






ಸಂಘದ ಬೆಳವಣಿಗೆಗೆ ಬುನಾದಿ ಹಾಕಿದ ಸಂಸ್ಥಾಪಕರ ಸೇವೆಯ ನೆನಪು


ಸಮಾನ ಮನಸ್ಕರು, ಹುದ್ದೆಯ ಅಪೇಕ್ಷೆ ಇಲ್ಲದೆ ದುಡಿದರೆ ಯಾವುದೇ ಸಂಸ್ಥೆ ಬೆಳೆಯಲು ಸಾಧ್ಯ; ಮೋಹನ್ ಗೌಡ ಇಡ್ಯಡ್ಕ



ಹಿಂದಿನಿಂದ ಬಂದ ಉತ್ತಮ ನಡೆ ಇಂದು ಸಂಘಕ್ಕೆ ಗೌರವ ತಂದಿದೆ – ಚಿದಾನಂದ ಬೈಲಾಡಿ
ಸ್ವಂತ ಶಾಖೆಗಳ ನಿರ್ಮಾಣದ ಯೋಜನೆ ಕೈಗೂಡಲಿ – ಸುಂದರ ಗೌಡ ನಡುಬೈಲು
ಪುತ್ತೂರು: ಒಕ್ಕಲಿಗ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಉದ್ದೇಶದಿಂದ 2002ರಲ್ಲಿ ಸ್ಥಾಪನೆಯಾದ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಸಂಸ್ಥಾಪಕರ ದಿನಾಚರಣೆಯನ್ನು ಸೆ.2ರಂದು ಸಂಘದ ಆರಂಭಿಕ ಶಾಖೆ ಹಾಗೂ ಪ್ರಧಾನ ಕಚೇರಿಯಲ್ಲಿ ಗೌರವ ಪೂರ್ವಕವಾಗಿ ಆಚರಿಸಲಾಯಿತು. ಇದೇ ಸಂದರ್ಭ ಸಂಘದ 25ನೇ ವರ್ಷದ ಪ್ರಾರಂಭೋತ್ಸವವನ್ನು ಆಚರಿಸಲಾಯಿತು.
ಸಂಘದ ಸ್ಥಾಪನೆಗೆ ಪ್ರಮುಖ ಕಾರಣರಾದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮುಖ್ಯಪ್ರವರ್ತಕರಾದ ಮೋಹನ್ ಗೌಡ ಇಡ್ಯಡ್ಕ, ಹಾಲಿ ಅಧ್ಯಕ್ಷ ಚಿದಾನಂದ ಬೈಲಾಡಿ, ಸಂಸ್ಥೆಯ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ದಿ| ಜಗನ್ನಾಥ ಬೊಮ್ಮೆಟ್ಟಿ ಸಹಿತ ಅವರ ಇತರ ಪ್ರವರ್ತಕರ ಸೇವೆಗಳನ್ನು ನೆನಪಿಸಿಕೊಂಡು ಸಂಘದ ಆರಂಭದ ದಿನಗಳಲ್ಲಿ ಎದುರಾದ ಸವಾಲುಗಳನ್ನು ಮೆಟ್ಟಿ ನಿಂತು, ಸದಸ್ಯರ ಸಹಕಾರದೊಂದಿಗೆ ಸಹಕಾರಿ ಸಂಸ್ಥೆಯನ್ನು ಕಟ್ಟುವಲ್ಲಿ ಹಿರಿಯರ ಸೇವೆಯನ್ನು ಸ್ಮರಿಸಲಾಯಿತು.
ಬೆಳಗ್ಗೆ ಸಂಘದ ಆರಂಭದ ಶಾಖೆಯಲ್ಲಿ ದೀಪ ಪ್ರಜ್ವಲಿಸಿ ಬಳಿಕ ಪ್ರಧಾನ ಕಚೇರಿಯಲ್ಲಿ ಕಾರ್ಯಕ್ರಮ ಆಚರಿಸಲಾಯಿತು. ಏಕ ಕಾಲದಲ್ಲಿ ಸಂಘದ ಎಲ್ಲಾ ಶಾಖೆಗಳಲ್ಲೂ ಸ್ಥಾಪಕರ ದಿನ ಆಚರಿಸಲಾಯಿತು.

ಸಮಾನ ಮನಸ್ಕರು, ಹುದ್ದೆಯ ಅಪೇಕ್ಷೆ ಇಲ್ಲದೆ ದುಡಿದರೆ ಯಾವುದೇ ಸಂಸ್ಥೆ ಬೆಳೆಯಲು ಸಾಧ್ಯ
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಸಂಸ್ಥಾಪಕರ ದಿನಾಚರಣೆಯನ್ನು ಉದ್ಘಾಟಿಸಿದ ಸಂಘದ ಮುಖ್ಯ ಪ್ರವರ್ತಕ ಮೋಹನ್ ಗೌಡ ಇಡ್ಯಡ್ಕ ಅವರು ಯಾವುದೇ ಸಂಸ್ಥೆಯನ್ನು ಕಟ್ಟುವಾಗ ಸಮಾನ ಮನಸ್ಕರು ಒಂದಾಗಿ, ಯಾವುದೇ ಹುದ್ದೆಯ ಅಪೇಕ್ಷೆ ಇಟ್ಟುಕೊಳ್ಳದೆ, ಬಲವಂತದ ನಿರೀಕ್ಷೆಗಳಿಲ್ಲದೆ ಕೆಲಸ ಮಾಡಿದರೆ ಯಾವುದೇ ಸಂಸ್ಥೆಯೂ ಬೆಳೆಯಲು ಸಾಧ್ಯ ಎಂದ ಅವರು ಸಂಸ್ಥೆ ಬೆಳೆಯುವ ಸಂದರ್ಭದಲ್ಲಿ ಎಲ್ಲರೂ ಹೊಗಳುವುದು ಸಹಜ. ಆದರೆ ಸಂಸ್ಥೆ ಸೋತಾಗ `ನಾವು ಆಗ ಇರಲಿಲ್ಲ’ ಎಂದು ಹೇಳುವವರು ಹೆಚ್ಚಾಗುತ್ತಾರೆ.
ಸಂಘ ಆರಂಭಿಸುವ ಸಂದರ್ಭದಲ್ಲಿ ಒಂದು ಸೆಂಟ್ಸ್ ಜಾಗವಾಗಲಿ, ಒಂದು ರೂಪಾಯಿ ಹಣವಾಗಲಿ ನಮ್ಮ ಬಳಿ ಇರಲಿಲ್ಲ. ಆಗ ಪ್ರಥಮ ಸದಸ್ಯನಾಗಿ ನಾನು ಇದ್ದೆ. ಅಂದಿನ ಒಗ್ಗಟ್ಟು ಮತ್ತು ಸಮಾನ ಮನಸ್ಕರ ಪರಿಶ್ರಮದಿಂದಾಗಿ ಇಂದು ಸಂಘ ಈ ಮಟ್ಟಕ್ಕೆ ಬೆಳೆದು ನಿಲ್ಲಲು ಸಾಧ್ಯವಾಗಿದೆ ಎಂದರು. ಇವತ್ತು ಸಂಘದ ಇಂದಿನ ಬೆಳವಣಿಗೆಯನ್ನು ನೋಡಿದಾಗ ಸಂತೋಷವಾಗುತ್ತದೆ. ಆದರೆ ನಮ್ಮವರೇ ನಮ್ಮ ಸಮಾಜದ ಸಂಘದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿರುವ ಕೆಲವು ವಿಚಾರಗಳನ್ನು ನೋಡಿದಾಗ ನೋವಾಗುತ್ತದೆ. ಸಂಘವು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಒಳಗಾಗಬಾರದು. ಬದಲಾಗಿ ಯಾವುದೇ ಶಾಸಕರಾಗಲಿ, ಜನಪ್ರತಿನಿಧಿಗಳಾಗಲಿ ನಮ್ಮ ಸಂಘಕ್ಕೆ ಬರುವಂತಹ ರೀತಿಯಲ್ಲಿ ಸಂಘದ ಒಗ್ಗಟ್ಟು ಮತ್ತು ಶಕ್ತಿ ಬೆಳೆಯಬೇಕು ಎಂದು ಅವರು ಹೇಳಿದರು.
