ಈಶ್ವರಮಂಗಲದಲ್ಲಿ ಪುಟಾಣಿ ಕೃಷ್ಣರ ಕಲರವ

0

ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜೃಂಭಣೆಯ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ
ಕೃಷ್ಣ-ರಾಧೆಯರ ಮೆರವಣಿಗೆ ಹಾಗೂ ಮನಮೋಹಕ ನೃತ್ಯ ಪ್ರದರ್ಶನ

ಈಶ್ವರಮಂಗಲ: ಪುಟಾಣಿ ಕೃಷ್ಣ-ರಾಧೆಯರ ನಗು, ತಾಯಂದಿರ ದೇವಕಿ ವೇಷ, ಭಜನೆಯ ನಾದ ಹಾಗೂ ಕೃಷ್ಣನ ಲೀಲೆಗಳನ್ನು ಬಿಂಬಿಸುವ ಮನಮೋಹಕ ನೃತ್ಯ ಪ್ರದರ್ಶನದಿಂದ ಈಶ್ವರಮಂಗಲ ಪೇಟೆ ಶ್ರೀಕೃಷ್ಣಮಯವಾಗಿ ಕಂಗೊಳಿಸಿತು. ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಸೆಪ್ಟೆಂಬರ್ 3ರಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.

ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ನನ್ಯ ಅಚ್ಚುತಮೂಡೆತ್ತಾಯ ಅವರು ಮೊಸರು ಕುಡಿಕೆ ಒಡೆಯುವುದರ ಮೂಲಕ ಸಾಂಪ್ರದಾಯಿಕವಾಗಿ ಚಾಲನೆ ನೀಡಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಈಶ್ವರಮಂಗಲ ಪೇಟೆಯಲ್ಲಿ ಶ್ರೀಕೃಷ್ಣನ ಲೀಲೆಗಳನ್ನು ಬಿಂಬಿಸುವ ವಿಶೇಷ ನೃತ್ಯ ಪ್ರದರ್ಶನ ನಡೆಯಿತು. ಭಜನೆಯೊಂದಿಗೆ ಸಾಗಿದ ಮೆರವಣಿಗೆಗೆ ಈ ನೃತ್ಯ ಪ್ರದರ್ಶನ ವಿಶೇಷ ಮೆರುಗು ನೀಡಿತು. ಪ್ರಮುಖ ಆಕರ್ಷಣೆಯಾಗಿ ಇನ್ನೂರಕ್ಕೂ ಅಧಿಕ ಪುಟಾಣಿ ಮಕ್ಕಳು ಕೃಷ್ಣ ಹಾಗೂ ರಾಧೆಯ ವೇಷ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಅವರೊಂದಿಗೆ ತಾಯಂದಿರು ದೇವಕಿಯ ವೇಷದಲ್ಲಿ ಭಾಗವಹಿಸಿದ್ದು, ಮೆರವಣಿಗೆಯನ್ನು ಮತ್ತಷ್ಟು ವಿಶಿಷ್ಟವಾಗಿಸಿತು.

ಪೋಷಕರಿಗಾಗಿ ಮೊಸರು ಕುಡಿಕೆ ಹಾಗೂ ಹಗ್ಗದ ಜಗ್ಗಾಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪೋಷಕರು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತಂದರು.

ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಸದಸ್ಯ ಜಯರಾಜ್ ಅವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಶುಭ ಹಾರೈಸಿ ಪ್ರೋತ್ಸಾಹಿಸಿದರು.

LEAVE A REPLY

Please enter your comment!
Please enter your name here