ರಾಮಕುಂಜದಲ್ಲಿ ಕಡಬ ತಾ. 5ನೆಯ ಕನ್ನಡ ಸಾಹಿತ್ಯ ಸಮ್ಮೇಳನ

0

ಆಂಗ್ಲ ಮಾಧ್ಯಮದ ಮೋಹವೂ ಕನ್ನಡ ಶಾಲೆ ಮುಚ್ಚುವ ಸ್ಥಿತಿಗೆ ಕಾರಣ; ಸಮ್ಮೇಳನಾಧ್ಯಕ್ಷೆ ಶಕುಂತಳಾ ಶೆಟ್ಟಿ

ರಾಮಕುಂಜ; ಕನ್ನಡ ಈ ನೆಲದ ಭಾಷೆ. ಇಂಗ್ಲಿಷ್ ಕಲಿಯುವುದಕ್ಕೆ, ಮಾತನಾಡುವುದಕ್ಕೆ ಶಾಲೆಗಳಿವೆ. ಮನೆ ಭಾಷೆ, ನೆಲದ ಭಾಷೆಗೆ ಮನೆಯೇ ಮೊದಲ ಪಾಠ ಶಾಲೆಯಾಗಬೇಕು. ಕನ್ನಡ ಶಾಲೆ ಮುಚ್ಚುವ ಸ್ಥಿತಿಗೆ ಸರಕಾರದ ನೀತಿ, ಕಲಿಸುವ ಶಿಕ್ಷಕರ ರೀತಿ, ಆಂಗ್ಲ ಮಾಧ್ಯಮದ ಮೋಹ ಕಾರಣ ಎನ್ನಬಹುದು ಎಂದು ಕಡಬ ತಾಲೂಕು 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಶಕುಂತಳಾ ಟಿ.ಶೆಟ್ಟಿ ಕುಂತೂರುಪದವು ಅಭಿಪ್ರಾಯಿಸಿದರು.

ಅವರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕದ ವತಿಯಿಂದ ರಾಮಕುಂಜ ಶ್ರೀ ವಿಶ್ವೇಶತೀರ್ಥ ಸೌದದ ಅನುಪಮ ಸಭಾಂಗಣದ ವಿಶ್ವೇಶತೀರ್ಥ ವೇದಿಕೆಯಲ್ಲಿ ಆ.29ರಂದು ನಡೆದ ಕಡಬ ತಾಲೂಕು 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದರು. ಸುಲಲಿತ, ಸುಸ್ಪಷ್ಟ ಕನ್ನಡ ಅಧ್ಯಾಪಕರಿಗೂ ಬರಬೇಕು. ಹೊರಗಿನಿಂದ ಬಂದ ಕೆಲ ಶಿಕ್ಷಕರಲ್ಲಿ ಅದು ಇಲ್ಲ. ಸರಕಾರಿ ಶಾಲೆಯಲ್ಲಿ ಊಟ, ಪುಸ್ತಕ, ಉಡುಪು, ಹಾಲು, ಕಾಲಿಗೆ ಶೂ ಎಲ್ಲವನ್ನು ಕೊಟ್ಟರೂ ಮುಚ್ಚುತ್ತವೆ ಎನ್ನುವಾಗ ನೆನಪಾಗುವುದು ಮೂಡಬಿದಿರೆ ಆಳ್ವಾಸ್ ಸಂಸ್ಥೆ. ಕನ್ನಡ ಮಾಧ್ಯಮದಲ್ಲಿ ಒಂದೂವರೆ ಸಾವಿರ ವಿದ್ಯಾರ್ಥಿಗಳು ಅಲ್ಲೇ ಹಾಸ್ಟೆಲಲ್ಲಿ ಕಲಿಯುತ್ತಿದ್ದಾರೆ ಎಂದರೆ, ಸರಕಾರ ಎಲ್ಲವನ್ನು ಕೊಟ್ಟರೂ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಲ್ಲ ಎಂದರೆ ಕಾರಣ ಹುಡುಕಬೇಕು. ವಿದ್ಯಾರ್ಥಿಗಳನ್ನು ಆಕರ್ಷಿಸುವ ಆಟ, ಪಾಠ ಕಡಿಮೆಯಾಗಿದೆ. ಅಂಕವೇ ಮುಖ್ಯವಾಗಿದೆ. ಭವಿಷ್ಯದ ಬದುಕು ಕಟ್ಟುವ ಅನುಭವ ಇಲ್ಲದಾಗಿದೆ. ಛಲ, ಧೈರ್ಯ ಕಡಿಮೆಯಾಗುತ್ತಿದೆ ಎಂದು ಶಕುಂತಳಾ ಶೆಟ್ಟಿ ಹೇಳಿದರು.

