







ಪುತ್ತೂರು: ವಿದ್ಯಾರ್ಥಿ ಜೀವನದಲ್ಲಿ ಪಾಠ ಮತ್ತು ಪಠ್ಯೇತರ ವಿಷಯಗಳಿಗೆ ಸಮಾನ ಆದ್ಯತೆಯನ್ನು ನೀಡಬೇಕು. ನಿಮ್ಮ ಕಲಿಕೆ ಇಂದಿನಿಂದಲೇ ಪ್ರಾರಂಭವಾಗುತ್ತದೆ ಮತ್ತು ಇಲ್ಲಿ ಕಲಿಯುವ ಪ್ರತಿಯೊಂದು ವಿಷಯಗಳೂ ಅಗತ್ಯವಾದದ್ದು ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಾವರ್ಕರ್ ಸಭಾ ಭವನದಲ್ಲಿ ನಡೆದ ೨೦೨೬ನೇ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪುನಶ್ಚೇತನಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತಾಡಿದರು. ನಿಮ್ಮನ್ನು ಪರಿಪೂರ್ಣ ಇಂಜಿನಿಯರನ್ನಾಗಿಸುವ ಜತೆಯಲ್ಲಿ ಸಾಮಾಜಿಕ ಬದ್ದತೆಯುಳ್ಳ ದೇಶಪ್ರೇಮಿ ನಾಗರಿಕರನ್ನಾಗಿಸುವ ಜವಾಬ್ಧಾರಿಯೂ ನಮಗಿದೆ ಅದಕ್ಕೆ ಹೆತ್ತವರ ಸಹಕಾರವೂ ಅಗತ್ಯವಾಗಿದೆ ಎಂದರು. ಒಳಿತು ಕೆಡುಕುಗಳು ಎಲ್ಲಾ ಕಡೆ ಸಾಮಾನ್ಯ ಆದರೆ ಒಳಿತಿನ ಬಗ್ಗೆ ಇತರರಿಗೆ ತಿಳಿಸುತ್ತಾ ಕೆಡುಕುಗಳ ಬಗ್ಗೆ ನಮ್ಮ ಜತೆ ಚರ್ಚಿಸಿ ಪರಿಹಾರವನ್ನು ಕಂಡುಕೊಳ್ಳಿ ಎಂದರು.
ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕಿ ಶ್ರೀಮತಿ ವಿದ್ಯಾ.ಆರ್.ಗೌರಿ ಮಾತನಾಡಿ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಂಡು ಅದಕ್ಕೆ ಬೇಕಾದ ತಂತ್ರಜ್ಞಾನವನ್ನು ಕಂಡುಹಿಡಿಯುವವನು ನಿಜವಾದ ಇಂಜಿನಿಯರ್ ಎನಿಸಿಕೊಳ್ಳುತ್ತಾನೆ ಎಂದರು. ಆಧುನಿಕ ಕಾಲಘಟ್ಟದಲ್ಲಿ ಕ್ಷಣ ಕ್ಷಣವೂ ಹೊಸತನ್ನು ಕಲಿಯುವುದಕ್ಕೆ ಅವಕಾಶವಿದೆ ಅದನ್ನು ಕಲಿಯುವ ಮನಸ್ಸು ಇರಬೇಕು ಎಂದರು.
ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ ಮಾತನಾಡಿ ನಮ್ಮದು ಇಂಜಿನಿಯರ್ಗಳನ್ನು ತಯಾರಿಸುವ ಫ್ಯಾಕ್ಟ್ರಿ ಅಲ್ಲ. ಬದಲಾಗಿ ಉತ್ತಮ ತಾಂತ್ರಿಕ ಶಿಕ್ಷಣದೊಂದಿಗೆ ಸಮಾಜದ ಸವಾಲನ್ನು ಎದುರಿಸಲು ಬೇಕಾದ ಜೀವನ ಮೌಲ್ಯಗಳು, ಸಂಸ್ಕಾರ ಸಂಸ್ಕೃತಿಗಳನ್ನೂ ಕಲಿಸುತ್ತೇವೆ ತನ್ಮೂಲಕ ದೇಶದ ಪ್ರಜ್ಞಾವಂತ ನಾಗರಿಕರನ್ನಾಗಿ ರೂಪಿಸುವ ಕೆಲಸವನ್ನೂ ಮಾಡುತ್ತೇವೆ ಎಂದರು. ಇದೀಗ ಮೊಬೈಲ್ ಬಳಕೆ ಸಾಮಾನ್ಯವಾಗಿದೆ. ಅದರಿಂದ ಎಷ್ಟು ಅನುಕೂಲತೆಗಳಿವೆಯೋ ಅದರ ಅಡ್ಡಪರಿಣಾಮಗಳೂ ಸಾಕಷ್ಟಿವೆ. ಪೋಷಕರೆಲ್ಲರೂ ಮಕ್ಕಳ ಮೊಬೈಲ್ ಬಳಕೆಯ ಬಗ್ಗೆ ನಿಗಾ ವಹಿಸಬೇಕು ಎಂದರು. ವಿದ್ಯಾರ್ಥಿಗಳಿಗೆ ಕಲಿತ ವಿದ್ಯಾಸಂಸ್ಥೆ, ಕಲಿಸಿದ ಗುರುಗಳು ಮತ್ತು ಮಾತಾಪಿತರ ಮೇಲೆ ಗೌರವವಿರಲಿ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ಪ್ರಸನ್ನ.ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಪರೀಕ್ಷಾ ವಿಧಾನಗಳು, ಆಂತರಿಕ ಮೌಲ್ಯಮಾಪನ, ಹಾಜರಾತಿ ಹಾಗೂ ಕಾಲೇಜಿನ ನಿಯಮ ಮತ್ತು ನಿಬಂಧನೆಗಳ ಬಗ್ಗೆ ಮಾಹಿತಿ ನೀಡಿದರು.
ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ಪ್ರವೇಶ, ಉದ್ಯೋಗ ಮತ್ತು ನೇಮಕಾತಿ ವಿಭಾಗದ ಮುಖ್ಯಸ್ಥೆ ಪ್ರೊ.ವಂದನಾ ಶಂಕರ್, ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ, ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎರಡು ಅವಧಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್, ಡಾಟಾ ಸೈನ್ಸ್ ಮತ್ತು ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ಮತ್ತು ಪೋಷಕರು, ಅಪರಾಹ್ನ ಕಂಪ್ಯೂಟರ್ ಸೈನ್ಸ್, ಇಲೆಕ್ಟ್ರಾನಿಕ್ಸ್ ಮತ್ತು ಸಿವಿಲ್ ವಿಭಾಗದ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದರು. ಮೂಲ ವಿಜ್ಞಾನ ವಿಭಾಗದ ಸಂಯೋಜಕರಾದ ಡಾ.ಶ್ವೇತಾಂಬಿಕಾ.ಪಿ ಮತ್ತು ಪ್ರೊ.ತೇಜಸ್ವಿನಿ.ಎಲ್.ಪಿ ಸ್ವಾಗತಿಸಿ, ಡಾ.ರವೀಶ್ ಹಾಗೂ ಪ್ರೊ.ಮಾಧವಿ ಪೈ ವಂದಿಸಿದರು. ಪ್ರೊ.ಶ್ರೀಶರಣ್ಯ.ಯು.ಆರ್, ಪ್ರೊ.ನಿಖಿತಾ, ಪ್ರೊ.ರೇಷ್ಮಾ ಮತ್ತು ಪ್ರೊ.ಅನುಪಮಾ.ಟಿ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ.ರಮಾನಂದ ಕಾಮತ್, ಡಾ.ಚೇತನ್.ಪಿ.ಡಿ, ಪ್ರೊ.ರವಿಶಂಕರ್, ಪ್ರೊ.ಸಂಯಕ್ತ್ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.












