






ಪುತ್ತೂರು: ಆ.7ರಂದು ನಿಧನರಾದ ಮುಕ್ರಂಪಾಡಿ ಮಿಷನ್ಮೂಲೆ ನಿವಾಸಿ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಿ. ಕೇಶವ ಗೌಡ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಆ.19ರಂದು ತೆಂಕಿಲ ದರ್ಶನ್ ಸಭಾಭವನದಲ್ಲಿ ನಡೆಯಿತು.



ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಅವರು ನುಡಿನಮನ ಸಲ್ಲಿಸಿ ಮಾತನಾಡಿ ಶೈಕ್ಷಣಿಕವಾಗಿ ಹೆಚ್ಚಿನ ಅವಕಾಶಗಳಿಲ್ಲದ ಕಾಲದಲ್ಲೂ ಕುಟುಂಬದ ಎಲ್ಲ ಸದಸ್ಯರಿಗೆ ಉನ್ನತ ಶಿಕ್ಷಣ ಕೊಡಿಸಿ, ಅವರನ್ನು ಉದ್ಯೋಗಸ್ಥರನ್ನಾಗಿ ಮಾಡುವ ಮಹತ್ತರ ಜವಾಬ್ದಾರಿಯನ್ನು ಕೇಶವ ಗೌಡರು ನಿರ್ವಹಿಸಿದ್ದರು. ಕುಟುಂಬದ ಹಿರಿಯಣ್ಣನಾಗಿ ಕುಟುಂಬ ಸಮಾಜದಲ್ಲಿ ಹೇಗಿರಬೇಕು ಎಂಬುದಕ್ಕೆ ಮಾತ್ರವಲ್ಲದೆ ಗೌಡ ಸಮಾಜ ಹಾಗೂ ಹಿಂದೂ ಸಮಾಜಕ್ಕೂ ಮಾದರಿಯಾಗಿದ್ದರು. ಅವರು ಕುಟುಂಬ ಮತ್ತು ಸಮಾಜಕ್ಕೆ ರೋಲ್ ಮಾಡೆಲ್ ಆಗಿದ್ದರು ಎಂದರು. ಜೀವನ ಧರ್ಮವನ್ನು ಹೇಗೆ ಪಾಲಿಸಬೇಕು ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟ ಅವರು, ಅಧಿಕಾರಿಯಾಗಿದ್ದರೂ ಯಾವುದೇ ದರ್ಪವಿಲ್ಲದೆ ಸಾಮಾನ್ಯ ವ್ಯಕ್ತಿಯಂತೆ ಕರ್ತವ್ಯ ನಿರ್ವಹಿಸಿ ಇಲಾಖೆಗೆ ನ್ಯಾಯ ಒದಗಿಸಿದ್ದರು. ಅವರ ನಯ, ವಿನಯ ಹಾಗೂ ಸಜ್ಜನಿಕೆ ಎಲ್ಲರಿಗೂ ದಾರಿದೀಪವಾಗಿತ್ತು. ಸರಕಾರಿ ಸೇವೆಯಿಂದ ನಿವೃತ್ತರಾದ ಬಳಿಕವೂ ತಮ್ಮ ಊರು ಹಾಗೂ ಸಮಾಜದ ಬಗ್ಗೆ ಕಾಳಜಿ ಹೊಂದಿದ್ದರು. ವ್ಯಕ್ತಿಯೊಬ್ಬರು ಅಗಲಿದಾಗ ಅವರು ಸಮಾಜಕ್ಕೆ ನೀಡಿದ ಆದರ್ಶಗಳು ನಮ್ಮೆಲ್ಲರಿಗೂ ಮಾದರಿಯಾಗಬೇಕು ಎಂದು ಹೇಳಿದರು.



