







ನೆಲ್ಯಾಡಿ: ಕಡಬ ತಾಲೂಕಿನ ಕೊಣಾಲು ಗ್ರಾಮದ ಎಣ್ಣೆತ್ತೋಡಿ ನಿವಾಸಿ ಕೊರಗಪ್ಪ ಗೌಡ (70ವ.)ಅವರು ಆ.19ರಂದು ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.


ಕೊರಗಪ್ಪ ಗೌಡ ಅವರು ಕೃಷಿಯ ಜೊತೆಗೆ ಕೊಣಾಲು ಗ್ರಾಮದ ಪಾಂಡಿಬೆಟ್ಟು ಎಂಬಲ್ಲಿ ಅಂಗಡಿ ಹೊಂದಿದ್ದು ದಿನಸಿ ಸಾಮಾಗ್ರಿಗಳ ವ್ಯಾಪಾರ ಮಾಡುತ್ತಿದ್ದರು. ಆ.19ರಂದು ಸಂಜೆ 5 ಗಂಟೆ ವೇಳೆಗೆ ಅಂಗಡಿಯಿಂದ ತನ್ನ ಸ್ಕೂಟಿಯಲ್ಲಿ ಮನೆಗೆ ಬಂದವರು ಮನೆಯ ಅಂಗಳದಲ್ಲಿ ಸ್ಕೂಟಿ ನಿಲ್ಲಿಸುತ್ತಿದ್ದಂತೆ ನಿತ್ರಾಣಗೊಂಡಿದ್ದರು. ತಕ್ಷಣ ಮನೆಯವರು ಉಪಚರಿಸಿ ಚಿಕಿತ್ಸೆಗಾಗಿ ನೆಲ್ಯಾಡಿ ಅಶ್ವಿನಿ ಆಸ್ಪತ್ರೆ ಕರೆದೊಯ್ದರು. ಆದರೆ ಆ ವೇಳೆಗಾಗಲೇ ಕೊರಗಪ್ಪ ಗೌಡ ಅವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದರು ಎಂದು ವರದಿಯಾಗಿದೆ. ಕೊರಗಪ್ಪ ಗೌಡ ಅವರು ಹಲವು ವರ್ಷಗಳಿಂದ ಪಾಂಡಿಬೆಟ್ಟುನಲ್ಲಿ ಸ್ವಂತ ಅಂಗಡಿಯಲ್ಲಿ ದಿನಸಿ ವ್ಯಾಪಾರ ಮಾಡುತ್ತಿದ್ದರು. ಕೊಣಾಲು ಗ್ರಾಮದಲ್ಲಿ ಸುದ್ದಿಪತ್ರಿಕೆಯ ಏಜೆಂಟ್ ಕಾರ್ಯನಿರ್ವಹಿಸುತ್ತಿದ್ದ ಅವರು ಸ್ಥಳೀಯವಾಗಿ ಪತ್ರಿಕೆ ವಿತರಣೆ ಮಾಡುತ್ತಿದ್ದರು. ಕೊಣಾಲು ಭಜನಾ ಮಂದಿರ, ಕಡೆಂಬಿಲತ್ತಾಯ ಗುಡ್ಡೆ ದೈವಸ್ಥಾನ, ಕೊಣಾಲು ಶಾಲೆ ಸಹಿತ ಊರಿನಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರದೊಂದಿಗೆ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.



ಮೃತರು ಪತ್ನಿ ಯಮುನಾ, ಪುತ್ರ ಮನೋಜ್, ಸೊಸೆ ಪವಿತ್ರ, ಪುತ್ರಿ ಭವ್ಯ, ಅಳಿಯ ಪ್ರವೀಣ್ ಮಣ್ಣಮಜಲು, ಸಹೋದರರಾದ ಮುತ್ತಪ್ಪ ಗೌಡ ಎಣ್ಣೆತ್ತೋಡಿ, ಡೊಂಬಯ್ಯ ಗೌಡ ಎಣ್ಣೆತ್ತೋಡಿ, ಸಹೋದರಿಯರಾದ ನೀಲಮ್ಮ ಸಂಕೇಶ ಹಿರೇಬಂಡಾಡಿ, ಪುಷ್ಪಾವತಿ ಕಿಂಡೋವು ಪೆರಿಯಡ್ಕ ಅವರನ್ನು ಅಗಲಿದ್ದಾರೆ.
ಮೃತರ ಮನೆಗೆ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಉಪಾಧ್ಯಕ್ಷ ರವಿಚಂದ್ರ ಗೌಡ ಹೊಸವಕ್ಲು, ನಿರ್ದೇಶಕ ಭಾಸ್ಕರ ರೈ ತೋಟ, ಮಾಜಿ ಉಪಾಧ್ಯಕ್ಷ ಕಮಲಾಕ್ಷ ಪಂಡಿತ್, ನಿವೃತ್ತ ಮ್ಯಾನೇಜರ್ ಸೆಬಾಸ್ಟಿಯನ್ ಪಿ.ಜೆ., ವಿಶ್ರಾಂತ ಪ್ರಾಂಶುಪಾಲ ವಿಠಲ ರೈ ಕೊಣಾಲುಗುತ್ತು, ನೆಲ್ಯಾಡಿ ಗ್ರಾ.ಪಂ.ಮಾಜಿ ಸದಸ್ಯರಾದ ರವಿಪ್ರಸಾದ್ ಶೆಟ್ಟಿ ರಾಮನಗರ, ಸುಂದರ ಗೌಡ ಅತ್ರಿಜಾಲು, ಗೋಳಿತ್ತೊಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷ ಜನಾರ್ದನ ಗೌಡ ಪಟೇರಿ, ಡಿಸಿಸಿ ಬ್ಯಾಂಕ್ ನಿಂತಿಕಲ್ ಶಾಖಾ ಸಹಾಯಕ ವ್ಯವಸ್ಥಾಪಕ ರಕ್ಷಿತ್, ಪ್ರಮುಖರಾದ ರಾಮಣ್ಣ ಗೌಡ ನೆಲ್ಯಾಡಿ, ಮುತ್ತಪ್ಪ ಗೌಡ ಪಡಿಪಂಡ, ಆನಂದ ಗೌಡ ಕೊಳಕ್ಕೆ, ನೋಣಯ್ಯ ಗೌಡ ಡೆಬ್ಬೇಲಿ, ಮುಕುಂದ ಗೌಡ ಗೌರ‍್ಲೆ, ದಿನೇಶ್ ಗೌಡ ಕೋಲ್ಪೆ ಸೇರಿದಂತೆ ಹಲವು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.










