ಕಡಬ ತಾ.5ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ

0

ರಾಮಕುಂಜ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕದ ವತಿಯಿಂದ ನಡೆದ ಕಡಬ ತಾಲೂಕು 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಆ.29ರಂದು ಸಂಜೆ ರಾಮಕುಂಜ ಶ್ರೀ ವಿಶ್ವೇಶತೀರ್ಥ ಸೌಧದ ಅನುಪಮ ಸಭಾಂಗಣದ ವಿಶ್ವೇಶತೀರ್ಥ ವೇದಿಕೆಯಲ್ಲಿ ನಡೆಯಿತು.

ಸಮಾರೋಪ ಭಾಷಣ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಧನಂಜಯ ಕುಂಬ್ಳೆ ಅವರು, ಕನ್ನಡದ ಮೇಲಿನ ಪ್ರೀತಿ ಪ್ರಕಟಿಸಲು, ಅಭಿಮಾನ ಹೆಚ್ಚಿಸಿಕೊಳ್ಳಲು ಸಾಹಿತ್ಯ ಸಮ್ಮೇಳನಗಳು ಬೇಕು. ಯುವ ಜನತೆಗೆ ಸಾಹಿತ್ಯದ ಸಂಯಮ ಮುಟ್ಟಿಸುವ ಕೆಲಸ ಹಿರಿಯರಿಂದ ಆಗಬೇಕು. ಪುಸ್ತಕ ಓದುವ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸಬೇಕೆಂದು ಹೇಳಿದರು. ಕನ್ನಡ ಸಂಘಟನೆಗೆ ಪ್ರಾಧಿಕಾರ, ನಾನಾ ಸಂಘಟನೆಗಳಿದ್ದರೂ ಕನ್ನಡದ ಸ್ಥಿತಿ ಶೋಚನೀಯವಾಗಿದೆ. ಸರಕಾರಿ ಶಾಲೆ, ಅನುದಾನಿತ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಸರಕಾರ, ಖಾಸಗಿಯವರಿಗೆ ಕನ್ನಡ ಬೇಡ, ಇದರ ಬಗ್ಗೆ ಧ್ವನಿ ಎತ್ತಬೇಕಾಗಿದೆ ಎಂದು ಡಾ.ಧನಂಜಯ ಕುಂಬ್ಳೆ ಹೇಳಿದರು.


ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ, ಸಾಹಿತ್ಯ ಸಮ್ಮೇಳನದಲ್ಲಿ ಯುವಕರ ಸಂಖ್ಯೆ ಕಡಿಮೆಯಾಗುತ್ತಿದೆ. ನಮಗೆ ಬರೆಯಲು ಆಗದಿದ್ದರೂ ಸಾಹಿತಿಗಳು ಬರೆಯುವ ಪುಸ್ತಕ ಓದುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಬೇಕು. ಮಹಿಳೆಯರಲ್ಲಿ ಪುಸ್ತಕ ಓದುವ ಅಭಿರುಚಿ ಹೆಚ್ಚು ಇದೆ ಎಂದರು.


ಸಮ್ಮೇಳನಾಧ್ಯಕ್ಷೆ ಶಕುಂತಳಾ ಶೆಟ್ಟಿ ಅವರು ಮಾತನಾಡಿ, ಪೂರ್ವಜನ್ಮದ ಪುಣ್ಯದ ಫಲವಾಗಿ ಸಮ್ಮೇಳನಾಧ್ಯಕ್ಷೆಯಾಗುವ ಯೋಗ ಸಿಕ್ಕಿದೆ. ಯೋಗ ಕೂಡಿ ಬಂದ ಕಾರಣ ಈ ಯೋಗ್ಯತೆ ಸಿಕ್ಕಿದೆ. ಕೆ.ಸೇಸಪ್ಪ ರೈ ಅವರ ನೇತೃತ್ವದಲ್ಲಿ ಸಮ್ಮೇಳನ ಸುವ್ಯವಸ್ಥಿತವಾಗಿ ನಡೆದಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಸಾಪ ದ.ಕ.ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ ಅವರು ಮಾತನಾಡಿ, ಕಡಬ ತಾಲೂಕು ೫ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸದ ಪುಟ ಸೇರಿದೆ. ಇದೊಂದು ಮಾದರಿ ಸಾಹಿತ್ಯ ಸಮ್ಮೇಳನ ಆಗಿ ಮೂಡಿಬಂದಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಮನೆಗೊಂದು ಗ್ರಂಥಾಲಯ ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕೆ ನಾವೆಲ್ಲರೂ ಸಹಕರಿಸುವ ಎಂದರು.

