






ಅತಂತ್ರ ಸ್ಥಿತಿಯಲ್ಲಿ ಪುಟಾಣಿಗಳು…ತಿಂಗಳೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಪ್ರತಿಭಟನೆ, ಎಚ್ಚರಿಕೆ!
ಕೆದಂಬಾಡಿ ಗ್ರಾಮಸಭೆ


ಪುತ್ತೂರು: ಕೆದಂಬಾಡಿ ಗ್ರಾಮದ ಇದ್ಪಾಡಿಯಲ್ಲಿದ್ದ ಅಂಗನವಾಡಿ ಕೇಂದ್ರದಲ್ಲಿ 24 ಕ್ಕೂ ಅಧಿಕ ಪುಟಾಣಿಗಳು ವ್ಯಾಸಂಗ ಮಾಡುತ್ತಿದ್ದರು ನೂತನ ಕಟ್ಟಡ ನಿರ್ಮಿಸುವ ಹಿನ್ನೆಲೆಯಲ್ಲಿ ಇದ್ದ ಅಂಗನವಾಡಿ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡ ಹೊರಟು ಇಂದಿಗೆ ಎರಡೂವರೆ ವರ್ಷಗಳು ಆಗುತ್ತಾ ಬಂದಿದೆ ಆದರೆ ಇಂದಿಗೂ ಹೊಸ ಕಟ್ಟಡ ಪೂರ್ಣಗೊಂಡಿಲ್ಲ, ಇದೀಗ ಮಕ್ಕಳಿಗೆ ಸರಿಯಾದ ಅಂಗನವಾಡಿ ಕೇಂದ್ರ ಇಲ್ಲದೆ ಮಕ್ಕಳು ಅತಂತ್ರಗೊಂಡಿದ್ದಾರೆ. ಅನುದಾನ ಇಲ್ಲದೇ ಇದ್ದ ಮೇಲೆ ಹಳೆಯ ಕಟ್ಟಡ ಕೆಡವಲು ಹೋಗಿದ್ದಾದರೂ ಯಾಕೆ? ತಿಂಗಳೊಳಗೆ ಈ ಸಮಸ್ಯೆಗೆ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡದೇ ಇದ್ದರೆ ಅಂಗನವಾಡಿ ಕೇಂದ್ರದ ಮುಂದೆ ದೊಡ್ಡ ಮಟ್ಟದಲ್ಲಿ ಪ್ರತಿಭೆಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಕೆದಂಬಾಡಿ ಗ್ರಾಮ ಸಭೆಯಲ್ಲಿ ಎಚ್ಚರಿಕೆ ನೀಡಿದರು.



ಗ್ರಾಮ ಪಂಚಾಯತ್‌ನ 2026-27 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ವಿದ್ಯಾರಾಣಿ ಪಿ.ಕೆಯವರ ಅಧ್ಯಕ್ಷತೆಯಲ್ಲಿ ಆ.13 ರಂದು ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ವಿಷಯ ಪ್ರಸ್ತಾಪಿಸಿದ ಗ್ರಾಪಂ ಮಾಜಿ ಅಧ್ಯಕ್ಷ ರತನ್ ರೈ ಕುಂಬ್ರರವರು, ಅನುದಾನ ಇದೆ ಎಂದುಕೊಂಡು ಇದ್ಪಾಡಿಯಲ್ಲಿದ್ದ ಹಳೆಯ ಅಂಗನವಾಡಿ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಕೈ ಹಾಕಿ ಎರಡೂವರೆ ವರ್ಷ ಕಳೆದಿದೆ. ಕಟ್ಟಡ ಇನ್ನು ಕೂಡ ಪೂರ್ಣಗೊಂಡಿಲ್ಲ, ಇದೀಗ ಅನುದಾನ ಇಲ್ಲ ಎಂದು ಅಧಿಕಾರಿಗಳು ಹೇಳ್ತಾ ಇದ್ದಾರೆ. ಇದು ಎಷ್ಟು ಸರಿ? ಆರಂಭದಲ್ಲಿ 24 ಕ್ಕೂ ಅಧಿಕ ಪುಟಾಣಿಗಳು ಈ ಕೇಂದ್ರದಲ್ಲಿದ್ದರೂ ಇದೀಗ ಮೂರು ಮನೆಗಳಿಗೆ ಈ ಮಕ್ಕಳನ್ನು ಶಿಪ್ಟ್ ಮಾಡಿ ಪಾಠ ಹೇಳಿಕೊಡುವ ಕೆಲಸ ಆಗಿದೆ. ಇದೀಗ ಮಕ್ಕಳೇ ಕಡಿಮೆಯಾಗಿದ್ದಾರೆ. ಮಕ್ಕಳಿಗೆ ಸರಿಯಾದ ಕಟ್ಟಡ ಇಲ್ಲದೆ ಬಹಳಷ್ಟು ತೊಂದರೆಯಾಗಿದೆ. ಈ ರೀತಿ ಮಾಡೋದು ಸರಿಯಾ ಎಂದು ಪ್ರಶ್ನಿಸಿದ ರತನ್ ರೈ ಕುಂಬ್ರರವರು, ತಿಂಗಳೊಳಗೆ ಇದಕ್ಕೊಂದು ಪರಿಹಾರವನ್ನು ಅಧಿಕಾರಿಗಳು ಸೂಚಿಸದೆ ಇದ್ದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು. ಇದಕ್ಕೆ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಧ್ವನಿಗೂಡಿಸಿ, ಇದು ಬಹಳ ತುರ್ತಾಗಿ ಆಗಬೇಕಾದ ಕೆಲಸ ಆಗಿದೆ. ಪಾಪ ಮಕ್ಕಳಿಗೆ ಅಂಗನವಾಡಿ ಕೇಂದ್ರ ಇಲ್ಲದೆ ತೊಂದರೆಯಾಗಿದೆ. ಯಾರದೋ ಮನೆಯ ಜಗುಲಿಯಲ್ಲಿ ಪಾಠ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಇದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರು ಈ ಬಗ್ಗೆ ನಾವು ಈಗಾಗಲೇ ಶಾಸಕರ, ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.

ಪಂಚಾಯತ್ ಎಸ್ಕ್ರೋ ಖಾತೆಗೆ 15ಲಕ್ಷ ಅನುದಾನ ಬರಲಿ…
ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಕೆ ಮಾಡುವ ವಿಷಯದಲ್ಲಿ ಸಾವಿರಾರು ರೂಪಾಯಿಗಳನ್ನು ವಿದ್ಯುತ್ ಶುಲ್ಕಕ್ಕೆ ಪಾವತಿಸಬೇಕಾಗುತ್ತದೆ. ಸರಕಾರ ಕಳೆದ 10 ವರ್ಷಗಳಿಂದ ಬರೇ 6 ಲಕ್ಷ ರೂಪಾಯಿಯನ್ನು ಪಂಚಾಯತ್ ಎಸ್ಕ್ರೋ ಖಾತೆಗೆ ಜಮೆ ಮಾಡುತ್ತಿದೆ. ಆದರೆ ಇಂದು ವಿದ್ಯುತ್ ಯುನಿಟ್ ಬೆಲೆ ದುಪ್ಪಟ್ಟು ಆಗಿದೆ. ಹೀಗಿರುವಾಗ ಈ 6 ಲಕ್ಷ ರೂಪಾಯಿಯಲ್ಲಿ ಏನೇನು ಮಾಡಲು ಸಾಧ್ಯವಿಲ್ಲ. ಇದಲ್ಲದೆ ಕುಡಿಯುವ ನೀರು ಬಳಕೆದಾರರಿಂದ ಎಷ್ಟೇ ಶುಲ್ಕ ವಸೂಲಿ ಮಾಡಿದರೆ ಅದು ವಿದ್ಯುತ್ ಬಿಲ್ ಕಟ್ಟಲಿಕ್ಕೂ ಸಾಧ್ಯವಿಲ್ಲ ಎಂದ ರತನ್ ರೈ ಕುಂಬ್ರರವರು ಈ ಬಗ್ಗೆ ಪಂಚಾಯತ್ ಗಂಭೀರವಾಗಿ ಪರಿಗಣಿಸಿ ಎಸ್ಕ್ರೋ ಖಾತೆಗೆ ರೂ.15ಲಕ್ಷ ಅನುದಾನ ಜಮೆ ಮಾಡುವಂತೆ ಸರಕಾರಕ್ಕೆ ಬರೆದುಕೊಳ್ಳಬೇಕಾದ ಅಗತ್ಯತೆ ಇದೆ. ಇಂದಿನ ವಿದ್ಯುತ್ ಬಿಲ್ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಸರಕಾರ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ರತನ್ ರೈ ತಿಳಿಸಿದರು. ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು.
