







ಕೋಳಿ ಉದ್ಯಮದಿಂದ ವಿಮಾನಯಾನ, ಯಶಸ್ವಿ ಹೆಜ್ಜೆ-ಡಾ.ಯು.ಪಿ ಶಿವಾನಂದ


ಪುತ್ತೂರು: ಆಧುನಿಕ ಯುಗದಲ್ಲಿ ತಂತ್ರಜ್ಞಾನ ಬದಲಾದಂತೆ ನಮ್ಮಲ್ಲಿನ ಯೋಚನೆ, ಯೋಜನೆಗಳು ಬದಲಾವಣೆಗೊಳ್ಳುವುದು ಅನಿವಾರ್ಯ. ವಿದ್ಯಾರ್ಥಿಗಳಿಗೆ ತನ್ನ ಕಲಿಕೆಯ ಜೊತೆಗೆ ಬದುಕು ಕಟ್ಟಿಕೊಡುವಲ್ಲಿ ಶ್ರಮಿಸುತ್ತಿರುವ ಅಕ್ಷಯ ಸಂಸ್ಥೆಯ ಪರಿಶ್ರಮ ಮೆಚ್ಚುವಂತಹುದು. ಅಕ್ಷಯ ಸಂಸ್ಥೆಯ ಜಯಂತ್ರವರು ಕೋಳಿ ಫಾರ್ಮ್ ಅನ್ನು ಮುನ್ನಡೆಸಿ ಇದೀಗ ವಿದ್ಯಾರ್ಥಿಗಳ ಬದುಕನ್ನು ಹಸನುಗೊಳಿಸುವ ವಿಮಾನಯಾನ ಕೋರ್ಸ್ ಗ್ರಾಮೀಣ ಪ್ರದೇಶದಲ್ಲಿ ಮುನ್ನಡೆಸುತ್ತಿರುವುದು ಬೆಳೆಯುತ್ತಿರುವ ಪುತ್ತೂರಿಗೆ ಇದು ಹೆಗ್ಗಳಿಕೆಯಾಗಿದೆ ಎಂದು ಸುದ್ದಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ಪಿ ಶಿವಾನಂದರವರು ಹೇಳಿದರು.



ದರ್ಬೆ ಬೈಪಾಸ್ ಆರಾಧ್ಯ ಆರ್ಕೇಡ್ನಲ್ಲಿ ಕಳೆದ ಕೆಲವು ವರ್ಷಗಳಿಂದ ನಡೆಸುತ್ತಾ ಬಂದಿರುವ ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ಸರಕಾರದಿಂದ ಪ್ರಮಾಣೀಕರಿಸಲ್ಪಟ್ಟ ಸಂಸ್ಥೆ ಹಾಗೂ NSDC ಮಾನ್ಯತೆ ಪಡೆದ ಸಂಸ್ಥೆಯ ವೃತ್ತಿಪರ ಕೋರ್ಸ್ಗಳು ಮತ್ತು ವೃತ್ತಿ ತರಬೇತಿ ಸಂಸ್ಥೆ ಮಂಗಳೂರಿನ ಅಕ್ಷಯ ಕೆರಿಯರ್ ಡೆಸ್ಟಿನಿ, ಮತ್ತು ಮಂಗಳೂರು ಅಭಿಜ್ಞಾ ಎಜ್ಯುಕೇಶನ್ ಪ್ರೈವೇಟ್ ಲಿಮಿಟೆಡ್ ಇವುಗಳ ಸಹಭಾಗಿತ್ವದಲ್ಲಿ ಕಾರ್ಯಾಚರಿಸುತ್ತಿರುವ “ಅಕ್ಷಯ ಕೆರಿಯರ್ ಅಕಾಡೆಮಿ” ಸಂಸ್ಥೆಯು ದರ್ಬೆ ಜಂಕ್ಷನ್ನಲ್ಲಿನ ವಿಘ್ನೇಶ್ ಕಾಂಪ್ಲೆಕ್ಸ್ಗೆ ಸ್ಥಳಾಂತರಗೊಂಡು ಆ.19 ರಂದು ಉದ್ಘಾಟನೆಗೊಂಡಿದ್ದು, ಇದರ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಅವರು ನೆರವೇರಿಸಿ ಮಾತನಾಡಿದರು. ಸುದ್ದಿಯಿಂದ ನಡೆಸಲ್ಪಡುವ ಸಸ್ಯ ಜಾತ್ರೆಗೆ ಅಕ್ಷಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಪುತ್ತೂರಿನಲ್ಲಿ ಅಕ್ಷಯ ಸಂಸ್ಥೆ ಬೆಳೆದರೆ ನಾವು ಬೆಳೆಯುತ್ತೇವೆ. ಅಕ್ಷಯ ಸಂಸ್ಥೆ ಯಾವುದೇ ಕಾರ್ಯಕ್ರಮ ನಿರ್ವಹಿಸಲಿ, ಸುದ್ದಿ ಸಂಸ್ಥೆ ನಿಮ್ಮ ಹಿಂದಿದೆ. ಸುದ್ದಿ ಸಂಸ್ಥೆ ಕೇವಲ ಪುತ್ತೂರಿಗೆ ಮಾತ್ರವಲ್ಲ, ಬೆಂಗಳೂರಿಗೂ ವಿಸ್ತರಿಸಿಕೊಂಡಿದ್ದು ಅಕ್ಷಯದ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡುವಲ್ಲಿ ನೆರವು ನೀಡಲಿದ್ದೇವೆ. ಮನಸ್ಸು ಹಾಗೂ ಯೋಚನೆಗೆ ಜಗತ್ತಿನಲ್ಲಿ ಬೇರೆ ಶಕ್ತಿಯಿಲ್ಲ. ಅಕ್ಷಯ ಸಂಸ್ಥೆ ಇದನ್ನು ಮಾಡುತ್ತಿದೆ ಎಂದರು.
ಅಕ್ಷಯ ಯೂನಿವರ್ಸಿಟಿ ಆಗಿ ಬೆಳಗಲಿ-ನಳಿನ್ ಕಟೀಲು:
ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣ ಕೊಡುವುದು ಮುಖ್ಯವಲ್ಲ, ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜೊತೆಗೆ ಅವರ ಪ್ರತಿಭೆಗಳನ್ನು ಹುಡುಕಿ ಅವರನ್ನು ಸಾಧಕರನ್ನಾಗಿಸಬೇಕು, ಸಾಧನೆ ಮಾಡುವವರಾಗಬೇಕು. ಓರ್ವ ಸಾಮಾನ್ಯ ವ್ಯಕ್ತಿತಾಗಿದ್ದ ಜಯಂತ್ರವರು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುವ ಸಾಧನೆ ಮಾಡಿರುವುದು ಎಲ್ಲರಿಗೂ ಪ್ರೇರಣೆಯಾಗಿದೆ. ಶಿಕ್ಷಣ ವ್ಯಾಪಾರೀಕರಣವಾಗುತ್ತಿದೆ ಎಂಬ ಮಾತಿಗೆ ಜಯಂತ್ ರವರು ಅಪವಾದವಾಗಿದ್ದಾರೆ. ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ವೃತ್ತಿಪರ ಶಿಕ್ಷಣ ಕೊಡಿಸುವಲ್ಲಿ ಅವರು ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿ ಅಕ್ಷಯ ವಿದ್ಯಾಸಂಸ್ಥೆ ಯೂನಿವರ್ಸಿಟಿ ಆಗಿ ಬೆಳಗಲಿ. ಶಿಕ್ಷಣದ ಕಾಶಿಯಾಗಿರುವ ದ.ಕ ಜಿಲ್ಲೆಯಲ್ಲಿ ಪುತ್ತೂರುನಲ್ಲಿ ನಿರ್ಮಾಣವಾಗಲಿರುವ ಮೆಡಿಕಲ್ ಕಾಲೇಜ್ ಸೇರಿದಂತೆ ಹನ್ನೊಂದು ಮೆಡಿಕಲ್ ಕಾಲೇಜ್ ಇರುವುದು ಶ್ಲಾಘನೀಯ ಎಂದರು.

ಅಕ್ಷಯ ಪುತ್ತೂರಿನ ವಿದ್ಯಾರ್ಥಿಗಳಿಗೆ ಪರಿವರ್ತನೆಯ ಬೆಳಕಾಗಿದೆ-ಹೇಮನಾಥ ಶೆಟ್ಟಿ:
ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಏವಿಯೇಶನ್ ಶೈಕ್ಷಣಿಕ ಕ್ಷೇತ್ರದಲ್ಲಿ ಅಕ್ಷಯ ಕೆರಿಯರ್ ಅಕಾಡೆಮಿ ಬೆಳೆಯುತ್ತಿರುವ ಪುತ್ತೂರಿನ ವಿದ್ಯಾರ್ಥಿಗಳಿಗೆ ಪರಿವರ್ತನೆಯ ಬೆಳಕಾಗಿದೆ. ಓರ್ವ ಕೃಷಿಕರಾಗಿ, ಉದ್ಯಮಿಯಾಗಿ, ಧಾರ್ಮಿಕ, ಸಾಮಾಜಿಕ ಸಂಘಟನೆಯಲ್ಲಿ ಗುರುತಿಸಿಕೊಂಡು ಇದೀಗ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಗೆ ಶೈಕ್ಷಣಿಕ ಕ್ಷೇತ್ರದಲ್ಲೂ ಕೈಯಾಡಿಸಿದ ಜಯಂತ್ರವರ ಹೆಜ್ಜೆಯನ್ನು ಮೆಚ್ಚುವಂತಹುದು. ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಇತಿಹಾಸವಿದೆ ಆದರೆ ಅಕ್ಷಯ ಸಂಸ್ಥೆಗೆ ಜಯಂತ್ರವರ ಜೀವನ ದಾರಿಯೇ ಇತಿಹಾಸವಾಗಿದೆ. ವಿಮಾನಯಾನ ಕುರಿತಾಗಿ ತರಬೇತಿ ನೀಡಿ ವಿಮಾನಯಾನ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿಕೊಡುವ ಸಂಸ್ಥೆಯ ಕೈಂಕರ್ಯ ಮೆಚ್ಚುಗೆ ಪಡೆಯುವಂತಹುದು ಎಂದರು.
ವೃತ್ತಿಪರ ಶಿಕ್ಷಣದಿಂದ ದ.ಕ ಜಿಲ್ಲೆಯಲ್ಲಿ ಜಯಂತ್ರವರು ನೆನಪಾಗುತ್ತಾರೆ-ಅರುಣ್ ಪುತ್ತಿಲ:
ಪುತ್ತಿಲ ಪರಿವಾರ ಟ್ರಸ್ಟ್ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಪುತ್ತೂರಿನ ಗ್ರಾಮೀಣ ಪ್ರದೇಶದಲ್ಲಿ ಮಂಗಳೂರು, ಬೆಂಗಳೂರಿನಲ್ಲಿನ ಏವಿಯೇಶನ್ ಉದ್ಯೋಗ ಶಿಕ್ಷಣವು ಪುತ್ತೂರಿನ ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಶುಲ್ಕದಲ್ಲಿ ದೊರಕುವಲ್ಲಿ ವ್ಯವಸ್ಥೆ ಮಾಡಿದ ಅಕ್ಷಯ ಸಂಸ್ಥೆಯ ಪಾತ್ರ ಶ್ಲಾಘನೀಯ ಮಾತ್ರವಲ್ಲ ವೃತ್ತಿಪರ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಧಿಕ್ಕನ್ನು