ಸ್ವಯಂ ಪ್ರಯತ್ನದಿಂದ ಸಾಧಕರಾದವರು
ಲತಾಶ್ರೀ ಸುಪ್ರಿತ್ ಮೊಂಟಡ್ಕ ಮಾತನಾಡಿ, ಕೇಶವ ಗೌಡರು ಸ್ವಯಂ ಪ್ರಯತ್ನದಿಂದ ಜೀವನದಲ್ಲಿ ಎತ್ತರಕ್ಕೇರಿದ ಸಾಧಕರಾಗಿದ್ದರು. ಶಿಕ್ಷಣ ಪೂರ್ಣಗೊಳಿಸಿದ ಬಳಿಕ ರಬ್ಬರ್ ಇಲಾಖೆಯಲ್ಲಿ ಡ್ರಾಫ್ಟ್ಮ್ಯಾನ್ ಆಗಿ ವೃತ್ತಿ ಆರಂಭಿಸಿದ ಅವರು, ಬಳಿಕ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿ ಪದೋನ್ನತಿ ಹೊಂದಿದ್ದರು. ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಕೇಶವ ಗೌಡರು ವಿಟ್ಲ ಗೌಡ ಸಂಘದ ಸ್ಥಾಪಕರಾಗಿದ್ದು, ಸುಳ್ಯ ಲಯನ್ಸ್ ಕ್ಲಬ್ ಹಾಗೂ ಪುತ್ತೂರು ಗೌಡ ಸಂಘದ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕರ್ತವ್ಯದ ಜತೆಗೆ ಸೇವಾ ಮನೋಭಾವ ಹೊಂದಿದ್ದ ಅವರು ನಿವೃತ್ತಿಯ ಬಳಿಕ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪ್ರಕೃತಿಯ ಮಡಿಲಲ್ಲಿ ಸಮಯ ಕಳೆಯುತ್ತಿದ್ದರು. ತಮ್ಮ ಜೀವನದಲ್ಲಿ ಸ್ವಯಂ ಪ್ರಯತ್ನದಿಂದ ಸಾಧನೆ ಮಾಡಿದ ಅವರು ಸಮಾಜಕ್ಕೆ ಮಾದರಿಯಾಗಿದ್ದರು ಎಂದು ಹೇಳಿದರು.

ಶ್ರದ್ಧಾಂಜಲ್ಲಿ ಕಾರ್ಯಕ್ರಮದ ಆರಂಭದಲ್ಲಿ ಕೇಶವ ಗೌಡ ಅವರ ಭಾವ ಚಿತ್ರದ ಮುಂದೆ ದೀಪ ಪ್ರಜ್ವಲಿಸಿದರು. ಪತ್ನಿ ವಿಜಯ, ಪುತ್ರಿಯರಾದ ಸೋನ, ಸುಮನ, ಪುತ್ರ ಸೂಧನ್ ಬಿ.ಕೆ, ಅಳಿಯಂದಿರಾದ ಸತೀಶ್ ಕೆ.ಎಲ್, ನಂದಕಿಶೋರ್, ಸೊಸೆ ಹರಿಣಿ, ಸಹೋದರರಾದ ಎಚ್ ಆನಂದ ಗೌಡ, ಎಚ್ ಲಿಂಗಪ್ಪ ಗೌಡ, ಎಚ್ ಜನಾರ್ಧನ ಗೌಡ ಸಾಂತಿತಡ್ಡ, ಸಹೋದರಿ ಗಿರಿಜಾ ಸಹಿತ ಕುಟುಂಬಸ್ಥರು ಈ ಸಂದರ್ಭ ಉಪಸ್ಥಿತರಿದ್ದರು. ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲು, ಸುಳ್ಯ ಶ್ರೀ ವೆಂಕಟ್ರಮಣ ಸೊಸೈಟಿಯ ಪಿ.ಸಿ.ಜಯರಾಮ, ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ.ಬಿ ಸದಾಶಿವ ರೈ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಮಾಜಿ ಅಧ್ಯಕ್ಷ ಮನೋಹರ್ ಡಿ ವಿ, ಜಿ.ಪಂ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ತಿಮ್ಮಪ್ಪ ಗೌಡ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ರಾಮದಾಸ್ ಗೌಡ ಮತ್ತು ಶೇಖರ್ ನಾರಾವಿ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ವ್ಯವಸ್ಥಾಪಕ ನಿರ್ದೇಶಕ ಡಾ. ಯು.ಪಿ.ಶಿವಾನಂದ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ, ಒಕ್ಕಲಿಗ ಗೌಡ ಸೇವಾ ಸಂಘದ ನಾರಾಯಣ ಗೌಡ, ವಿಶ್ವನಾಥ ಗೌಡ ಕೆಯ್ಯೂರು, ಸುರೇಶ್ ಕಲ್ಲಾರೆ, ವಿಟ್ಲ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷ ಮೋನಪ್ಪ ಗೌಡ, ಮಂಗಳೂರು ಗೌಡ ಸಂಘದ ಪದಾಧಿಕಾರಿಗಳು ಸಹಿತ ಹಲವಾರು ಮಂದಿ ಈ ಸಂದರ್ಭ ಉಪಸ್ಥಿತರಿದ್ದರು.










