ದರ್ಬೆಯಲ್ಲಿ ನಡೆದ ಅಹಿತಕರ ಘಟನೆ: ಅಂಗಡಿ ಮಾಲಕಿ,ಮಗನ ವಿರುದ್ಧದ ಆರೋಪ ಮತ್ತು ಪೊಲೀಸ್ ಜೀಪಿನೊಳಗೆ ನುಗ್ಗಿ ಆರೋಪಿಗೆ ಹಲ್ಲೆ-ಎರಡೂ ಪ್ರಕರಣದ ಸಮಗ್ರ ತನಿಖೆಗೆ ಹೈಕೋರ್ಟ್ ಸೂಚನೆ

0

ಪುತ್ತೂರು:ಇಲ್ಲಿನ ದರ್ಬೆಯಲ್ಲಿ ಕೆಲ ದಿನಗಳ ಹಿಂದೆ ನಡೆದಿರುವ ಅಹಿತಕರ ಘಟನೆ ಸಂದರ್ಭ ಪೊಲೀಸ್ ವಶದಲ್ಲಿದ್ದ ಆರೋಪಿಗೆ,ಪೊಲೀಸ್ ಜೀಪಿನೊಳಕ್ಕೆ ನುಗ್ಗಿ ಹಲ್ಲೆಗೈದ ಪ್ರಕರಣ ಮತ್ತು ಅಂಗಡಿ ಮಾಲಕಿ ಮತ್ತು ಮಗನ ವಿರುದ್ಧದ ಆರೋಪ ಸೇರಿ ಎರಡೂ ಪ್ರಕರಣಗಳ ಸಮಗ್ರ ತನಿಖೆಗೆ ಹೈಕೋರ್ಟ್ ಸೂಚಿಸಿದೆ.

ದರ್ಬೆಯ ಲ್ಯಾಮಿನೇಶನ್ ಅಂಗಡಿಯಲ್ಲಿ ಲ್ಯಾಮಿನೇಶನ್‌ಗೆಂದು ನೀಡಲಾದ ದಾಖಲೆಯೊಂದಕ್ಕೆ ಹಾನಿಯಾದ ನಂತರದ ಬೆಳವಣಿಗೆಯಲ್ಲಿ ಅಲ್ಲಿ ಜನ ಸೇರಿ ಗಲಾಟೆ ನಡೆದಿತ್ತು.ಈ ಸಂಬಂಧ ಪೊಲೀಸರು ಅಂಗಡಿಯ ಮಾಲಕಿ ಅಂಜನಾ ಎಸ್.ಪೈ ಮತ್ತು ಅವರ ಮಗ ಸುದರ್ಶನ್ ಪೈ ವಿರುದ್ಧ ಕೊಲೆಯತ್ನ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದರಲ್ಲದೆ ಆರೋಪಿ ಸುದರ್ಶನ್ ಪೈ ಅವರನ್ನು ಬಂಧಿಸಿದ್ದರು.ಆರೋಪಿ ಅಂಜನಾ ಪೈ ಅವರು ಪೊಲೀಸ್ ಜೀಪಿನೊಳಗೆ ಇರುವ ಸಂದರ್ಭ ಕೆಲವರು ಪೊಲೀಸ್ ಜೀಪಿನೊಳಗೇ ನುಗ್ಗಿ ಹಲ್ಲೆ ನಡೆಸಿ,ಬೆದರಿಕೆಯೊಡ್ಡಿದ್ದ ಕುರಿತು ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದರು.