ಅಕ್ಷಯ ಸಂಸ್ಥೆ ತೋರಿಸಿಕೊಟ್ಟಿದೆ. ಸಾಮಾಜಿಕ ಪರಿಕಲ್ಪನೆ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬದುಕು ಕಟ್ಟಿಕೊಡುವ ಶ್ರದ್ಧೆ, ಬದ್ಧತೆಯನ್ನು ಸಂಸ್ಥೆಯು ಈಗಾಗಲೇ ರೂಪಿಸಿದೆ. ಲಂಚ, ಭ್ರಷ್ಟಾಚಾರ ಮುಕ್ತ ಆಂದೋಲನದ ಮೂಲಕ ಹೇಗೆ ಸುದ್ದಿಯ ಡಾ.ಯು.ಪಿ ಶಿವಾನಂದರು ನೆನಪಾಗುತ್ತಾರೋ ಹಾಗೆಯೇ ಉದ್ಯೋಗ ಖಚಿತದೊಂದಿಗೆ ಶಿಕ್ಷಣ ಸಿಗಬೇಕು ಎನ್ನುವ ನಿಟ್ಟಿನಲ್ಲಿ ವೃತ್ತಿಪರ ಶಿಕ್ಷಣದ ಮೂಲಕ ದ.ಕ ಜಿಲ್ಲೆಯಲ್ಲಿ ಜಯಂತ್ ರವರು ನೆನಪಾಗುತ್ತಾರೆ ಎಂದ ಅವರು ಅಕ್ಷಯ ವಿದ್ಯಾಸಂಸ್ಥೆ ಯೂನಿವರ್ಸಿಟಿ ಆದ್ರೆ ಅದು ಪುತ್ತೂರು ಜಿಲ್ಲೆಯಾಗುವಲ್ಲಿ ಪೂರಕವಾಗಲಿದೆ ಎಂದರು.
ಉದ್ಯೋಗ ಸಿಗುತ್ತದೆ ಎಂಬ ಮೈಂಡ್ ಸೆಟ್ ಇರಲಿ-ದೀಪಶ್ರೀ:
ಇಂಡಿಗೋ ಕ್ಯಾಬಿನ್ ಕ್ರೂ ದೀಪಶ್ರೀ ಮಾತನಾಡಿ, ಮಂಗಳೂರು ಹಾಗೂ ಬೆಂಗಳೂರು ವಿಮಾನ ಸಂಸ್ಥೆಯಲ್ಲಿ ಹಲವಾರು ಮಂದಿ ಉದ್ಯೋಗದಲ್ಲಿದ್ದು ಅವರು ನನ್ನಲ್ಲಿ ನಾವು ಅಕ್ಷಯ ಕೆರಿಯರ್ ಅಕಾಡೆಮಿಯ ವಿದ್ಯಾರ್ಥಿಗಳು ಎಂದಾಗ ಖುಶಿಯಾಗುತ್ತದೆ. ಸಂಸ್ಥೆಯು ಏನು ಕಲಿಸುತ್ತದೆ ಅದನ್ನು ವಿದ್ಯಾರ್ಥಿಗಳು ಗ್ರ್ಯಾಬ್ ಮಾಡುವಂತಾಗಬೇಕು. ಏವಿಯೇಶನ್ ಸಂಸ್ಥೆಯಲ್ಲಿ ಹುದ್ದೆಗಳ ಅಗಾಧತೆಯೇ ಇದೆ. ವಿದ್ಯಾರ್ಥಿಗಳು ಏವಿಯೇಶನ್ ಶಿಕ್ಷಣ ಪಡೆಯಿರಿ, ತಾವು ಕಾಣುವ ಕನಸಿನ ಗುರಿ ಮುಟ್ಟಿ. ತಾನು ಕುಳ್ಳಗಿದ್ದೇನೆ ಎಂಬ ಚಿಂತೆಯಿಂದ ಹೊರ ಬನ್ನಿ. ಕ್ಯಾಬಿನ್ ಕ್ರೂನಲ್ಲಿ ಕೆಲಸ ಸಿಗದಿದ್ದರೆ ಹಾಸ್ಪಿಟಾಲಿಟಿ, ಗ್ರೌಂಡ್ ಸ್ಟಾಫ್ ನಲ್ಲಿ ಉದ್ಯೋಗ ಸಿಗುತ್ತದೆ ಎಂಬ ಮೈಂಡ್ ಸೆಟ್ ಇರಲಿ. ಉದ್ಯೋಗಕ್ಕೆ ಸಂವಹನ ಕೌಶಲ್ಯ, ವ್ಯಕ್ತಿತ್ವ ವಿಕಸನ, ಟೀಮ್ ವರ್ಕ್ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಅಕ್ಷಯ ವಿದ್ಯಾಸಂಸ್ಥೆ ವೃತ್ತಿಪರ ಕೋರ್ಸ್ಗಳ ಮಾರ್ಗದರ್ಶನ ಕೇಂದ್ರ-ಉಮೇಶ್ ನಾಯಕ್:
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ಅಕ್ಷಯ ವಿದ್ಯಾಸಂಸ್ಥೆ ವೃತ್ತಿಪರ ಕೋರ್ಸ್ಗಳ ಮಾರ್ಗದರ್ಶನ ಕೇಂದ್ರವಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಳ್ಳುವ ಪ್ರತಿ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಿದ ಸಂಸ್ಥೆಯಾಗಿದೆ ಅಕ್ಷಯ ಸಂಸ್ಥೆ. ಸಂಸ್ಥೆಯಲ್ಲಿನ ಬಲಿಷ್ಟ ಶಿಕ್ಷಕರ, ಆಡಳಿತ ಮಂಡಳಿಯ ಒಗ್ಗೂಡುವಿಕೆಯಿಂದ ಸಂಸ್ಥೆಯು ಈ ಮಟ್ಟಕ್ಕೆ ಬೆಳೆದಿದೆ ಜೊತೆಗೆ ವಿದ್ಯಾರ್ಥಿಗಳ ಕಲಿಕೆಗೆ ಮುಕ್ತ ಸ್ವಾತಂತ್ರ್ಯ, ಪ್ರೀತಿಯನ್ನು ವಿದ್ಯಾಸಂಸ್ಥೆ ಕಲಿಸಿ ಕೊಟ್ಟಿದೆ. ಅತಿಯಾದ ಜಯ ಜಯಂತ್ಗಿದೆ ಮಾತ್ರವಲ್ಲ ತುಂಬಿ ತುಳುಕುವ ಅಕ್ಷಯ ಪಾತ್ರೆಯೂ ಇದೆ. ಪುತ್ತೂರಿನ ಬೆಳವಣಿಗೆಯಲ್ಲಿ ಪೂರಕವಾಗಿ ಈ ಸಂಸ್ಥೆ ಬೆಳೆಯುತ್ತಿದೆ ಎಂದರು.
ವಿದ್ಯೆ ಜೊತೆಗೆ ಉದ್ಯೋಗಕ್ಕೆ ಪೂರಕವಾದ ಕೌಶಲ್ಯ ಒದಗಿಸುವ ಸಂಸ್ಥೆ-ದೇವಿಚರಣ್ ರೈ:
ವಿವೇಕಾನಂದ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ದೇವಿಚರಣ್ ರೈ ಮಾತನಾಡಿ, ಎಲ್ಲಾ ಶಿಕ್ಷಣ ಸಂಸ್ಥೆಗಳು ವಿದ್ಯೆ ಕೊಡ್ತಾರೆ ಆದರೆ ವಿದ್ಯೆ ಜೊತೆಗೆ ಉದ್ಯೋಗಕ್ಕೆ ಪೂರಕವಾದ ಕೌಶಲ್ಯ ಒದಗಿಸಿ ಕೊಡುವಲ್ಲಿನ ಕೆಲವೇ ಸಂಸ್ಥೆಗಳ ಪೈಕಿ ಅಕ್ಷಯ ಕಾಲೇಜು ಒಂದಾಗಿದೆ. ಕಲಿಕೆಗೆ ಪೂರಕವಾದ ಇಂತಹ ಅಕಾಡೆಮಿ ಇದ್ದಾಗ ವಿದ್ಯಾರ್ಥಿಗಳ ಮುಂದಿನ ಜೀವನದಲ್ಲಿನ ಕಲ್ಪನೆಗಳು ಸಾಕಾರಗೊಳ್ಳುವಲ್ಲಿ ಕಾರಣವಾಗುತ್ತದೆ. ಮುಂದಿನ ವರ್ಷಗಳಲ್ಲಿ ಸಂಸ್ಥೆಯು ಮತ್ತಷ್ಟು ಸಾಧನೆ ಮಾಡುವಂತಾಗಲಿ ಎಂದರು.