108 ಆಂಬುಲೆನ್ಸ್ ಬೇಕು
ಬೆಳ್ಳಾರೆ ಮತ್ತು ಪುತ್ತೂರು ಪಟ್ಟಣ ಬಿಟ್ಟರೆ ಕೆದಂಬಾಡಿ ಗ್ರಾಮದ ಆಸುಪಾಸಿನಲ್ಲಿ ಎಲ್ಲಿಯೂ ಸರಕಾರದ 108 ಆಂಬುಲೆನ್ಸ್ ಇಲ್ಲ ಈ ಹಿಂದೆ ಮಾಡಾವುನಲ್ಲಿ ಆಂಬುಲೆನ್ಸ್ ನಿಲ್ಲುತ್ತಿತ್ತು. ಬಹಳಷ್ಟು ಜನಸಂಖ್ಯೆ ಈ ಭಾಗದಲ್ಲಿ ಇರುವುದರಿಂದ ಅಗತ್ಯವಾಗಿ 108 ಬೇಕು ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಿ ಎಂದು ಕೋಚಣ್ಣ ಪೂಜಾರಿ ಎಂಡೆಸಾಗು ತಿಳಿಸಿದರು. ಇದಕ್ಕೆ ಉತ್ತರಿಸಿದ ವೈದ್ಯಾಧಿಕಾರಿ ಡಾ| ಭವ್ಯರವರು ಈ ಬಗ್ಗೆ ನಾನು ಆರೋಗ್ಯ ಸಚಿವರಲ್ಲೂ ಮಾತನಾಡಿದ್ದೇನೆ. ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ 37 ಸಾವಿರದಷ್ಟು ಜನಸಂಖ್ಯೆ ಬರುತ್ತಿದ್ದು ಇದು 108 ಆಂಬುಲೆನ್ಸ್‌ಗೆ ಸಾಲದು ಎಂದು ತಿಳಿಸಿದರು. ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು.
ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಲಿ…
ಈ ಹಿಂದೆ ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರವು ಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ದರ್ಜೆಗೇರಲಿದೆ ಎಂದು ಅನೌನ್ಸ್ ಆಗಿತ್ತು ಆದರೆ ಆ ಬಳಿಕದ ಬೆಳವಣಿಗೆಯಲ್ಲಿ ಅದು ಪಾಣಾಜೆ ಪ್ರಾಥಮಿಕ ಆರೋಗ್ಯಕ್ಕೆ ಶಿಪ್ಟ್ ಆಗಿತ್ತು ಎಂದು ತಿಳಿಸಿದ ಕೋಚಣ್ಣ ಪೂಜಾರಿಯವರು ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರವೂ ಮೇಲ್ದರ್ಜೆಗೆ ಹೋಗಬೇಕು ಈ ಬಗ್ಗೆ ಆರೋಗ್ಯ ಇಲಾಖೆ ಗಮನ ಹರಿಸಬೇಕಾಗಿದೆ ಎಂದರು. ಇದಕ್ಕೆ ಧ್ವನಿಗೂಡಿಸಿದ ರತನ್ ರೈ ಕುಂಬ್ರರವರು ಈ ಬಗ್ಗೆಯೂ ಸರಕಾರಕ್ಕೆ ಬರೆದುಕೊಳ್ಳುವ ಎಂದು ತಿಳಿಸಿದರು.
ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಅಕ್ಷರದಾಸೋಹ ಇಲಾಖೆಯ ಸಹಾಯಕ ನಿರ್ದೇಶಕಿ ಜಲಜಾಕ್ಷಿಯವರು ಮಾರ್ಗದರ್ಶಿ ಅಧಿಕಾರಿಯಾಗಿ ಸಭೆ ನಡೆಸಿಕೊಟ್ಟರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಾವಣ್ಯ ಪಿ.ರವರು ಗ್ರಾಮ ಪಂಚಾಯತ್ ಅನುದಾನ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು. ಪ್ರಭಾರ ಕಾರ್ಯದರ್ಶಿ ದೇವಪ್ಪ ನಾಯ್ಕರವರು ವರದಿ ಮಂಡಿಸಿದರು. ಸಿಬ್ಬಂದಿಗಳಾದ ಜಯಂತ ಮೇರ್ಲ, ಗಣೇಶ್, ವಿದ್ಯಾಪ್ರಸಾದ್, ಮೃದುಳಾ ಬಾಲಯ, ಶಶಿಪ್ರಭಾ ರೈ ಸಹಕರಿಸಿದ್ದರು.
ಕೆದಂಬಾಡಿ ಎಂಆರ್‌ಎಫ್ ಘಟಕದ ಶಿಲಾನ್ಯಾಸ ಫಲಕ ನಾಪತ್ತೆ…!?
ಯಥಾಸ್ಥಿತಿಯಲ್ಲಿ ಮತ್ತೆ ಫಲಕ ಅಳವಡಿಸದೇ ಇದ್ದರೆ ಪ್ರತಿಭಟನೆ.
ಕೆದಂಬಾಡಿ ಗ್ರಾಮದ ಬೋಳೋಡಿಯಲ್ಲಿ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಅಂದಿನ ಶಾಸಕರಾಗಿದ್ದ ಸಂಜೀವ ಮಠಂದೂರುರವರ ಮುತುವರ್ಜಿಯಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ(ಎಂಆರ್‌ಎಫ್)ವನ್ನು ನಿರ್ಮಾಣ ಮಾಡಲಾಗಿತ್ತು. ಕಳೆದ 3 ವರ್ಷಗಳಿಂದ ಘಟಕ ಕಾರ್ಯನಿರ್ವಹಿಸುತ್ತಿದೆ. ಆದರೆ ಈ ಕಟ್ಟಡವನ್ನು ಉದ್ಘಾಟಿಸುವ ಭಾಗ್ಯ ಇಂದಿಗೂ ಕೂಡಿ ಬಂದಿಲ್ಲ, ವಿಪರ‍್ಯಾಸವೆಂದರೆ ಈ ಕಟ್ಟಡದ ಶಿಲಾನ್ಯಾಸ ಫಲಕವನ್ನು ಕೂಡ ಯಾರೋ ಗೋಡೆಯಿಂದ ಕಿತ್ತು ತೆಗೆಯುವ ಕೆಲಸ ಮಾಡಿದ್ದಾರೆ. 1 ವರ್ಷಗಳಿಂದ ಈ ಫಲಕ ಕಾಣ್ತಾ ಇಲ್ಲ ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಫಲಕ ಹಾಕುವ ಕೆಲಸ ಆಗಿಲ್ಲ ಎಂದು ಗ್ರಾಪಂ ಮಾಜಿ ಅಧ್ಯಕ್ಷ ರತನ್ ರೈ ಕುಂಬ್ರ ತಿಳಿಸಿದರು. ಸರಕಾರಕ್ಕೆ ಈ ಘಟಕವನ್ನು ಉದ್ಘಾಟಿಸುವ ಯೋಗ್ಯತೆ ಅಂತೂ ಇಲ್ಲ ಆದರೆ ಫಲಕವನ್ನು ಕಿತ್ತು ತೆಗೆಯುವ ಹೀನ ಕೆಲಸವನ್ನು ಮಾಡಬಾರದಿತ್ತು. ಒಂದು ತಿಂಗಳೊಳಗೆ ಫಲಕವನ್ನು ಎಂದಿನಂತೆ ಮತ್ತೆ ಹಾಕದೇ ಇದ್ದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ರತನ್ ರೈ ಎಚ್ಚರಿಸಿದರು. ಈ ಬಗ್ಗೆ ಮೇಲಾಧಿಕಾರಿಗಳಿಗೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು.