ತಪ್ಪು ಕಲ್ಪನೆಯೂ ಕಾರಣ:
ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳಿಗೆ ಉದ್ಯೋಗ ಸಿಗುವುದಿಲ್ಲ ಎಂಬ ಕಲ್ಪನೆಯಿಂದ ಹೆತ್ತವರಿಗೆ ಇಂಗ್ಲೀಷ್ ವ್ಯಾಮೋಹ ಜಾಸ್ತಿಯಾಗಿದೆ. ಉದ್ಯೋಗ ಇಂಗ್ಲೀಷ್ ಕಲಿತವನಿಗೂ ಸಿಗುವ ಭರವಸೆ ಇಲ್ಲ. ಕನ್ನಡದ ಮಕ್ಕಳು ಉದ್ಯೋಗಕ್ಕೆ ಯೋಗ್ಯರಲ್ಲ ಎಂಬ ಯೋಚನೆಯೂ ತಪ್ಪು. ಇಲ್ಲಿಯ ಐದೂ ಸಮ್ಮೇಳನದ ಅಧ್ಯಕ್ಷರೂ ಕನ್ನಡ ಮಾಧ್ಯಮದಲ್ಲೇ ಓದಿದವರು. ನಾನು ಸಾಮಾಜಿಕ, ಶೈಕ್ಷಣಿಕ, ಸಹಕಾರ ಹೀಗೆ ಎಲ್ಲಾ ರಂಗದಲ್ಲೂ ಇದ್ದು, ಮೂರು ಜಿಲ್ಲೆಗಳ ಲೇಖಕಿಯರ ಸಂಘಕ್ಕೆ ಮುಟ್ಟಿರುವುದೂ ಕನ್ನಡ ಮಾಧ್ಯಮದ ಶಾಲೆಯಿಂದಲೇ ಎಂಬ ಹೆಮ್ಮೆ ಇದೆ. ಈಗ ಹಳ್ಳಿ ಊರಲ್ಲೂ ಇಂಗ್ಲೀಷ್ ಮಾಧ್ಯಮ ಶಾಲೆಗಳು ಪ್ರಾರಂಭವಾಗಿದೆ. ಮಾಧ್ಯಮ ಬದಲಾವಣೆ ಆದಂತೆ ಸಂಸ್ಕೃತಿಯೂ ಬದಲಾಗುತ್ತದೆ ಎಂಬುದು ಸುಳ್ಳಲ್ಲ ಎಂದು ಶಕುಂತಳಾ ಶೆಟ್ಟಿ ಹೇಳಿದರು.

