







ಪುತ್ತೂರು: ಪುತ್ತೂರಿನ ದರ್ಬೆಯಲ್ಲಿ ನಡೆದ ಅಂಗಡಿ ಮಾಲಕಿ ಹಾಗೂ ಗ್ರಾಹಕರ ನಡುವಿನ ಗಲಾಟೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಸಂಘ ಪರಿವಾರ ಕೋಮು ಸಂಘರ್ಷದ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ನ ವಕ್ತಾರ ಅಮಳ ರಾಮಚಂದ್ರ ಅವರು ಆರೋಪಿಸಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಪುತ್ತೂರಿನಲ್ಲಿ ಸಣ್ಣಪುಟ್ಟ ಘಟನೆಗಳನ್ನು ರಾಜಕೀಯಗೊಳಿಸಿ ಜನರ ಶಾಂತಿ, ನೆಮ್ಮದಿಗೆ ಧಕ್ಕೆ ತರುವ ಪ್ರಯತ್ನ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದೆ ಎಂದು ಆರೋಪಿಸಿದರು. ದರ್ಬೆ ಪ್ರಕರಣವೂ ಇದೇ ರೀತಿಯಲ್ಲಿ ವಿವಾದಕ್ಕೆ ತಿರುಗಿಸಲಾಗುತ್ತಿದೆ ಎಂದು ಹೇಳಿದರು. ಪುತ್ತೂರಿನಲ್ಲಿ ನಡೆದ ಅಂಗಡಿ ಮಾಲಕಿ ಮತ್ತು ಗ್ರಾಹಕರ ನಡುವಿನ ಮಾತಿನ ಚಕಮಕಿ ಹಾಗೂ ತಳ್ಳಾಟವನ್ನು ಮುಂದಿಟ್ಟುಕೊಂಡು ಬಂದ್ ಹಾಗೂ ಪುತ್ತೂರು ಚಲೋ ಕಾರ್ಯಕ್ರಮಕ್ಕೆ ಕರೆ ನೀಡಿರುವುದು ರಾಜಕೀಯ ಉದ್ದೇಶದಿಂದ ಕೂಡಿದೆ ಎಂದು ಕಾಂಗ್ರೆಸ್ ಮುಖಂಡರು ಟೀಕಿಸಿದರು. ಯಾವುದೇ ಕೊಲೆ, ಅತ್ಯಾಚಾರ ಅಥವಾ ಗಂಭೀರ ಅಪರಾಧ ನಡೆದಿಲ್ಲದ ಸಂದರ್ಭದಲ್ಲಿ ಸಣ್ಣ ಘಟನೆಯನ್ನು ಕೋಮು ಸಂಘರ್ಷದ ಸ್ವರೂಪಕ್ಕೆ ತರುವ ಪ್ರಯತ್ನ ಸರಿಯಲ್ಲ ಎಂದು ಹೇಳಿದರು.



ಮೂರು ಪ್ರಕರಣಗಳನ್ನು ರಾಜಕೀಯಗೊಳಿಸುವ ಪ್ರಯತ್ನ
ಬಿಜೆಪಿ ಮತ್ತು ಸಂಘ ಪರಿವಾರ ಕಳೆದ ಒಂದೂವರೆ ವರ್ಷದಿಂದ ಪುತ್ತೂರಿನಲ್ಲಿ ವಿವಾದಾತ್ಮಕ ವಿಚಾರಗಳನ್ನು ಹುಡುಕುತ್ತಿದ್ದು, ಸಿಗದಿದ್ದಾಗ ವಿವಾದವಲ್ಲದ ವಿಚಾರಗಳನ್ನು ವಿವಾದವನ್ನಾಗಿ ಮಾಡಲು ಪ್ರಯತ್ನಿಸುತ್ತಿವೆ ಎಂದು ಕಾಂಗ್ರೆಸ್ ಆರೋಪಿಸಿತು. ಪುರುಷರಕಟ್ಟೆಯ ಚೂರಿ ಪ್ರಕರಣ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ರಸ್ತೆ ವಿಚಾರ ಹಾಗೂ ಬೋಳುವಾರಿನ ರಸ್ತೆ ಕಾಮಗಾರಿಯನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳಲು ಪ್ರಯತ್ನಿಸಿತ್ತು. ಈ ಪ್ರಕರಣಗಳಲ್ಲಿ ಜನರಿಂದ ತಿರಸ್ಕಾರಕ್ಕೆ ಒಳಗಾದ ಬಳಿಕ ಇದೀಗ ದರ್ಬೆ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.
ಮೆಡಿಕಲ್ ಕಾಲೇಜು ಪ್ರಗತಿ ಸಹಿಸಲಾಗುತ್ತಿಲ್ಲ
ಪುತ್ತೂರಿನ ಸೇಡಿಯಾಪಿನಲ್ಲಿ ಮೆಡಿಕಲ್ ಕಾಲೇಜು ಆರಂಭಕ್ಕೆ ರಾಜ್ಯ ಬಜೆಟ್ನಲ್ಲಿ ಹಸಿರು ನಿಶಾನೆ ದೊರೆತ ಬಳಿಕ ಬಿಜೆಪಿ ತಳಮಳಗೊಂಡಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು. ಮೆಡಿಕಲ್ ಕಾಲೇಜಿನ 300 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ರೂ.182 ಕೋಟಿ ಅನುದಾನ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿರುವುದು ಹಾಗೂ ಕಾಲೇಜು ಕಟ್ಟಡ ನಿರ್ಮಾಣಕ್ಕೆ ರೂ.547 ಕೋಟಿ ಯೋಜನೆಗೆ ಸಚಿವ ಸಂಪುಟದ ಅನುಮೋದನೆ ದೊರೆತಿರುವುದು ಬಿಜೆಪಿಗೆ ಅಸಮಾಧಾನ ಉಂಟುಮಾಡಿದೆ ಎಂದು ಅಮಳ ರಾಮಚಂದ್ರ ಹೇಳಿದರು.
