







ಆಲಂಕಾರು: ಆಲಂಕಾರಿನಲ್ಲಿ ಭಾರೀ ಮಳೆಯಿಂದಾಗಿ ನೀರು ಅಂಗಡಿಗೆ ನುಗ್ಗಿ ವರ್ತಕರು ಆಕ್ರೋಶಗೊಂಡ ಘಟನೆ ನಡೆದಿದೆ.ಆಲಂಕಾರು ದುರ್ಗಾಂಬಾ ಆಟದ ಮೈದಾನದ ಬದಿಯ ಚರಂಡಿಯಲ್ಲಿ ನೀರು ತುಂಬಿ ರಾಜ್ಯ ಹೆದ್ದಾರಿಯಲ್ಲಿ ಹರಿದಾಡುತ್ತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹೆದ್ದಾರಿಯಲ್ಲಿ ಹರಿದ ನೀರು ಮೈದಾನದ ಎದುರುಗಡೆಯ ಆಯಿಲ್ ಮಿಲ್ ಮತ್ತು ಅಡಿಕೆ ಅಂಗಡಿಗಳಿಗೆ ನುಗ್ಗುತ್ತಿದೆ. ಈಗಾಗಲೇ ಹಲವು ಬಾರಿ ಅಂಗಡಿಯೊಳಗೆ ನೀರು ನುಗ್ಗಿ ನಷ್ಟ ಅನುಭವಿಸಿದ್ದೇವೆ ಎಂದು ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



ಚರಂಡಿಯಲ್ಲಿ ನೀರು ಸರಿಯಾಗಿ ಹರಿದಾಡದ ಕಾರಣ ಈ ಸಮಸ್ಯೆ ಉಂಟಾಗುತ್ತಿದೆ. ದುರಸ್ತಿಗೆ ಗ್ರಾಮ ಪಂಚಾಯಿತಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವರ್ತಕರಾದ ಪ್ರಸನ್ನ ಕೆ. ಮತ್ತು ಬಿ.ಎಂ. ಮಹಮ್ಮದ್ ಅವರು ತಿಳಿಸಿದ್ದಾರೆ.













