







ದೈಹಿಕ ವ್ಯಾಯಾಮದೊಂದಿಗೆ ಅತ್ಯುತ್ತಮ ಶೈಕ್ಷಣಿಕ ಸಾಮರ್ಥ್ಯ ಅಗತ್ಯ- ಸುರೇಶ್ ಡಿ.


ಪುತ್ತೂರು: ಪುತ್ತೂರು ನಗರ ವಲಯ ಮಟ್ಟದ 14 ಮತ್ತು 17ರ ವಯೋಮಾನದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ನಡೆಯಿತು.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಡಿ.ರವರು ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸಿ ಮಾತನಾಡಿ ಆಧುನಿಕ ಜೀವನ ಶೈಲಿಯಲ್ಲಿ ಪ್ರತಿ ಮಗುವಿಗೂ ಕೂಡ ಪ್ರತಿನಿತ್ಯ ದೈಹಿಕ ವ್ಯಾಯಾಮದೊಂದಿಗೆ ಅತ್ಯುತ್ತಮ ಶೈಕ್ಷಣಿಕ ಸಾಮರ್ಥ್ಯವನ್ನು ಹೊಂದುವಂಥದ್ದು ಅತ್ಯಂತ ಅಗತ್ಯ. ಆ ನಿಟ್ಟಿನಲ್ಲಿ ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದ ಸಾಧನೆಗಳು ಪುತ್ತೂರು ಕ್ಷೇತ್ರದ ಕ್ರೀಡಾ ಕ್ಷೇತ್ರವನ್ನು ಬೆಳಗಲಿ ಎಂದರು.
ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸಿಲ್ವಿಯಾ ರುತ್ ಕ್ಯಾಸ್ಟೆಲಿನೋ ಮಾತನಾಡಿ ಕಬಡ್ಡಿ ಅಂಕಣವನ್ನು ಧೈರ್ಯದಿಂದ ಪ್ರವೇಶಿಸುವ ಆಟಗಾರನು ತನ್ನ ಸಾಮರ್ಥ್ಯವನ್ನು ತೋರಿಸಬಲ್ಲನು. ಈ ಆಟದಲ್ಲಿ ನಿಜವಾದ ಶಕ್ತಿ ಒಬ್ಬನ ಆಟದಿಂದ ಮಾತ್ರವಲ್ಲ, ತಂಡದಿಂದ ಸಾಧ್ಯ. ನಾನು ಎನ್ನುವುದಕ್ಕಿಂತ, ನಾವು ಎನ್ನುವ ಮನೋಭಾವ ತಂಡದಲ್ಲಿ ಇರಬೇಕು.ಸೋಲು ಗೆಲುವು ಸಹಜ, ಆದರೆ ಪ್ರತಿಯೊಬ್ಬ ಕ್ರೀಡಾ ಪಟುವು ನಿಯಮ ಪಾಲನೆ, ಶಿಸ್ತು, ಪರಸ್ಪರ ಗೌರವ ಕಾಪಾಡಿಕೊಂಡು ಆಟವಾಡಬೇಕು ಎಂದು ಶುಭಹಾರೈಸಿದರು.
ವೇದಿಕೆಯಲ್ಲಿ ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ರೋಶನ್ ಲಸ್ರಾದೋ, ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಪ್ರತಿನಿಧಿ ಪೌಲ್ ಹೆರಾಲ್ಡ್ ಮಸ್ಕ್ಯರೇನ್ಹಸ್, ಸಿ.ಆರ್.ಪಿ ಶಶಿಕಲಾ, ಶಾಲಾ ಮುಖ್ಯ ಶಿಕ್ಷಕಿ ರೋಸಲಿನ್ ಲೋಬೊ, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಪ್ರಧಾನ ಮಂತ್ರಿ ಪೋಷಣ್ ಅಭಿಯಾನದ ಸಹಾಯಕ ನಿರ್ದೇಶಕಿ ಜಲಜಾಕ್ಷಿ, ಪುತ್ತೂರು ನಗರ ವಲಯದ ನೋಡಲ್ ಅಧಿಕಾರಿ ಕೃಷ್ಣಯ್ಯ ಕೆ. ಮತ್ತು ಸಹಾಯಕ ನೋಡಲ್ ಅಧಿಕಾರಿ ಪ್ರಮೀಳಾ ಬಿ.ಕೆ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಾಹಂ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಜೆಸಿಂತಾ ಪಿರೇರಾ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಅಧಿಕಾರಿ ನವೀನ್ ವೇಗಸ್, ರಕ್ಷಕ ಶಿಕ್ಷಕ ಸಂಘದ ಜೊತೆ ಕಾರ್ಯದರ್ಶಿ ಪ್ರೆಸಿಲ್ಲ ಮೊಂತೇರೊ ಉಪಸ್ಥಿತರಿದ್ದರು.
ಶಾಲಾ ಮುಖ್ಯಶಿಕ್ಷಕಿ ರೋಸಲಿನ್ ಲೋಬೊ ಅತಿಥಿಗಳನ್ನು ಸ್ವಾಗತಿಸಿ ಶಾಲು ಹೊದಿಸಿ ಗೌರವಿಸಿದರು. ಪುತ್ತೂರು ನಗರ ವಲಯ ಮಟ್ಟದ ಕಬ್ಬಡಿ ಪಂದ್ಯಾಟಕ್ಕೆ ದಾನಿಗಳ ರೂಪದಲ್ಲಿ ಸಹಕಾರ ನೀಡಿದ ಎಲ್ಲಾ ಪೋಷಕರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಶಾಲಾ ಶಿಕ್ಷಕಿ ರೂಪ ಡಿಕೋಸ್ಟ ದಾನಿಗಳ ಪಟ್ಟಿ ವಾಚಿಸಿ ವಂದಿಸಿದರು. ಲಿಟ್ಲ್ ಫ್ಲವರ್ ಶಾಲೆಯ ಶಿಕ್ಷಕ ಬಾಲಕೃಷ್ಣ ರೈ ಪೋರ್ದಾಲ್ ಕಾರ್ಯಕ್ರಮ ನಿರೂಪಿಸಿದರು.



