






ಪುತ್ತೂರು: ದಕ್ಷಿಣಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಕಾಳುಮೆಣಸು, ಅಡಿಕೆ ಹಾಗೂ ಕಾಫಿ ಬೆಳೆಗಾರರ ಒಕ್ಕೂಟ, ವಿಟ್ಲ-ಪುತ್ತೂರು ಹಾಗೂ ಸುದ್ದಿ ಅರಿವು ಮಾಹಿತಿ ಕೇಂದ್ರ ಪುತ್ತೂರು ಇದರ ಜಂಟಿ ಸಹಯೋಗದಲ್ಲಿ ಕಾಳುಮೆಣಸು, ಅಡಿಕೆ ಮತ್ತು ಕಾಫಿ ಬೆಳೆಗಾರರ ಮಾಹಿತಿ ಶಿಬಿರ ಹಾಗೂ ಸಮಾವೇಶ ಆ.23ರಂದು ಮುಕ್ರಂಪಾಡಿ ಸುಭದ್ರಾ ಕಲ್ಯಾಣ ಮಂಟಪದಲ್ಲಿ ನಡೆಯಿತು.


ಕೃಷಿಕರು ಒಟ್ಟಾಗಿ ನಮ್ಮ ಹಕ್ಕುಗಳನ್ನು ಕೇಳಬೇಕು:
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಕೃಷಿ ನನಗೆ ಆಸಕ್ತಿಯ ವಿಷಯ. ಅಡಿಕೆ ಬೆಳೆಗಾರರ ಬಗ್ಗೆ ಹೋರಾಟ ಮಾಡಿಕೊಂಡು ಬಂದಿದ್ದೇನೆ. 15 ವರ್ಷದ ಹಿಂದೆ ಅಡಿಕೆಯಲ್ಲಿ ನಿಕೋಟಿನ್ ಇರುವ ಬಗ್ಗೆ ಅಫಿದಾವಿತ್ ಸಲ್ಲಿಸಿರುವುದನ್ನು ವಿರೋಧಿಸಿ ಕ್ಯಾಂಪ್ಕೋದೊಂದಿಗೆ ಹೋರಾಟ ಮಾಡಿದ್ದೇನೆ ಎಂದರು. ದ.ಕ. ಉಡುಪಿ ಜಿಲ್ಲೆಯವರು ಅಡಿಕೆಯನ್ನೇ ನಂಬಿ ಜೀವನ ಮಾಡುವವರು. ಅದಕ್ಕೆ ಪೂರಕವಾಗಿ ಕೃಷಿಕರು ಸಾಲ ಕೂಡ ಮಾಡುತ್ತಿದ್ದಾರೆ. ಆದುದರಿಂದ ಅಡಿಕೆಯಲ್ಲಿ ಹಣ ಗಳಿಸಿದವರು ಅಪರೂಪ. ಕಾಫಿ, ಕಾಳುಮೆಣಸು, ಕೊಕ್ಕೋ ಬೆಳೆಯುತ್ತಾ ಬರದಿದ್ದರೆ ನಮಗೆ ಉಳಿಗಾಲವಿಲ್ಲ. ಗುಟ್ಕಾದ ಬಗ್ಗೆಯೂ ಜಾಗೃತಿ ಮೂಡಿಸಿ ಅದು ಬ್ಯಾನ್ ಆಗುವ ಸ್ಥಿತಿ ಬರುತ್ತದೆ. ಆದುದರಿಂದ ಅಡಿಕೆಗೆ ಪರ್ಯಾಯ ಬೆಳೆ ಬೆಳೆಸಿಕೊಳ್ಳಬೇಕು ಎಂದರು. ದ.ಕ.ಜಿಲ್ಲೆಯ ಕೃಷಿಕರಲ್ಲಿ ಹೋರಾಟ ಮನೋಭಾವನೆ ಇಲ್ಲ. ನಾವು ಸ್ವಾಭಿಮಾನಿಗಳಾಗಿದ್ದೇವೆ. ಕೃಷಿಕರು ಒಟ್ಟಾಗಿ ನಮ್ಮ ಹಕ್ಕುಗಳನ್ನು ಕೇಳಬೇಕು. ನಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕು. ಬದಲಾವಣೆ ತಂದುಕೊಳ್ಳಬೇಕು. ಹೋರಾಟ ಮನೋಭಾವನೆ ಬೇಕು. ಅಕ್ರಮ ಜಾಗ ಸಕ್ರಮ, ಕೋವಿ ಲೈಸೆನ್ಸ್ ಮುಂತಾದ ಹಕ್ಕುಗಳನ್ನು ಪಡೆದುಕೊಳ್ಳಬೇಕು. ನಮಗೆ ರಾಜಕೀಯ ಬೇಡ. ದ.ಕ.ಜಿಲ್ಲೆ, ಪುತ್ತೂರು ಅಭಿವೃದ್ಧಿಯಾಗಬೇಕು. ಇಲ್ಲಿನವರಿಗೆ ಉದ್ಯೋಗ ಸಿಗಬೇಕು ಎಂದ ಅವರು ಶಶಿ ಭಟ್ರವರು ಒಳ್ಳೆಯ ಕಾರ್ಯಾಗಾರ ಮಾಡಿದ್ದಾರೆ. ಈ ಕಾರ್ಯಾಗಾರದಲ್ಲಿ ಒಳ್ಳೆಯ ನಿರ್ಣಯ ಮಾಡಿಕೊಳ್ಳಬೇಕು ಎಂದರು.



