ಬಿಳಿನೆಲೆ:ಬಸ್ ಬೆಂಕಿಗಾಹುತಿ ಪ್ರಯಾಣಿಕರು ಪಾರು- ಸಮಯಪ್ರಜ್ಞೆ ಮೆರೆದು ಪ್ರಯಾಣಿಕರನ್ನುಕೆಳಗಿಳಿಸಿದ ಚಾಲಕ:ತಪ್ಪಿದ ಭೀಕರ ದುರಂತ

0

ಕಡಬ:ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ವೇಳೆಯೇ ಕೆಎಸ್‌ಆರ್‌ಟಿಸಿ ಬಸ್ ಒಂದು ಬೆಂಕಿಗಾಹುತಿಯಾದ ಘಟನೆ ಸೆ.5ರ ತಡರಾತ್ರಿ ಸಂಭವಿಸಿದೆ.ಬೆಂಕಿ ಕಾಣಿಸಿಕೊಂಡಾಕ್ಷಣವೇ ಚಾಲಕ ಸಮಯಪ್ರಜ್ಞೆ ಮೆರೆದು ಪ್ರಯಾಣಿಕರನ್ನು ಕೆಳಗಿಳಿಸಿದ ಪರಿಣಾಮ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.ಬಸ್‌ನಲ್ಲಿದ್ದ ಎಲ್ಲಾ 37 ಪ್ರಯಾಣಿಕರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ವಿವರ:
ಸುಬ್ರಹ್ಮಣ್ಯದಿಂದ ಬೆಂಗಳೂರು ಕಡೆಗೆ ಸಾಗುತ್ತಿದ್ದ ಬಸ್, ಬಿಳಿನೆಲೆ ಗ್ರಾಮದ ಕೈಕಂಬ-ಗುಂಡ್ಯ ರಸ್ತೆಯ ಎರ್ಮಾಯಿಲ್ ಎಂಬಲ್ಲಿ ತಲುಪಿದಾಗ ತಡರಾತ್ರಿ ಈ ಅವಘಡ ಸಂಭವಿಸಿದೆ. ಚಲಿಸುತ್ತಿದ್ದ ವೇಳೆ ಬಸ್‌ನಲ್ಲಿ ಹಠಾತ್ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿದೆ.

ಇದನ್ನು ಗಮನಿಸಿದ ಬಸ್ ಚಾಲಕ, ತಕ್ಷಣವೇ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿ, ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ತಕ್ಷಣವೇ ಕೆಳಗಿಳಿಯಲು ಸೂಚನೆ ನೀಡಿದ್ದಾರೆ.ಕೂಡಲೇ ಪ್ರಯಾಣಿಕರೆಲ್ಲರೂ ಬಸ್ಸಿನಿಂದಿಳಿದರು.ಬೆಂಕಿ ಇಡೀ ಬಸ್ಸಿಗೆ ಆವರಿಸುವ ಮುನ್ನವೇ ಎಲ್ಲಾ 37 ಪ್ರಯಾಣಿಕರೂ ಸುರಕ್ಷಿತವಾಗಿ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಪ್ರಯಾಣಿಕರು ಇಳಿದ ಬಳಿಕ ನೋಡನೋಡುತ್ತಿದ್ದಂತೆ ಬಸ್ ಧಗಧಗನೆ ಹೊತ್ತಿ ಉರಿದಿದ್ದು, ಸಂಪೂರ್ಣವಾಗಿ ಜಖಂಗೊಂಡಿದೆ.

ಸ್ಥಳಕ್ಕೆ ಅಧಿಕಾರಿಗಳ ಭೇಟಿ:
ಘಟನೆ ವಿಷಯ ತಿಳಿಯುತ್ತಲೇ ಸ್ಥಳೀಯರು ಮತ್ತು ಬಸ್ ಸಿಬ್ಬಂದಿ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ತಡರಾತ್ರಿಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರಾದರೂ ಆವೇಳೆಗಾಗಲೇ ಬಸ್ಸು ಪೂರ್ತಿ ಬೆಂಕಿಗಾಹುತಿಯಾಗಿತ್ತು.ಕಡಬ ಪೊಲೀಸ್ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿರುವುದಾಗಿ ಎಂದು ಶಂಕಿಸಲಾಗಿದೆ

LEAVE A REPLY

Please enter your comment!
Please enter your name here