾರೈಸಿದರು.
ಹಾಲು ಉತ್ಪಾದನೆ ಜಾಸ್ತಿ ಮಾಡಬೇಕು-ಡಾ. ಸತೀಶ್ ರಾವ್ :
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಸತೀಶ್ ರಾವ್‌ರವರು ಮಾತನಾಡಿ ಹೈನುಗಾರರು ಹಾಲು ಉತ್ಪಾದನೆಯತ್ತ ಹೆಚ್ಚು ಗಮನಹರಿಸಬೇಕು, ಹೈನುಗಾರರು ನಮ್ಮ ನಂದಿನಿ ಪಶು ಆಹಾರವನ್ನೇ ಬಳಕೆ ಮಾಡಿದಾಗ ಸಂಘಕ್ಕೆ ಲಾಭ ಬರುತ್ತದೆ, ಜೊತೆಗೆ ರೈತರಿಗೆ ಬೋನಸ್ ಹೆಚ್ಚು ಸಿಗುತ್ತದೆ ಎಂದು ಅವರು ಹೇಳಿದರು.
ಸಂಘ ಉತ್ತಮ ರೀತಿಯಲ್ಲಿ ನಡೆಯುತ್ತಿದೆ- ವಿದ್ಯಾ:
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ವಿದ್ಯಾರವರು ಮಾತನಾಡಿ ಕುರಿಯ ಹಾಲು ಉತ್ಪಾದಕರ ಸಹಕಾರ ಸಂಘ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಈ ಭಾಗದ ಹೈನುಗಾರರು ಇನ್ನೂ ಹೆಚ್ಚಿನ ಮುತುವರ್ಜಿಯಿಂದ ಸಂಘಕ್ಕೆ ಹೆಚ್ಚಿನ ಹಾಲು ಪೂರೈಕೆ ಮಾಡಬೇಕು ಎಂದು ಹೇಳಿದ ಅವರು ಹೈನುಗಾರಿಕೆ ಬಗ್ಗೆ ನಮ್ಮ ಮುಂದಿನ ಯುವ ಪೀಳಿಗೆ ಹೆಚ್ಚು ಆಸಕ್ತಿಯನ್ನು ಹೊಂದಬೇಕು ಎಂದರು.
ಸಂಘದ ಉಪಾಧ್ಯಕ್ಷ ಚಿದಾನಂದ ಶೆಟ್ಟಿ ಮಾಣಿಜಾಲು, ನಿರ್ದೇಶಕರುಗಳಾದ ಚಂದ್ರಹಾಸ್ ರೈ ಡಿಂಬ್ರಿ, ದಿನೇಶ್ ಕರ್ಕೇರ ಕೋಲಾಡಿ, ವೆಂಕಟ್ರಮಣ ಮಾಪಾಲ, ಶಿವಶಂಕರ್ ಭಟ್ ಡೆಮ್ಮಲೆ, ಆನಂದ್ ಕುಮಾರ್ ಉಳ್ಳಾಲ, ಜಯಲಕ್ಷ್ಮಿ ಆರ್ ರೈ ಬೂಡಿಯಾರ್, ರಮ್ಯ ಪಡ್ಪು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ನಿರ್ದೆಶಕ ಗಣೇಶ್ ಬಂಗೇರ ಕೊರುಂಗು ಸ್ವಾಗತಿಸಿ, ಸಂಘದ ಕಾರ್‍ಯದರ್ಶಿ ರಜನಿ ರಾಜೇಶ್ ವರದಿ ವಾಚಿಸಿ, ನಿರ್ದೇಶಕ ಗಣೇಶ್ ಶೆಟ್ಟಿ ಶಿಬರ ಕಾರ್‍ಯಕ್ರಮ ನಿರೂಪಿಸಿ, ವಂದಿಸಿದರು. ಸಂಘದ ಶಾಖಾ ಸಿಬ್ಬಂದಿ ಜೈನುಲ್ ಅಬಿದ್ ನೈತ್ತಾಡಿ, ಹಾಲು ಪರೀಕ್ಷಕಿ ಪ್ರತಿಮಾ ಡಿಂಬ್ರಿರವರು ಸಹಕರಿಸಿದರು.
ಕುರಿಯ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ವಿಜಯಹರಿ ರೈ ಬಳ್ಳಮಜಲು, ಸಂಘದ ಮಾಜಿ ಕಾರ್‍ಯದರ್ಶಿ ದೇರಣ್ಣ ಗೌಡ ಪರೆಂಕಿಲು, ಸಹಿತ ನೂರಾರು ಸದಸ್ಯರುಗಳು ಸಭೆಯಲ್ಲಿ ಭಾಗವಹಿಸಿದರು.
ಸಂತಾಪ
ಸಂಘದ ಮಾಜಿ ಅಧ್ಯಕ್ಷೆ ಪುಷ್ಪ ಜೆ.ರೈ ಅವರ ನಿಧನಕ್ಕೆ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ, ಸಂತಾಪ ಸೂಚಿಸಲಾಯಿತು.
ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದವರು
ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ಸಂಘದ ಉಪಾಧ್ಯಕ್ಷ ಚಿದಾನಂದ ಶೆಟ್ಟಿ ಮಾಣಿಜಾಲು-ಪ್ರಥಮ, ಪ್ರಮೋದ ದ್ವಿತೀಯ ಹಾಗೂ ಬಿಜುರವರಿಗೆ ತೃತೀಯ ಬಹುಮಾನ ನೀಡಿ ಅಭಿನಂದಿಸಲಾಯಿತು.