ಬೆಳೆಸುವುದು, ದುಡಿಯುವುದು ಮಾತ್ರವಲ್ಲ; ಉಳಿಸುವ ಜವಾಬ್ದಾರಿಯೂ ಇದೆ
ನಮ್ಮ ಸಮಾಜದ ಮೂಲಕ ನಡೆಯುತ್ತಿರುವ ಸಹಕಾರ ಸಂಘ ಇಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದು, ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟಕ್ಕೆ ವಿಸ್ತರಿಸುವ ಹಂತಕ್ಕೆ ಬಂದಿದೆ. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬರೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಸಂಸ್ಥೆಯನ್ನು ಬೆಳೆಸುವುದು ಮತ್ತು ದುಡಿಯುವುದು ಮಾತ್ರವಲ್ಲ, ಬೆಳೆದು ಬಂದಿರುವ ಸಂಸ್ಥೆಯನ್ನು ಉಳಿಸುವ ಜವಾಬ್ದಾರಿಯೂ ನಿಮ್ಮ ಮೇಲಿದೆ. ಎಲ್ಲರೂ ಒಗ್ಗಟ್ಟಿನಿಂದ ಉತ್ತಮ ಕೆಲಸ ಮಾಡೋಣ ಎಂದು ಮೋಹನ್ ಗೌಡ ಇಡ್ಯಡ್ಕ ಹೇಳಿದರು.
ಹಿಂದಿನಿಂದ ಬಂದ ಉತ್ತಮ ನಡೆ ಇಂದು ಸಂಘಕ್ಕೆ ಗೌರವ ತಂದಿದೆ
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಮಾತನಾಡಿ, ಸಂಘದ ಮೂಲಕ ಇಂದು 37 ಮಂದಿ ಸಿಬ್ಬಂದಿಗಳು ಹಾಗೂ 17 ಮಂದಿ ಪಿಗ್ಮಿ ಸಂಗ್ರಹಕರು ಸೇರಿದಂತೆ ಒಟ್ಟು ಸುಮಾರು 50 ಮಂದಿಗೆ ಉದ್ಯೋಗ ಮತ್ತು ಜೀವನಾಧಾರ ಕಲ್ಪಿಸುವಂತಾಗಿದೆ. ಹಿಂದಿನಿಂದ ಬಂದ ಉತ್ತಮ ನಡೆ, ಶಿಸ್ತು ಮತ್ತು ಪ್ರಾಮಾಣಿಕ ಕಾರ್ಯವೈಖರಿಯಿಂದಾಗಿ ಇಂದು ಸಹಕಾರಿ ಕ್ಷೇತ್ರದಲ್ಲಿ ಸಂಘಕ್ಕೆ ಗೌರವ ದೊರೆಯುವಂತಾಗಿದೆ ಎಂದರು. ಸಂಘದ ಆರಂಭದ ದಿನಗಳಲ್ಲಿ ಪ್ರವರ್ತಕರಾಗಿ ದುಡಿದವರಲ್ಲಿ ಕೆಲವರು ಇಂದಿಗೂ ನಮ್ಮೊಂದಿಗಿದ್ದಾರೆ. 2014ರವರೆಗೆ ಸ್ಥಾಪಕ ಅಧ್ಯಕ್ಷರಾಗಿದ್ದ ಜಗನ್ನಾಥ ಬೊಮ್ಮೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಾಗಿದೆ. ಬಳಿಕ ಉಪಾಧ್ಯಕ್ಷರಾಗಿದ್ದ ಜೆ.ಕೆ. ವಸಂತ ಗೌಡ, ಪ್ರಥಮ ಶೇರುದಾರ ಧರ್ಣಪ್ಪ ಗೌಡ ಕುಂಟ್ಯಾನ, ಊರ ಗೌಡರಾಗಿದ್ದ ಕುಶಾಲಪ್ಪ ಗೌಡ ತೆಂಕಿಲ ಅವರನ್ನು ಸ್ಮರಿಸಿ, ಅಗಲಿದವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. ಹೀರಯ್ಯ ಗೌಡ ಹಾಗೂ ಜನಾರ್ದನ ಗೌಡ ಬನ್ನೂರು ಅವರು ಸಂಘದ ಆರಂಭಿಕ ಬೆಳವಣಿಗೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. 2009ರಲ್ಲಿ ಕಡಬ ಶಾಖೆ, 2011ರಲ್ಲಿ ಉಪ್ಪಿನಂಗಡಿ ಹಾಗೂ 2014ರಲ್ಲಿ ನೆಲ್ಯಾಡಿ ಶಾಖೆ ಆರಂಭಿಸಲಾಯಿತು. 2020ರ ಬಳಿಕ ಸತತ ಐದು ವರ್ಷಗಳಲ್ಲಿ ಐದು ಶಾಖೆಗಳನ್ನು ಆರಂಭಿಸುವ ಮೂಲಕ ಇಂದು ಸಂಘವು ಸಮಗ್ರ ಸಹಕಾರಿ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದು ವಿವರಿಸಿದರು.