ಭಾರತದ ಎಲ್ಲಾ ಉತ್ಪನ್ನಗಳಿಗೆ ಜಗತ್ತು ತೆರೆದಿದೆ:
ದೀಪ ಬೆಳಗಿಸಿ ಸಮಾವೇಶ ಉದ್ಘಾಟಿಸಿದ ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಮಾತನಾಡಿ ದ.ಕ. ಜಿಲ್ಲೆ ಶ್ರೀಮಂತ ಜಿಲ್ಲೆಯಲ್ಲಿ 8ನೇ ಸ್ಥಾನ ಪಡೆದ ಜಿಲ್ಲೆಯಾಗಿದೆ. ಅಲ್ಲದೆ ದೇಶದ ಜಿಡಿಪಿಗೆ ದೊಡ್ಡ ಕೊಡುಗೆ ನೀಡಿದೆ. ಕೃಷಿಕರು ಒಂದೇ ಬೆಳೆ ನಂಬಿರಬಾರದು. ಮಿಶ್ರ ಬೆಳೆ ಅಳವಡಿಸಬೇಕು. ಕಾಳುಮೆಣಸಿನಿಂದ ನಮಗೆ ಕೊರೋನ ಎದುರಿಸಲು ಸಾಧ್ಯವಾಯಿತು. ಕಾಫೀ ಬೆಳೆ ಬೆಳೆದು ಯಶಸ್ಸು ಗಳಿಸಿ ತೋರಿಸಿದ್ದೇವೆ. ಪ್ರಸ್ತುತ ಪ್ರಕೃತಿಯ ವ್ಯವಸ್ಥೆಗೆ ಬದಲಾವಣೆ ಆಗಿದ್ದೇವೆ. ಉತ್ಪಾದನೆ ಮಾಡುವುದು ಸಾಹಸ. ಮಾರ್ಕೆಟಿಂಗ್ ಮಾಡುವುದು ಸವಾಲು ಆಗಿದೆ. ಭಾರತದ ಎಲ್ಲಾ ಉತ್ಪನ್ನಗಳಿಗೆ ಜಗತ್ತು ತೆರೆದಿದೆ. ಗುಣಮಟ್ಟ ಬ್ರ್ಯಾಂಡ್, ಸಾವಯವಕ್ಕೆ ಪ್ರಾಮುಖ್ಯತೆ ಇದೆ ಎಂದರು. ಕೃಷಿಗೆ ಭವಿಷ್ಯತ್ ಇದೆ ಎಂಬುದು ಈ ಸಮಾವೇಶದಿಂದ ತೋರಿಸುತ್ತದೆ. ನಾವು ಹಿರಿಯರ ಕೃಷಿ ಪದ್ಧತಿ ಅಳವಡಿಸಬೇಕು. ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು. ರಾಸಾಯನಿಕ ಮುಕ್ತ ಕೃಷಿ ಮಾಡಬೇಕು. ಸಾವಯವ ಗೊಬ್ಬರ ಮಾಡಬೇಕು. ಕೃಷಿಗೂ ಒಳ್ಳೆಯ ದಿನಗಳು ಬರುತ್ತದೆ. ಕೃಷಿ ಅವಕಾಶಗಳ ಆಗರವಾಗಿದೆ ಸಾಗರವಾಗಿದೆ ಎಂದ ಅವರು ದೇಶದ 10 ಬ್ರ್ಯಾಂಡ್ಗಳಲ್ಲಿ ಕ್ಯಾಂಪ್ಕೋ ಕೂಡ ಒಂದು ಬ್ರ್ಯಾಂಡ್ ಆಗಿದೆ. ಇದು ನಮಗೆ ಹೆಮ್ಮೆಯಾಗಿದೆ. ಕ್ಯಾಂಪ್ಕೋ ರೈತರಿಗೆ ಯಾವಾಗಲೂ ನೆರವಾಗುತ್ತಿದೆ ಎಂದು ಹೇಳಿದರು.
ಕೃಷಿಯನ್ನು ಉದ್ಯಮವಾಗಿ ಬಳಸುವವರಿಗೆ ಸದಾ ಬೆಂಬಲ:
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಮಾತನಾಡಿ ಸುದ್ದಿ ಅರಿವು ಕೇಂದ್ರದ ಮೂಲಕ ಕೃಷಿ ಮಾಹಿತಿಯನ್ನು ಕೆಲವು ವರ್ಷಗಳಿಂದ ಮಾಡುತ್ತಾ ಬಂದಿದ್ದೇವೆ. ಈ ಸಮಾವೇಶಕ್ಕೂ ಸುದ್ದಿ ಅರಿವು ಕೇಂದ್ರದಿಂದ ವೀಡಿಯೋ, ಪತ್ರಿಕೆ ಮೂಲಕ ಉಚಿತವಾಗಿ ಬೆಂಬಲ ನೀಡುತ್ತಿದ್ದೇವೆ. ಇದು ನಮ್ಮ ಕಾರ್ಯಕ್ರಮ. ನಮ್ಮ ಊರಿನ ಕೃಷಿಕರು ಒಳ್ಳೆಯದಾದರೆ ಊರು ಶ್ರೀಮಂತವಾಗುತ್ತದೆ. ಶ್ರೀಮಂತ ಊರಿನ ಸುದ್ದಿ ಪತ್ರಿಕೆಯೂ ಯಶಸ್ಸಾಗುತ್ತದೆ ಎಂದರು. ನಮ್ಮೂರಿನ 30-35 ಪ್ರಾಯದ ಕೃಷಿ ಯುವಕರಿಗೆ ಹೆಣ್ಣು ಕೊಡುವುದಿಲ್ಲ ಎಂದು ನೆಟ್ಟಣಿಗೆ ಮುಡ್ನೂರು ಗ್ರಾಮಸಭೆಯಲ್ಲಿ ಚರ್ಚೆಯಾಗಿದೆ. ಇದು ಗಂಭೀರ ವಿಷಯವಾಗಿದೆ. ಆದುದರಿಂದ ಕೃಷಿ ಉದ್ಯಮವಾಗಬೇಕು ಎಂದು ಶಶಿ ಭಟ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಅವರು ಕಾಳುಮೆಣಸು ಬಳ್ಳಿ ಪೂರೈಸುತ್ತಿದ್ದಾರೆ. ಅದರ ಮಾಹಿತಿಯೂ ನೀಡುತ್ತಿದ್ದಾರೆ. ಅವರಿಗೆ ಸಹಕಾರ ಮಾಡಿ ಕೃಷಿಕರು ಅಭಿವೃದ್ಧಿಯಾಗಿ, ಸಮೃದ್ಧಿಯಾಗಿ ಸ್ವಾವಲಂಬಿಗಳಾಗಿ. ಸ್ವಾಭಿಮಾನಿಗಳಾಗಿ. ನಿಮ್ಮ ಹಕ್ಕುಗಳನ್ನು ಕೇಳಿ ಎಂದು ಹೇಳಿ ಕೃಷಿಯನ್ನು ಉದ್ಯಮವಾಗಿ ಬಳಸುವವರಿಗೆ ಸುದ್ದಿ ಅರಿವು ಕೆಂದ್ರ ಸದಾ ಬೆಂಬಲವಾಗಿ ಇದೆ. ಇದರ ಪ್ರಯೋಜನ ಪಡೆಯಿರಿ ಎಂದು ಹೇಳಿ ಶುಭ ಹಾರೈಸಿದರು. ಕಾಳುಮೆಣಸು ಕೃಷಿ ತಜ್ಞ ಡಾ| ವೇಣುಗೋಪಾಲ್ ಅವರು ನಿಸ್ವಾರ್ಥ ಸೇವೆ ಮಾಡಿ ಕೃಷಿಕರಿಗೆ ಮಾಹಿತಿ ಮತ್ತು ಪ್ರೋತ್ಸಾಹ ನೀಡುತ್ತಿದ್ದಾರೆ. ಅವರು ಪ್ರಶಸ್ತಿಗೆ ಯೋಗ್ಯರು. ಅವರಿಗೆ ಸಮಾವೇಶದಲ್ಲಿ ದೊಡ್ಡ ಪ್ರಸಸ್ತಿ ನೀಡುವಂತೆ ನಿರ್ಣಯ ಮಾಡಿ. ಇದಕ್ಕೆ ನಮ್ಮ ಮೀಡಿಯದಿಂದಲೂ ಬೆಂಬಲ ಇದೆ ಎಂದರು.