ಸಾಂಕ್ರಾಮಿಕ ರೋಗ ಮುಕ್ತ ಗ್ರಾಮ
ಕೆದಂಬಾಡಿ ಗ್ರಾಮದಲ್ಲಿ ಇದುವರೇಗೆ ಯಾವುದೇ ಸಾಂಕ್ರಾಮಿಕ ರೋಗಗಳು ಅದರಲ್ಲೂ ಡೆಂಗು, ಮಲೇರಿಯಾ ಇತ್ಯಾದಿಗಳು ಕಾಣಿಸಿಕೊಂಡಿಲ್ಲ ಎಲ್ಲರೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡುವುದರಿಂದ ಕೆದಂಬಾಡಿ ಗ್ರಾಮ ಸಾಂಕ್ರಾಮಿಕ ರೋಗ ಮುಕ್ತ ಗ್ರಾಮವಾಗಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಭವ್ಯರವರು ತಿಳಿಸಿದರು.
ಎಲ್ಲಿ ಸಿಗುತ್ತೇ ಸ್ವಾಮೀ 20 ರೂ.ಸ್ಟಾಂಪ್ ಪೇಪರ್…?
ಇಲಾಖಾ ಅಧಿಕಾರಿಯೋರ್ವರು ಮಾಹಿತಿ ನೀಡುತ್ತಾ 20 ರೂಪಾಯಿ ಸ್ಟಾಂಪ್ ಪೇಪರ್‌ನಲ್ಲಿ ಅಫಿದಾವತ್ ಸಲ್ಲಿಸಬೇಕು ಎಂದು ತಿಳಿಸಿದರು. ಇದಕ್ಕೆ ಆಕ್ರೋಶಗೊಂಡ ನಾರಾಯಣ ಪೂಜಾರಿ ಕುರಿಕ್ಕಾರರವರು ನೀವು ಗ್ರಾಮಸ್ಥರಿಗೆ ತಪ್ಪು ಮಾಹಿತಿ ಕೊಡಬೇಡಿ ಈಗ 20 ರೂಪಾಯಿ ಸ್ಟಾಂಪ್ ಪೇಪರ್ ಎಲ್ಲಿ ಸಿಗುತ್ತೆ ಎಂದು ತಿಳಿಸಿ. ಸರಕಾರದ ಓಬೀರಾಯನ ಕಾಲದ ಆದೇಶವನ್ನು ಇಟ್ಟುಕೊಂಡು ಜನರನ್ನು ದಾರಿ ತಪ್ಪಿಸುವ ಕೆಲಸ ಆಗುತ್ತಿದೆ. ಪ್ರಸ್ತುತ 100 ರಿಂದ 500 ರ ಸ್ಟಾಂಪ್ ಪೇಪರ್ ಮಾತ್ರ ಇರೋದು, ಸರಕಾರ ತಮ್ಮ ಆದೇಶವನ್ನು ತಿದ್ದಿಕೊಳ್ಳಬೇಕಾಗಿದೆ. ಅದೇ ಆದೇಶವನ್ನು ಮತ್ತೆ ಮತ್ತೆ ಇಲಾಖೆಗೆ ಕಳಿಸಿಕೊಡುವುದು ಸರಿಯಲ್ಲ ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಿ ಎಂದು ತಿಳಿಸಿದರು. ಅದರಂತೆ ನಿರ್ಣಯಿಸಲಾಯಿತು.