ಸಮಾರೋಪ ಸಮಾರಂಭ:
ಸಂಜೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರಿನ ಬೆಥನಿ ಸಂಸ್ಥೆಯ ಸಂಚಾಲಕರಾದ ಭಗಿನಿ ಪ್ರಶಾಂತಿ ಬಿ ಎಸ್ ವಹಿಸಿ ವಿಜೇತ ತಂಡಗಳಿಗೆ ಅಭಿನಂದಿಸಿ ಭಾಗವಹಿಸಿದ ಎಲ್ಲಾ ತಂಡಗಳಿಗೂ ಮುಂದಿನ ಪಂದ್ಯಾಟಗಳಿಗೆ ಶುಭಹಾರೈಸಿದರು. ಶಾಲಾ ಮುಖ್ಯಶಿಕ್ಷಕಿ ರೋಸಲಿನ್ ಲೋಬೊ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು. ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ ಭಾಗವಹಿಸಿದ ಎಲ್ಲಾ ತಂಡಗಳನ್ನು ಅಭಿನಂದಿಸಿದರು.
ಲಿಟ್ಲ್ ಫ್ಲವರ್ ಶಾಲೆಯ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿ ಶಾಲಾ ಮುಖ್ಯಶಿಕ್ಷಕಿ ರೋಸಲಿನ್ ಲೋಬೊ ವಂದಿಸಿದರು. ಅತ್ಯುತ್ತಮ ಸಂಘಟನೆಗಾಗಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ದೀಕ್ಷಾರವನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಫಲಿತಾಂಶ ಪುತ್ತೂರು ನಗರ ವಲಯ ಮಟ್ಟದ 14 ಮತ್ತು 17ರ ವಯೋಮಾನದ ಕಬಡ್ಡಿ ಪಂದ್ಯಾಟದಲ್ಲಿ 25 ತಂಡಗಳು ಭಾಗವಹಿಸಿದವು. 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಲಿಟ್ಲ್ ಫ್ಲವರ್ ಶಾಲೆ, ದರ್ಬೆ ಪುತ್ತೂರು ಪ್ರಥಮ ಸ್ಥಾನ, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ ದ್ವಿತೀಯ ಸ್ಥಾನ, ಬಾಲಕರ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಪ್ರಥಮ ಸ್ಥಾನ, ಸಂತ ಫಿಲೋಮಿನಾ ಪ್ರೌಢಶಾಲೆ, ದರ್ಬೆ ಪುತ್ತೂರು ದ್ವಿತೀಯ ಸ್ಥಾನ ಪಡೆದುಕೊಂಡರು. 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ದರ್ಬೆ ಪ್ರಥಮ ಸ್ಥಾನ, ಬಾಲಕರ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ದ್ವಿತೀಯ ಸ್ಥಾನ ಪಡೆದುಕೊಂಡರು. 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಲಿಟ್ಲ್ ಫ್ಲವರ್ ಶಾಲೆಯ ನಿಧಾ ಸವ್ಯಸಾಚಿ ಉತ್ತಮ ಆಟಗಾರ್ತಿ ಹಾಗೂ ಉದ್ವಿತಾ ರಕ್ಷಾ ಅತ್ಯುತ್ತಮ ಹಿಡಿತಗಾರ್ತಿ, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಸನ್ನಿಧಿ ಅತ್ಯುತ್ತಮ ದಾಳಿಗಾರ್ತಿ ಪ್ರಶಸ್ತಿ ಪಡೆದುಕೊಂಡರು.14ರ ವಯೋಮಾನದ ಬಾಲಕರ ವಿಭಾಗದಲ್ಲಿ ಸವ್ಯಸಾಚಿ ಉತ್ತಮ ಆಟಗಾರ, ಅತ್ಯುತ್ತಮ ಹಿಡಿತಗಾರ, ಅತ್ಯುತ್ತಮ ದಾಳಿಗಾರ ಪ್ರಶಸ್ತಿಯನ್ನು ಪಡೆದುಕೊಂಡರು. 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಹಾರ್ದಿಕ ಪಿ ಸವ್ಯಸಾಚಿ ಆಟಗಾರ್ತಿ, ಜು ಏನಾ ಡ್ಯಾಝಲ್ ಕುಟಿನ್ಹಾ ಅತ್ಯುತ್ತಮ ದಾಳಿಗಾರ್ತಿ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ದೀಕ್ಷಿತ ಅತ್ಯುತ್ತಮ ಹಿಡಿತಗಾರ್ತಿ ಪ್ರಶಸ್ತಿ ಪಡೆದುಕೊಂಡರು.