ವಿಘ್ನೇಶ್ ಕಾಂಪ್ಲೆಕ್ಸ್ ಮಾಲಕ ದಿನೇಶ್ ಪಿ., ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಕಲಾವತಿ ಜಯಂತ್, ಕಾರ್ಯದರ್ಶಿ ಅಕ್ಷಯ ನಡುಬೈಲುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕ್ಷಯ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮಂಗಳೂರು ಅಕ್ಷಯ ಕೆರಿಯರ್ ಅಕಾಡೆಮಿಯ ಸಂಸ್ಥಾಪಕಿ ಜಯಶ್ರೀರವರು ಅಕ್ಷಯ ವಿದ್ಯಾಸಂಸ್ಥೆ ನಡೆದುಬಂದ ಹಾದಿ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ್ ನಡುಬೈಲುರವರು ಸ್ವಾಗತಿಸಿ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ ವಂದಿಸಿದರು. ಅಕ್ಷಯ ಕಾಲೇಜು ಪ್ರಾಂಶುಪಾಲ ಸಂಪತ್ ಪಿ.ಪಕ್ಕಳ, ಅಕ್ಷಯ ಕೆರಿಯರ್ ಅಕಾಡೆಮಿಯ ಭರತ್ ಓತ್ಲಾಜೆ, ಅಕ್ಷಯ ಕಾಲೇಜು ಉಪ ಪ್ರಾಂಶುಪಾಲ ರಕ್ಷಣ್ ಟಿ.ಆರ್, ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ನಾರಾಯಣನ್ ಪಿ.ವಿ, ಪ್ರೊ|ಝೇವಿಯರ್ ಡಿ’ಸೋಜರವರುಗಳು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಮಂಗಳೂರು ಅಭಿಜ್ಞಾ ಎಜ್ಯುಕೇಶನ್ ಪ್ರೈವೇಟ್ ಲಿಮಿಟೆಡ್ನ ಅಭಿಲಾಷ್ ಕ್ಷತ್ರೀಯ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿನಯ್ ಸುವರ್ಣ, ಸುಭಾಷ್ ರೈ ಬೆಳ್ಳಿಪ್ಪಾಡಿ, ಉದ್ಯಮಿ ಜಯಕುಮಾರ್ ನಾಯರ್, ಭಾರತ್ ಬ್ಯಾಂಕ್ ಮ್ಯಾನೇಜರ್ ಸುಶಾಂತ್, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಉಪಾಧ್ಯಕ್ಷ ಚಿದಾನಂದ ಸುವರ್ಣ, ಕಾರ್ಯದರ್ಶಿ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್, ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಮಾಜಿ ಕಾರ್ಯ ನಿರ್ವಹಣಾಧಿಕಾರಿ ಆರ್.ಸಿ ನಾರಾಯಣ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ರವಿಕುಮಾರ್ ರೈ, ಕಾರ್ಯದರ್ಶಿ ಜಯಂತ್ ಬಾಯಾರ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯಕುಮಾರ್ ಸೊರಕೆ, ದಿ ಪುತ್ತೂರು ಕ್ಲಬ್ ನಿರ್ದೇಶಕರಾದ ವಿಶ್ವಾಸ್ ಶೆಣೈ, ನಿತಿನ್ ಪಕ್ಕಳ, ಬೂಡಿಯಾರು ರಾಧಾಕೃಷ್ಣ ರೈ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಪೂರ್ವಾಧ್ಯಕ್ಷ ಪುರಂದರ ರೈ ಮಿತ್ರಂಪಾಡಿ, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಮಾಜಿ ಅಧ್ಯಕ್ಷೆ ವೇದಾವತಿ ರಾಜೇಶ್ ಸಹಿತ ಹಲವರು ಉಪಸ್ಥಿತರಿದ್ದರು.
18ರಿಂದ ಪ್ರಸ್ತುತ ಸಾವಿರ ವಿದ್ಯಾರ್ಥಿಗಳು..
