







ನೆಲ್ಯಾಡಿ: ಜೆಸಿಐ ವತಿಯಿಂದ ಜೆಸಿ ಸಪ್ತಾಹದ ಉದ್ಘಾಟನೆ ಹಾಗೂ ನೆಲ್ಯಾಡಿಯ ಆಟೋ ಚಾಲಕರಿಗೆ ಸ್ಟೀಲ್ ಬಾಟಲ್ ವಿತರಿಸುವ ಕಾರ್ಯಕ್ರಮ ಸೆ.6ರಂದು ನೆಲ್ಯಾಡಿ ಗೌರಿಜಾಲ್ ಆರ್ಕೇಡ್‌ನಲ್ಲಿ ನಡೆಯಿತು.


ಜೆಸಿಐ ಭಾರತ ವಲಯ 15ರ ಸಮುದಾಯ ಅಭಿವೃದ್ಧಿ ವಲಯ ನಿರ್ದೇಶಕ ವಿಘ್ನೇಶ್ ಪ್ರಸಾದ್ ರಾವ್ ಉದ್ಘಾಟಿಸಿ, ರಿಕ್ಷಾ ಚಾಲಕರ ಆರೋಗ್ಯದ ದೃಷ್ಟಿಯಿಂದ ಆಟೋ ಚಾಲಕರಿಗೆ ನೆಲ್ಯಾಡಿ ಜೆಸಿಐ ಸ್ಟೀಲ್ ಬಾಟಲ್ ವಿತರಣೆ ಮಾಡುತ್ತಿರುವುದು ಉತ್ತಮ ಕಾರ್ಯಕ್ರಮವಾಗಿದೆ ಎಂದರು.




ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ಜೆಸಿಐ ಅಧ್ಯಕ್ಷೆ ಪ್ರವೀಣಿ ಸುಧಾಕರ್ ಶೆಟ್ಟಿ ಅವರು ಮಾತನಾಡಿ, ಪ್ಲಾಸ್ಟಿಕ್ ಬಾಟ್ಲಿಗಳಲ್ಲಿ ಸಿಗುವ ನೀರು ಒಮ್ಮೆ ಮಾತ್ರ ಉಪಯೋಗಿಸಬಹುದಾಗಿದೆ. ಅದೇ ಬಾಟ್ಲಿಯನ್ನು ಮತ್ತೆ ಉಪಯೋಗ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಜನರಿಗೆ ಸೇವೆ ನೀಡುತ್ತಿರುವ ರಿಕ್ಷಾ ಚಾಲಕರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಈ ನಿಟ್ಟಿನಲ್ಲಿ ಜೆಸಿಐ ವತಿಯಿಂದ ನೆಲ್ಯಾಡಿಯ ಎಲ್ಲಾ ಆಟೋ ಚಾಲಕರಿಗೂ ಸ್ಟೀಲ್ ಬಾಟಲ್ ವಿತರಣೆ ಮಾಡಲಾಗುತ್ತಿದೆ ಎಂದರು. ನೆಲ್ಯಾಡಿ ಜೆಸಿಐನ ನಿಕಟ ಪೂರ್ವಾಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಅವರು ಮಾತನಾಡಿ, ಉತ್ತಮ ಆಹಾರ ಸೇವನೆ ಮೂಲಕ ರಿಕ್ಷಾ ಚಾಲಕರು ತಮ್ಮ ಆರೋಗ್ಯದ ಬಗ್ಗೆಯೂ ಗಮನಹರಿಸಬೇಕೆಂದು ಹೇಳಿದರು.

ನೆಲ್ಯಾಡಿ ಆಟೋ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ನೆಲ್ಯಾಡಿ ಮಹಿಳಾ ಜೆಸಿ ಅಧ್ಯಕ್ಷೆ ನವ್ಯಾಪ್ರಸಾದ್, ಜೆಸಿ ಸಪ್ತಾಹದ ಯೋಜನಾ ನಿರ್ದೇಶಕರಾದ ದೀಪಿಕಾ ಡಿ.ಎಂ., ರೇಷ್ಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೆಸಿಐ ನೆಲ್ಯಾಡಿ ಘಟಕದ ಜೊತೆ ಕಾರ್ಯದರ್ಶಿ ಸುಪ್ರಿತಾ ರವಿಚಂದ್ರ ವಂದಿಸಿದರು. ಸದಸ್ಯೆ ಜಾಹ್ನವಿ ಜೇಸಿವಾಣಿ ವಾಚಿಸಿದರು. ನಮಿತ ಆಮುಂಜ, ಮನ್ವಿತ ಹೆಗ್ಡೆ, ಪ್ರಶಾಂತ್‌ಕುಮಾರ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.