ರೂ. 881 ಕೋಟಿ ವ್ಯವಹಾರ; ರೂ. 164 ಕೋಟಿ ಠೇವಣಿ, ರೂ.155 ಕೋಟಿ ಸಾಲ:
ಕಳೆದ ಆರ್ಥಿಕ ವರ್ಷದಲ್ಲಿ ಸಂಘವು ಸುಮಾರು ರೂ.881 ಕೋಟಿ ವ್ಯವಹಾರ ನಡೆಸಿದೆ. ರೂ. 164 ಕೋಟಿ ಠೇವಣಿ ಸಂಗ್ರಹಿಸಿ, ರೂ. 155 ಕೋಟಿ ಸಾಲ ವಿತರಿಸಿದ್ದು, ರೂ. 3.50 ಕೋಟಿ ಲಾಭ ಗಳಿಸಿದೆ. ಈ ಸಾಧನೆಯ ಮೂಲಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಗೌರವಕ್ಕೆ ಪಾತ್ರವಾಗಿ ಸತತ 7ನೇ ಬಾರಿಗೆ ಪ್ರಶಸ್ತಿ ಸ್ವೀಕರಿಸುವ ಅವಕಾಶ ದೊರೆತಿದೆ. ಒಂದು ವರ್ಷ ಚಿನ್ನದ ಪದಕ ಪಡೆಯುವ ಸೌಭಾಗ್ಯವೂ ಸಂಘಕ್ಕೆ ಲಭಿಸಿದೆ. ಮುಂದಿನ ವರ್ಷವೂ ಇದೇ ರೀತಿಯ ಸಾಧನೆಯನ್ನು ಮುಂದುವರಿಸಿದರೆ ಮತ್ತೊಂದು ಚಿನ್ನದ ಪದಕ ಪಡೆಯುವ ಅವಕಾಶವಿದೆ. ಅದಕ್ಕಾಗಿ ರೂ. 1,000 ಕೋಟಿ ವ್ಯವಹಾರ ಹಾಗೂ ರೂ. 500 ಕೋಟಿ ಠೇವಣಿ ಸಂಗ್ರಹಿಸುವ ಗುರಿಯನ್ನು ನೀಡಲಾಗಿದೆ. ದೇವರ ಅನುಗ್ರಹ ಮತ್ತು ಸದಸ್ಯರು, ಗ್ರಾಹಕರು ಹಾಗೂ ಸಿಬ್ಬಂದಿಯ ಸಹಕಾರದಿಂದ ಮತ್ತೊಮ್ಮೆ ಚಿನ್ನದ ಪದಕ ಪಡೆಯುವ ವಿಶ್ವಾಸವಿದೆ. ಈ ಹಿನ್ನೆಲೆಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆಯನ್ನೂ ಸಲ್ಲಿಸಲಾಗಿದೆ ಎಂದು ಚಿದಾನಂದ ಬೈಲಾಡಿ ಹೇಳಿದರಲ್ಲದೆ ಮುಂದಿನ ದಿನಗಳಲ್ಲಿ ವಿಟ್ಲ ಶಾಖೆಯನ್ನು ಪರಿಪೂರ್ಣಗೊಳಿಸುವುದು ಹಾಗೂ ಎರಡು ಶಾಖೆಗಳನ್ನು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುವಂತೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಸ್ವಂತ ಶಾಖೆಗಳ ನಿರ್ಮಾಣದ ಯೋಜನೆ ಕೈಗೂಡಲಿ
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲು ಮಾತನಾಡಿ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು ಸುದೀರ್ಘ 24 ವರ್ಷಗಳನ್ನು ಪೂರೈಸಿ 25ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಸಂಘದ ಬೆಳ್ಳಿಹಬ್ಬವನ್ನು ಎಲ್ಲರೂ ಒಗ್ಗಟ್ಟಿನಿಂದ ಸೇರಿ ಆಚರಿಸುವಂತಾಗಲಿ ಎಂದು ಹಾರೈಸಿದರು. ಸಂಘವು ಈಗಾಗಲೇ ಸುಮಾರು ಏಳು ಸಾಧನಾ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿರುವುದು ಇಡೀ ಸಮಾಜದ ಹೆಮ್ಮೆಯ ವಿಚಾರವಾಗಿದೆ. ಯಾವುದೇ ಸಂಸ್ಥೆ ಬೆಳೆಯಲು ಕೇವಲ ಅಧ್ಯಕ್ಷರು, ಪ್ರವರ್ತಕರು ಮತ್ತು ನಿರ್ದೇಶಕರ ಪರಿಶ್ರಮ ಮಾತ್ರ ಕಾರಣವಾಗುವುದಿಲ್ಲ. ಸಂಸ್ಥೆಯಲ್ಲಿ ನಗುಮೊಗದಿಂದ ಸೇವೆ ಸಲ್ಲಿಸುವ ಸಿಬ್ಬಂದಿಯೂ ಅದರ ಬೆಳವಣಿಗೆಯ ಪ್ರಮುಖ ಭಾಗವಾಗಿದ್ದಾರೆ ಎಂದರು. ಮುಂದಿನ ದಿನಗಳಲ್ಲಿ ಸಂಘವು ತನ್ನ ಸ್ವಂತ ಬಲದಿಂದ ಎರಡು ಶಾಖೆಗಳನ್ನು ನಿರ್ಮಿಸುವ ಯೋಜನೆ ಕೈಗೂಡಲಿ ಹಾಗೂ ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಸುಂದರ ಗೌಡ ನಡುಬೈಲು ಶುಭ ಹಾರೈಸಿದರು.
