ನೆಲ್ಯಾಡಿ ಗ್ರಾಮಸಭೆ : ಸರ್ವೆ ನಂ.186/1 ಜಮೀನಿನ ಪ್ಲಾಟಿಂಗ್‌ಗೆ ಗ್ರಾಮಸ್ಥರ ಆಗ್ರಹ -ಧರಣಿ ನಡೆಸುವ ಎಚ್ಚರಿಕೆ

0

ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಸರ್ವೆ ನಂ.186/1 ಜಮೀನಿನ ಪ್ಲಾಟಿಂಗ್ ಬಗ್ಗೆ ಭೂ ಮಾಪನ ಇಲಾಖೆ ಮುತುವರ್ಜಿ ವಹಿಸುತ್ತಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು ಮುಂದಿನ 1 ತಿಂಗಳೊಳಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ ಘಟನೆ ನೆಲ್ಯಾಡಿ ಗ್ರಾಮಸಭೆಯಲ್ಲಿ ನಡೆದಿದೆ.


ಸಭೆ ಸೆ.1ರಂದು ಗ್ರಾ.ಪಂ.ಆಡಳಿತಾಧಿಕಾರಿಯಾಗಿರುವ ಪುತ್ತೂರು ಉಪವಿಭಾಗದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.

ಸಮಾಜ ಕಲ್ಯಾಣ ಇಲಾಖೆ ಪುತ್ತೂರು ಇಲ್ಲಿನ ಸಹಾಯಕ ನಿರ್ದೇಶಕಿ ಸುನೀತಾ ಅವರು ಚರ್ಚಾ ನಿಯಂತ್ರಣ ಅಧಿಕಾರಿಯಾಗಿದ್ದರು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರಾದ ಜಿ.ವರ್ಗೀಸ್ ಹಾಗೂ ಇತರರು, ನೆಲ್ಯಾಡಿ ಗ್ರಾಮದ ಸರ್ವೆ ನಂ. 186/1ರಲ್ಲಿ ಜಮೀನು ಮಂಜೂರಾಗಿ 35 ವರ್ಷ ಕಳೆದರೂ ಸದ್ರಿ ಜಮೀನಿನ ಪ್ಲಾಟಿಂಗ್ ಆಗಿರುವುದಿಲ್ಲ. ಇದರಿಂದಾಗಿ ಮನೆ ನಿರ್ಮಾಣಕ್ಕೆ ಜಮೀನಿನ ಭೂ ಪರಿವರ್ತನೆ, ಕುಟುಂಬ ಸದಸ್ಯರೊಳಗೆ ವಿಭಾಗ ಪತ್ರ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಸದ್ರಿ ಸರ್ವೆ ನಂಬ್ರದ ಜಮೀನಿನಲ್ಲಿ ಅರಣ್ಯ ಭೂಮಿಯು ಸೇರಿರುವುದರಿಂದ ಸಾಲ ಪಡೆಯಲು ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರವೂ ಬೇಕಾಗಿದೆ. ಜಮೀನಿನ ಪಹಣಿ ಮತ್ತು ಖಾತಾ ಪ್ರತಿಯು ಗ್ರಾಮ ವನ್‌ಗಳಲ್ಲಿ ಲಭ್ಯವಿಲ್ಲದೇ ಇರುವುದರಿಂದ ಕಡಬ ತಾಲೂಕು ಕಚೇರಿಗೆ ಹೋಗಬೇಕಾಗುತ್ತದೆ. ಈ ಎಲ್ಲಾ ಸಮಸ್ಯೆಗಳಿಂದಾಗಿ ಜಮೀನನ್ನು ಉಪಯುಕ್ತ ರೀತಿಯಲ್ಲಿ ಬಳಕೆ ಮಾಡಲು ಫಲಾನುಭವಿಗಳಿಗೆ ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಸರಕಾರವು ಪೋಡಿ ಮುಕ್ತ ಕಾನೂನಿನಡಿಯಲ್ಲಿ ಜಮೀನಿನ ಪ್ಲಾಟಿಂಗ್ ಮಾಡಲು ಆದೇಶಿಸಿದ್ದರೂ ಸರ್ವೆ ನಂ.186/1ರ ಹಿಲ್ ಬ್ಲಾಕ್ ಆಗಿರುವುದರಿಂದ ಭೂ ಮಾಪನ ಇಲಾಖೆಯವರು ಸದ್ರಿ ಜಮೀನಿನ ಪ್ಲಾಟಿಂಗ್ ಬಗ್ಗೆ ಮುತುವರ್ಜಿ ವಹಿಸುತ್ತಿಲ್ಲ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಡಬ ಸರ್ವೆ ಇಲಾಖೆಯ ಮೇಲ್ವಿಚಾರಕ ಚಂದ್ರಶೇಖರ ಅವರು, ಪ್ಲಾಟಿಂಗ್ ಕೆಲಸಗಳು ನಡೆಯುತ್ತಿವೆ. ಶಿವಮೊಗ್ಗದ ತಂಡವೊಂದು ಪ್ಲಾಟಿಂಗ್ ಕಾರ್ಯ ಮಾಡುತ್ತಿದ್ದೆ. ಸದ್ರಿ ಸರ್ವೆ ನಂಬ್ರದ ಜಮೀನಿನ ಪ್ಲಾಟಿಂಗ್ ಬಗ್ಗೆ ನಾಳೆಯಿಂದಲೇ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಬಳಿಕ ಮಾತನಾಡಿದ ಜಿ.ವರ್ಗೀಸ್ ಅವರು 1 ತಿಂಗಳೊಳಗೆ ಪ್ಲಾಟಿಂಗ್ ಮಾಡಿ ಕೊಡದೇ ಇದ್ದಲ್ಲಿ ಗ್ರಾ.ಪಂ.ಕಚೇರಿ ಎದುರು ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಜೇಮ್ಸ್ ಪಿ.ವಿ., ರವಿಚಂದ್ರ ಅತ್ರಿಜಾಲು, ಸೆಬಾಸ್ಟಿಯನ್ ಪಿ.ಜೆ. ಮತ್ತಿತರರು ಪ್ಲಾಟಿಂಗ್‌ಗೆ ಸಂಬಂಧಿಸಿ ಈ ವೇಳೆ ಸರ್ವೆ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು.

