







ನೃತ್ಯೋಪಾಸನಾ ಕಲಾ ಅಕಾಡೆಮಿ ವಿದ್ಯಾರ್ಥಿಯ ನಾಲ್ಕನೇ ಅರಂಗೇಟ್ರಂ


ಪುತ್ತೂರು: ನೃತ್ಯೋಪಾಸನಾ ಕಲಾ ಅಕಾಡೆಮಿ (ರಿ.), ಪುತ್ತೂರು ಇದರ ಪ್ರಸ್ತುತಿಯಲ್ಲಿ ನೃತ್ಯಗುರು ಶಾಲಿನಿ ಆತ್ಮಭೂಷಣ್ ಅವರ ಶಿಷ್ಯೆ ಶಮಾ ಎಸ್.ಪಿ. ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಆ.22ರಂದು ಸಂಜೆ 5 ಗಂಟೆಗೆ ಪುತ್ತೂರು ಕೋರ್ಟ್ ರಸ್ತೆಯ ಟೌನ್‌ಹಾಲ್‌ನಲ್ಲಿ ನಡೆಯಲಿದೆ.




ರಂಗಪ್ರವೇಶ ಕಾರ್ಯಕ್ರಮವನ್ನು ಶಾಂತಲಾ ಪ್ರಶಸ್ತಿ ಪುರಸ್ಕೃತ ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್ (ನಾಟ್ಯನಿಕೇತನ, ಕೊಲ್ಯ, ಮಂಗಳೂರು) ದೀಪ ಪ್ರಜ್ವಲಿಸಲಿದ್ದಾರೆ. ಸಂಜೆ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ಪ್ರಾಂಶುಪಾಲ ಜಯರಾಮ ರೈ, ಸಂಗೀತ ವಾಹಿನಿಯ ಡಾ. ಮಹೇಶ್ ಪದ್ಯಾಣ ಹಾಗೂ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ವೆಂಕಟಕೃಷ್ಣ ಶರ್ಮ ಭಾಗವಹಿಸಲಿದ್ದಾರೆ.
ರಂಗಪ್ರವೇಶ ಕಾರ್ಯಕ್ರಮದಲ್ಲಿ ನಟುವಾಂಗ ವಿದುಷಿ ಶಾಲಿನಿ ಆತ್ಮಭೂಷಣ್, ಹಾಡುಗಾರಿಕೆ ವಿದ್ವಾನ್ ಸ್ವರಾಗ್ ಮಾಹೆ, ಮೃದಂಗದಲ್ಲಿ ಆಕಾಶವಾಣಿ ಕಲಾವಿದ ವಿದ್ವಾನ್ ಸುರೇಶ್ ಬಾಬು ಕಲ್ಲಿಕೋಟೆ, ವಯೋಲಿನ್‌ನಲ್ಲಿ ವಿದ್ವಾನ್ ಗಣರಾಜ್ ಕಾರ್ಲೆ ಹಾಗೂ ವೀಣೆಯಲ್ಲಿ ವಿದ್ವಾನ್ ವಿ. ಸೌಂದರ ರಾಜನ್ ತಿರುವನಂತಪುರ ಸಹಕರಿಸಲಿದ್ದಾರೆ.

ಶಮಾ ಎಸ್.ಪಿ ಬಗ್ಗೆ:
ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಪರಕ್ಕಜೆಯ ವೇದಮೂರ್ತಿ ಉದಯ ನಾರಾಯಣ ಭಟ್ ಮತ್ತು ಅಶ್ವಿನಿ ಉದಯ ನಾರಾಯಣ ದಂಪತಿಯ ಪುತ್ರಿ ಶಮಾ ಎಸ್.ಪಿ., ಏಳನೇ ವಯಸ್ಸಿನಿಂದ
ನೃತ್ಯೋಪಾಸನಾ ಕಲಾ ಅಕಾಡೆಮಿಯಲ್ಲಿ ವಿದುಷಿ ಶಾಲಿನಿ ಆತ್ಮಭೂಷಣ್ ಅವರಲ್ಲಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳನ್ನು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಪ್ರಸ್ತುತ ಪ್ರಿ-ವಿದ್ವತ್ ತರಬೇತಿ ಪಡೆಯುತ್ತಿದ್ದಾರೆ. ನೃತ್ಯೋಪಾಸನಾ ಕಲಾ ಅಕಾಡೆಮಿಯ ನೃತ್ಯ ತಂಡದ ಜೊತೆ ಬಹುತೇಕ ಕಡೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ.