ಕನ್ನಡ ಮರೆಯಾಗುತ್ತಿದೆ;
ಸಾಹಿತ್ಯ ಎಂದರೆ ಕಾದಂಬರಿ ಮಾತ್ರ ಅಲ್ಲ. ಯಕ್ಷಗಾನ, ಭರತನಾಟ್ಯ, ಸಂಗೀತ, ನಾಟಕ, ಭಜನೆ ಎಲ್ಲದರಲ್ಲೂ ಸಾಹಿತ್ಯ ತುಂಬಿದೆ. ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ದೇಶ ವಿದೇಶಗಳಿಂದ ವಿದ್ಯಾರ್ಥಿಗಳು ಬಂದು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಆ ಕಾರಣಕ್ಕೆ ಕನ್ನಡದ ಮಡಿಲಲ್ಲಿರುವ ತುಳು, ಕನ್ನಡ ನುಡಿ, ಇತರ ಭಾಷೆಗಳು ಮರೆಯಾಗುತ್ತಿದೆ. ರಾಜ್ಯದಲ್ಲಿ ಕನ್ನಡ ಮರೆಯಾಗುತ್ತಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಕಷ್ಟವಾದೀತು ಎಂದು ಎಚ್ಚರಿಸಿದ ಶಕುಂತಳಾ ಶೆಟ್ಟಿ ಅವರು, ಪುಸ್ತಕ ಓದಿದಂತೆ ಅನುಭವ ಜಾಸ್ತಿಯಾಗುತ್ತದೆ. ಓದುವ ಯುವಜನತೆ ತಯಾರಾಗಬೇಕಿದೆ. ಅದಕ್ಕಾಗಿ ಅವರನ್ನು ಪ್ರೋತ್ಸಾಹಿಸುವ ಹೆತ್ತವರು, ಶಿಕ್ಷಕರು ಬೇಕಾಗಿದ್ದಾರೆ. ಮೊಬೈಲ್, ಲ್ಯಾಪ್‌ಟಾಪ್‌ಗಳ ಜೊತೆ ಪುಸ್ತಕದ ರುಚಿಯೂ ತಿಳಿದರೆ ಓದುವ ಸಂಖ್ಯೆ ಜಾಸ್ತಿಯಾಗಬಹುದು. ಕನ್ನಡ ಕಾವ್ಯ, ಕಾದಂಬರಿ, ನಾಟಕ ಓದುವುದು ಕನ್ನಡ ಉಳಿಸುವ ಕಾಯಕವೇ ಆಗಿದೆ ಎಂದು ಅಭಿಪ್ರಾಯಿಸಿದರು. ಕನ್ನಡದ ಮನಸು ಸ್ಥಿರವಾಗಿ ಉಳಿಯಬೇಕು. ಕನ್ನಡ ಸಾಹಿತ್ಯ ಸಮಾಜದ ಜೀವನಾಡಿ ಆಗಬೇಕು. ಕನ್ನಡ ಉಳಿಬೇಕು, ಬೆಳೆಯಬೇಕು, ಕುಣಿಯಬೇಕು, ಕನ್ನಡಾಂಬೆ ನಗಬೇಕು, ಅದೇ ನಮ್ಮ ಉಸಿರಾಗಬೇಕು. ಇದಕ್ಕೆ ಇಂದೇ ಪಣತೊಡೋಣ, ಹೆಜ್ಜೆ ಮುಂದಡಿ ಇರಿಸೋಣ ಎಂದು ಶಕುಂತಳಾ ಶೆಟ್ಟಿ ಹೇಳಿದರು.