ತಮ್ಮ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಅಂಜನಾ ಪೈ ಮತ್ತವರ ಮಗ ಸುದರ್ಶನ್ ಪೈ ಅವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.ಆ.27ರಂದು ನ್ಯಾಯಮೂರ್ತಿ ಎಂ.ನಾಗಪ್ಪಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಅರ್ಜಿಯ ವಿಚಾರಣೆ ನಡೆದ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಡಾ|ಅರುಣ್‌ಶ್ಯಾಂ ಅವರು, ಈ ಪ್ರಕರಣದಲ್ಲಿ ಹಲ್ಲೆಗೊಳಗಾಗಿರುವ ದೂರುದಾರರಾದ ಅಂಜನಾ ಪೈ ಮತ್ತವರ ಮಗ ಸುದರ್ಶನ್ ಪೈ ಅವರ ವಿರುದ್ಧ ಪೊಲೀಸರು, ಸೆಕ್ಷನ್ 307ರಡಿ ಕೊಲೆ ಯತ್ನದ ಗಂಭೀರ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆದರೆ ಗಲಾಟೆ ಸಂದರ್ಭದಲ್ಲಿ ಪೊಲೀಸರೆದುರೇ,ಪೊಲೀಸ್ ಜೀಪಿನೊಳಗೆ ನುಗ್ಗಿ ಈ ಪ್ರಕರಣದ ದೂರುದಾರರ ಮೇಲೆ ಹಲ್ಲೆ ನಡೆಸಿ ಬೆದರಿಕೆಯೊಡ್ಡಿರುವವರ ವಿರುದ್ಧ ಲಘುವಾದ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.ಪೊಲೀಸರು ಇಲ್ಲಿ ಏಕಪಕ್ಷೀಯವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪೊಲೀಸ್ ಜೀಪಿನೊಳಗೆ ನುಗ್ಗಿ ಹಲ್ಲೆ ನಡೆಸಿದರೂ ಅವರ ವಿರುದ್ಧ ಸೆಕ್ಷನ್ 307ರಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿಲ್ಲ.ಬದಲಿಗೆ ಹಲ್ಲೆಗೊಳಗಾಗಿ ಗಾಯಗೊಂಡಿರುವವರ ಮೇಲೆಯೇ ಕೊಲೆ ಯತ್ನ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಈ ರೀತಿಯ ಕ್ರಮ ಸರಿಯಲ್ಲ.ಅವರ ವಿರುದ್ಧವೂ ಸೆಕ್ಷನ್ 307ರಡಿ ಪ್ರಕರಣ ದಾಖಲಿಸಿಕೊಳ್ಳಬೇಕಾಗಿತ್ತು.ಕಾನೂನು ಎಲ್ಲರಿಗೂ ಒಂದೇ.ಎಲ್ಲರಿಗೂ ಸಮಾನ ನ್ಯಾಯ ನೀಡಬೇಕು.ಅದರ ಬದಲಿಗೆ ಪೊಲೀಸರು ಒನ್‌ಸೈಡೆಡ್ ಆಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ನ್ಯಾಯಪೀಠದ ಗಮನ ಸೆಳೆದಿದ್ದರು.

ಈ ಕುರಿತು ಪೊಲೀಸರನ್ನು ತರಾಟೆಗೆತ್ತಿಕೊಂಡಿದ್ದ ನ್ಯಾಯಪೀಠ, ಪೊಲೀಸರ ಎದುರೇ ಪೊಲೀಸ್ ಜೀಪಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆಂದರೆ ಇದು ಗಂಭೀರ ವಿಚಾರವಾಗಿದ್ದು ಅವರ ವಿರುದ್ಧ ಯಾವ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಮತ್ತು ಏನು ಕ್ರಮಕೈಗೊಳ್ಳಲಾಗಿದೆ ಎಂದು ದಾಖಲೆ ಸಮೇತ ಆ.29ರಂದು ವರದಿ ನೀಡಬೇಕು ಎಂದು ಆದೇಶಿಸಿತ್ತು.ಸೆ.೨ರಂದು ಮುಂದುವರಿದ ವಿಚಾರಣೆಯಲ್ಲಿ, ದೂರುದಾರರ ವಿರುದ್ಧದ ಪ್ರಕರಣ ಮತ್ತು ಪೊಲೀಸ್ ಜೀಪಿನೊಳಗೇ ನುಗ್ಗಿ ಹಲ್ಲೆ ನಡೆಸಿದ ಆರೋಪದ ಪ್ರಕರಣ ಎರಡನ್ನೂ ಸಮಗ್ರ ತನಿಖೆ ನಡೆಸಬೇಕು.

ದೂರುದಾರರ ವಿರುದ್ಧ ಸೆಕ್ಷನ್ 307ರಡಿ ಪ್ರಕರಣ ದಾಖಲಿಸಿರುವುದು ಸರಿಯಲ್ಲ ಎಂದಾದರೆ ಕೈಬಿಡಬಹುದು ಅಥವಾ ಪೊಲೀಸ್ ಜೀಪಿನೊಳಗೆ ನುಗ್ಗಿ ಹಲ್ಲೆ ಆರೋಪದಲ್ಲಿ 307 ಸೆಕ್ಷನ್‌ನಡಿ ಪ್ರಕರಣ ದಾಖಲಿಸಬೇಕೆಂದಾದರೆ ದಾಖಲಿಸಿಕೊಂಡಾರು.ಒಟ್ಟು ಎರಡೂ ಪ್ರಕರಣಗಳ ಸಮಗ್ರ ತನಿಖೆ ನಡೆಯಲಿ.ತನಿಖೆಯಲ್ಲಿ ವ್ಯತ್ಯಾಸಗಳು ಕಂಡು ಬಂದರೆ ದೂರುದಾರರು ಮತ್ತೆ ನ್ಯಾಯಪೀಠದ ಮುಂದೆ ಬರಲು ಸ್ವತಂತ್ರರು ಎಂದು ಅಭಿಪ್ರಾಯ ವ್ಯಕ್ತಪಡಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ವಿಚಾರಣೆ ಮುಂದೂಡಿದ್ದಾರೆ.ದೂರುದಾರರ ಪರ ವಕೀಲ ಸುಯೋಗ್ ಹೇರಳೆ ಅವರು ವಕಾಲತ್ತು ವಹಿಸಿದ್ದರು.

LEAVE A REPLY

Please enter your comment!
Please enter your name here