







ಪುತ್ತೂರು: ನಗರದ ದರ್ಬೆಯಲ್ಲಿ ವರ್ತಕರ ಮೇಲೆ ನಡೆದ ದಾಳಿ, ಪೊಲೀಸರ ಎದುರಲ್ಲೇ ಮಹಿಳೆಯ ಮೇಲೆ ನಡೆದ ಹಲ್ಲೆ ಹಾಗೂ ಪೊಲೀಸ್ ಜೀಪಿನೊಳಗಿಂದಲೇ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಗಳನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಆ.25ರಂದು ಪುತ್ತೂರು ನಗರದಲ್ಲಿ ಸ್ವಯಂಪ್ರೇರಿತ ಬಂದ್ಗೆ ಕರೆ ನೀಡಿದ್ದು, ಈ ಬಂದ್ ಕರೆಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಜಿಲ್ಲೆ ಹಾಗೂ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಪುತ್ತೂರು ವಿಧಾನಸಭಾ ಕ್ಷೇತ್ರ ಸಂಪೂರ್ಣ ಬೆಂಬಲ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.


ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಜಿಲ್ಲೆ ಪ್ರಕಟಣೆಯಲ್ಲೇನಿದೆ?
ಪುತ್ತೂರು ನಗರದ ದರ್ಬೆಯಲ್ಲಿ ವರ್ತಕರ ಮೇಲೆ ನಡೆದ ಅಮಾನವೀಯ ದಾಳಿಯನ್ನು ಖಂಡಿಸಿ ಮತ್ತು ಪೋಲಿಸರ ಎದುರಲ್ಲೇ ಮಹಿಳೆಯ ಮೇಲೆ ನಡೆದ ಹಲ್ಲೆಪೋಲಿಸ್ ಜೀಪ್ ಒಳಗಿನಿಂದಲೇ ಮಾರಾಣಾಂತಿಕ ಹಲ್ಲೆ ಖಂಡಿಸಿ ಪೋಲಿಸ್ ಇಲಾಖೆಯ ವೈಪಲ್ಯವನ್ನು ಖಂಡಿಸಿ ಮತ್ತು ಈ ಎಲ್ಲಾ ಪ್ರಕರಣದಲ್ಲಿ ನಿಷೇಧಿತ ಪಿಎಫ್ಐ ಸಂಘಟನೆಯ ವ್ಯವಸ್ಥಿತ ಪಿತೂರಿ ಇದ್ದು ಇದರ ಬಗ್ಗೆ ಸೂಕ್ತ ತನಿಖೆ ಮಾಡಬೇಕು, ಅದರಿಂದ ನಗರದಲ್ಲಿ ವರ್ತಕರ ಹಿತರಕ್ಷಣೆ ಸಮಾಜದಲ್ಲಿ ಶಾಂತಿ,ಸಾಮರಸ್ಯ ಕಾಪಾಡಲು ಆಗಸ್ಟ್ 25ನೇ ಮಂಗಳವಾರ ಬೆಳಗ್ಗೆ 6.00 ಗಂಟೆಯಿಂದ ಸಂಜೆ 6.00 ಗಂಟೆಯ ವರೆಗೆ ಹಿಂದೂ ಜಾಗರಣ ವೇದಿಕೆ ಪುತ್ತೂರು ವತಿಯಿಂದ ಕರೆ ಕೊಟ್ಟಿರುವ ಸ್ವಯಂ ಪ್ರೇರಿತ ಮುಷ್ಕರಕ್ಕೆ ವಿಶ್ವ ಹಿಂದೂ ಪರಿಷದ್ ಬಜರಂಗದಳದಿಂದ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲೆಯ ಅಧ್ಯಕ್ಷರು / ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರಕಟಣೆಯಲ್ಲೇನಿದೆ?
ಪುತ್ತೂರು ನಗರದ ದರ್ಬೆಯಲ್ಲಿ ವರ್ತಕರ ಮೇಲೆ ನಡೆದ ಅಮಾನುಷ ದಾಳಿಯನ್ನು ಖಂಡಿಸಿ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯವನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ದಿನಾಂಕ 25-08-2026 ರಂದು ಸ್ವಯಂ ಪ್ರೇರಿತ ಮುಷ್ಕರ ನಡೆಸಲು ವಿನಂತಿಸಿರುತ್ತಾರೆ ಈ ತೀರ್ಮಾನಕ್ಕೆ ಪುತ್ತೂರು ಭಾರತೀಯ ಜನತಾ ಪಾರ್ಟಿಯಿಂದ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದೇವೆ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು, ಬಿಜೆಪಿ ನಗರ ಮಂಡಲದ ಅಧ್ಯಕ್ಷರಾದ ಶಿವಕುಮಾರ್ ಪಿ.ಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ










