







ರೂ.11.05ಲಕ್ಷ ಲಾಭ, ಶೇ.5 ಡಿವಿಡೆಂಡ್


ಪುತ್ತೂರು: ತಾ.ಪಂ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ನೇತ್ರಾವತಿ ಸ್ತ್ರೀಶಕ್ತಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ ರೂ.11.05,612.50 ನಿವ್ವಳ ಲಾಭಗಳಿಸಿದೆ. ಸದಸ್ಯರಿಗೆ ಶೇ.5 ಡಿವಿಡೆಂಡ್ ನೀಡಲಾಗುವುದು ಎಂದು ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ್ ವಾರ್ಷಿಕ ಮಹಾಸಭೆಯಲ್ಲಿ ಹೇಳಿದರು.
ಸಭೆಯು ಆ.24ರಂದು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸಭಾಭವನದಲ್ಲಿ ನಡೆಯಿತು. ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪುತ್ತೂರು ಹಾಗೂ ಕಡಬ ತಾಲೂಕುಗಳ ವ್ಯಾಪ್ತಿ ಹೊಂದಿರುವ ಸಂಘವು 4,389ಸದಸ್ಯರಿಂದ ರೂ.49,69,000 ಪಾಲು ಬಂಡವಾಳ ಹಾಗೂ ರೂ.11,47,000 ಸರಕಾರದ ಸಹಾಯ ನಿಧಿಯನ್ನು ಹೊಂದಿದೆ. ರೂ.2,52,48,010ನಿರಖು ಠೇವಣಿಯನ್ನು ಹೊಂದಿದೆ. ಸದಸ್ಯರಿಗೆ ರೂ.1,81,08,048ಸಾಲ ವಿತರಿಸಲಾಗಿದ್ದು ರೂ.2,30,68,424 ಸಾಲ ಹೊರಬಾಕಿಯಿರುತ್ತದೆ. ಆಡಿಟ್ ವರ್ಗೀಕರಣದಲ್ಲಿ ಸಂಘವು ‘ಎ’ ಶ್ರೇಣಿ ಪಡೆದುಕೊಂಡಿದೆ. ಸಂಘ ಗಳಿಸಿದ ಲಾಭಾಂಶವನ್ನು ಉಪ ನಿಬಂಧನೆಯಂತೆ ವಿಂಗಡಿಸಲಾಗಿದೆ ಎಂದು ಹೇಳಿದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಗಳ ಕಾಳೆ ಮಾತನಾಡಿ, ಮಹಿಳೆಯ ಸ್ವಾವಲಂಬಿ ಬದುಕಿಗಾಗಿ ಸರಕಾರ ಹಾಗೂ ಮಹಿಳಾ ನಿಗಮದಿಂದ ದೊರೆಯುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.ಸನ್ಮಾನ ಸ್ವೀಕರಿಸಿದ ಮಾಜಿ ಅಧ್ಯಕ್ಷೆ ಜೊಹರಾ ನಿಸಾರ್ ಅಹಮ್ಮದ್ ಮಾತನಾಡಿ, ಸಂಘದ ಕಚೇರಿಯು ತಾ.ಪಂ.ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಲ್ಲಿಂದ ತೆರವು ಮಾಡಲು ಬೇಕಾದ ಅನಿವಾರ್ಯತೆ ಬಂದರೆ ಸಮಸ್ಯೆ ಎದುರಾಗಲಿದೆ. ಹೀಗಾಗಿ ಸಂಘಕ್ಕೆ ಸ್ವಂತ ಕಟ್ಟಡಕ್ಕೆ ಪ್ರಯತ್ನಿಸಬೇಕು. ಸಂಘದ ನಿರ್ದೇಕರು ಹಾಗೂ ಸದಸ್ಯರು ಸದಸ್ಯತ್ವನ್ನು ಏರಿಕೆ ಮಾಡಬೇಕು ಎಂದು ಹೇಳಿದರು. ಸುಲೋಚನಾ ಮಾತನಾಡಿ, ಸಂಘದ ಬೆಳವಣಿಗೆಯಲ್ಲಿ ಸದಸ್ಯರು ಸಹಕರಿಸುವಂತೆ ವಿನಂತಿಸಿದರು.
ಸನ್ಮಾನ:
ಸಂಘದ ಮಾಜಿ ಅಧ್ಯಕ್ಷೆ ಜೊಹರಾ ನಿಸಾರ್ ಅಹಮ್ಮದ್, ಮಾಜಿ ನಿರ್ದೇಶಕಿ ಸುಲೋಚನ ಹಾಗೂ ಸಂಘದ ಪದನಿಮಿತ್ತ ನಿರ್ದೇಶಕರಾಗಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರೀಶ್ ಕೆ.ಅನುಪಸ್ಥಿತಿಯಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಗಳ ಕಾಳೆ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.




