







ಪುತ್ತೂರು: ಅಡಿಕೆಯನ್ನು ಪ್ರಮುಖ ಬೆಳೆಯಾಗಿ ಬೆಳೆಯುತ್ತಿರುವ ಮತ್ತು ಕಾಳುಮೆಣಸು ಹಾಗೂ ಕಾಫಿಬೆಳೆಯಲ್ಲಿ ತೊಡಗಿಸಿಕೊಂಡ ಹಾಗೂ ಭವಿಷ್ಯದಲ್ಲಿ ಆ ಬಗೆಗೆ ಚಿಂತನೆ ನಡೆಸಲಿರುವವರನ್ನು ಲಕ್ಷ್ಯವಾಗಿರಿಸಿಕೊಂಡು ದಕ್ಷಿಣಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಕಾಳುಮೆಣಸು, ಅಡಿಕೆ ಹಾಗೂ ಕಾಫಿ ಬೆಳೆಗಾರರ ಒಕ್ಕೂಟ, ವಿಟ್ಲ-ಪುತ್ತೂರು ಹಾಗೂ ಸುದ್ದಿ ಅರಿವು ಮಾಹಿತಿ ಕೇಂದ್ರ ಪುತ್ತೂರು ಇದರ ಜಂಟಿ ಸಹಯೋಗದಲ್ಲಿ ಆಗಸ್ಟ್ 23ರಂದು ಮುಕ್ರಂಪಾಡಿ ಸುಭದ್ರಾ ಕಲ್ಯಾಣ ಮಂಟಪದಲ್ಲಿ ಒಂದು ದಿನದ ಕಾಳುಮೆಣಸು, ಅಡಿಕೆ ಮತ್ತು ಕಾಫಿ ಬೆಳೆಗಾರರ ಮಾಹಿತಿ ಶಿಬಿರ ಹಾಗೂ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಶಶಿ ಭಟ್ ಪಡಾರು ತಿಳಿಸಿದರು.
ಆ.20ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಹಲವಾರು ಪ್ರದೇಶಗಳಲ್ಲಿ ಕೃಷಿಕರು ಪರಂಪರಾನುಗತವಾಗಿ ಅಡಿಕೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಜತೆಗೆ ಉಪಬೆಳೆಗಳಾಗಿ ಬಾಳೆ ಕೃಷಿ, ತೆಂಗಿನ ಕೃಷಿ, ತರಕಾರಿ ಕೃಷಿ, ರಬ್ಬರ್ ಕೃಷಿಯೊಂದಿಗೆ ಇತ್ತೀಚೆಗೆ ಕಪ್ಪು ಬಂಗಾರವೆಂದೇ ಪರಿಗಣಿಸಲ್ಪಡುತ್ತಿರುವ ಕರಿಮೆಣಸಿನ ಬೆಳೆಯನ್ನೂ ಬೆಳೆಯುತ್ತಿದ್ದಾರೆ. ಹಲವಾರು ಮಂದಿ ಅಡಿಕೆ ಮರಗಳಲ್ಲಿ ಅಲ್ಲದೆ ಸಿಮೆಂಟ್ ಕಂಬಗಳಲ್ಲಿ, ದೂಪ, ಸಿಲ್ವರ್ ಓಕ್ ಮರಗಳಲ್ಲಿ, ಪಿವಿಸಿ ಪೈಪ್ಗಳಲ್ಲೂ ಕಾಳುಮೆಣಸಿನ ಕೃಷಿ ನಡೆಸುತ್ತಿದ್ದಾರೆ. ಇದರೊಂದಿಗೆ ಮಡಿಕೇರಿ, ಚಿಕ್ಕಮಗಳೂರು ಭಾಗದಲ್ಲಷ್ಟೇ ವ್ಯಾಪಕವಾಗಿದ್ದ ಕಾಫಿಬೆಳೆಯ ಬಗೆಗೂ ಕರಾವಳಿಯ ಕೃಷಿಕರು ಆಸಕ್ತಿ ತೋರುತ್ತಿದ್ದಾರೆ. ಇದರೊಂದಿಗೆ ಅಡಿಕೆಗೆ ಬಾಧಿಸುತ್ತಿರುವ ಕೊಳೆರೋಗ, ಹಳದಿ ರೋಗ, ಎಲೆಚುಕ್ಕಿ ರೋಗ, ಎಳೆ ನಳ್ಳಿ ಉದುರುವಿಕೆಯೇ ಮೊದಲಾದ ಸಮಸ್ಯೆಗಳು, ನಿರೀಕ್ಷಿತ ಬೆಳೆಯಲ್ಲಿನ ಕೊರತೆಗಳಿಂದ ಅಡಿಕೆ ಬೆಳೆಗಾರರು ಕಂಗೆಡುತ್ತಿದ್ದಾರೆ. ಹಾಗಾಗಿ ಅಡಿಕೆ ಬೆಳೆಯನ್ನು ಉಳಿಸುವುದು ಹಾಗೂ ಪರ್ಯಾಯ ಬೆಳೆಗಳಾದ ಕಾಳುಮೆಣಸು, ಕಾಪಿಗಳೆಡೆಗೆ ಗಮನ ಹರಿಸುವುದು ಎರಡೂ ಕೂಡ ಬೆಳೆಗಾರರಿಗಿಂದು ಮುಖ್ಯವೆನಿಸತೊಡಗಿದೆ ಈ ಹಿನ್ನಲೆಯಲ್ಲಿ ಮಾಹಿತಿ ಶಿಬಿರ, ಸಮಾವೇಶ ಆಯೋಜಿಸಲಾಗುತ್ತಿದೆ ಎಂದರು.


ವಿವಿಧ ಗಣ್ಯರು, ಸಂಪನ್ಮೂಲ ವ್ಯಕ್ತಿಗಳು ಭಾಗಿ:
ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಸ್ಪೈಸಿ ಬೋರ್ಡ್ನ ವಿಶ್ರಾಂತ ವಿಜ್ಞಾನಿ ಡಾ.ವೇಣುಗೋಪಾಲ್ರವರು ಅಡಿಕೆ ಕೃಷಿ, ಗೊಬ್ಬರ ಹಾಗೂ ಎಲೆಚುಕ್ಕಿ ನಿರ್ವಹಣೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಸೆವೆನ್ ಬೀನ್ ಟೀಮ್ ಮುಖ್ಯಸ್ಥರಾದ ಡಾ.ಎಚ್.ಎಸ್. ಧರ್ಮರಾಜ್ ಸಕಲೇಶಪುರರವರು ಕಾಳುಮೆಣಸು ಹಾಗೂ ಕಾಫಿ ಕೃಷಿ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅಡಿಕೆ ಪತ್ರಿಕೆ ಪ್ರಕಾಶಕರಾದ ಪಡಾರು ರಾಮಕೃಷ್ಣ ಶಾಸ್ತ್ರಿಯವರು ಅಡಿಕೆ ಜೊತೆ ಮಿಶ್ರ ಬೆಳೆಯಾಗಿ ಕೊಕ್ಕೋ ಬೆಳೆಯುವ ಮತ್ತು ನಿರ್ವಹಣೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಸಾಗರ ತಾಲೂಕಿನ ಬಾಬುಲ್ ಸಾಬ್ರವರು ದೂಪದ ಗಿಡಗಳಲ್ಲಿ ಕಾಳುಮೆಣಸು ಜೊತೆಗೆ ಮಿಶ್ರ ಬೆಳೆಯಾಗಿ ಕಾಫಿ, ದೂಪದ ಅಂಟು ತೆಗೆಯುವಿಕೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಉಪನ್ಯಾಸದ ಬಳಿಕ ಸಂಪನ್ಮೂಲ ವ್ಯಕ್ತಿಗಳೊಡನೆ ಪ್ರಶೋತ್ತರಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದರು. ಪ್ರಗತಿಪರ ಕೃಷಿಕರಾದ ಅಜಿತ್ ಪ್ರಸಾದ್ ರೈ ಹಾಗೂ ಚಂದ್ರಶೇಖರ ತಾಳ್ತಜೆ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೆ., ಸುದ್ದಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ.ಯು.ಪಿ. ಶಿವಾನಂದ, ಹವ್ಯಾಸಿ ಅಡಿಕೆ ಮಾರುಕಟ್ಟೆ ಸಾಮಾಜಿಕ ಜಾಲತಾಣ ವಿಶ್ಲೇಷಕ ಮಹೇಶ್ ಅಜ್ಜಿಮನೆ ಗೌರವ ಉಪಸ್ಥಿತರಿರಲಿದ್ದಾರೆ. ಸುವರ್ಣ ಏಷ್ಯಾನೆಟ್ ವಾಹಿನಿಯವರಿಂದ ಈ ಬಾರಿಯ ರೈತ ರತ್ನ ಪ್ರಶಸ್ತಿ ಸ್ವೀಕರಿಸಿರುವ ಕಲ್ಮಡ್ಕದ ಟಿ.ಆರ್.ಎಸ್. ಫಾರ್ಮ್ ಟಿ.ಆರ್.ಸತೀಶ್ಚಂದ್ರ ತೊಟ್ಟಿತ್ತೋಡಿ. ಹವ್ಯಾಸಿ ಹವಾಮಾನ ವೀಕ್ಷಕ ಸಾಯಿಶೇಖರ್ ಬಿ. ಕರಿಕ್ಕಳ, ಮುಳಿಯದ ಬೈಕುಂಜೆ ಫಾರ್ಮ್ ಬಿ.ಜಿ. ಬಲರಾಮ್ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಸೆವೆನ್ ಬೀನ್ ಟೀಮ್ ಮುಖ್ಯಸ್ಥ ಎಚ್.ಎಸ್.ಧರ್ಮರಾಜ್ ಅವರಿಗೆ ಸನ್ಮಾನ ನಡೆಯಲಿದೆ ಎಂದರು.



ಯುವಕೃಷಿಕರ ಸಮ್ಮಲನ:
ಅಪರಾಹ್ನ ಭೋಜನದ ನಂತರ ಯುವ ಕೃಷಿಕರ ಸಮ್ಮಿಲನ ಕಾರ್ಯಕ್ರಮ ನಡೆಯಲಿದ್ದು, ಐಪಿಎಲ್ ಮುಖ್ಯಸ್ಥ ಸತ್ಯಪ್ರಕಾಶ್ ಅಧ್ಯಕ್ಷತೆ ವಹಿಸಿ ಕಾಫಿ, ಕಾಳುಮೆಣಸು ಹಾಗೂ ಅಡಿಕೆ ಕೃಷಿ ನಿರ್ವಹಣೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಪುತ್ತೂರು ಕಿಸಾನ್ ಆಗ್ರೋ ಟೂಲ್ಸ್ ಮಾಲಕ, ಯೂಟ್ಯೂಬರ್ ಅಭಿಜಿತ್, ಪ್ರಗತಿಪರ ಕೊಕ್ಕೋ ಬೆಳೆಗಾರ ನವೀನಕೃಷ್ಣ ಶಾಸ್ತಿ, ಅನನಾಸು ಬೆಳೆಗಾರ ವಿಶ್ವೇಶ್ವರ ಭಟ್ ಪಂಜೆ ಮುಣ್ಣಿಕಾನ, ಕುರುವೇರಿ ಕ್ಯಾಶ್ ಇಂಡಸ್ಟ್ರೀಸ್ನ ವಿಶ್ವ ಕೇಶವ, ಪ್ರಗತಿಪರ ಯುವ ಅಡಿಕೆ ಬೆಳೆಗಾರ ಸುಧೀರ್ ಕೃಷ್ಣ ಪಡಾರುರವರು ಕೋಕ್ಕೋ ಮೌಲ್ಯವರ್ಧನೆ, ಹಲಸು ಮೌಲ್ಯವರ್ಧನೆ, ಗೋಡಂಬಿ ಮೌಲ್ಯವರ್ಧನೆ, ಚಾಕೋಲೇಟ್ ಉತ್ಪಾದನೆ ಮೊದಲಾದ ವಿಚಾರಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಬೆಳಿಗ್ಗೆ ಉಪಾಹಾರ ಹಾಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆ ಇರುತ್ತದೆ. ಸುಭದ್ರಾ ಸಭಾ ಮಂದಿರದ ಸನಿಹದಲ್ಲಿನ ಹನುಮ ವಿಹಾರದ ವಿಶಾಲ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಗಿಡಗಳ ಪ್ರದರ್ಶನ ಹಾಗೂ ಮಾರಾಟ:
ಸಮಾವೇಶದಲ್ಲಿ ಸೀಮಿತ ಸಂಖ್ಯೆಯಲ್ಲಿ ಸ್ಟಾಲ್ಗಳು ಇದ್ದು ರಿಯಾಯಿತಿ ದರದಲ್ಲಿ ಖರೀದಿಗೆ ಅವಕಾಶವಿದೆ. ವೈವಿಧ್ಯಮಯ ಮಾವಿನ ಗಿಡಗಳು, ಹಲಸಿನ ಗಿಡಗಳು, ಶ್ರೀಗಂಧ, ರಕ್ತಚಂದನದ ಗಿಡಗಳು ಸೇರಿದಂತೆ ಹಲವಾರು ಹಣ್ಣಿನ ಹಾಗೂ ವಿವಿಧ ಬಗೆಯ ಗಿಡಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಜತೆಗೆ ಹಲವು ಬಗೆಯ ಗೊಬ್ಬರ ತಯಾರಿಕಾ ಸಂಸ್ಥೆಗಳ ಮಳಿಗೆ, ಕಾಳುಮೆಣಸು ಕೊಯ್ಯುವುದಕ್ಕೆ ಏರುವ ಏಣಿ, ಕಾಳುಮೆಣಸು ಬಿಡಿಸುವ ಯಂತ್ರ, ಶುದ್ದೀಕರಿಸುವ ಯಂತ್ರಗಳ ಮಳಿಗೆ, ಕಾಳುಮೆಣಸು ಬೆಳೆಯುವ ಸಿಮೆಂಟ್ ಕಂಬಗಳ ಮಳಿಗೆ, ಮಂಗಗಳ ಹಾವಳಿ ತಡೆಗಟ್ಟುವ ಸಲಕರಣೆಯ ಮಳಿಗೆ, ಹನಿನೀರಾವರಿ ವ್ಯವಸ್ಥೆಯ ಮಳಿಗೆ, ದೋಟಿ ಮಳಿಗೆಗಳು ಕ್ಯಾಂಪ್ಕೋ ಚಾಕಲೇಟ್ ಮಳಿಗೆ, ವಿವಿಧ ಬಗೆಯ ಗೊಬ್ಬರಗಳ ಮಳಿಗೆಗಳು, ಚಾಕಲೇಟ್ ಮಳಿಗೆ, ಅಡಿಕೆ ಪತ್ರಿಕೆ ಮೊದಲಾದ ಉಪಯುಕ್ತ ಮಳಿಗೆಗಳು ಇರಲಿವೆ.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಕೋರ್ ಕಮಿಟಿ ಸದಸ್ಯರಾದ ಸೇಡಿಯಾಪು ಜನಾರ್ಧನ ಭಟ್, ಅಜಿತ್ ಪ್ರಸಾದ್ ರೈ, ಜಿ.ಕೆ. ಪ್ರಸನ್ನ, ಶ್ರೀನಿಧಿ ಬೋರ್ವೆಲ್ಸ್ನ ಗೋಪಾಲಕೃಷ್ಣ ಭಟ್, ಶಶಾಂಕ್ ಉಪಸ್ಥಿತರಿದ್ದರು.










