ಪತ್ರಿಕಾಗೋಷ್ಠಿಗೆ ಬಂದಿದ್ದ ವ್ಯಕ್ತಿಗೆ ನಿಂದನೆ, ಜೀವಬೆದರಿಕೆ ಆರೋಪ : ಪ್ರಕರಣ ದಾಖಲು

0

ಪುತ್ತೂರು: ರಾಜಕೀಯ ಪಕ್ಷವೊಂದರ ಕಾರ್ಯಕರ್ತರಾಗಿರುವ ಪುತ್ತೂರು ಕೆಮ್ಮಿಂಜೆ ನಿವಾಸಿ ಅಬ್ದುಲ್ ಹಕೀಂ ತಮ್ಮ ವಿರುದ್ಧ ಮಾಡಲಾಗಿರುವ ಕೆಲವು ಆರೋಪಗಳಿಗೆ ಸ್ಪಷ್ಟನೆ ನೀಡಲು ಪತ್ರಿಕಾಗೋಷ್ಠಿ ನಡೆಸುವ ಉದ್ದೇಶದಿಂದ ಪುತ್ತೂರು ಪ್ರಸ್ ಕ್ಲಬ್‌ಗೆ ಬಂದಿದ್ದ ವೇಳೆ ಕೆಲವರು ತಳ್ಳಾಡಿ, ಅವಾಚ್ಯವಾಗಿ ನಿಂದಿಸಿ, ಜೀವಬೆದರಿಕೆ ಹಾಕಿರುವುದಾಗಿ ದೂರು ನೀಡಿದ್ದಾರೆ.


ಸೆ.1ರಂದು ಮಧ್ಯಾಹ್ನ ಅಬ್ದುಲ್ ಹಕೀಂ ಅವರು ಪತ್ರಿಕಾಗೋಷ್ಠಿ ನಡೆಸಲು ಪುತ್ತೂರು ಪ್ರಸ್ ಕ್ಲಬ್‌ಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಉದಯ ಪಾಟಾಳಿ, ಜುನೈದ್ ಬಿಜಿ, ಇಸಾಕ್ ಸಾಲ್ಮರ, ಬಶೀರ್ ಪರ್ಲಡ್ಕ, ಹಕೀಂ ಬೋಲ್ವಾರು, ಮೋನು ಬಪ್ಪಳಿಗೆ, ನಾಶಿರ್ ಕೊಲ್ಪೆ, ಪ್ರವೀಣ್ ಆಚಾರ್ಯ ಸೇರಿದಂತೆ ಇತರರು ಸೇರಿಕೊಂಡು ತಮ್ಮನ್ನು ತಳ್ಳಾಡಿ, ಅವಾಚ್ಯವಾಗಿ ನಿಂದಿಸಿ ಹಾಗೂ ಜೀವಬೆದರಿಕೆ ಹಾಕಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಬಳಿಕ ಪ್ರಸ್ ಕ್ಲಬ್ ಒಳಗೆ ತೆರಳಿದ್ದ ತಮ್ಮನ್ನು ಮತ್ತೆ ಹೊರಗೆ ಬಾರದಂತೆ ಅಕ್ರಮವಾಗಿ ತಡೆದಿರುವುದಾಗಿಯೂ ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿಗಳ ತಳ್ಳಾಟದಿಂದ ನೋವು ಉಂಟಾದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಅಬ್ದುಲ್ ಹಕೀಂ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅಬ್ದುಲ್ ಹಕೀಂ ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ127(2), 351(1), 351(2), 351(3), 352, 115 ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here