ಕೃಷಿ ಮಾಡುವವರಿಗೆ ಬರಗಾಲ ಇಲ್ಲ:
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಮಾತನಾಡಿ ಕೃಷಿತೋ ನಾ ದುರ್ಭಿಕ್ಷ್ಯಂ ಎಂಬಂತೆ ಯಾರು ಕೃಷಿ ಮಾಡುತ್ತಾರೋ ಅವರಿಗೆ ಬರಗಾಲ ಇಲ್ಲ. ಅಡಿಕೆ ಪರಂಪರಾಗತ ಕೃಷಿ. ಇದರೊಂದಿಗೆ ಕಾಳುಮೆಣಸು ಕೃಷಿಯನ್ನು ಕೂಡ ಇಂದು ಹಲವರು ಮಾಡುತ್ತಿದ್ದಾರೆ. ಇದರಲ್ಲಿ ಸಾಧನೆ ಮಾಡಿದವರು ಅಜಿತ್ ಪ್ರಸಾದ್ ರೈ ಅವರಿಂದಾಗಿ ಹಲವಾರು ಮಂದಿ ಕಾಳುಮೆಣಸು ಕೃಷಿ ಮಾಡಲು ಹೊರಟಿದ್ದಾರೆ ಎಂದ ಅವರು ಈ ಕಾರ್ಯಕ್ರಮದ ಸದುಪಯೋಗ ಪಡೆಯಿರಿ ಎಂದು ಹೇಳಿ ಕಾರ್ಯಕ್ರಮ ಸಂಘಟಿಸಿದ ಶಶಿ ಪಡಾರು ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಹೊಸ ಕೃಷಿ ಮಾಡುವ ಬಗ್ಗೆ ಅರಿವು ಮೂಡಿಸಬೇಕು:
ಪ್ರಗತಿಪರ ಕೃಷಿಕ ಚಂದ್ರಶೇಖರ ತಾಳ್ತಜೆ ಮಾತನಾಡಿ ಕಾಳುಮೆಣಸುಗೆ ಪ್ರೋತ್ಸಾಹ ನೀಡಿದವರು ಸುರೇಶ ಬಲ್ನಾಡ್ ಮತ್ತು ಅಜಿತ್ ಪ್ರಸಾದ್ ರೈ. ಶಶಿ ಪಡಾರು ಸುಮಾರು 12ಲಕ್ಷ ಕಾಳುಮೆಣಸು ಬಳ್ಳಿ ಪೂರೈಕೆ ಮಾಡಿದ್ದಾರೆ. ಈ ಒಕ್ಕೂಟದಲ್ಲಿ 9 ಸಾವಿರ ಸದಸ್ಯರು ಇದ್ದಾರೆ. ನಮ್ಮ ಭೂಮಿಯಲ್ಲಿ ಹೊಸ ಕೃಷಿ ಮಾಡುವ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಶಶಿ ಭಟ್ ಅವರ ಸಾಹಸ ಅದ್ಭುತವಾಗಿದೆ:
ಪ್ರಗತಿಪರ ಕೃಷಿಕ ಅಜಿತ್ ಪ್ರಸಾದ್ ರೈ ಮಾತನಾಡಿ 35 ವರ್ಷ ದಿಂದ ಕಾಳುಮೆಣಸು ಕೃಷಿ ಮಾಡ್ತಿದ್ದೆ. ಅಪ್ ಗ್ರೇಡ್ ಹೇಗೆ ಆಗುವುದು ಎಂಬ ಹುಚ್ಚು ಇತ್ತು. ಹಸಿರು ಆರ್ಗನೈಶೇಸನ್ ಮೂಲಕ ಸೆವೆನ್ ಟೀಮ್ ಪರಿಚಯವಾಯಿತು. ಅದರಲ್ಲಿ ವೈಜ್ಞಾನಿಕ ಪದ್ಧತಿಯನ್ನು ತಿಳಿದುಕೊಳ್ಳಲು ಸಾಧ್ಯವಾಯಿತು. ಅದ್ಭುತ ಕೃಷಿಕರ ಬಗ್ಗೆ ತಿಳಿಯಿತು ಎಂದ ಅವರು ಶಶಿ ಭಟ್ ಅವರ ಸಾಹಸ ಅದ್ಭುತವಾಗಿದೆ. ಅವರ ಸೇವೆಗೆ ಧೈರ್ಯ, ಪ್ರೋತ್ಸಾಹ ನೀಡಿದ್ದೇನೆ ಎಂದರು.