ಸಹಕಾರಿ ಸಂಘದ ನಿರ್ದೇಶಕರಾದ ಜಯಲಕ್ಷ್ಮೀ ಸುರೇಶ್, ಕೆ.ಟಿ ವಲ್ಸಮ್ಮ, ಸುಶೀಲ ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಂ. ವರದಿ, ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷೆ ಜಯಂತಿ ಆರ್.ಗೌಡ ವಂದಿಸಿದರು. ನಿರ್ದೇಶಕರಾದ ಧನ್ಯಾ ಮೋಹನ್, ಅಮಿತಾ ಹರೀಶ್, ಚಂದ್ರಮ್ಮ, ಪ್ರೇಮಲತಾ ಹಾಗೂ ಸ್ವರ್ಣಲತಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶ್ಯಾಮಲಾ ಭಟ್ ಪ್ರಾರ್ಥಿಸಿದರು. ಅಕೌಂಟೆಂಟ್ ಅಶ್ವಿನಿ ಸಾಮಾನಿ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಭೋಜನ ನೆರವೇರಿತು.

ಸಹಕಾರಿ ಸಂಘವು ಪ್ರತಿವರ್ಷ ವ್ಯವಹಾರ ಹಾಗೂ ಲಾಭ ಗಳಿಕೆಯಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ. ಈ ವರ್ಷ ಸದಸ್ಯರಿಗೆ ಲಾಭಾಂಶದಲ್ಲಿ ಶೇ.5 ಡಿವಿಡೆಂಡ್ ನೀಡಲಾಗುತ್ತಿದೆ. ಸದಸ್ಯರು ಸಂಘವ ಮುಖಾಂತರವೇ ಹೆಚ್ಚಿನ ವ್ಯವಹಾರ ಮಾಡಿದಾಗ ಸಂಘವು ಅತೀ ಹೆಚ್ಚು ಲಾಭಗಳಿಸಿದರೆ ಮುಂದಿನ ವರ್ಷ ಶೇ.10 ಡಿವಿಡೆಂಡ್ ನೀಡಲಾಗುವುದು. ಉತ್ತಮ ವ್ಯವಹಾರದಲ್ಲಿ ನಮ್ಮ ಸಂಘವು ಈಗಾಗಲೇ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಪ್ರತಿಯೊಬ್ಬ ಸದಸ್ಯರು ಸಂಘವು ಮುಖಾಂತರ ವ್ಯವಹಾರ ಮಾಡಿದರೆ ರಾಜ್ಯದಲ್ಲೇ ಪ್ರಥಮ ಸ್ಥಾನ ಬರಲಿದೆ. ಡಿವಿಡೆಂಡ್ ಮೊತ್ತವನ್ನು ಸದಸ್ಯರ ಎಸ್.ಬಿ ಖಾತೆಗೆ ಜಮೆ ಮಾಡಲಾಗುತ್ತಿದ್ದು ಖಾತೆ ಹೊಂದಿಲ್ಲದ ಸದಸ್ಯರು ಖಾತೆ ಮಾಡಿ ಡಿವಿಡೆಂಡ್ ಪ್ರಯೋಜನ ಪಡೆದುಕೊಳ್ಳಬೇಕು.
-ಮೀನಾಕ್ಷಿ ಮಂಜುನಾಥ್, ಅಧ್ಯಕ್ಷರು