ಶಮಾ ಪರಕಜೆ ಅವರು ಗುರು ಪವಿತ್ರ ವಿನೋದ್ ಪಾದೆಕಲ್ಲು ಅವರಲ್ಲಿ ಕರ್ನಾಟಕ ಸಂಗೀತ ಜೂನಿಯರ್ ಪರೀಕ್ಷೆಯನ್ನೂ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಆರನೇ ವಯಸ್ಸಿನಲ್ಲೇ ಗುರು ಶಾರದಾ ಶಶಿಧರ್ ಅವರ ಮಾರ್ಗದರ್ಶನದಲ್ಲಿ ಯಕ್ಷಗಾನ ಕಲಾಭ್ಯಾಸ ನಡೆಸಿ, ಹಲವು ಕಡೆ ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿಯೂ ಸಾಧನೆ ಮಾಡಿರುವ ಶಮಾ, ವಿಟ್ಲದ ಜೇಸೀಸ್ ಶಾಲೆಯಲ್ಲಿ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.98.56 ಅಂಕ ಗಳಿಸಿ ರಾಜ್ಯಕ್ಕೆ 10ನೇ ರ‍್ಯಾಂಕ್ ಪಡೆದಿದ್ದಾರೆ. ಪ್ರಸ್ತುತ ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿಭಾ ಕಾರಂಜಿಯ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಸತತ ಐದು ವರ್ಷ ಜಿಲ್ಲಾಮಟ್ಟಕ್ಕೆ ಹಾಗೂ ಮೂರು ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕೊಪ್ಪಳದಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಸಮಾಧಾನಕರ ಪ್ರಶಸ್ತಿ ಪಡೆದಿದ್ದಾರೆ. ಭಾಷಣ, ರೇಖಾಚಿತ್ರ, ಭಕ್ತಿಗೀತೆ ಹಾಗೂ ವೈದಿಕ ಗಣಿತದಲ್ಲೂ ಶಮಾ ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ಕಲಾ ಅಕಾಡೆಮಿಯ 22 ವರ್ಷದ ಹಾದಿ..
2004ರಲ್ಲಿ ಪುತ್ತೂರಿನ ಆರಂಭಗೊಂಡ ನೃತ್ಯೋಪಾಸನಾ ಕಲಾ ಅಕಾಡೆಮಿ ಕಳೆದ 22 ವರ್ಷಗಳಿಂದ ಭರತನಾಟ್ಯ ಕಲೆಯ ಶಿಕ್ಷಣ ಹಾಗೂ ಪ್ರಸಾರದ ಮೂಲಕ ಗಮನಾರ್ಹ ಸೇವೆ ಸಲ್ಲಿಸುತ್ತಿದೆ. ಪ್ರಸ್ತುತ ಪುತ್ತೂರು, ಉಪ್ಪಿನಂಗಡಿ, ಕುಕ್ಕೆ ಸುಬ್ರಹ್ಮಣ್ಯ, ವಿಟ್ಲ ಸೇರಿದಂತೆ ವಿವಿಧೆಡೆ ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣ ನೀಡಲಾಗುತ್ತಿದೆ. ಇದು ಅಕಾಡೆಮಿಯ ನಾಲ್ಕನೇ ರಂಗಪ್ರವೇಶ ಕಾರ್ಯಕ್ರಮವಾಗಿದೆ. ಕಳೆದ 21 ವರ್ಷಗಳಿಂದ ನೃತ್ಯ ಪರೀಕ್ಷೆಗಳಲ್ಲಿ ಶೇ.100ರಷ್ಟು ಫಲಿತಾಂಶ ದಾಖಲಿಸಿರುವುದು ಸಂಸ್ಥೆಯ ಗುಣಮಟ್ಟದ ಬೋಧನೆಗೆ ಸಾಕ್ಷಿಯಾಗಿದೆ. 2022-23ನೇ ಸಾಲಿನಲ್ಲಿ ಸಂಸ್ಥೆಯ ವಿದ್ಯಾರ್ಥಿಗೆ ಪ್ರತಿಷ್ಠಿತ CCRTC ವಿದ್ಯಾರ್ಥಿವೇತನ ಲಭಿಸಿದೆ. ಅಲ್ಲದೆ, ಅಕಾಡೆಮಿಯ ಹಲವು ವಿದ್ಯಾರ್ಥಿಗಳು ಭರತನಾಟ್ಯದಲ್ಲಿ ದೂರದರ್ಶನದ ‘ಬಿ’ ಗ್ರೇಡ್ ಕಲಾವಿದರಾಗಿ ಆಯ್ಕೆಯಾಗಿದ್ದಾರೆ.