ಅಂಗನವಾಡಿಗೆ ಜಾಗ ಮಂಜೂರು ಮಾಡಿ;
ನೆಲ್ಯಾಡಿ ಪೇಟೆ ಅಂಗನವಾಡಿ ಕೇಂದ್ರಕ್ಕೆ ಈ ತನಕ ಜಾಗ ಮಂಜೂರು ಆಗಿಲ್ಲ. ಜಾಗ ಮಂಜೂರಾತಿಗೆ ಅರ್ಜಿ ನೀಡಿದರೂ ಅಂಗನವಾಡಿ ಕೆರೆ ಜಾಗದಲ್ಲಿದೆ ಎಂದು ಅಧಿಕಾರಿಗಳು ಜಾಗ ಮಂಜೂರು ಮಾಡುತ್ತಿಲ್ಲ. ಅಂಗನವಾಡಿ ಸ್ಥಳಾಂತರ ಮಾಡಿ ಎಂದು ಅಧಿಕಾರಿಗಳು ಸಲಹೆ ನೀಡುತ್ತಿದ್ದಾರೆ. ಆದರೆ ಅಂಗನವಾಡಿ ಸುತ್ತಲೂ ಅತಿಕ್ರಮಣಗೊಂಡ ಕೆರೆ ಜಾಗ ಖಾಸಗಿಯವರಿಗೆ ಮಂಜೂರು ಆಗಿದೆ. ಅಂಗನವಾಡಿಗೆ ಮಾತ್ರ ಯಾಕೆ ? ಜಾಗ ಮಂಜೂರು ಮಾಡುತ್ತಿಲ್ಲ ಎಂದು ಗ್ರಾಮಸ್ಥರಾದ ಸಲಾಂ ಬಿಲಾಲ್, ಮೊಹಮ್ಮದ್ ಇಕ್ಬಾಲ್, ಅಬ್ದುಲ್ ಜಬ್ಬಾರ್, ಕಮಾಲ್,ಶಾಕೀರ್, ಗಣೇಶ್ ಪೂಜಾರಿ, ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ ಮತ್ತಿತರರು ಆರೋಪಿಸಿದರು. ಅಂಗನವಾಡಿಗೆ ಜಾಗ ಮಂಜೂರುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಜೇಸಿ ಅಂಗನವಾಡಿ ಜಾಗದ ಆರ್‌ಟಿಸಿಯೂ ಆಗಿಲ್ಲ. ಈ ಬಗ್ಗೆಯೂ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಯುವಕನ ಸಾವಿನ ಕೂಲಂಕುಷ ತನಿಖೆಯಾಗಿಲ್ಲ;
ಕೆಲ ತಿಂಗಳ ಹಿಂದೆ ಕುರುಬರಕೇರಿಯಲ್ಲಿ ಯುವಕನೋರ್ವ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದರೂ ಪೊಲೀಸ್ ಇಲಾಖೆ ಸ್ಥಳ ಮಹಜರು ಮಾಡಿಲ್ಲ. ಯುವಕ ರಾತ್ರಿಯೇ ಸಾವನ್ನಪ್ಪಿದರೂ ಮರುದಿನ ಆಂಬುಲೆನ್ಸ್‌ನಲ್ಲಿ ಮೃತದೇಹ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತ ಯುವಕ ಪರಿಶಿಷ್ಟ ಜಾತಿಯ ಯುವತಿಯನ್ನು ಮದುವೆಯಾಗಿರುವ ಸಂಶಯವಿದೆ. ಇದೇ ಕಾರಣಕ್ಕೆ ಯುವಕನ ಹತ್ಯೆ ಆಗಿದೆ. ಆದರೆ ಪೊಲೀಸ್ ಇಲಾಖೆ ಈ ಬಗ್ಗೆ ಕೂಲಂಕುಷ ತನಿಖೆ ಮಾಡಿಲ್ಲ ಎಂದು ಅರೋಪಿಸಿದ ಗ್ರಾಮಸ್ಥ ಕೆ.ಪಿ.ಆನಂದ ಅವರು ಯುವಕನ ಮರಣೋತ್ತರ ಪರೀಕ್ಷೆ ವರದಿ ಏನಾಗಿದೆ ಎಂದು ಪ್ರಶ್ನಿಸಿದರು. ಈ ಬಗ್ಗೆ ಮೇಲಾಧಿಕಾರಿಗಳ ಜೊತೆ ಚರ್ಚಿಸುವಂತೆ ನೆಲ್ಯಾಡಿ ಹೊರಠಾಣೆ ಸಿಬ್ಬಂದಿ ಉತ್ತರಿಸಿದರು.