ಸಾಹಿತ್ಯ ಸಮಾಜದ ಜೀವನಾಡಿ -ಡಾ| ವರದರಾಜ ಚಂದ್ರಗಿರಿ;
ತೆಂಗಿನ ಗರಿ ಅರಳಿಸುವ ಮೂಲಕ ಸಮ್ಮೇಳನ ಉದ್ಘಾಟಿಸಿದ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ವರದರಾಜ ಚಂದ್ರಗಿರಿ ಅವರು ಮಾತನಾಡಿ, ಕನ್ನಡ ಸಾಹಿತ್ಯ ಸಮಾಜದ ಭಾಗವಾಗಿದೆ. ಪಂಪ, ಬಸವಣ್ಣ, ಕನಕದಾಸರಿಂದ ತೊಡಗಿ ಈಗಿನ ಹೊಸಗನ್ನಡದ ಸಾಹಿತಿಗಳೂ ಸಮಾಜದ ಅಂಕುಡೊಂಕುಗಳಿಗೆ ಸ್ಪಂದಿಸಿದವರೇ ಆಗಿದ್ದಾರೆ. ಸಮಾಜದಲ್ಲಿನ ಜಾತಿಯತೆ, ಅಸಮಾನತೆ, ಬಡತನ, ಹಸಿವು, ಶೋಷಣೆ ವಿರುದ್ಧ ಸಾಹಿತಿಗಳೂ ಸ್ಪಂದಿಸುತ್ತಲೇ ಇದ್ದಾರೆ. ಆದ್ದರಿಂದ ಸಾಹಿತ್ಯ ಸಮಾಜದ ಜೀವನಾಡಿಯಾಗಿದೆ ಎಂದರು. 21ನೇ ಶತಮಾನದ 25 ವರ್ಷಗಳನ್ನು ಈಗಾಗಲೇ ಕಳೆದಿದ್ದೇವೆ. ಈ 25ವರ್ಷದ ಅವಧಿಯಲ್ಲಿ ತಂತ್ರಜ್ಞಾನದ ಉತ್ಪನ್ನಗಳು ನಮ್ಮ ಬದುಕು ಆವರಿಸಿಕೊಂಡಿದೆ. ಈ ಕಾಲದಲ್ಲಿ ಹೊಸ ಸವಾಲು ಎದುರಿಸುತ್ತಿದ್ದೇವೆ. ಯುವ ಜನರಲ್ಲಿ ಕ್ರೌರ್ಯ ತುಂಬುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವೂ ಸಾಹಿತ್ಯ ಸಮ್ಮೇಳನದ ಮೂಲಕ ಆಗಬೇಕು. ಮೌಲ್ಯಗಳನ್ನು ಸಂವೇದನಾಶೀಲರನ್ನಾಗಿ ಮಾಡುವ ಕೆಲಸವನ್ನು ಸಾಹಿತ್ಯ ಮಾಡುತ್ತಲೇ ಇದೆ. ಸಾಹಿತ್ಯವೇ ಎಲ್ಲಾ ಮೌಲ್ಯಗಳ ತಾಯಿ. ಇದರಿಂದ ಹೊರಹೋದರೆ ಸಾಹಿತ್ಯ ಕುಸಿಯುತ್ತದೆ ಎಂದು ಹೇಳಿದ ಡಾ.ವರದರಾಜ ಚಂದ್ರಗಿರಿ ಅವರು, ವಿದ್ಯಾರ್ಥಿಗಳು ಮನೆಯಲ್ಲಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಲ್ಲಿ ಪೋಷಕರ ಜವಾಬ್ದಾರಿಯೂ ಇದೆ. ಈಗಿನ ಯುವ ಜನತೆಗೆ ಮೊಬೈಲ್ ಹಿಡಿದುಕೊಳ್ಳುವುದು ಫ್ಯಾಷನ್ ಆಗಿದೆ. ಪುಸ್ತಕದ ಅಭಿರುಚಿ, ಹವ್ಯಾಸ ಮಕ್ಕಳಲ್ಲಿ ಬೆಳೆದಲ್ಲಿ ತಲೆ ಎತ್ತಿಹೋಗುವ ದಿನಗಳು ಮುಂದೆ ಬರುತ್ತದೆ ಎಂದು ಹೇಳಿದರು.

