






ಜಾಗ್ರತೆ ವಹಿಸಿ ಜವಾಬ್ದಾರಿಯಿಂದ ಹಬ್ಬ ಆಚರಿಸಿ- ಸ್ಟೆಲ್ಲಾ ವರ್ಗೀಸ್
ಕಾನೂನು ಕೈಗೆ ತಗೊಂಡವರ ಮೇಲೆ ಕ್ರಮ- ಪ್ರಮೋದ್ ಕುಮಾರ್
ಸೋದರ ಭಾತೃತ್ವದಿಂದ ಆಚರಿಸಬೇಕು- ಬಿ.ಎಸ್. ಕೂಡಲಗಿ


ಪುತ್ತೂರು: ಮುಂಬರುವ ಈದ್‌ಮಿಲಾದ್, ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬದ ಪ್ರಯುಕ್ತ ಪುತ್ತೂರು ಪೊಲೀಸ್ ಉಪವಿಭಾಗ ಹಾಗೂ ತಾಲೂಕು ಆಡಳಿತ ವತಿಯಿಂದ ಸರ್ವಧರ್ಮಗಳ ಮುಖಂಡರ ಶಾಂತಿ ಸಭೆ ಪುತ್ತೂರು ಟೌನ್‌ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.



ಜಾಗ್ರತೆ ವಹಿಸಿ ಜವಾಬ್ದಾರಿಯಿಂದ ಹಬ್ಬ ಆಚರಿಸಿ- ಸ್ಟೆಲ್ಲಾ ವರ್ಗೀಸ್
ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಮಾತನಾಡಿ,ಯಾವುದೇ ಹಬ್ಬ ಆಚರಣೆ ಮಾಡುವಾಗ ಇನ್ನೊಬ್ಬರಿಗೆ ತೊಂದರೆ ಆಗದ ಹಾಗೆ ಜಾಗ್ರತೆ ವಹಿಸಬೇಕು. ಜವಾಬ್ದಾರಿಯಿಂದ ಆಚರಿಸಬೇಕು. ಅಲ್ಲದೆ ಹಬ್ಬ ಆಚರಣೆಯಲ್ಲಿ ಸ್ವಚ್ಚತೆ ಕಾಪಾಡುವುದು ಮುಖ್ಯ. ದ.ಕ. ಜಿಲ್ಲೆ ಬುದ್ದಿವಂತರ ಜಿಲ್ಲೆ. ಚಿಕ್ಕ ಚಿಕ್ಕ ವಿಷಯಕ್ಕೂ ಸ್ಪಂದನೆ ಕೊಡಬಾರದು. ಅಹಿತಕರ ಘಟನೆ ಆದಾಗ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು. ಅದಕ್ಕೆ ಪೊಲೀಸರು ಇದ್ದಾರೆ. ನೀವು ಹೋಗುವ ಅಗತ್ಯ ಇಲ್ಲ. ಇಂತಹ ಘಟನೆ ಆದಾಗ ನಿಯಮ ಪ್ರಕಾರ ಇಲಾಖೆ ಕ್ರಮವಹಿಸುತ್ತದೆ. ಪೊಲೀಸ್ ಇಲಾಖೆಯಿಂದ ಕಾನೂನು ಸುವ್ಯವಸ್ಥೆ ಆಗುತ್ತದೆ. ಯಾವುದೇ ಸಮುದಾಯದಿಂದ ತಪ್ಪು ಆದರೂ ಕ್ರಮ ಆಗುತ್ತದೆ ಎಂದ ಅವರು ಈದ್ ಮಿಲಾದ್, ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಿ. ಶಾಂತಿ ಸೌಹಾರ್ದತೆ ಕಾಪಾಡಿ ಎಂದು ಹೇಳಿ ಹಬ್ಬದ ಶುಭಾಶಯ ಸಲ್ಲಿಸಿದರು.
