






ಪುತ್ತೂರು: ವೀರಮಂಗಲದ ಶ್ರೀಕೃಷ್ಣ ಕಲಾ ಕೇಂದ್ರ ಇದರ 23ನೇ ಸಂಭ್ರಮಾಚರಣೆಯ ಪ್ರಯಕ್ತ ನಡೆಯುವ 6ನೇ ವರ್ಷದ ಶ್ರೀಕೃಷ್ಣ ಲೀಲೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನಾ ಸ್ಪರ್ಧಾ ಕಾರ್ಯಕ್ರಮಗಳೊಂದಿಗೆ ಸೆ.೬ರಂದು ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀವಿಷ್ಣು ಸಹಸ್ರನಾಮಾರ್ಚನೆ, ಭಗವದ್ಗೀತಾ ಪಾರಾಯಣ, ವೀರಮಂಗಲ ಶ್ರೀ ಮಹಾವಿಷ್ಣು ಭಜನಾ ಮಂಡಳಿಯವರಿಂದ ಭಜನೆ ನಡೆಯಲಿದೆ. ನಂತರ ವಿವಿಧ ಮನರಂಜನಾ ಸ್ಪರ್ಧೆಗಳು ನಡೆಯಲಿದ್ದು ವೀರಮಂಗಲ ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಅಧ್ಯಕ್ಷ ರವೀಂದ್ರ ಪೂಜಾರಿ ಉದ್ಘಾಟಿಸಲಿದ್ದಾರೆ. ನಂತರ ಮಕ್ಕಳು, ಮಹಿಳೆಯವರು ಹಾಗೂ ಪುರುಷರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ.
ಸಂಜೆ ಗೋಪೂಜೆ, ಮುದ್ದು ಕೃಷ್ಣ ಮೆರವಣಿಗೆ, ನಂತರ ನೃತ್ಯಾರ್ಚನೆ ಭರತನಾಟ್ಯ ಹಾಗೂ ಜಾನಪದ ನೃತ್ಯಗಳು, ಮಾತೃಪೂಜನಾ ಕಾರ್ಯಕ್ರಮ ನಡೆದ ಬಳಿಕ ಧಾರ್ಮಿಕ ಸಭೆ ನಡೆಯಲಿದೆ. ವೀರಮಂಗಲ ಶ್ರೀವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವರಾಮ ಭಟ್ ಬಾವ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಪುತ್ತೂರು ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್‌ನ ಕಾರ್ಯದರ್ಶಿ ದಿವ್ಯಶ್ರೀ ಸುದರ್ಶನ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲ ವಸಂತ ಮೂಲ್ಯ ಹಾಗೂ ಆನಡ್ಕ ಶಾಲಾ ಮುಖ್ಯಗುರು ಹರಿಣಾಕ್ಷಿ ಅವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ವಿದ್ವಾನ ಗೋಪಾಲಕೃಷ್ಣ ವೀರಮಂಗಲ ರಚಿಸಿ, ನಿರ್ದೇಶಿಸಿರುವ ಕಾರಣಿಕದ ಕೋಟಿ-ಚೆನ್ನಯೆರ್ ನೃತ್ಯರೂಪಕ ನಡೆದು ರಾತ್ರಿ ಅನ್ನಸಂತರ್ಪಣೆಯೊಂದಿಗೆ ಶ್ರೀಕೃಷ್ಣ ಲೀಲೋತ್ಸವ ಸಂಪನ್ನಗೊಳ್ಳಲಿದೆ ಎಂದು ಶ್ರೀಕೃಷ್ಣ ಕಲಾಕೇಂದ್ರದ ಅಧ್ಯಕ್ಷ ಗೋಪಾಲಕೃಷ್ಣ ವೀರಮಂಗಲ ತಿಳಿಸಿದ್ದಾರೆ.