2019ರಲ್ಲಿ ಕೇವಲ 18 ವಿದ್ಯಾರ್ಥಿಗಳಿಂದ ಆರಂಭವಾದ ಈ ಅಕ್ಷಯ ಶಿಕ್ಷಣ ಸಂಸ್ಥೆಯಲ್ಲಿ ವೃತ್ತಿಪರ ಪದವಿ ಕೋರ್ಸುಗಳು, ಪದವಿ ಪೂರ್ವ ಶಿಕ್ಷಣ, ಅಕ್ಷಯ ಕೆರಿಯರ್ ಅಕಾಡೆಮಿ, ಅಕ್ಷಯ ಕೆರಿಯರ್ ಡೆಸ್ಟಿನಿ, ಸರ್ಟಿಫಿಕೇಟ್ ಕೋರ್ಸ್ಗಳು, ಏವಿಯೇಶನ್ ಕೋರ್ಸ್ ಹೀಗೆ ಹಲವು ವೃತ್ತಿಪರ ಕೋರ್ಸ್ಗಳಲ್ಲಿ ಪ್ರಸ್ತುತ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶೇ.ನೂರು ಉದ್ಯೋಗ ದೊರಕಿಸಿಕೊಡುವುದು ಸಂಸ್ಥೆಯ ಧ್ಯೇಯವಾಗಿದ್ದು ಇದರೊಂದಿಗೆ ಉತ್ತಮ ಅಂಕ ಪಡೆದವರಿಗೆ ಕಡಿಮೆ ಶುಲ್ಕದೊಂದಿಗೆ ವಿದ್ಯಾಭ್ಯಾಸವನ್ನು ಸಂಸ್ಥೆ ನೀಡುತ್ತಿದೆ. ಏವಿಯೇಶನ್ ಕೋರ್ಸ್ಗಳಿಗೆ ವಿದ್ಯಾರ್ಥಿಗಳು ಮಂಗಳೂರು, ಬೆಂಗಳೂರಿಗೆ ಹೋಗಬೇಕಾಗಿಲ್ಲ. ಕಡಿಮೆ ಶುಲ್ಕದಲ್ಲಿ ಪುತ್ತೂರಿನ ನಮ್ಮ ಸಂಸ್ಥೆಯಲ್ಲಿಯೇ ವ್ಯಾಸಂಗ ಮಾಡಬಹುದಾಗಿದೆ.
-ಜಯಂತ್ ನಡುಬೈಲು, ಅಧ್ಯಕ್ಷರು, ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳು
‘ಸುದ್ದಿ’ಯಿಂದ ಲಂಚ, ಭೃಷ್ಟಾಚಾರ ಮುಕ್ತ
ಆಂದೋಲನ ಫಲಕ..
ಲಂಚ, ಭೃಷ್ಟಾಚಾರ ನಿರ್ಮೂಲನೆಯೇ ದೊಡ್ಡ ಜನಸೇವೆ ಮತ್ತು ದೇಶಸೇವೆ. ಉತ್ತಮ ಸೇವೆಗೆ ಪುರಸ್ಕಾರ, ಲಂಚ, ಭೃಷ್ಟಾಚಾರಕ್ಕೆ ಬಹಿಷ್ಕಾರ. ಲಂಚ ಎಂದರೆ ದರೋಡೆ, ಭ್ರಷ್ಟಾಚಾರ ಎಂದರೆ ದೇಶದ್ರೋಹ. ಲಂಚ, ಭ್ರಷ್ಟಾಚಾರ ಮುಕ್ತ ಊರು, ತಾಲೂಕು, ರಾಜ್ಯ, ದೇಶ ನಮ್ಮದಾಗಲಿ ಎಂಬ ಮತದಾರರ, ಜನ ಜಾಗೃತಿ ಆಂದೋಲನ ಫಲಕವನ್ನು ಸುದ್ದಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕಾ ನಿರ್ದೇಶಕರಾಗಿರುವ ಡಾ.ಯು.ಪಿ ಶಿವಾನಂದರವರು ವೇದಿಕೆಯಲ್ಲಿನ ಗಣ್ಯರಿಗೆ ನೀಡಿ ಪ್ರದರ್ಶಿಸಲಾಯಿತು.