ಕಾನೂನು ಕೈಗೆ ತಗೊಂಡವರ ಮೇಲೆ ಕ್ರಮ ಆಗುತ್ತದೆ- ಪ್ರಮೋದ್ ಕುಮಾರ್
ಡಿವೈಎಸ್ಪಿ ಪ್ರಮೋದ್ ಕುಮಾರ್ ಮಾತನಾಡಿ ದರ್ಬೆಯಲ್ಲಿ ನಡೆದ ಘಟನೆ ಬಳಿಕ ಎಸ್‌ಪಿಯವರ ಸೂಚನೆ ಮೇರೆಗೆ ಇಂದೇ ಸಭೆ ಕರೆದಿದ್ದೇವೆ. ಮೊನ್ನೆ ದರ್ಬೆಯಲ್ಲಿ ನಡೆದ ಘಟನೆಗಳ ಬಗ್ಗೆ ಯಾರು ತಪ್ಪು ಮಾಡಿದ್ದಾರೆ? ಯಾರಿಂದ ಘಟನೆ ಆಗಿದೆ ಎಂಬುದಕ್ಕೆ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಾಗುತ್ತದೆ. ಯಾರೂ ಕಾನೂನು ವ್ಯಾಪ್ತಿ ಮೀರಿದ್ದಾರೆ ಎಂಬುದು ಪರಿಶೀಲನೆ ಆಗುತ್ತಿದೆ. ಕೊನೆಯದಾಗಿ ತಾರ್ಕಿಕ ಅಂತ್ಯ ಕಾಣುವುದು ನ್ಯಾಯಾಲಯದಲ್ಲಿ. ಪ್ರಕರಣ ದಾಖಲು ಮಾಡುವುದು ತನಿಖೆ ಮಾಡುವುದು ಪ್ರಕರಣದ ಒಂದು ಭಾಗವಾಗಿದೆ. ಹಬ್ಬಗಳು ಕೆಲವು ಕಡೆ ಹೊಂದಾಣಿಕೆಯಿಂದ ನಡೆಯುತ್ತದೆ. ಕಾನೂನು ಯಾರೂ ಕೈಗೆ ತಗೊಂಡರೂ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು. ಸಂಘಟನೆಯ ಆಯೋಜಕರ ಮೇಲಿನ ನಂಬಿಕೆಯಿಂದ ಅನುಮತಿ ಕೊಡುತ್ತೇವೆ. ಇಲಾಖೆಗಳ ಜತೆಗೆ ಸಹಕಾರ ನೀಡಿದರೆ ಮಾತ್ರ ಒಳ್ಳೆಯ ವಾತಾವರಣ ನಿರ್ಮಾಣ ಮಾಡಲು ಸಾಧ್ಯ. ಹಬ್ಬಕ್ಕೆ ಸಮುದಾಯದ ಜವಾಬ್ದಾರಿಯೂ ಇದೆ. ಯಾವುದೇ ಹಬ್ಬ ಬಂದಾಗ ಇಲಾಖೆಯಿಂದ ಪೂರ್ವಭಾವಿ ಕೆಲಸಗಳು ನಡೆಯುತ್ತದೆ. ಆದುದರಿಂದ ನಿಮ್ಮ ಇತಿಮಿತಿಯೊಳಗೆ ಕಾರ್ಯಕ್ರಮ ಮಾಡಬೇಕು. ನಮ್ಮ ತೀರ್ಮಾನದ ಜತೆ ಸಮುದಾಯದವರು ಹೋಗಬೇಕು. ಎಲ್ಲರ ಸಹಕಾರ ಇಲಾಖೆ ಜತೆ ಇರಲಿ ಎಂದರು.