ಜಿಲ್ಲಾ ಘಟಕದಿಂದ ಮನೆ ಮನೆಗೆ ಸಾಹಿತ್ಯ-ಡಾ.ಎಂ.ಪಿ.ಶ್ರೀನಾಥ;
ಕಸಾಪ ದ.ಕ.ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ ಅವರು ಆಶಯ ನುಡಿಯನ್ನಾಡಿ, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲೆಯ 9 ತಾಲೂಕುಗಳಲ್ಲಿ 500ಕ್ಕಿಂತಲೂ ಹೆಚ್ಚು ಕಾರ್ಯಕ್ರಮ ಮಾಡುವ ಮೂಲಕ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಲಾಗಿದೆ. ಕಳೆದ ನಾಲ್ಕೂವರೇ ವರ್ಷಗಳಲ್ಲಿ 18 ತಾಲೂಕು, 4 ಜಿಲ್ಲಾ, ಅನೇಕ ಹೋಬಳಿ, ಗ್ರಾಮ, ವಿದ್ಯಾರ್ಥಿ ಸಮ್ಮೇಳನ ನಡೆಸಿದ್ದೇವೆ. ಹಿರಿಯರ ಮಾರ್ಗದರ್ಶನ ಯುವಜನರಿಗೆ, ವಿದ್ಯಾರ್ಥಿಗಳಿಗೆ ಬೇಕಾಗಿದೆ. ಕಡಬ ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕವಾಗಿ ಮುಂಚೂಣಿಯಲ್ಲಿರುವ ತಾಲೂಕು ಆಗಿದೆ. ಕೃಷಿ, ಸಂಸ್ಕೃತಿ, ಸಾಹಿತ್ಯ, ಭಾಷಾ ಸಾಮರಸ್ಯ ಸೇರಿದಂತೆ ಬೇರೆ ಬೇರೆ ಆಶಯಗಳನ್ನಿಟ್ಟುಕೊಂಡು ಸಾಹಿತ್ಯ ಸಮ್ಮೇಳನ ಮಾಡುತ್ತಿದ್ದೇವೆ. ಇಂದು ರಾಮಕುಂಜದಲ್ಲಿ ನಡೆಯುತ್ತಿರುವ ಕಡಬ ತಾಲೂಕಿನ 5ನೆಯ ಸಾಹಿತ್ಯ ಸಮ್ಮೇಳನವನ್ನು ಸಾಹಿತ್ಯ ಮತ್ತು ಸಮಾಜದ ಜೀವನಾಡಿ ಎಂಬ ಆಶಯವನ್ನಿಟ್ಟುಕೊಂಡು ಆಯೋಜಿಸಲಾಗಿದೆ ಎಂದು ಹೇಳಿದರು.

ಚಿತ್ರ: ಪರಿಮಳ, ರಾಮಕುಂಜ

ಅನುದಾನವಿಲ್ಲದಿದ್ದರೂ ಸುತ್ತೋಲೆ ಪಾಲಿಸಬೇಕು-ಕೆ.ಸೇಸಪ್ಪ ರೈ;
ಕಸಾಪ ಕಡಬ ತಾಲೂಕು ಅಧ್ಯಕ್ಷ ಕೆ.ಸೇಸಪ್ಪ ರೈ ಅವರು ಪ್ರಸ್ತಾವನೆ ಮಾಡಿ, ರಾಮಕುಂಜದಲ್ಲಿ ನಡೆಯುತ್ತಿರುವ ಮೂರನೇ ಸಮ್ಮೇಳನ ಇದಾಗಿದೆ. ಕುದ್ಕಾಡಿ ವಿಶ್ವನಾಥ ರೈ, ಟಿ.ನಾರಾಯಣ ಭಟ್ ಅವರು ಈ ಹಿಂದಿನ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಇದೀಗ ನಡೆಯುತ್ತಿರುವ ಮೂರನೇ ಸಮ್ಮೇಳನ ಶಕುಂತಳಾ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ. ಕಡಬ ತಾಲೂಕಿನಲ್ಲಿ ನಡೆಯುತ್ತಿರುವ 5ನೆಯ ಸಮ್ಮೇಳನ ಆಗಿದೆ. ಸರಕಾರದಿಂದ ಯಾವುದೇ ಅನುದಾನ ಸಿಗುತ್ತಿಲ್ಲವಾದರೂ ಸರಕಾರದ ಸುತ್ತೋಲೆಯನ್ನು ಪಾಲಿಸಬೇಕು. ಓದುವುದು, ಬರೆಯುವುದನ್ನು ಮಕ್ಕಳಿಗೆ ಕಳಿಸಬೇಕು. ಕರ್ನಾಟಕದಲ್ಲಿ ಕನ್ನಡ ಉಳಿಯಬೇಕು. ರಾಮಕುಂಜದಲ್ಲಿ ಕನ್ನಡಕ್ಕೆ ಕೊರತೆ ಇಲ್ಲ ಎಂದು ಹೇಳಿದರು.