ಕೃಷಿಯಲ್ಲಿ ಹೊಸ ವಿಧಾನ ಅಳವಡಿಸಬೇಕು:
ಕತ್ರಿಬೈಲು ವೆಂಕಟೇಶ್ ಶರ್ಮ ಮಾತನಾಡಿ ಮಿಶ್ರಬೆಳೆ ಮಾಡಿದರೆ ಯಶಸ್ಸು ಸಾಧ್ಯ. ಅಡಿಕೆ, ತೆಂಗು, ಕಾಳುಮೆಣಸು, ಕೊಕ್ಕೋ, ರಬ್ಬರ್ ಬೆಳೆಗಳನ್ನು ಮಿಶ್ರ ಬೆಳೆಯಾಗಿ ಬೆಳೆಯಬೇಕು. ನಾನು 3 ಎಕರೆಯಲ್ಲಿ 4 ಮುಖ್ಯ ಬೆಳೆಯನ್ನು ಬೆಳೆಯುತ್ತಿದ್ದೇನೆ. ಕೃಷಿಯಲ್ಲಿ ಹೊಸ ವಿಧಾನ ಅಳವಡಿಸಬೇಕು. ಮಣ್ಣಿನ ಗುಣ ಅರಿತುಕೊಂಡು ಕಾಪಾಡಿಕೊಳ್ಳಬೇಕು. ಇದರೊಂದಿಗೆ ಕೃಷಿಗೆ ಯಾವತ್ತೂ ಸೋಲು ಬರುವುದಿಲ್ಲ ಎಂದರು.
ಯುವ ಪೀಳಿಗೆ ಕೃಷಿಗೆ ಬರುತ್ತಿರುವುದು ಸಂತೋಷ:
ಹವ್ಯಾಸಿ ಅಡಿಕೆ ಮಾರುಕಟ್ಟೆ ಸಾಮಾಜಿಕ ಜಾಲತಾಣ ವಿಶ್ಲೇಷಕ ಮಹೇಶ್ ಅಜ್ಜಿಮನೆ ಮಾತನಾಡಿ 2 ಲಕ್ಷಕ್ಕೂ ಅಧಿಕ ಬೆಳೆಗಾರರಿಗೆ ಯೂಟ್ಯೂಬ್ ಮೂಲಕ ಅಡಿಕೆ ಬೆಳೆಯ ಬಗ್ಗೆ ನಿಖರ ಮಾಹಿತಿ ತಲುಪಿಸುತ್ತಿದ್ದೇನೆ. ಕರ್ನಾಟಕ ಮಹಾರಾಷ್ಟ್ರ ಗುಜರಾತ್ಗೆ ತಲುಪುತ್ತದೆ. ಬೆಳೆಗಾರರಿಗೆ ಒಳ್ಳೆಯ ಬೆಳೆ ಸಿಗಬೇಕು ಎಂಬುದು ನನ್ನ ಉದ್ಧೇಶವಾಗಿದೆ. ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಅಡಿಕೆ ಬೆಳೆಗೆ ರೂ.500 ರವರೆಗೆ ಕನಿಷ್ಟ ಬೆಲೆ ಬೇಕು. ಯುವ ಪೀಳಿಗೆ ಕೃಷಿಗೆ ಬರುತ್ತಿರುವುದು ಸಂತೋಷವಾಗಿದೆ. ಅವರಿಗೆ ಸಹಕಾರ ಮುಖ್ಯ ಎಂದ ಅವರು ನನ್ನ ಸ್ಥಾನಮಾನಕ್ಕೆ ಶಶಿ ಭಟ್ರವರೇ ಕಾರಣ ಎಂದರು.
