ʼಪುತ್ತೂರಿನ ಶಾಂತಿ- ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ, ಶಾಸಕರು ಸಂಪೂರ್ಣ ವಿಫಲʼ: ರಾಜೇಶ್ ಬನ್ನೂರು ಆರೋಪ

0

ಪುತ್ತೂರು: ಪುತ್ತೂರಿನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದು ಸಾಬೀತಾಗಿದೆ ಎಂದು ಬಿಜೆಪಿ ಪುತ್ತೂರು ನಗರ ವಕ್ತಾರ ರಾಜೇಶ್ ಬನ್ನೂರು ಆರೋಪಿಸಿದರು.


ಪುತ್ತೂರಿನಲ್ಲಿ ಶಾಸಕರ ಸಮ್ಮುಖದಲ್ಲೇ ತಮ್ಮದೇ ಪಕ್ಷದ ಕಾರ್ಯಕರ್ತನೊಂದಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಶಾಸಕರ ಆಪ್ತರು ಜಗಳ ನಡೆಸಿದ ರೀತಿಯು ನಗರದ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಗೆ ಸಾಕ್ಷಿಯಾಗಿದೆ. ಪುತ್ತೂರಿನ ಶಾಂತಿ -ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಹಾಗೂ ಶಾಸಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.


ಜನರ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾದ ಜನಪ್ರತಿನಿಧಿಯೇ ತಮ್ಮ ಪಕ್ಷದ ಕಾರ್ಯಕರ್ತನ ವಿರುದ್ಧ ಬೀದಿಗೆ ಬಂದು ಬೆಂಬಲಿಗರೊಂದಿಗೆ ಸ್ಥಳದಲ್ಲಿ ಕಾಣಿಸಿಕೊಂಡಿರುವುದು ಪುತ್ತೂರಿನ ರಾಜಕೀಯ ಸಂಸ್ಕೃತಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಸಾರ್ವಜನಿಕ ಜೀವನದಲ್ಲಿರುವ ಶಾಸಕರ ನಡೆ-ನುಡಿ, ಅವರ ಸುತ್ತಮುತ್ತಲಿನವರ ವರ್ತನೆ ಹಾಗೂ ಕಾನೂನು ಸುವ್ಯವಸ್ಥೆಯ ವಿಚಾರದಲ್ಲಿ ಪ್ರಶ್ನೆಗಳು ಏಳುವುದು ಸಹಜ ಎಂದು ಅವರು ಹೇಳಿದರು. ಪುತ್ತೂರು ಕಾಂಗ್ರೆಸ್‌ನಲ್ಲಿನ ಭಿನ್ನಾಭಿಪ್ರಾಯ, ವೈಯಕ್ತಿಕ ವೈಮನಸ್ಸು ಅಥವಾ ಆಂತರಿಕ ರಾಜಕೀಯ ಇದೀಗ ಸಾರ್ವಜನಿಕ ಸ್ಥಳದಲ್ಲಿ ಗಲಾಟೆಯ ರೂಪ ಪಡೆದಿದೆ. ಯಾರಾದರೂ ವ್ಯಕ್ತಿಯೊಂದಿಗೆ ವೈಯಕ್ತಿಕ ಅಥವಾ ರಾಜಕೀಯ ಭಿನ್ನಾಭಿಪ್ರಾಯವಿದ್ದರೆ ಅದನ್ನು ಪೊಲೀಸ್ ಹಾಗೂ ಕಾನೂನು ವ್ಯವಸ್ಥೆಯ ಮೂಲಕ ಬಗೆಹರಿಸಬೇಕು. ಈ ರೀತಿಯಾಗಿ ಬೀದಿ ಜಗಳ ನಡೆಸುವುದು ಸರಿಯಲ್ಲ ಎಂದರು.


ಪುತ್ತೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿ, ಜನರು ನಿರ್ಭಯವಾಗಿ ಸಂಚರಿಸುವ ವಾತಾವರಣ ನಿರ್ಮಿಸಲು ಪೊಲೀಸ್ ಇಲಾಖೆ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ, ನಿನ್ನೆ ಪ್ರೆಸ್ ಕ್ಲಬ್ ಬಳಿ ನಡೆದ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ಅಶಾಂತಿ ಹಾಗೂ ಭಯದ ವಾತಾವರಣ ನಿರ್ಮಿಸಿದವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಒತ್ತಾಯಿಸುತ್ತದೆ ಎಂದು ರಾಜೇಶ್ ಬನ್ನೂರು ಹೇಳಿದರು.


ಅದೇ ರೀತಿ, ಪೋಕ್ಸೊ ಪ್ರಕರಣದಲ್ಲಿ ಆರೋಪಿ ಎಂದು ಹೇಳಲಾಗಿರುವ ಅದ್ದು ಪಡೀಲ್ ಅವರನ್ನು ಕೂಡ ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವ ಗೂಂಡಾ ಪ್ರವೃತ್ತಿಯ ವ್ಯಕ್ತಿಗಳನ್ನು ನಿಯಂತ್ರಿಸುವ ಸಂಪೂರ್ಣ ಹೊಣೆಗಾರಿಕೆ ಪೊಲೀಸ್ ಇಲಾಖೆಯ ಮೇಲಿದೆ. ಶಾಸಕರು ತಮ್ಮ ಆಪ್ತರು ಸಮಾಜದಲ್ಲಿ ಭಯಭೀತಿಯ ವಾತಾವರಣ ಸೃಷ್ಟಿಸುವುದಕ್ಕೆ ಕಡಿವಾಣ ಹಾಕಬೇಕು ಎಂದು ರಾಜೇಶ್ ಬನ್ನೂರು ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ ಹಾಗೂ ಶಶಿಧರ್ ನಾಯಕ್, ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್ ಹಾಗೂ ವಿರೂಪಾಕ್ಷ ಭಟ್ ಮತ್ತು ಕಾರ್ಯದರ್ಶಿ ಸುನಿಲ್ ದಡ್ಡು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here