ಮಾದೇರಿ ರಸ್ತೆ ದುರಸ್ತಿಗೊಳಿಸಿ:
ಆಲಂಕಾರಿನಿಂದ ಮಾದೇರಿಯಾಗಿ ನೆಲ್ಯಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹೊಂಡ ಗುಂಡಿಗಳಿಂದ ಕೂಡಿದೆ. ಒಂದೇ ವರ್ಷದಲ್ಲಿ ಡಾಮರು ಎದ್ದು ಹೋಗಿದೆ ಎಂದು ಗ್ರಾಮಸ್ಥ ಸೆಬಾಸ್ಟಿಯನ್ ಪಿ.ಜೆ.ಆರೋಪಿಸಿದರು. ಸದ್ರಿ ರಸ್ತೆಯು ಪಿಡಬ್ಲ್ಯುಡಿ ರಸ್ತೆಯಾಗಿ ಮೇಲ್ದರ್ಜೆಗೇರಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಲು ನಿರ್ಣಯಿಸಲಾಯಿತು. ರಾಷ್ಟ್ರೀಯ ಹೆದ್ದಾರಿಯಿಂದ ಗ್ರಾಮ ಪಂಚಾಯತ್‌ಗೆ ಸಂಪರ್ಕಿಸುವ ರಸ್ತೆಯಲ್ಲೂ ಕಳಪೆ ಕಾಮಗಾರಿಯಿಂದ ಹೊಂಡ ನಿರ್ಮಾಣಗೊಂಡಿದೆ ಎಂದು ಗಣೇಶ್ ಪೂಜಾರಿ ಪೊಸೊಳಿಕೆ ಆರೋಪಿಸಿದರು. ಕೊಪ್ಪ-ಕೆರ್ನಡ್ಕ ರಸ್ತೆ ದುರಸ್ತಿಗೂ ಗ್ರಾಮಸ್ಥರು ಒತ್ತಾಯಿಸಿದರು.

ಮಳೆ ಮಾಪನ ಸರಿ ಮಾಡಿ;
ಗ್ರಾಮ ಪಂಚಾಯಿತಿಯಲ್ಲಿನ ಮಳೆ ಮಾಪನದ ತಾಂತ್ರಿಕ ದೋಷದಿಂದಾಗಿ ನೆಲ್ಯಾಡಿ ಗ್ರಾಮಸ್ಥರಿಗೆ ಕಳೆದ ವರ್ಷದ ಬೆಳೆ ವಿಮೆ ಪರಿಹಾರ ಮೊತ್ತ ಕಡಿಮೆ ಬಂದಿದೆ. ಈ ಬಗ್ಗೆ ಗ್ರಾ.ಪಂ.ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾ.ಪಂ.ಮಾಜಿ ಸದಸ್ಯ ರವಿಪ್ರಸಾದ್ ಶೆಟ್ಟಿ ಒತ್ತಾಯಿಸಿದರು. ನೆಲ್ಯಾಡಿಯಲ್ಲಿ ಮಣ್ಣು ಪರೀಕ್ಷೆಗೆ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥ ಸತೀಶ್ ಕೆ.ಎಸ್.ದುರ್ಗಾಶ್ರೀ ಒತ್ತಾಯಿಸಿದರು.