ಸಂಪನ್ಮೂಲ ವ್ಯಕ್ತಿ, ಸ್ಪೈಸಿ ಬೋರ್ಡ್ನ ವಿಶ್ರಾಂತ ವಿಜ್ಞಾನಿ ಡಾ|ವೇಣುಗೋಪಾಲ್, ಅಡಿಕೆ ಪತ್ರಿಕೆ ಪ್ರಕಾಶಕ ಪಡಾರು ರಾಮಕೃಷ್ಣ ಶಾಸ್ತ್ರಿ, ಗಡಿನಾಡ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ತೊಟ್ಟಿತ್ತೋಡಿ ಜಯಪ್ರಕಾಶ್ ನಾರಾಯಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಂಧ್ಯಾ ಪ್ರಾರ್ಥಿಸಿದರು. ಕಾರ್ಯಕ್ರಮದ ಸಂಘಟಕ ಹಾಗೂ ಒಕ್ಕೂಟದ ಅಧ್ಯಕ್ಷ ಶಶಿ ಭಟ್ ಪಡಾರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ವಂದಿಸಿದರು. ಪ್ರಸನ್ನ ಕೇಶವ ಕಾರ್ಯಕ್ರಮ ನಿರೂಪಿಸಿದರು. ದಕ್ಷಿಣಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಕೃಷಿಕರು, ಉದ್ಯಮಿಗಳು ಭಾಗವಹಿಸಿದ್ದರು.

ವಿಚಾರಗೋಷ್ಠಿ, ಮಾಹಿತಿ:
ಸಭಾಕಾರ್ಯಕ್ರಮ ಬಳಿಕ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಶಿಬಿರ ನಡೆಯಿತು. ಸ್ಪೈಸಿ ಬೋರ್ಡ್ನ ವಿಶ್ರಾಂತ ವಿಜ್ಞಾನಿ ಡಾ|ವೇಣುಗೋಪಾಲ್ರವರು ಅಡಿಕೆ ಕೃಷಿ, ಗೊಬ್ಬರ ಹಾಗೂ ಎಲೆಚುಕ್ಕಿ ನಿರ್ವಹಣೆ ಬಗ್ಗೆ, ಸೆವೆನ್ ಬೀನ್ ಟೀಮ್ ಮುಖ್ಯಸ್ಥ ಡಾ|ಎಚ್.ಎಸ್.ಧರ್ಮರಾಜ್ ಸಕಲೇಶಪುರರವರು ಕಾಳುಮೆಣಸು ಹಾಗೂ ಕಾಫಿ ಕೃಷಿ ಪೋಷಕಾಂಶಗಳ ನಿರ್ವಹಣೆ ಬಗ್ಗೆ, ಅಡಿಕೆ ಪತ್ರಿಕೆ ಪ್ರಕಾಶಕರಾದ ಪಡಾರು ರಾಮಕೃಷ್ಣ ಶಾಸಿಯವರು ಅಡಿಕೆ ಜೊತೆ ಮಿಶ್ರ ಬೆಳೆಯಾಗಿ ಕೊಕ್ಕೋ ಬೆಳೆಯುವ ಮತ್ತು ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಯುವ ಕೃಷಿಕರ ಸಮ್ಮಿಲನ:
ಅಪರಾಹ್ನ ಭೋಜನದ ನಂತರ ಯುವ ಕೃಷಿಕರ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಐಪಿಎಲ್ ಮುಖ್ಯಸ್ಥ ಸತ್ಯಪ್ರಕಾಶ್ ಅಧ್ಯಕ್ಷತೆ ವಹಿಸಿ ಕಾಫಿ, ಕಾಳುಮೆಣಸು ಹಾಗೂ ಅಡಿಕೆ ಕೃಷಿ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಪುತ್ತೂರು ಕಿಸಾನ್ ಆಗ್ರೋ ಟೂಲ್ಸ್ ಮಾಲಕ, ಯೂಟ್ಯೂಬರ್ ಅಭಿಜಿತ್, ಪ್ರಗತಿಪರ ಕೊಕ್ಕೋ ಬೆಳೆಗಾರ ನವೀನಕೃಷ್ಣ ಶಾಸ್ತ್ರಿ, ಅನಾನುಸು ಬೆಳೆಗಾರ ವಿಶ್ವೇಶ್ವರ ಭಟ್ ಪಂಜೆ ಮುಣ್ಣಿಕಾನ, ಕುರುವೇರಿ ಕ್ಯಾಶ್ ಇಂಡಸ್ಟ್ರೀಸ್ನ ವಿಶ್ವ ಕೇಶವ, ಪ್ರಗತಿಪರ ಯುವ ಅಡಿಕೆ ಬೆಳೆಗಾರ ಸುಧಿರ್ಕೃಷ್ಣ ಪಡಾರು, ಅನುತ್ತಮ ಚಾಕಲೇಟ್ನ ಮಾಲಕ ಬಾಲಸುಬ್ರಹ್ಮಣ್ಯ ಪಿ.ಎಸ್., ಯುವ ಪ್ರಗತಿಪರ ಕೃಷಿಕೆ ಶ್ರೇಯಾರವರು ಅನಿಸಿಕೆ, ಮಾಹಿತಿ ನೀಡಿದರು.
