






ಪುತ್ತೂರು: ಕುಂಬ್ರ ಪೇಟೆಯ ಸಾರ್ವಜನಿಕ ಶೌಚಾಲಯ ಸೇರಿದಂತೆ ಶೇಖಮಲೆ ಪ್ರದೇಶಕ್ಕೆ ನೀರು ಪೂರೈಸುವ ಬೋರ್ವೆಲ್ ಹಾಳಾಗಿ ಸಾರ್ವಜನಿಕ ಶೌಚಾಲಯ ಕಳೆದ ಒಂದೂವರೆ ತಿಂಗಳಿನಿಂದ ಮುಚ್ಚಲ್ಪಟ್ಟಿದ್ದು, ವರ್ತಕರ ಸಂಘದ ನೆರವಿನಿಂದ ತಾತ್ಕಾಲಿಕವಾಗಿ ನೀರು ಪೂರೈಸಿ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿದೆ.


ಗ್ರಾಮ ಪಂಚಾಯತ್ನ ಬೋರ್ವೆಲ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಶೌಚಾಲಯಕ್ಕೆ ಬೀಗ ಹಾಕಲಾಗಿತ್ತು. ಇದರಿಂದಾಗಿ ದಿನನಿತ್ಯ ಪೇಟೆಗೆ ಆಗಮಿಸುವ ನೂರಾರು ಸಾರ್ವಜನಿಕರು, ಮಹಿಳೆಯರು ಹಾಗೂ ಸ್ಥಳೀಯ ವರ್ತಕರು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಸಾರ್ವಜನಿಕರ ಸಮಸ್ಯೆ ಮನಗಂಡ ಕುಂಬ್ರ ವರ್ತಕರ ಸಂಘವು ಆ.23 ರಂದು ಪಿಕಪ್ ವಾಹನದ ಮೂಲಕ ನೀರು ತಂದು, ಶೌಚಾಲಯದ ಮೇಲ್ಛಾವಣಿಯ ಟ್ಯಾಂಕ್ಗೆ ತುಂಬಿಸಿ ತಾತ್ಕಾಲಿಕ ನೀರಿನ ವ್ಯವಸ್ಥೆ ಕಲ್ಪಿಸಿದೆ. ಇದೇ ಸಂದರ್ಭದಲ್ಲಿ ಶೌಚಾಲಯದ ಸುತ್ತ ಮುತ್ತ ಸ್ವಚ್ಛತೆ ಮಾಡಲಾಯಿತು.




ಈ ಸಂದರ್ಭದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್ ಸುಂದರ್ ರೈ ಕೊಪ್ಪಳ , ಅಧ್ಯಕ್ಷ ಪಿ ಕೆ ಮಹಮ್ಮದ್ ಕೂಡುರಸ್ತೆ,, ಸಂಶುದ್ದೀನ್ ಎ.ಆರ್., ಮಾಜಿ ಅಧ್ಯಕ್ಷ ಮೇಲ್ವಿನ್ ಮೊಂತೆರೋ , ಉಪಾಧ್ಯಕ್ಷ ಸದಾಶಿವ ಕುಂಬ್ರ, ಕಾರ್ಯದರ್ಶಿ ಭವ್ಯ ರೈ , ಹನೀಫ್ ಶೇಖಮಲೆ , ಮಾಜಿ ಅಧ್ಯಕ್ಷ ಸುಂದರ್ ರೈ ಮಂದಾರ ಮತ್ತಿತರರು ಉಪಸ್ಥಿತರಿದ್ದರು.
ಶಾಶ್ವತ ಪರಿಹಾರಕ್ಕೆ ಮನವಿ:
ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳು ನಿರಂತರವಾಗಿ ದೊರೆಯುವುದು ಪಂಚಾಯತ್ನ ಕರ್ತವ್ಯವಾಗಿದೆ. ಆದ್ದರಿಂದ ಗ್ರಾಮ ಪಂಚಾಯತ್ ತಕ್ಷಣವೇ ಶೌಚಾಲಯಕ್ಕೆ ಶಾಶ್ವತ ನೀರಿನ ಸಂಪರ್ಕ ಕಲ್ಪಿಸಬೇಕು ಹಾಗೂ ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಕುಂಬ್ರ ವರ್ತಕರ ಸಂಘವು ಒತ್ತಾಯಿಸಿದೆ.










