







ಪುತ್ತೂರು:ಶ್ರೀರಾಮಕುಂಜೇಶ್ವರ ವಿದ್ಯಾಲಯದ ಎಸ್.ಆರ್.ವಿ. ವಿಕ್ರಾಂತ್ ಸ್ಕೌಟ್ಸ್ ತಂಡವು ಉಪ್ಪಿನಂಗಡಿ ಸ್ಥಳೀಯ ಸಂಘದ ವತಿಯಿಂದ ಆಗಸ್ಟ್ 31ರಂದು ಉಪ್ಪಿನಂಗಡಿಯ ಸೇಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ದೇಶಭಕ್ತಿ ಗೀತ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದುಕೊಂಡಿತು.


ಕಬ್ಸ್, ಬುಲ್‌ಬುಲ್ಸ್, ಸ್ಕೌಟ್ಸ್, ಗೈಡ್ಸ್, ರೋವರ್ಸ್ ಹಾಗೂ ರೇಂಜರ್ಸ್ ವಿಭಾಗಗಳಿಗಾಗಿ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ ಶ್ರೀರಾಮಕುಂಜೇಶ್ವರ ಶಾಲೆಯ ಸ್ಕೌಟ್ಸ್ , ಗೈಡ್ಸ್ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ವಿದ್ಯಾರ್ಥಿಗಳು ತಮ್ಮ ಗಾಯನ ಪ್ರತಿಭೆ, ಶಿಸ್ತು, ಸಮಯಪ್ರಜ್ಞೆ ಹಾಗೂ ತಂಡದ ಒಗ್ಗಟ್ಟನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದರು.



ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸುವ ಮೂಲಕ ಎಸ್.ಆರ್.ವಿ. ವಿಕ್ರಾಂತ್ ಸ್ಕೌಟ್ಸ್ ತಂಡವು ಶಾಲೆಗೆ ಕೀರ್ತಿ ತಂದಿದೆ. ಈ ವಿದ್ಯಾರ್ಥಿಗಳಿಗೆ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರಾದ ಗೀತಾ ಕೆ. ಹಾಗೂ ಪ್ರತೀಕ್ಷಾ ಆಳ್ವ ಅವರು ತರಬೇತಿ ನೀಡಿದರು.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿ, ವಿಜೇತ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.