ಸ್ಟಾಲ್ಗಳು:
ಸಮಾವೇಶದಲ್ಲಿ, ಸೀಮಿತ ಸಂಖ್ಯೆಯಲ್ಲಿ ಸ್ಟಾಲ್ಗಳನ್ನು ಅಳವಡಿಸಲಾಗಿತ್ತು. ವೈವಿಧ್ಯಮಯ ಮಾವಿನ ಗಿಡಗಳು, ಹಲಸಿನ ಗಿಡಗಳು, ಶ್ರೀಗಂಧ, ರಕ್ತಚಂದನದ ಗಿಡಗಳು ಸೇರಿದಂತೆ ಹಲವಾರು ಹಣ್ಣಿನ ಹಾಗೂ ವಿವಿಧ ಬಗೆಯ ಗಿಡಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು. ಜತೆಗೆ ಹಲವು ಬಗೆಯ ಗೊಬ್ಬರ ತಯಾರಿಕಾ ಸಂಸ್ಥೆಗಳ ಮಳಿಗೆ, ಕಾಳುಮೆಣಸು ಕೊಯ್ಯುವುದಕ್ಕೆ ಏರುವ ಏಣಿ, ಕಾಳುಮೆಣಸು ಬಿಡಿಸುವ ಯಂತ್ರ, ಶುದ್ದೀಕರಿಸುವ ಯಂತ್ರಗಳ ಮಳಿಗೆ, ಕಾಳುಮೆಣಸು ಬೆಳೆಯುವ ಸಿಮೆಂಟ್ ಕಂಬಗಳ ಮಳಿಗೆ, ಮಂಗಗಳ ಹಾವಳಿ ತಡೆಗಟ್ಟುವ ಸಲಕರಣೆಯ ಮಳಿಗೆ, ಹನಿನೀರಾವರಿ ವ್ಯವಸ್ಥೆಯ ಮಳಿಗೆ, ದೋಟಿ ಮಳಿಗೆಗಳು, ಕ್ಯಾಂಪ್ಕೋ ಚಾಕಲೇಟ್ ಮಳಿಗೆ, ವಿವಿಧ ಬಗೆಯ ಗೊಬ್ಬರಗಳ ಮಳಿಗೆಗಳು, ಚಾಕಲೇಟ್ ಮಳಿಗೆ, ಅಡಿಕೆ ಪತ್ರಿಕೆ ಮೊದಲಾದ ಉಪಯುಕ್ತ ಮಳಿಗೆಗಳು ಲಭ್ಯವಿತ್ತು. ರಿಯಾಯಿತಿ ದರದಲ್ಲಿ ಖರೀದಿಗೆ ಅವಕಾಶವಿದ್ದು ಗ್ರಾಹಕರು ಖರೀದಿ ಮಾಡಿದರು.
ರೈತರತ್ನ ಪ್ರಶಸ್ತಿ ಪುರಸ್ಕೃತರಿಗೆ, ರೈತ ಸಾಧಕರಿಗೆ ಸನ್ಮಾನ
ಏಷ್ಯಾನೆಟ್ ಸುವರ್ಣ ವಾಹಿನಿಯವರಿಂದ ಈ ಬಾರಿಯ ‘ರೈತ ರತ್ನ’ ಪ್ರಶಸ್ತಿ ಸ್ವೀಕರಿಸಿರುವ ಕಲ್ಮಡ್ಕದ ಟಿ.ಆರ್.ಎಸ್.-ರ್ಮ್ನ ಟಿ.ಆರ್.ಸತೀಶ್ಚಂದ್ರ ತೊಟ್ಟಿತ್ತೋಡಿ, ಹವ್ಯಾಸಿ ಹವಾಮಾನ ವೀಕ್ಷಕ ಸಾಯಿಶೇಖರ್ ಬಿ.ಕರಿಕ್ಕಳ, ಮುಳಿಯದ ಬೈಕುಂಜೆ ಫಾರ್ಮ್ನ ಬಿ.ಜಿ. ಬಲರಾಮ್ರವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು. ಸೆವೆನ್ ಬೀನ್ ಟೀಮ್ ಮುಖ್ಯಸ್ಥ, ಹಾಗೂ ಪ್ರಗತಿಪರ ಕೃಷಿಕ ಎಚ್.ಎಸ್.ಧರ್ಮರಾಜ್ ಸಕಲೇಶಪುರ, ಪ್ರಗತಿಪರ ಕೃಷಿಕ ಸಾಗರ ತಾಲೂಕಿನ ಬಾಬುಲ್ ಸಾಬ್ ಹಾಗೂ ಯೂಟ್ಯೂಬರ್, ಕೃಷಿಕ ಹಾಗೂ ಒಕ್ಕೂಟದ ಕಾರ್ಯದರ್ಶಿಯೂ ಆಗಿರುವ ಅಭಿಜಿತ್ ಪುತ್ತೂರುರವರನ್ನು ಸನ್ಮಾನಿಸಲಾಯಿತು.