ನೃತ್ಯಗುರು ಶಾಲಿನಿ ಆತ್ಮಭೂಷಣ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಅಕಾಡೆಮಿಯ ವಿದ್ಯಾರ್ಥಿಗಳು ಕರ್ನಾಟಕದ ವಿವಿಧ ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ಕಲಾಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಕಲೆಯನ್ನು ಎಲ್ಲ ವರ್ಗದವರಿಗೂ ತಲುಪಿಸುವ ಉದ್ದೇಶದಿಂದ ನೃತ್ಯೋಪಾಸನಾ ಕಲಾ ಅಕಾಡೆಮಿ ‘ನೃತ್ಯ ಶಿಕ್ಷಣ ಯೋಜನೆ’ಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಭರತನಾಟ್ಯ ಶಿಕ್ಷಣ ನೀಡುತ್ತಿದೆ. 2014ರಲ್ಲಿ ದಶಮಾನೋತ್ಸವದ ಬಳಿಕ ಕಲಾ ಕ್ಷೇತ್ರಕ್ಕೆ, ವಿಶೇಷವಾಗಿ ಭರತನಾಟ್ಯಕ್ಕೆ ಸೇವೆ ಸಲ್ಲಿಸುತ್ತಿರುವ ಹಿರಿಯ ಕಲಾವಿದರು ಹಾಗೂ ಕಲಾಪೋಷಕರನ್ನು ಗುರುತಿಸಿ ‘ನೃತ್ಯೋಪಾಸನಾ’ ಗೌರವ ಸನ್ಮಾನ ನೀಡುತ್ತಿದೆ. ದಶಮಾನೋತ್ಸವದ ಅಂಗವಾಗಿ ಅಕಾಡೆಮಿ ಉಚಿತ ನೃತ್ಯ ಕಾರ್ಯಾಗಾರ ಹಾಗೂ ಮುಖವರ್ಣಿಕೆ ಕಾರ್ಯಾಗಾರ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ 2023ರಲ್ಲಿ ‘ಗಡಿನಾಡು ಸಂಸ್ಕೃತಿ’ ಉತ್ಸವ, ಬಳಿಕ ಪುತ್ತೂರಿನಲ್ಲಿ ಅದ್ದೂರಿಯ ‘ಕಲಾರ್ಣವ-2025’ ಕಾರ್ಯಕ್ರಮ ಆಯೋಜಿಸಿ ಗಮನ ಸೆಳೆದಿದೆ. ಅಕಾಡೆಮಿ ಸಾಧನೆಗೆ ಅನೇಕ ಪುರಸ್ಕಾರ, ಸನ್ಮಾನಗಳೂ ದೊರೆತಿವೆ.










