







ಇಚ್ಲಂಪಾಡಿ: ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನೇರ್ಲ, ಇಚ್ಲಂಪಾಡಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಅತ್ಯಂತ ವಿಜ್ರಂಭಣೆ ಹಾಗೂ ಸಡಗರದಿಂದ ಆಚರಿಸಲಾಯಿತು.
ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀ ವಸಂತ ಬಿಜೇರು ಅವರು ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿದರು. ಈ ಶುಭ ಸಮಾರಂಭದಲ್ಲಿ ಊರಿನ ಹಿರಿಯರು, ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕ ವೃಂದದವರು, ಶಾಲಾ ವಿದ್ಯಾರ್ಥಿಗಳು ಹಾಗೂ ಅಕ್ಷರ ದಾಸೋಹ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು.


ಧ್ವಜಾರೋಹಣದ ನಂತರ ಶಾಲೆಯಿಂದ ನೇರ್ಲ ಪೇಟೆಯವರೆಗೆ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಪೇಟೆಯಲ್ಲಿ ಸ್ಥಳೀಯ ಅಂಗಡಿಯವರು ಮತ್ತು ಹಳೆ ವಿದ್ಯಾರ್ಥಿಗಳು ಮಕ್ಕಳಿಗೆ ಪ್ರೀತಿಯಿಂದ ಸಿಹಿ ತಿಂಡಿ ಹಾಗೂ ತಿನಸುಗಳನ್ನು ನೀಡಿ ಪ್ರೋತ್ಸಾಹಿಸಿದರು.



ಪಥಸಂಚಲನದ ಬಳಿಕ ಶಾಲೆಯಲ್ಲಿ ಸಭಾ ಕಾರ್ಯಕ್ರಮ ಜರುಗಿತು. ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀ ವಸಂತ ಬಿಜೇರು ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಇಚ್ಲಂಪಾಡಿಯ ಸೈಂಟ್ ಜಾರ್ಜ್ ಆರ್ಥಡಾಕ್ಸ್ ಸಿರಿಯನ್ ಚರ್ಚ್ ಟ್ರಸ್ಟ್ನ ಕಾರ್ಯದರ್ಶಿ ಶ್ರೀ ಟಿ.ಪಿ. ಸುನೀಶ್, ಕೆ.ಡಿ.ಪಿ. ಸದಸ್ಯರಾದ ಶ್ರೀ ಗಿರೀಶ್ ಬದನೆ, ಪುತ್ತೂರು ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾದ ಶ್ರೀ ಭಾಸ್ಕರ ಎಸ್. ಗೌಡ ಇಚ್ಲಂಪಾಡಿ, ಕಡಬ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಶ್ರೀ ಸತೀಶ್ ಪಳಿಕೆ, ಇಚ್ಲಂಪಾಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಶ್ರೀ ಕೇಶವ ಗೌಡ ಅಲೆಕ್ಕಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಶ್ರೀಮತಿ ನಂದಾ ಪಾದೆ ಹಾಗೂ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಶ್ರೀ ಶಶಿಧರ ಪೋಯ್ಯತಡ್ಡ, ಮುಖ್ಯಗುರುಗಳಾದ ಡಾ. ಗಿರೀಶ್ ಎಚ್.ಎಂ. ಉಪಸ್ಥಿತರಿದ್ದರು.
ಈ ಸಭಾ ಕಾರ್ಯಕ್ರಮದಲ್ಲಿ ಪೋಷಕರು, ಹಳೆ ವಿದ್ಯಾರ್ಥಿಗಳು, ಊರಿನ ಹಿರಿಯರು, ವಿದ್ಯಾಭಿಮಾನಿಗಳು, ಶಾಲೆಯ ಮಕ್ಕಳು ಹಾಗೂ ಶಿಕ್ಷಕ ವೃಂದದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಶಾಲಾ ಅಭಿವೃದ್ಧಿಗೆ ನಿರಂತರವಾಗಿ ಸಹಕಾರ ನೀಡುತ್ತ ಬಂದಿರುವ ಶ್ರೀ ದೇವಿಪ್ರಸಾದ್ ಪೋಯ್ಯತಡ್ಡ ಹಾಗೂ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಶ್ರೀ ಕೇಶವ ಗೌಡ ಅಲೆಕ್ಕಿ, ಪುತ್ತೂರು ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾದ ಶ್ರೀ ಭಾಸ್ಕರ ಎಸ್. ಗೌಡ ಇಚ್ಲಂಪಾಡಿ ಅವರನ್ನು ಸನ್ಮಾನಿಸಲಾಯಿತು.ಇದೇ ವೇಳೆ, ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಯುವ ವಿಜ್ಞಾನಿ ಶ್ರೀ ದೀಪಕ್ ಎ.ಎಸ್. ಅವರನ್ನು ಶಾಲು ಹೊದಿಸಿ ಅತ್ಯಂತ ಗೌರವದಿಂದ ಅಭಿನಂದಿಸಲಾಯಿತು. ಜೊತೆಗೆ, ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿದ್ದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು ಮತ್ತು ಕಳೆದ ಸಾಲಿನಲ್ಲಿ ಎನ್.ಎಂ.ಎಂ.ಎಸ್. (NMMS) ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಮಕ್ಕಳಿಂದ ದೇಶಭಕ್ತಿ ಬಿಂಬಿಸುವ ಭಾಷಣ ಕಾರ್ಯಕ್ರಮ ಜರುಗಿತು.

ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು. ಕಾರ್ಯಕ್ರಮದ ಅಂತಿಮವಾಗಿ ಆಗಮಿಸಿದ ಎಲ್ಲರಿಗೂ ಮಧ್ಯಾಹ್ನದ ಸಹಭೋಜನದ ವ್ಯವಸ್ಥೆ ಮಾಡಲಾಗಿದ್ದು, ಊರಿನವರು ಹಾಗೂ ಮಕ್ಕಳು ಒಟ್ಟಾಗಿ ಭೋಜನವನ್ನು ಸವಿದರು.
ಶಾಲೆಯ ಮುಖ್ಯಗುರುಗಳಾದ ಡಾ. ಗಿರೀಶ್ ಎಚ್.ಎಂ. ಅವರು ಅತಿಥಿಗಳನ್ನು ಸ್ವಾಗತಿಸಿದರು.ಶಿಕ್ಷಕಿ ಶ್ರೀಮತಿ ಆಥಿರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಮತ್ತೊಬ್ಬ ಶಿಕ್ಷಕಿ ಕುಮಾರಿ ಪೌರ್ಣಮಿ ವಂದನಾರ್ಪಣೆಗೈದು ಎಲ್ಲರಿಗೂ ಧನ್ಯವಾದ ತಿಳಿಸಿದರು. ಶಿಕ್ಷಕಿ ಅಮೃತಾ, ಸೌಮ್ಯ , ಜೋಮಿಷಾ ಮಕ್ಕಳನ್ನು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತಯಾರಿಗೊಳಿಸಿದರು.