ಸೋದರ ಭಾತೃತ್ವದಿಂದ ಆಚರಿಸಬೇಕು- ಬಿ.ಎಸ್. ಕೂಡಲಗಿ
ಪುತ್ತೂರು ತಹಾಲಿಲ್ದಾರ್ ಬಿ.ಎಸ್. ಕೂಡಲಗಿ ಮಾತನಾಡಿ ಹಬ್ಬ ಶ್ರೀಕಷ್ಣ ಜನ್ಮಾಷ್ಟಮಿ ಹಾಗೂ ಈದ್‌ಮಿಲಾದ್ ಹಬ್ಬವನ್ನು ಸೋದರ ಭಾತೃತ್ವದಿಂದ ಆಚರಿಸಬೇಕು. ಕೋಮು ಗಲಭೆ ಕಾಣದೆ ಹಬ್ಬ ಹಿರಿದಿನಗಳನ್ನು ಸ್ವಚ್ಛಂದವಾಗಿ ಮಾಡಬೇಕು. ಯಶಸ್ಸು ಕಾಣಲು ನೀವೇ ಆಗುತ್ತಿರಿ. ಸೌಹಾರ್ದತೆಯಿಂದ ಮಾಡಿದರೆ ಪೊಲೀಸ್ ಇಲಾಖೆಯ ಅಗತ್ಯವೇ ಇರುವುದಿಲ್ಲ ಎಂದು ಹೇಳಿ ಎಲ್ಲರೂ ಅಗತ್ಯ ಸಹಕಾರ ನೀಡಬೇಕೆಂದು ಹೇಳಿದರು.
ಧಾರ್ಮಿಕ ಮುಖಂಡರುಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಕಾವು ಹೇಮಾನಾಥ್ ಶೆಟ್ಟಿ ಮಾತನಾಡಿ ಇಷ್ಟರವರೆಗೆ ಹಬ್ಬಗಳ ಆಚರಣೆಯಲ್ಲಿ ಯಾವುದೇ ತೊಂದರೆ ಇರಲಿಲ್ಲ. ಅತ್ಯಂತ ನಿರ್ಭೀತಿಯಿಂದ ಆಗಬೇಕು ಎಂಬ ಭಾವನೆ ಇದೆ. ನಮ್ಮ ಕಡೆಯಿಂದ ಯಾವುದೇ ತಪ್ಪುಗಳಾಗುವುದಿಲ್ಲ. ತಪ್ಪು ನಡೆದರೆ ಇಲಾಖೆ ಯಾವುದೇ ಮುಲಾಜಿ ಇಲ್ಲದೆ ಕ್ರಮ ವಹಿಸಬೇಕು ಎಂದರು.
ಇಬ್ರ್ರಾಹಿಂ ಗೋಳಿಕಟ್ಟೆ ಮಾತನಾಡಿ ನಮ್ಮಲ್ಲಿ ಅಸಮಾಧಾನ ಇದ್ದರೆ ಸರಿ ಮಾಡಬೇಕು. ನಾವು ಶಾಂತಿ ನೆಲೆಸಲು ಪ್ರಯತ್ನ ಮಾಡುವವರು. ಎಲ್ಲಾ ಕಡೆ ಸಿಸಿ ಕ್ಯಾಮೆರಾ ಅಗತ್ಯವಿದೆ ಎಂದರು. ಹನೀಫ್ ಬಗ್ಗುಮುಲೆ ಮಾತನಾಡಿ ಅನ್ಯೋನ್ಯತೆಯಿಂದ ಅಚ್ಚುಕಟ್ಟಾಗಿ ಹಬ್ಬ ಮಾಡ್ತಿದ್ದೇವೆ. ಎರಡೂ ಹಬ್ಬವನ್ನು ಒಟ್ಟಿಗೆ ಮಾಡುತ್ತೇವೆ ಎಂದರು. ಹಮೀದ್ ಸಾಲ್ಮರ ಮಾತನಾಡಿ ಆರಕ್ಷಕರು ಸುರಕ್ಷೆ ಕಾಪಾಡುವವರು. ಈದ ಮಿಲಾದ್‌ಗೆ ಸಿಹಿ ಹಂಚುತ್ತೇವೆ. ಶಾಂತಿ ಸಭೆ ಮಾಡಿರುವುದು ಉತ್ತಮ ಎಂದರು. ಮುಸ್ಲಿಂ ಧರ್ಮಗುರು ಒಬ್ಬರು ಮಾತನಾಡಿ ಮಿಲಾದ್ ಕಾರ್ಯಕ್ರಮ ರದ್ದು ಮಾಡಿ ಸೌಹಾರ್ದತೆ ಮೆರೆದಿದ್ದೇವೆ. ಇಂತಹ ಒಳ್ಳೆಯ ಕಾರ್ಯಕ್ರಮವನ್ನು ಮೆಚ್ಚಿ ಪ್ರಶಂಶಿಸಬೇಕು ಎಂದರು. ಅಬ್ದುಲ್ ರಹಿಮಾನ್ ಅಜಾದ್ ಮಾತನಾಡಿ ಇಲ್ಲಿಯವರೆಗೆ ಪುತ್ತೂರಿನಲ್ಲಿ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ ಎಂದರು. ಅಶ್ರಫ್ ಕಲ್ಲೇಗ ಮಾತನಾಡಿ ಶಾಂತಿ ಸಭೆ ಮಾಡುವಾಗ ಮೊದಲೇ ತಿಳಿಸಬೇಕು ಎಲ್ಲಾ ಧರ್ಮದವರು ಇರಬೇಕು. ಪ್ರಮುಖ ಸಂಘಟನೆಗಳಿಗೆ ತಿಳಿಸಬೇಕು ಎಂದರು. ಲ್ಯಾನ್ಸಿ ಮಾಸ್ಕರೇನಸ್ ಮಾತನಾಡಿ ಎಲ್ಲಾ ಹಬ್ಬಗಳ ಸಂದರ್ಭದಲ್ಲಿ ಶಾಂತಿ ಸಭೆ ಎಚ್ಚರಿಕೆ ಗಂಟೆಯಾಗಿದೆ. ಪರಸ್ಪರ ಸೌಹಾರ್ದತೆ ನೀಡುವುದು ಒಳ್ಳೆಯದು. ಕೆ. ಎ. ಸಿದ್ದಿಕ್ ಮಾತನಾಡಿ ಸರ್ವ ಧರ್ಮದವರು ಒಗ್ಗಟ್ಟಾಗಿ ತಪ್ಪನ್ನು ಯಾರೇ ಮಾಡಿದರೂ ಆದು ತಪ್ಪೇ. ಅದನ್ನು ಪ್ರತಿಭಟಿಸಬೇಕು. ಇಷ್ಟರವರೆಗೆ ಗಲಾಟೆ ನಡೆಯಲಿಲ್ಲ. ಒಗ್ಗಟ್ಟಾಗಿ ಐಕ್ಯತೆಯಿಂದ ಇರಬೇಕು ಎಂದರು. ಮೌರೀಸ್ ಮಸ್ಕರೇನಸ್ ಮಾತನಾಡಿ ದರ್ಬೆಯ ಗಲಾಟೆಯನ್ನು ಇಲಾಖೆ ಹತ್ತಿಕ್ಕಿದೆ. ಪೊಲೀಸ್ ಇಲಾಖೆ ಮುಸ್ಲಿಂ ಹಾಗೂ ಹಿಂದೂ ಹಬ್ಬ ಬರುವಾಗ ಮಾತ್ರ ಶಾಂತಿ ಸಭೆ ಮಾಡುವುದು. ಕ್ರಿಶ್ಚಿಯನ್ ಹಬ್ಬದಲ್ಲಿ ಶಾಂತಿ ಸಭೆ ಮಾಡುವುದಿಲ್ಲ. ಆ ಸಂದರ್ಭದಲ್ಲಿ ಹಬ್ಬ ಮಾಡಿಕೊಳ್ಳಿ ಎಂದು ಹೇಳುತ್ತಾರೆ ಎಂದರು.
ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎಸ್‌ಐ ಸುಹಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ನಗರ ಠಾಣೆಯ ಇನ್‌ಸ್ಪೆಕ್ಟರ್ ಜಾನ್ಸನ್ ಡಿಸೋಜ ಸ್ವಾಗತಿಸಿ ಮಹಿಳಾ ಠಾಣೆಯ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ವಂದಿಸಿದರು.