ಸನ್ಮಾನ:
ಕಡಬ ತಾಲೂಕು 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ನಾರಾಯಣ ಭಟ್ ಟಿ., ಅಧ್ಯಕ್ಷ ಕೇಶವ ಅಮೈ, ಸಂಚಾಲಕ ಬಾಲಕೃಷ್ಣ ಯಡಪಡಿತ್ತಾಯ ಕಿಜಾನ, ಪ್ರಧಾನ ಕಾರ್ಯದರ್ಶಿ ಗಾಯತ್ರಿ ಯು.ಎನ್., ಕಾರ್ಯದರ್ಶಿ ಪ್ರಕಾಶ್ ಗೌಡ, ಜೊತೆ ಕಾರ್ಯದರ್ಶಿಗಳಾದ ಚೆನ್ನಕೇಶವ ರೈ ಗುತ್ತುಪಾಲು, ಕರುಣಾಕರ ಉರ್ಕ, ಕಸಾಪ ಕಡಬ ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ, ಗೌರವ ಕೋಶಾಧ್ಯಕ್ಷ ಕೆ.ಬಾಲಚಂದ್ರ ಮುಚ್ಚಿಂತಾಯ, ಸಂಘಟನಾ ಕಾರ್ಯದರ್ಶಿ ಕಿಶೋರ್‌ಕುಮಾರ್ ಬಿ., ಸದಸ್ಯರಾದ ಗ್ರೇಸಿ ಪಿಂಟೋ, ಯಶವಂತ ರೈ ಸುಬ್ರಹ್ಮಣ್ಯ, ರಮೇಶ್ ಕೋಟೆ, ಪುಷ್ಪಾವತಿ ರಾಮಕುಂಜ, ಆರ್.ವೆಂಕಟ್ರಮಣ, ಸಿದ್ದೀಕ್ ನೀರಾಜೆ, ಎ.ಎನ್.ಕೊಳಂಬೆ, ಪ್ರೇಮ ಬಿ., ನಿಕಟಪೂರ್ವ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಗಣೇಶ್ ಕಟ್ಟಪುಣಿ, ಹರೀಶ್ ಆಚಾರ್ಯ, ಚೇತನ್ ಆನೆಗುಂಡಿ ಅವರನ್ನು ಕಡಬ ತಾಲೂಕು ಕಸಾಪ ಘಟಕದಿಂದ ಸನ್ಮಾನಿಸಿ ಗೌರವಿಸಲಾಯಿತು. ಸಮ್ಮೇಳನಾಧ್ಯಕ್ಷೆ ಶಕುಂತಳಾ ಟಿ.ಶೆಟ್ಟಿ, ಕಡಬ ತಾಲೂಕು ಅಧ್ಯಕ್ಷ ಕೆ.ಸೇಸಪ್ಪ ರೈ ಅವರನ್ನು ಸಮಾರೋಪದಲ್ಲಿ ಸನ್ಮಾನಿಸಲಾಯಿತು.

ನಿವೃತ್ತ ಉಪನ್ಯಾಸಕ ಗಣರಾಜ್ ಕುಂಬ್ಳೆ ಅವರು ಡಾ.ಧನಂಜಯ ಕುಂಬ್ಳೆ ಅವರನ್ನು ಪರಿಚಯಿಸಿದರು. ಕಸಾಪ ಕಡಬ ತಾಲೂಕು ಘಟಕದ ನಿಕಟಪೂರ್ವಾಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಕೇಶವ ಅಮೈ ಕಲಾಯಿಗುತ್ತು, ಕಾರ್ಯಾಧ್ಯಕ್ಷ ಟಿ.ನಾರಾಯಣ ಭಟ್, ಕರುಣಾಕರ ಗೋಗಟೆ, ಶರತ್‌ಕುಮಾರ್, ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಚಕ್ರಪಾಣಿ, ಕಡಬ ಪಟ್ಟಣ ಪಂಚಾಯತ್ ಸದಸ್ಯೆ ಅಕ್ಷತಾ, ಆಲಂಕಾರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ಮಾಧವ ಪೂಜಾರಿ ಕೈಯಪ್ಪೆ, ಶೇಷಪತಿ ರೈ ಗುತ್ತುಪಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗುರುರಾಜ್ ರೈ ಕೇವಳ ಸ್ವಾಗತಿಸಿ, ಕೆ.ಸೇಸಪ್ಪ ರೈ ವಂದಿಸಿದರು. ರಮೇಶ್ ರೈ ರಾಮಜಾಲು, ಚೇತನ್ ಆನೆಗುಂಡಿ ನಿರೂಪಿಸಿದರು. ಶಿಕ್ಷಕ ಸಂಜನ್ ನಿರ್ವಹಣೆ ಮಾಡಿದರು.

LEAVE A REPLY

Please enter your comment!
Please enter your name here