ಕನ್ನಡ ಕಲಿಯಬೇಕು, ಬೆಳೆಯಬೇಕು-ಗಣೇಶ ಸವಣೂರ;
ಕಡಬ ತಹಶೀಲ್ದಾರ್ ಗಣೇಶ್ ಸವಣೂರ ಮಾತನಾಡಿ, ಕನ್ನಡ ಕಲಿಯಬೇಕು, ಬೆಳೆಸಬೇಕು, ಉಳಿಸಬೇಕೆಂಬ ನಿಟ್ಟಿನಲ್ಲಿ 1919ರಿಂದ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಕಡಬ ತಾಲೂಕಿನಲ್ಲಿ ನಡೆಯುತ್ತಿರುವ 5ನೆಯ ಸಮ್ಮೇಳನ ಯಶಸ್ವಿಯಾಗಿ ನಡೆಯಲಿ ಎಂದರು.

ಸಾಧಕರ ಬದುಕು ಅರ್ಥೈಸಿಕೊಳ್ಳಬೇಕು-ಕರುಣಾಕರ ಗೋಗಟೆ;
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಕರುಣಾಕರ ಗೋಗಟೆ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಿಧೇಯಕ, ಪ್ರತಿಉಪಕಾರ ಭಾವನೆ ಇಲ್ಲ ಎಂಬುದು ಸುಳ್ಳು. ಸಾಧಕರ ಬದುಕು ಅರ್ಥೈಸಿಕೊಂಡಲ್ಲಿ ವಿದ್ಯಾರ್ಥಿಗಳೂ ಸಾಧಕರಾಗಲು ಸಾಧ್ಯವಿದೆ ಎಂದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ನಾರಾಯಣ ಭಟ್ ಅವರು ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಶಿಕ್ಷಕಿ ಸರಿತಾ ಜನಾರ್ದನ ಅವರು ಸಮ್ಮೇಳನದ ಉದ್ಘಾಟಕರನ್ನು ಪರಿಚಯಿಸಿದರು. ’ಪಂಚವರ್ಣ’ ಸ್ಮರಣ ಸಂಚಿಕೆಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ದ.ಕ.ಕನ್ನಡ ಸಾಹಿತ್ಯ ಪರಿಷತ್ ಗೌರವ ಕೋಶಾಧ್ಯಕ್ಷರಾದ ಬಿ. ಐತ್ತಪ್ಪ ನಾಯ್ಕ್, ಕಸಾಪ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಡಿ.ಯದುಪತಿ ಗೌಡ, ಕಸಾಪ ಪುತ್ತೂರು ತಾಲೂಕು ಅಧ್ಯಕ್ಷ ಉಮೇಶ ನಾಯಕ್, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ ಸಂಚಾಲಕ ಜಯಸೂರ್ಯ ರೈ ಮಾದೋಡಿ, ರಾಮಕುಂಜ ಕ್ಲಸ್ಟರ್ ಸಿಆರ್‌ಪಿ ಮಹೇಶ್, ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಸಂಚಾಲಕ ಶಿವಪ್ರಸಾದ್ ಇಜ್ಜಾವು, ಶ್ರೀ ರಾಮಕುಂಜೇಶ್ವರ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಗಣರಾಜ ಕುಂಬ್ಳೆ, ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ, ಕೊಯಿಲ ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷೆ ಪುಷ್ಪಾ ಸುಭಾಷ್ ಶೆಟ್ಟಿ, ರಾಮಕುಂಜ ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷೆ ಸುಚೇತ, ರಾಮಕುಂಜ ಗ್ರಾ.ಪಂ.ಪಿಡಿಒ ಮೋಹನ್, ಕಸಾಪ ಕಡಬ ತಾಲೂಕು ನಿಕಟಪೂರ್ವಾಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ, ಗೌರವ ಕೋಶಾಧ್ಯಕ್ಷ ಕೆ.ಬಾಲಚಂದ್ರ ಮುಚ್ಚಿಂತಾಯ, ಸದಸ್ಯರಾದ ಗ್ರೇಸಿ ಪಿಂಟೊ ಕಡಬ, ಎ.ಎನ್.ಕೊಳಂಬೆ ರಾಮಕುಂಜ, ವೆಂಕಟರಮಣ ನೆಲ್ಯಾಡಿ, ಯಶವಂತ ರೈ ಸುಬ್ರಹ್ಮಣ್ಯ, 5ನೆಯ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಕೇಶವ ಅಮೈ ಕಲಾಯಿಗುತ್ತು, ಗೌರವಾಧ್ಯಕ್ಷ ರಾಧಾಕೃಷ್ಣ ಕೆ.ಎಸ್., ಕಾರ್ಯಾಧ್ಯಕ್ಷ ಟಿ.ನಾರಾಯಣ ಭಟ್, ಸಂಚಾಲಕ ಬಾಲಕೃಷ್ಣ ಯಡಪಡಿತ್ತಾಯ ಕಿಜಾನ, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ಗೌಡ ಸಾನಿಧ್ಯ ವಳೆಂಜ, ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗುರುರಾಜ್ ರೈ ಕೇವಳ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಮ್ಮೇಳನಾಧ್ಯಕ್ಷೆ ಶಕುಂತಳಾ ಶೆಟ್ಟಿ ಅವರು ದೀಪ ಪ್ರಜ್ವಲಿಸಿ ವೇದಿಕೆಯ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಗಾಯತ್ರಿ ಯು.ಎನ್.ಸ್ವಾಗತಿಸಿ, ಕಸಾಪ ಕಡಬ ತಾಲೂಕು ಕೋಶಾಧ್ಯಕ್ಷ ಬಾಲಚಂದ್ರ ಮುಚ್ಚಿಂತಾಯ ವಂದಿಸಿದರು. ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜಿನ ಉಪನ್ಯಾಸಕ ಚೇತನ್ ಆನೆಗುಂಡಿ ನಿರೂಪಿಸಿದರು. ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜಿನ ಉಪನ್ಯಾಸಕ ವಿಶ್ವನಾಥ ಶೆಟ್ಟಿ ಮತ್ತು ಬಳಗದವರು ನಾಡಗೀತೆ, ರೈತಗೀತೆ ಹಾಡಿದರು. ಶಿಕ್ಷಕ ರಾಧಾಕೃಷ್ಣ ಬಿ. ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಸಾಪ ಕಡಬ ತಾಲೂಕು ಸಂಘಟನಾ ಕಾರ್ಯದರ್ಶಿ ಕಿಶೋರ್‌ಕುಮಾರ್ ಸಹಕರಿಸಿದರು. ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.

