






ಪುತ್ತೂರು:ಇಲ್ಲಿನ ದರ್ಬೆಯಲ್ಲಿ ಕೆಲ ದಿನಗಳ ಹಿಂದೆ ನಡೆದ ಘಟನೆಗೆ ಸಂಬಂಧಿಸಿ ಧಾರ್ಮಿಕ ವೈಮನಸ್ಸು ಉಂಟಾಗುವಂತಹ ಹಾಗೂ ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕದಡುವಂತಹ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿ ಬಂದ್ಗೆ ಕರೆಕೊಟ್ಟ ಆರೋಪದಲ್ಲಿ ಪ್ರಕರಣ ದಾಖಲಾಗಿದ್ದ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಮುಖಂಡ ದಿನೇಶ್ ಪಂಜಿಗ ಅವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.


ದರ್ಬೆಯ ಅಂಗಡಿಯೊಂದರಲ್ಲಿ ಇತ್ತೀಚೆಗೆ ನಡೆದ ಗಲಾಟೆಗೆ ಸಂಬಂಧಿಸಿದಂತೆ, ದಿನೇಶ್ ಪಂಜಿಗ ಎಂಬ ವಾಟ್ಸಾಪ್ ಖಾತೆಯನ್ನು ಹೊಂದಿರುವ ವ್ಯಕ್ತಿಯು, ಸಾಮಾಜಿಕ ಜಾಲತಾಣದ(ವಾಟ್ಸಾಪ್)ಮೂಲಕ ಧಾರ್ಮಿಕ ವೈಮನಸ್ಸು ಉಂಟಾಗುವಂತಹ ಹಾಗೂ ಸಾರ್ವಜನಿಕ ವಲಯದಲ್ಲಿ ಭಯ ಉಂಟು ಮಾಡುವಂತಹ ಸಂದೇಶವನ್ನು ಪ್ರಸಾರ ಮಾಡುವ ಮೂಲಕ, ಬಂದ್ಗೆ ಕರೆಕೊಟ್ಟು,ಜನರು ಅಕ್ರಮಕೂಟ ಸೇರಿ ಕಾನೂನುಬಾಹಿರ ಕೃತ್ಯವೆಸಗಲು ದುಷ್ಪ್ರೇರಣೆ ನೀಡಿದ್ದ ಆರೋಪದಲ್ಲಿ, ಸದ್ರಿ ಸಂದೇಶವನ್ನು ಪ್ರಸಾರ ಮಾಡಿದ ದಿನೇಶ್ ಪಂಜಿಗ ಎಂಬ ವಾಟ್ಸಾಪ್ ಖಾತೆಯನ್ನು ಹೊಂದಿರುವ ದಿನೇಶ್ ಪಂಜಿಗ ಅವರ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ 353(2),57,189 THE BHARATIYA NYAYA SANHITA (BNS), 2023ರಂತೆ ಪ್ರಕರಣ(ಅ.ಕ್ರ.100/2026)ದಾಖಲಾಗಿತ್ತು.



ಈ ಪ್ರಕರಣದಲ್ಲಿ ದಿನೇಶ್ ಪಂಜಿಗ ಅವರು ನಿರೀಕ್ಷಣಾ ಜಾಮೀನು ಕೋರಿ ತಮ್ಮ ಪರ ವಕೀಲ ಮಹೇಶ್ ಕಜೆ ಅವರ ಮೂಲಕ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ್ ಅವರು ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಸೆ.3ರಂದು ಆದೇಶ ನೀಡಿದ್ದಾರೆ.
ಈ ಮಧ್ಯೆ, ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ದಿನೇಶ್ ಪಂಜಿಗ ಅವರು ಕರ್ನಾಟಕ ಹೈಕೋರ್ಟ್ಗೆ ಕ್ರಿಮಿನಲ್ ರಿಟ್ ಅರ್ಜಿ ಸಲ್ಲಿಸಿದ್ದರು.ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಮುಂದಿನ ಆದೇಶದ ತನಕ ದೂರುದಾರ ದಿನೇಶ್ ಪಂಜಿಗ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳಬಾರದು ಎಂದು ಪೊಲೀಸರಿಗೆ ನಿರ್ದೇಶನ ನೀಡಿ ಮಧ್ಯಂತರ ಆದೇಶ ನೀಡಿದ್ದರು.ಸೆ.೨ರಂದು ನಡೆದ ವಿಚಾರಣೆಯಲ್ಲಿ ಮಧ್ಯಂತರ ತಡೆಯಾಜ್ಞೆಯನ್ನು ಮುಂದುವರಿಸಲಾಗಿತ್ತು.ಪ್ರಕರಣದಲ್ಲಿ ದೂರುದಾರ ದಿನೇಶ್ ಪಂಜಿಗ ಅವರ ಪರವಾಗಿ ಹೈಕೋರ್ಟ್ನ ಹಿರಿಯ ವಕೀಲ ಅರುಣ್ಶ್ಯಾಂ ಪುತ್ತೂರು ವಾದಿಸಿದ್ದರು.










