







ನೆಲ್ಯಾಡಿ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಆ.21ರಂದು ಚಾಲನೆ ನೀಡಲಾಯಿತು.



ಅನ್ನಛತ್ರ ಕಟ್ಟಡದ ಒಂದನೇ ಮಹಡಿಯಲ್ಲಿ ಹೆಚ್ಚುವರಿ ಅನ್ನಛತ್ರ ಹಾಲ್, ಲಿಫ್ಟ್ ಹಾಗೂ ಗೂಡ್ಸ್ ಲಿಫ್ಟ್ ರೂಮ್ ನಿರ್ಮಾಣ ಸೇರಿದಂತೆ 99.75 ಲಕ್ಷ ರೂ.ವೆಚ್ಚದ ವಿವಿಧ ಕಾಮಗಾರಿಗೆ ಹಾಗೂ ರೂ.25 ಲಕ್ಷ ವೆಚ್ಚದ ಅಂಗಡಿ ಮಳಿಗೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಸತ್ಯಪ್ರಿಯ ಕಲ್ಲೂರಾಯ ಅವರು ಪೂಜಾ ವಿಧಿವಿಧಾನ ನೆರವೇರಿಸಿದ ಬಳಿಕ, ಬೆಂಗಳೂರಿನ ಅನ್ನಪೂರ್ಣೇಶ್ವರಿ ಎಂಟರ್ಪ್ರೈಸಸ್ ಹಾಗೂ ಡೆವಲಪರ್ನ ಗುತ್ತಿಗೆದಾರ ಹರೀಶ್ ಅವರಿಗೆ ವರ್ಕ್ ಆರ್ಡರ್ ನೀಡಲಾಯಿತು. ದಿ| ಎ.ಎಂ. ಮುನಿಯಪ್ಪ ಮತ್ತು ಮುನಿತಾಯಮ್ಮ ಯಶವಂತಪುರ ಇವರ ಸ್ಮರಣಾರ್ಥ ಬೆಂಗಳೂರು ಗಂಗಾನಗರ ನಿವಾಸಿ ಮಮತಾ ಸುರೇಂದ್ರ ಅವರು ಕ್ಷೇತ್ರದ ಅನ್ನಛತ್ರಕ್ಕೆ 10 ಕೆ.ವಿ. ತ್ರೀ-ಫೇಸ್ ಜನರೇಟರ್ ಕೊಡುಗೆಯಾಗಿ ನೀಡಿದ್ದು, ಪ್ರಧಾನ ಅರ್ಚಕರು ಧಾರ್ಮಿಕ ವಿಧಿವಿಧಾನ ನೆರವೇರಿಸಿ ಇದರ ಉದ್ಘಾಟನೆ ನೆರವೇರಿಸಿದರು.



ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಸದಸ್ಯರಾದ ವಿಶ್ವನಾಥ ಕೊಲ್ಲಾಜೆ, ಪ್ರಶಾಂತ್ ಕುಮಾರ್ ಮಚ್ಚಿನ, ಲೋಕೇಶ್ವರಿ ವಿನಯಚಂದ್ರ ವಳಂಬ್ರ, ಪ್ರಮೋದ್ ಕುಮಾರ್ ರೆಖ್ಯ, ಗಣೇಶ್ ಕಾಶಿ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ಪ್ರಶಾಂತ್ ರೈ ಗೋಳಿತ್ತೊಟ್ಟು, ವಿಶ್ವನಾಥ ಶೆಟ್ಟಿ ಶ್ರೀಮಾತಾ, ಗಣೇಶ್ ಪಿಜಿನಡ್ಕ, ಗುತ್ತಿಗೆದಾರ ಹರೀಶ್, ರೈತ ಸಂಘದ ಮುಖಂಡ ರೂಪೇಶ್ ರೈ ಅಲಿಮಾರು ಸೇರಿದಂತೆ ಹಲವರು ಉಪಸ್ಥಿತರಿದ್ದರು.










