







ಮರಿ ಆನೆ ಸೇರಿದಂತೆ ಆರು ಆನೆಗಳು ರಬ್ಬರ್ ತೋಟದಲ್ಲಿ ಬೀಡು; ಗ್ರಾಮಸ್ಥರಲ್ಲಿ ಆತಂಕ


ಕಡಬ: ಬಳ್ಪ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಸಂಚರಿಸುತ್ತಿದ್ದ ಕಾಡಾನೆಗಳ ಹಿಂಡು ಇದೀಗ ಪಕ್ಕದ ಐತ್ತೂರು ಗ್ರಾಮಕ್ಕೆ ಲಗ್ಗೆ ಇಟ್ಟಿದ್ದು, ಎನ್ ಕೂಪ್ , ಕೊರಿಯರ್ ಪ್ರದೇಶದ ಸಮೀಪದ ರಬ್ಬರ್ ತೋಟದಲ್ಲಿ ಬೀಡುಬಿಟ್ಟಿರುವುದು ಸ್ಥಳೀಯ ಕೃಷಿಕರು ಹಾಗೂ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಒಂದು ಮರಿ ಆನೆ ಸೇರಿದಂತೆ ಒಟ್ಟು ಆರು ಕಾಡಾನೆಗಳು ಹಿಂಡಿನಲ್ಲಿರುವುದು ಮತ್ತು ಕಾಡಾನೆಗಳು ಸಂಚರಿಸಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದವು. ಪಠೋಳಿಯಿಂದ ಕನ್ಕಲ್ ಭಾಗದತ್ತ ತೆರಳಿದ ಆನೆಗಳು ದಾರಿಯುದ್ದಕ್ಕೂ ಬೈನೆ ಮರಗಳನ್ನು ಮುರಿದು ಹಾಕಿ ಹಾನಿ ಉಂಟುಮಾಡಿದ್ದವು.
ಅಲ್ಲಿಂದ ಮುಂದೆ ಸಾಗಿದ ಕಾಡಾನೆಗಳ ಹಿಂಡು ಎಣ್ಣೆಮಜಲು ಬಳಿಯ ಬೀರಿಕಾಡು ಪ್ರದೇಶದಲ್ಲಿ ಸಂಚರಿಸಿ, ಬಳಿಕ ನದಿಯನ್ನು ದಾಟಿ ಐತೂರು ಗ್ರಾಮದ ಏನ್‌ಕೂಪ್ ಕ್ವಾಟರ್ಸ್ ಹಾಗೂ ಓಟಕಜೆ ಪರಿಸರದತ್ತ ತೆರಳಿದೆ. ನಂತರ ಅಲ್ಲಿನ ಅರಣ್ಯ ಇಲಾಖೆಯ ರಬ್ಬರ್ ತೋಟಕ್ಕೆ ಪ್ರವೇಶಿಸಿದ ಆನೆಗಳು ಅಲ್ಲಿಯೇ ಠಿಕಾಣಿ ಹೂಡಿವೆ.




ಗ್ರಾಮಸ್ಥರಲ್ಲಿ ಆತಂಕ
ಜನವಸತಿ ಹಾಗೂ ಕೃಷಿ ತೋಟಗಳಿರುವ ಪ್ರದೇಶದಲ್ಲೇ ಕಾಡಾನೆಗಳು ಬೀಡುಬಿಟ್ಟಿರುವುದರಿಂದ ತೋಟದ ಕೆಲಸಗಳಿಗೆ ತೆರಳುವ ಕಾರ್ಮಿಕರು, ಕೃಷಿಕರು ಹಾಗೂ ಶಾಲಾ ಮಕ್ಕಳು ಆತಂಕಕ್ಕೊಳಗಾಗಿದ್ದಾರೆ. ಕಾಡಾನೆಗಳ ಹಿಂಡು ಯಾವ ಭಾಗಕ್ಕೆ ಚಲಿಸಲಿದೆ ಎಂಬ ಆತಂಕವೂ ಸ್ಥಳೀಯರಲ್ಲಿ ಮೂಡಿದೆ.
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಒಂಟಿಯಾಗಿ ಸಂಚರಿಸದಂತೆ ಹಾಗೂ ಕಾಡಾನೆಗಳಿರುವ ಪ್ರದೇಶದತ್ತ ತೆರಳುವಾಗ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಪರಸ್ಪರ ಸಂದೇಶ ರವಾನಿಸುತ್ತಿದ್ದಾರೆ. ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಇಟಿಎಫ್ (ಎಲಿಫೆಂಟ್ ಟಾಸ್ಕ್ ಫೋರ್ಸ್) ಪಡೆ ಸ್ಥಳಕ್ಕೆ ಆಗಮಿಸಿದ್ದು, ಕಾಡಾನೆಗಳ ಚಲನವಲನದ ಮೇಲೆ ನಿಗಾ ಇರಿಸಿದ್ದಾರೆ. ಆನೆಗಳನ್ನು ಸುರಕ್ಷಿತವಾಗಿ ಕಾಡಿನತ್ತ ಹಿಮ್ಮೆಟ್ಟಿಸಲು ಅಗತ್ಯ ಕಾರ್ಯಾಚರಣೆ ಕೈಗೊಳ್ಳಲಾಗಿದೆ.