ಸಿ.ಸಿ.ಟಿ.ವಿ. ದೃಶ್ಯಾವಳಿಯಲ್ಲಿ ಘಟನೆ ಸ್ಪಷ್ಟ
ದರ್ಬೆ ಪ್ರಕರಣಕ್ಕೆ ಸಂಬಂಧಿಸಿದ ಸಿ.ಸಿ.ಟಿ.ವಿ. ದೃಶ್ಯಾವಳಿಗಳಲ್ಲಿ ಘಟನೆ ನಡೆದಿರುವ ರೀತಿಯು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದರು. ಅಂಗಡಿಯೊಳಗಿನ ಮಾತುಕತೆ, ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಯತ್ನ, ಅಂಗಡಿ ಮಾಲಕಿಯಿಂದ ಅದನ್ನು ತಡೆಯುವ ಪ್ರಯತ್ನ, ಬಳಿಕ ನಡೆದ ಗಲಾಟೆ ಸೇರಿದಂತೆ ಹಲವು ಸಂಗತಿಗಳು ದೃಶ್ಯಾವಳಿಯಲ್ಲಿ ದಾಖಲಾಗಿವೆ ಎಂದು ವಿವರಿಸಿದರು. ಒಂದು ಪ್ರಕರಣದಲ್ಲಿ ಒಂದು ಧರ್ಮದವರನ್ನೇ ತಪ್ಪಿತಸ್ಥರೆಂದು ಬಿಂಬಿಸುವುದು ಸರಿಯಲ್ಲ. ಘಟನೆಯನ್ನು ಹಿಂದೂ-ಮುಸ್ಲಿಂ ಸಂಘರ್ಷ, ಕೋಮುವಾದ ಅಥವಾ ಇತರ ಆಯಾಮಗಳಿಗೆ ತಿರುಗಿಸುವ ಅಗತ್ಯವಿಲ್ಲ ಎಂದು ಅವರು ಅಮಳ ರಾಮಚಂದ್ರ ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಪ್ರಚಾರ ಆರೋಪ
ಘಟನೆಯನ್ನು ಸಾಮಾಜಿಕ ಜಾಲತಾಣಗಳು ಹಾಗೂ ಸಾರ್ವಜನಿಕ ವಲಯದಲ್ಲಿ ತಿರುಚಿ ಪ್ರಚಾರ ಮಾಡುವ ಮೂಲಕ ಪುತ್ತೂರಿನ ಶಾಂತಿ ಕದಡುವ ಪ್ರಯತ್ನ ನಡೆಯುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತು. ಘಟನಾ ಸ್ಥಳದಲ್ಲಿ ಸೇರಿದ್ದವರ ಧರ್ಮ, ಸಂಘಟನೆಗಳೊಂದಿಗಿನ ಸಂಬಂಧದ ಕುರಿತು ಆಧಾರವಿಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಪೊಲೀಸ್ ಜೀಪಿನೊಳಗೆ ನುಗ್ಗಲು ಯತ್ನಿಸಿದ ವ್ಯಕ್ತಿಯ ಬಂಧನದ ವಿಚಾರವನ್ನೂ ರಾಜಕೀಯಗೊಳಿಸಲಾಗುತ್ತಿದೆ. ಅಂಗಡಿ ಮಾಲಕರು ಆತನ ವಿರುದ್ಧ ದೂರು ನೀಡಿಲ್ಲ; ಪೊಲೀಸರೇ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದಾರೆ ಎಂದು ಅಮಳ ರಾಮಚಂದ್ರ ಹೇಳಿದರು.
ಕೋಮು ರಾಜಕಾರಣಕ್ಕೆ ಜನಬೆಂಬಲವಿಲ್ಲ
ಬಿಜೆಪಿ ಮತ್ತು ಸಂಘ ಪರಿವಾರದ ಕೋಮು ರಾಜಕಾರಣಕ್ಕೆ ಜನಬೆಂಬಲ ಇಲ್ಲ. ಜನರು ಅಭಿವೃದ್ಧಿ ರಾಜಕಾರಣದತ್ತ ಒಲವು ತೋರುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದರು. ಪುತ್ತೂರು ಬಂದ್ ಯಶಸ್ವಿಯಾಗಿದೆ ಎಂಬ ಬಿಜೆಪಿ ಹೇಳಿಕೆಯನ್ನೂ ಅವರು ತಳ್ಳಿಹಾಕಿದರು. ಈದ್ ಮಿಲಾದ್ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಇದ್ದುದರಿಂದ ಸಹಜವಾಗಿಯೇ ಹಲವು ಅಂಗಡಿಗಳು ಮುಚ್ಚಿದ್ದವು. ಈ ಹಿನ್ನೆಲೆಯಲ್ಲಿ ಬಂದ್ಗೆ ಕರೆ ನೀಡಲಾಗಿತ್ತು ಎಂದು ಅಮಳ ರಾಮಚಂದ್ರ ಅವರು ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಪುತ್ತೂರು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ಸಾಮಾಜಿಕ ಜಾಲತಾಣದ ಅಧ್ಯಕ್ಷ ಸುಪ್ರಿತ್ ಕಣ್ಣರಾಯ, ವಕ್ತಾರ ರಾಮ ಮೇನಾಲ ಹಾಗೂ ರವೀಂದ್ರ ರೈ ನೆಕ್ಕಿಲು ಉಪಸ್ಥಿತರಿದ್ದರು.










