






ಪುತ್ತೂರು :ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ(SMCA), ಪುತ್ತೂರು ಇದರ ವತಿಯಿಂದ ಆಯೋಜಿಸಲ್ಪಡುವ ‘ನೃತ್ಯಾಂತರಂಗ’ ಸರಣಿಯ 146ನೇ ಕಾರ್ಯಕ್ರಮವು ಆ.29ರಂದು ಪುತ್ತೂರಿನ ಶಶಿ-ಶಂಕರ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ವಿದುಷಿ ಸಿಂಚನಾ ಕುಲಾಲ್ ಅವರ ಭರತನಾಟ್ಯ ನೃತ್ಯಪ್ರಸ್ತುತಿ ಪಡಿಸಿದರು.



ಭಾರತೀಯ ಶಾಸ್ತ್ರೀಯ ನೃತ್ಯಕಲೆಯ ವೈವಿಧ್ಯಮಯ ಆಯಾಮಗಳನ್ನು ಪ್ರೇಕ್ಷಕರಿಗೆ ಪರಿಚಯಿಸುವ ಉದ್ದೇಶದಿಂದ ರೂಪುಗೊಂಡಿರುವ ‘ನೃತ್ಯಾಂತರಂಗ’ ಸರಣಿಯ ಈ ಕಾರ್ಯಕ್ರಮಕ್ಕೆ ವಿದ್ವಾನ್ ಬಿ. ದೀಪಕ್ ಕುಮಾರ್ ಮಾರ್ಗದರ್ಶನ ನೀಡಿದರು.




ಶೌರಿ ಕೃಷ್ಣ ಅವರ ಶಂಖನಾದದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿದುಷಿ ಸಿಂಚನಾ ಕುಲಾಲ್ ಭರತನಾಟ್ಯ ನೃತ್ಯಪ್ರಸ್ತುತಿಯನ್ನು ನೀಡಿದರು.ಸಿಂಚನಾ ಅವರ ಗುರು ವಿದುಷಿ ಶ್ರೀಲತಾ ನಾಗರಾಜ್ ಅವರು ತಮ್ಮ ಶಿಷ್ಯೆಯೊಂದಿಗಿನ ಆತ್ಮೀಯ ಗುರು-ಶಿಷ್ಯ ಸಂಬಂಧದ ಕುರಿತು ಮಾತನಾಡಿದರು.
ಕಾರ್ಯಕ್ರಮದ ಗೌರವ ಅತಿಥಿ ವಿದುಷಿ ಸುಮಂಗಲಾ ಗಿರೀಶ್ ಮಾತನಾಡಿ, ಸಿಂಚನಾ ಕುಲಾಲ್ ಅವರ ಪರಿಶ್ರಮ, ಕಲೆಯ ಮೇಲಿನ ಶ್ರದ್ಧೆ ಹಾಗೂ ಸಮರ್ಪಣಾ ಮನೋಭಾವವನ್ನು ಮೆಚ್ಚಿ ಅಭಿನಂದಿಸಿದ ಅವರು, ನೃತ್ಯಾಂತರಂಗ ಸರಣಿಯನ್ನೂ ಪ್ರಶಂಸಿಸಿ ಪುತ್ತೂರಿನಲ್ಲಿ ನಿರಂತರವಾಗಿ ನಡೆಯುತ್ತಿರುವ ನೃತ್ಯಾಂತರಂಗ ಸರಣಿಯು ಪ್ರೇಕ್ಷಕರಿಗೆ ನೃತ್ಯವನ್ನು ಅರಿಯುವ, ಕಲಿಯುವ ಹಾಗೂ ಅದರ ಸೂಕ್ಷ್ಮತೆಗಳನ್ನು ತಿಳಿದುಕೊಳ್ಳುವ ಉತ್ತಮ ಅವಕಾಶವನ್ನು ಕಲ್ಪಿಸುತ್ತಿದೆ ಎಂದರು.

ವಿದ್ವಾನ್ ಬಿ. ದೀಪಕ್ ಕುಮಾರ್ ಅವರ ಪರಿಕಲ್ಪನೆ, ಯೋಜನೆ ಮತ್ತು ಮಾರ್ಗದರ್ಶನದಲ್ಲಿ ನಿರಂತರವಾಗಿ ಮುನ್ನಡೆಯುತ್ತಿರುವ ನೃತ್ಯಾಂತರಂಗ ಸರಣಿಯು ಪುತ್ತೂರಿನ ಕಲಾಸಕ್ತರಿಗೆ ಗುಣಮಟ್ಟದ ನೃತ್ಯಾನುಭವವನ್ನು ನೀಡುವುದರ ಜೊತೆಗೆ, ಭರತನಾಟ್ಯ ಸೇರಿದಂತೆ ಭಾರತದ ವಿವಿಧ ಶಾಸ್ತ್ರೀಯ ನೃತ್ಯಪ್ರಕಾರಗಳ ಪರಿಚಯ, ಅರಿವು ಮತ್ತು ಪ್ರಸರಣಕ್ಕೆ ತನ್ನದೇ ಆದ ಮಹತ್ವದ ಕೊಡುಗೆಯನ್ನು ನೀಡುತ್ತಿದೆ.

ಭಾರ್ಗವಿ ಶೆಣೈ ಪ್ರಾರ್ಥಿಸಿ, ಹಿಮಾನಿಶ್ ಪಂಚಾಂಗವನ್ನು ನೆರವೇರಿಸಿದರು. ವಿಂಧ್ಯಾ ಕಾರಂತ್ ಕಾರ್ಯಕ್ರಮ ನಿರೂಪಿಸಿದರು. ಪುಷ್ಕರ ಅವರು ಅತಿಥಿಗಳನ್ನು ಹಾಗೂ ಕ್ಷಮಾ ಅವರು ಕಲಾವಿದರನ್ನು ಪರಿಚಯಿಸಿದರು.