ಆರ್ಥಿಕ ಸಂಕಷ್ಟದಲ್ಲಿರುವ ಸಹೋದರರಿಗೆ ಶಶಿ ಭಟ್ ಪಡಾರುರವರಿಂದ ದಾರಂದ ಕೊಡುಗೆ
ಸೇಡಿಯಾಪು ಕಜೆ ನಿವಾಸಿಗಳಾದ, ಅವಳಿ ಸಹೋದರರಾದ ಶೈಲೇಶ್ ಕುಲಾಲ್ ಹಾಗೂ ಸಂದೇಶ್ ಕುಲಾಲ್ರವರು ಆರ್ಥಿಕ ಸಂಕಷ್ಟದಲ್ಲಿದ್ದು ಅವರ ಮನೆ ನಿರ್ಮಾಣಕ್ಕೆ ಶಶಿ ಪಡಾರುರವರು ತನ್ನ ವ್ಯವಹಾರದ ಲಾಭಾಂಶದಲ್ಲಿ ತನ್ನ ತೋಟದ ಮರದಿಂದ ದಾರಂದ ನಿರ್ಮಿಸಿ ಅತಿಥಿ, ಗಣ್ಯರ ಮೂಲಕ ಹಸ್ತಾಂತರಿಸಿದರು.

ಸುದ್ದಿ ಅರಿವು ಕೇಂದ್ರದ ತಂಡಕ್ಕೆ ಚಿರಋಣಿ
ನಮ್ಮ ಕಾರ್ಯಕ್ರಮ ಅಭೂತಪೂರ್ವ ಯಶಸ್ಸಿಗೆ ಕಾರಣಕರ್ತರಾದ ಡಾ.ಯು.ಪಿ.ಶಿವಾನಂದರವರು ಹಾಗೂ ಸುದ್ದಿ ಅರಿವು ಕೇಂದ್ರದ ತಂಡಕ್ಕೆ ಚಿರಋಣಿಯಾಗಿರುತ್ತೇವೆ. ನಿಮ್ಮ ಸಹಕಾರ ಇನ್ನು ಮುಂದೆಯೂ ಇರಲಿ. ಸಮಾವೇಶದಲ್ಲಿ ಮಧ್ಯಾಹ್ನದವರೆಗೆ 2000 ಮಂದಿ ಭಾಗವಹಿಸಿದ್ದಾರೆ. 1500 ಮಂದಿ ಭೋಜನ ಸ್ವೀಕರಿಸಿದ್ದಾರೆ. ಇದು ಯಶಸ್ಸಿನ ಕಾರ್ಯಕ್ರಮ. ಸಮಾವೇಶದಲ್ಲಿ ವಿಭಿನ್ನತೆ, ವಿಶೇಷತೆ ಇರಬೇಕೆಂಬ ಆಸೆ ಇತ್ತು. ಅದಕ್ಕಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿರುವ, ಉದ್ಯೋಗಸ್ಥ ಯುವ ಕೃಷಿಕರಿಗಾಗಿ ಯುವ ಕೃಷಿಕರ ಸಮ್ಮಿಲನ ಆಯೋಜಿಸಿದ್ದೇವೆ.
ಶಶಿ ಭಟ್ ಪಡಾರು,
ಕಾರ್ಯಕ್ರಮ ಸಂಘಟಕರು, ಅಧ್ಯಕ್ಷರು, ದ.ಕ., ಉಡುಪಿ, ಕಾಸರಗೋಡು ಅಡಿಕೆ-ಕಾಫಿ ಬೆಳೆಗಾರರ ಒಕ್ಕೂಟ










