






ಉಪ್ಪಿನಂಗಡಿ: ಗ್ರಾಮದೊಳಗೆ ಇರುವ ರಸ್ತೆಯೊಂದರ ಅಭಿವೃದ್ಧಿಗೆ ಮಂಜೂರು ಆಗಿರುವ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ರಕ್ಷಿತಾರಣ್ಯದೊಳಗೆ ರಸ್ತೆ ನಿರ್ಮಾಣಕ್ಕೆ ಮುಂದಾದ ಘಟನೆ ಕಣಿಯೂರು ಗ್ರಾಮದ ಮಲೆಂಗಲ್ಲು ಎಂಬಲ್ಲಿ ನಡೆದಿದ್ದು, ಇದರ ವಿರುದ್ಧ ಸಾರ್ವಜನಿಕರು ದೂರು ನೀಡಿದ್ದರಿಂದ ಅರಣ್ಯ ಇಲಾಖೆ ರಸ್ತೆ ನಿರ್ಮಾಣಕ್ಕೆ ತಡೆ ನೀಡಿದ ಘಟನೆ ನಡೆದಿದೆ.


ಉಪ್ಪಿನಂಗಡಿ ವಲಯ ಅರಣ್ಯ ಇಲಾಖಾ ವ್ಯಾಪ್ತಿಯಲ್ಲಿ ಬರುವ ಕಣಿಯೂರು ಗ್ರಾಮದ ಮಲೆಂಗಲ್ಲು ಎಂಬಲ್ಲಿ ಅನುದಾನ ದುರ್ಬಳಕೆ ಮಾಡುವ ಯತ್ನ ಬೆಳಕಿಗೆ ಬಂದಿದ್ದು, ಕಣಿಯೂರು ಗ್ರಾಮದ ಮಲೆಂಗಲ್ಲು ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಹಿಂದೆ ಹಾದು ಹೋಗುವ ಪ್ರಧಾನ ರಸ್ತೆ ಅಭಿವೃದ್ಧಿಗೆ 11 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಆಗಿತ್ತು. ಆದರೆ ಈ ರಸ್ತೆಯ ಬದಲಿಗೆ ರಕ್ಷಿತಾರಣ್ಯದೊಳಗೆ ರಸ್ತೆ ಮಾಡುವ ಸಲುವಾಗಿ ಅರಣ್ಯದೊಳಗೆ ಅಗೆದು ಜಲ್ಲಿ ಹಾಸಲಾಗಿದೆ ಎಂದು ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ ಮತ್ತು ಕಣಿಯೂರು ಗ್ರಾಮ ಪಂಚಾಯತ್ಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿತ್ತು.



ಈ ಭಾಗದಲ್ಲಿ ಮರಗಳ್ಳರ ತಂಡವೊಂದು ಕಾರ್ಯಾಚರಿಸುತ್ತಿದ್ದು, ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ರಕ್ಷಿತಾರಣ್ಯದಿಂದ ಭಾರೀ ಪ್ರಮಾಣದಲ್ಲಿ ಮರ ಕಳ್ಳತನವಾಗುತ್ತಿತ್ತು. ವರ್ಷದ ಹಿಂದೆ ಇದೇ ಜಾಗದಿಂದ ಬೃಹತ್ ಮರಗಳ ಲೂಟಿಯಾಗಿತ್ತು. ಅರಣ್ಯ ಇಲಾಖೆಯರು ದಾಳಿ ನಡೆಸಿ ಮರದ ದಿಮ್ಮಿಗಳನ್ನು ವಶಕ್ಕೆ ಪಡೆದುಕೊಂಡು 3 ಮಂದಿಯ ವಿರುದ್ಧ ಪ್ರಕರಣ ದಾಖಸಿಕೊಂಡಿದ್ದರು. 4 ತಿಂಗಳ ಹಿಂದೆ ಇದೀಗ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವ ಜಾಗದಿಂದ ಮರಗಳನ್ನು ಕಡಿದು ದಿಮ್ಮಿಗಳನ್ನಾಗಿ ಮಾಡಿ ಸಾಗಾಟ ಮಾಡಲಾಗಿತ್ತು. ಈ ಬಗ್ಗೆ ಉಪ್ಪಿನಂಗಡಿ ಅರಣ್ಯ ಇಲಾಖೆಗೆ ಮಾಹಿತಿ ರವಾನೆಯಾಗಿ ಹಲವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೇ ತಂಡ ಇದೀಗ ತಮ್ಮ ಅಕ್ರಮ ಕಾರ್ಯಾಚರಣೆಗೆ ಅನುಕೂಲ ಆಗಲೆಂದು ಗುತ್ತಿಗೆದಾರರೊಂದಿಗೆ ಕೈಜೋಡಿಸಿಕೊಂಡು ಬೇರೆ ಕಡೆಗೆ ಮಂಜೂರು ಆಗಿರುವ ಅನುದಾನವನ್ನು ಇಲ್ಲಿ ರಸ್ತೆ ಮಾಡಲು ಮುಂದಾಗಿರುವುದಾಗಿ ಆರೋಪಿಸಲಾಗಿದೆ.
ಬೇರೆ ಯಾವುದೋ ರಸ್ತೆಗೆ ಮಂಜೂರು ಆಗಿರುವ ಅನುದಾನವನ್ನು ಬಳಕೆ ಮಾಡಿಕೊಂಡು ರಕ್ಷಿತಾರಣ್ಯದೊಳಗೆ ರಸ್ತೆ ನಿರ್ಮಿಸಲು ಮುಂದಾಗಿರುವ ಬಗ್ಗೆ ದೂರು ಬಂದಿತ್ತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಮತ್ತು ರಸ್ತೆ ನಿರ್ಮಿಸದಂತೆ ತಡೆ ಮಾಡಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ತಿಳಿಸಲಾಗಿದೆ.
ಎಚ್.ಪಿ. ರಾಘವೇಂದ್ರ, ವಲಯ ಅರಣ್ಯಾಧಿಕಾರಿ, ಉಪ್ಪಿನಂಗಡಿ ವಲಯ