ಇದೇ ಸಂದರ್ಭ ಸಂಘದ ಪ್ರವರ್ತಕರು ಮತ್ತು ನಿರ್ದೆಶಕರನ್ನು ಗೌರವಿಸಲಾಯಿತು. ಸಂಘದ ನಿರ್ದೇಶಕರಾದ ಜಿನ್ನಪ್ಪ ಗೌಡ ಮಳುವೇಲು, ಪ್ರವರ್ತಕರು ಮತ್ತು ಆಡಳಿತ ಮಂಡಳಿ ನಿರ್ದೇಶಕರಾದ ರಾಮಕೃಷ್ಣ ಗೌಡ ಕರ್ಮಲ, ಹಿಂದೆ ಸಂಘದ ಪ್ರವರ್ತರಾಗಿ ಕಾರ್ಯನಿರ್ವಹಿಸಿದ ಶ್ರೀಧರ್ ಗೌಡ ಕಣಜಾಲು, ಲಿಂಗಪ್ಪ ಗೌಡ ತೆಂಕಿಲ, ವಿಶ್ವನಾಥ ಗೌಡ ಕೆಯ್ಯೂರು, ನಾರಾಯಣ ಗೌಡ ಆರುವಾರ, ರವಿ ಮಂಗ್ಲಿಮನೆ, ಗಣಪ್ಪಣ್ಣ, ನಾರಾಯಣ ಗೌಡ, ಸಂಘದ ಸಲಹಾ ಸಮಿತಿ ಸದಸ್ಯರಾದ ಗೌರಿ ಬನ್ನೂರು, ಸೀತಾರಾಮ ಪೆರಿಯತ್ತೋಡಿ, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಅಧ್ಯಕ್ಷ ವಿಶ್ವನಾಥ ಗೌಡ ಬನ್ನೂರು, ಒಕ್ಕಲಿಗ ಗೌಡ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಪ್ರಸನ್ನ, ಸುರೇಶ್ ಕಲ್ಲಾರೆ ಸಹಿತ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ ಕಾರ್ಯಕ್ರಮ ನಿರೂಪಿಸಿದರು. ಎಪಿಎಂಸಿ ಶಾಖಾ ವ್ಯವಸ್ಥಾಪಕ ವಿನೋದ್ರಾಜ್ ವಂದಿಸಿದರು.
ಆರಂಭಗೊಂಡ ಪ್ರಥಮ ಶಾಖೆಯಲ್ಲಿ ದೀಪ ಪ್ರಜ್ವಲನೆ:
ಮಹಾಲಿಂಗೇಶ್ವರ ದೇವಸ್ಥಾನ ಸಭಾಭವನ ಕಟ್ಟಡದಲ್ಲಿ 2002ರಲ್ಲಿ ಆರಂಭಗೊಂಡ ಶಾಖೆಯ ಕಚೇರಿಯಲ್ಲಿ ಬೆಳಿಗ್ಗೆ ಪ್ರಥಮವಾಗಿ ದೀಪ ಬೆಳಗಿಸಲಾಯಿತು. ಈ ಸಂದರ್ಭ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಮತ್ತು ಸಂಘದ ಅಧ್ಯಕ್ಷರು, ನಿರ್ದೇಶಕರು ಉಪಸ್ಥಿತರಿದ್ದರು. ಅಲ್ಲಿನ ಪ್ರಭಾರ ಶಾಖಾ ಪ್ರಭಂದಕಿ ನಿಶ್ಚಿತಾ ಯು.ಡಿ ಕಾರ್ಯಕ್ರಮ ನಿರ್ವಹಿಸಿದರು.