ಆಯ್ಕೆಯಾದಾಗ ಭಯವಾಗಿತ್ತು;
ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಸೇಸಪ್ಪ ರೈ ಅವರು ಫೋನ್ ಕರೆ ಮಾಡಿ ಕಡಬ ತಾಲೂಕು 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷೆಯಾಗಿ ಆಯ್ಕೆ ಮಾಡಿದ್ದೇವೆ ಎಂದಾಗ ತುಂಬಾ ಭಯವಾಗಿತ್ತು. ಆಗಲೇ ಆಗುವುದಿಲ್ಲ ಎಂದು ಹೇಳಿಬಿಟ್ಟಿದ್ದೆ. ಆದರೆ ನನ್ನ ಪತಿಯ ಆತ್ಮೀಯ ಶಿಷ್ಯರಾದ ಟಿ.ನಾರಾಯಣ ಭಟ್, ಕಸಾಪ ಕಡಬ ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ, ಗೌರವ ಕೋಶಾಧ್ಯಕ್ಷ ಬಾಲಚಂದ್ರ ಮುಚ್ಚಿಂತ್ತಾಯ, ನಿಕಟಪೂರ್ವಾಧ್ಯಕ್ಷ ಜನಾರ್ದನ ಗೌಡ, ಕಸಾಪ ದ.ಕ. ಗೌರವ ಕೋಶಾಧ್ಯಕ್ಷ ಐತ್ತಪ್ಪ ನಾಯ್ಕ್ ಸಹಿತ ಎಲ್ಲರೂ ಧೈರ್ಯ ತುಂಬಿದ್ದರಿಂದ ಒಪ್ಪಿಕೊಂಡಿದ್ದೇನೆ. ನನಗೆ ಅವಕಾಶ ಮಾಡಿಕೊಟ್ಟ ಕಸಾಪ ಕಡಬ ತಾಲೂಕು ಅಧ್ಯಕ್ಷರಾದ ಕೆ.ಸೇಸಪ್ಪ ರೈ ಮತ್ತು ಅವರ ತಂಡಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿ ಶಕುಂತಳಾ ಶೆಟ್ಟಿ ಅವರು ಮಾತು ಆರಂಭಿಸಿದರು.