ಜನಸಂಪರ್ಕ ಸಭೆ ಮಾಡಿ;
ಈ ಹಿಂದೆ ಜನಸಂಪರ್ಕ ಸಭೆ ನಡೆಯುತಿತ್ತು. ಇದರಲ್ಲಿ ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು ಭಾಗಿಯಾಗುತ್ತಿದ್ದರು. ಈ ಸಭೆಯಲ್ಲಿ ಕೈಗೊಂಡ ನಿರ್ಣಯಗಳೂ ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿತ್ತು. ಈಗ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಂಡು ಇಲಾಖೆಗಳಿಗೆ ಕಳಿಸಿದರೂ ಜಾರಿಯಾಗುತ್ತಿಲ್ಲ. ಆದ್ದರಿಂದ ಈ ಹಿಂದಿನಂತೆ ವರ್ಷದಲ್ಲಿ 1 ಸಲವಾದರೂ ಜನಸಂಪರ್ಕ ಸಭೆ ನಡೆಸಬೇಕೆಂದು ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಫೂಟ್‌ಪಾತ್‌ನಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್‍ಮರ್;
ನೆಲ್ಯಾಡಿ ಪೇಟೆಯಲ್ಲಿ ಗುರುಕೃಪಾ ಹೋಟೆಲ್‌ನ ಸಮೀಪ ಫೂಟ್‌ಪಾತ್‌ನಲ್ಲೇ ವಿದ್ಯುತ್ ಟ್ರಾನ್ಸ್‌ಫಾರ್‍ಮರ್ ಹಾಕಲಾಗಿದೆ. ಇದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಸದ್ರಿ ವಿದ್ಯುತ್ ಟ್ರಾನ್ಸ್‌ಫಾರ್‍ಮರ್ ಅನ್ನು ಸ್ಥಳಾಂತರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಜೆಜೆಎಂ ಕಾಮಗಾರಿ ಅಸಮರ್ಪಕವಾಗಿದೆ. ಇದನ್ನು ಸರಿಪಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಪಡುಬೆಟ್ಟು ಹಾಗೂ ಗ್ರಾಮದ ಇತರೆಡೆ ಬೀದಿ ನಾಯಿಗಳ ಹಾವಳಿ ಬಗ್ಗೆಯೂ ಗ್ರಾಮಸ್ಥರು ಸಭೆಯ ಗಮನ ಸೆಳೆದರು. ನೆಲ್ಯಾಡಿ-ಬೈಲು ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಸಲಾಂ ಬಿಲಾಲ್ ಒತ್ತಾಯಿಸಿದರು. ಇನ್ನಿತರ ಅಭಿವೃದ್ಧಿ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.


ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಂಜು, ಸರ್ವೆ ಇಲಾಖೆ ಮೇಲ್ವಿಚಾರಕ ಚಂದ್ರಶೇಖರ, ಅರಣ್ಯ ಇಲಾಖೆಯ ಕೆ.ಸುಬ್ರಹ್ಮಣ್ಯ, ಗ್ರಾಮ ಆಡಳಿತಾಧಿಕಾರಿ ಲಾವಣ್ಯ, ಕೃಷಿ ಇಲಾಖೆಯ ವಿಖ್ಯಾತ್, ಜಿ.ಪಂ.ಇಂಜಿನಿಯರ್ ಹೊಳೆಬಸಪ್ಪ, ಮೆಸ್ಕಾಂ ಜೆಇ ರಾಮಣ್ಣ ಹೆಚ್., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪುಷ್ಪಾವತಿ, ಪೊಲೀಸ್, ಪಶು ಸಂಗೋಪನಾ ಇಲಾಖಾಧಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು. ಪಿಡಿಒ ಜಯರಾಜ್ ಸ್ವಾಗತಿಸಿದರು. ಕಾರ್ಯದರ್ಶಿ ಭಾರತಿ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.


ರಿಕ್ಷಾ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿ;
ನೆಲ್ಯಾಡಿಯಲ್ಲಿ 200ಕ್ಕೂ ಹೆಚ್ಚು ರಿಕ್ಷಾಗಳಿವೆ. ಆದರೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಅರ್ಜಿ ಕೊಟ್ಟರೂ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಿಲ್ಲ. ಪಾರ್ಕಿಂಗ್‌ಗೆ ಸಂಬಂಧಿಸಿ ಇದು ನಾವು ನೀಡುತ್ತಿರುವ ಕೊನೆಯ ಮನವಿ. ಈ ಬಗ್ಗೆ ತಕ್ಷಣ ಸ್ಪಂದಿಸಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡಬೇಕೆಂದು ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ರವಿಪ್ರಸಾದ್ ಗುತ್ತಿನಮನೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿಯವರು, ಸರಕಾರಿ ಜಾಗ ಇದ್ದಲ್ಲಿ ರಿಕ್ಷಾ ಪಾರ್ಕಿಂಗ್‌ಗೆ ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

LEAVE A REPLY

Please enter your comment!
Please enter your name here