ರಾಮಕುಂಜದಿಂದಲೇ ಪಯಣ;
ರಾಮಕುಂಜ ನನಗೆ ಮೇಲೇರಲು ಮೆಟ್ಟಲುಗಳನ್ನು ಒದಗಿಸಿದ ನೆಲ ಎಂಬ ಹೆಮ್ಮೆ ಇದೆ. ಯುವತಿ ಮಂಡಲದ ಯುವತಿಯಾಗಿ ತಾಲೂಕು ಯುವಜನ ಮೇಳದಲ್ಲಿ ಪ್ರಥಮತಃ ಭಾಗವಹಿಸಿರುವುದು ರಾಮಕುಂಜದಲ್ಲಿ. ಧಾರ್ಮಿಕವಾಗಿ ಸಾರ್ವಜನಿಕ ಸಭೆಯಲ್ಲಿ ಪ್ರಥಮವಾಗಿ ಭಾಗವಹಿಸಿರುವುದು ರಾಮಕುಂಜ ಗಣೇಶೋತ್ಸವದಲ್ಲಿ. ಇದೀಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ವೇದಿಕೆ ಏರಿರುವುದು ರಾಮಕುಂಜದಲ್ಲಿ. ನನ್ನ ಪಾಲಿಗೆ ಇದೊಂದು ವಿಶೇಷ ಅನುಭವ ಎಂದು ಶಕುಂತಳಾ ಶೆಟ್ಟಿ ಹೇಳಿದರು.

ಪುಸ್ತಕ, ಪ್ರಾಚ್ಯ ವಸ್ತು ಪ್ರದರ್ಶನ;
ಸಾಹಿತ್ಯ ಸಮ್ಮೇಳನದ ವಿಶೇಷವಾಗಿ ಪುಸ್ತಕ, ಪ್ರಾಚ್ಯ ವಸ್ತು, ವಿಜ್ಞಾನ ಮತ್ತು ಗಣಿತ ಮಾದರಿಗಳ ಹಾಗೂ ಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು. ಕಸಾಪ ಕಡಬ ತಾಲೂಕು ನಿಕಟಪೂರ್ವಾಧ್ಯಕ್ಷ ಜನಾರ್ದನ ಗೌಡ ಪಣೆಮಜಲು ಕಲಾಪ್ರದರ್ಶನವನ್ನು, ರಮೇಶ್ ಕೋಟೆ ವಿಜ್ಞಾನ ಮತ್ತು ಗಣಿತ ಮಾದರಿ ಪ್ರದರ್ಶನ, ಕಡಬ ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ ಅವರು ಪುಸ್ತಕ ಪ್ರದರ್ಶನ ಹಾಗೂ ಬಿ.ಯದುಪತಿ ಗೌಡ ಅವರು ಪ್ರಾಚ್ಯ ವಸ್ತುಪ್ರದರ್ಶನ ಮಳಿಗೆ ಉದ್ಘಾಟಿಸಿದರು. ಟಿ.ನಾರಾಯಣ ಭಟ್ ಅವರು ಅನುಪಮ ಸಭಾಂಗಣ ಉದ್ಘಾಟಿಸಿದರು.

LEAVE A REPLY

Please enter your comment!
Please enter your name here